ಗುರುವಾರ , ಏಪ್ರಿಲ್ 22, 2021
23 °C

ಚಿಂಗಾರಿ ಬಂಗಾರಿ ಸೋಂಬೇರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಗಾರಿ ಬಂಗಾರಿ ಸೋಂಬೇರಿ!

`ಬಂಗಾರಿ~ ಚಿತ್ರದ ಗೀತೆಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭ. ಕಾರ್ಯಕ್ರಮದ ಮುಖ್ಯ ಅತಿಥಿ ಉಪೇಂದ್ರ ನಿಗದಿತ ಸಮಯ ಮೀರಿ ಒಂದು ಗಂಟೆ ತಡವಾಗಿ ಬಂದರು. ಆದರೆ, ಚಿತ್ರದ ನಾಯಕ ಯೋಗೀಶ್ ಮತ್ತು ರಾಗಿಣಿ ಮಾತ್ರ ನಾಪತ್ತೆ!ಕೊನೆಗೆ, `ನಾನಿನ್ನು ಕಾಯಲಾರೆ~ ಎನ್ನುವಂತೆ ಉಪೇಂದ್ರ ವೇದಿಕೆ ಏರಿದರು. ಗಡಿಬಿಡಿಯಲ್ಲಿ `ಬಂಗಾರಿ~ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಅವರು, `ಬಂಗಾರಿ ಬಂಗಾರ ತರಲಿ~ ಎಂದು ಹಾರೈಸಿ ಹೊರಟೇ ಬಿಟ್ಟರು.ಸಹಾಯಕ ನಿರ್ದೇಶಕರಾಗಿ ಸಾಕಷ್ಟು ಅನುಭವ ಹೊಂದಿರುವ ಮಾ. ಚಂದ್ರು `ಬಂಗಾರಿ~ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರ ಮಾತೃಭಾಷೆ ತಮಿಳು. ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಕಾರಣ `ಕರ್ನಾಟಕ ನಮ್ಮೂರು~ ಎನ್ನುತ್ತಾರೆ.`ಬಂಗಾರಿ~ಯಲ್ಲಿ ಮುಗ್ಧ ಹಳ್ಳಿ ಹುಡುಗನ ಒಳ್ಳೆಯತನ ಹೇಗೆ ದುರುಪಯೋಗಕ್ಕೆ ಒಳಗಾಗುತ್ತದೆ ಎಂಬ ಕತೆಯನ್ನು ತಾಯಿಯ ಸೆಂಟಿಮೆಂಟ್ ಜೊತೆಗೆ ಲವ್, ಆಕ್ಷನ್ ಮುಂತಾದ ಅಂಶಗಳನ್ನು ಬಳಸಿ ಹೇಳಿದ್ದಾರಂತೆ.`ನನ್ನ ಚಿತ್ರದ ನಾಯಕನ ಹೆಸರು `ಬಂಗಾರಿ~. ಅವನು ಒರಟು ಹುಡುಗ. ಆ ಪಾತ್ರಕ್ಕೆ ಯೋಗಿ ಸೂಕ್ತ ಎನಿಸಿತು. ರಾಗಿಣಿಗೆ ಚಿತ್ರದಲ್ಲಿ ಬಜಾರಿ ಪಾತ್ರ. ಅವರು ಇದೇ ಮೊದಲ ಬಾರಿ ಇಂಥ ಪಾತ್ರ ನಿರ್ವಹಿಸಿರುವುದು. ಕುಲುಮನಾಲಿ, ಕೋಲಾರ, ಬೆಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಪ್ರಥಮ ಪ್ರತಿ ಸಿದ್ಧವಾಗುತ್ತಿದೆ. ಇದೇ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ~ ಎಂದು ಚಂದ್ರು ಹೇಳಿದರು.ನಿರ್ಮಾಪಕ ಎಲ್ಲಪ್ಪ ಅವರಿಗೆ ತಮಿಳು-ತೆಲುಗು ಸಿನಿಮಾಗಳ ಮಟ್ಟಕ್ಕೆ ತಮ್ಮ ಸಿನಿಮಾ ಬಂದಿದೆ ಎನ್ನುವ ಅನಿಸಿಕೆ. ತಮ್ಮ ಚಿತ್ರದ ಆರು ಹಾಡುಗಳೂ ಸೂಪರ್‌ಹಿಟ್ ಆಗುವುದು ನಿಶ್ಚಿತ ಎನ್ನುವುದು ಅವರ ನಿರೀಕ್ಷೆ. ಪ್ರೇಕ್ಷಕರು ಎಂಜಾಯ್ ಮಾಡುವ, ಒನ್ಸ್‌ಮೋರ್ ಹೇಳುವ ಎಲ್ಲಾ ಅಂಶಗಳೂ `ಬಂಗಾರಿ~ಯಲ್ಲಿವೆ ಎನ್ನುವ ನಿರ್ಮಾಪಕರ ಮಾತಿನಲ್ಲಿ ಅಪಾರ ನಿರೀಕ್ಷೆಗಳಿದ್ದವು.ಸಂಗೀತ ನಿರ್ದೇಶಕ ಎ.ಎಂ. ನೀಲ್ ಅವರಿಗೆ ಚಿತ್ರದ ಹಾಡುಗಳು ಚೆನ್ನಾಗಿ ಬರಲು ನಿರ್ದೇಶಕರ ಅಭಿರುಚಿಯೇ ಕಾರಣ ಎನಿಸಿದೆ. ಯೋಗೀಶ್ ಅವರಲ್ಲಿ ಒಬ್ಬ ಒಳ್ಳೆಯ ಗಾಯಕನನ್ನು ಕಂಡಿರುವ ಅವರಿಗೆ `ಬಂಗಾರಿ~ಯ ಹಾಡುಗಳ ಬಗ್ಗೆ ಭರವಸೆ ಇದೆ.ಇನ್ನೇನು ಸುದ್ದಿಗೋಷ್ಠಿ ಮುಗಿಯಬೇಕು ಎನ್ನುವಾಗ್ಗೆ ಯೋಗಿ-ರಾಗಿಣಿ ಜೋಡಿಯಾಗಿ ಪ್ರತ್ಯಕ್ಷರಾದರು. `ಚಂಗ್‌ಚಂಗ್ಲು ಹುಡುಗೀರ‌್ನ ಯಾರೂ ನಂಬಬಾರ್ದು..~ ಎಂಬ ಹಾಡನ್ನು `ಬಂಗಾರಿ~ಗಾಗಿ ಹಾಡಿರುವುದನ್ನು, ಇದೇ ಮೊದಲ ಬಾರಿಗೆ ಮುಗ್ಧನ ಪಾತ್ರ ನಿರ್ವಹಿಸಿರುವುದಾಗಿಯೂ ಯೋಗಿ ಹೇಳಿಕೊಂಡರು.`ಜಾತ್ರೆಯಲ್ಲಿ ನಾನು ರಾಗಿಣಿ ಭೇಟಿ ಆಗ್ತೀವಿ. ಅಲ್ಲಿ ಅವರು ನನಗೆ ಕಪಾಳಕ್ಕೆ ಹೋಡೀತಾರೆ. ಕೆಲವು ದೃಶ್ಯಗಳಲ್ಲಿ ಜಗಳ ಕಾಯ್ತೀವಿ. ಅದ್ಯಾವಾಗಲೋ ಇಷ್ಟಪಡ್ತೀವಿ. ನಾನು ಒಂದು ಕೊಲೆ ಮಾಡಿ ಜೈಲಿಗೆ ಹೋಗ್ತೀನಿ. ರಾಗಿಣಿ ಅಪ್ಪ ರೌಡಿ ಆಗಿರ‌್ತಾರೆ~ ಹೀಗೆ ಚಿತ್ರದ ಚೂರು ಚೂರು ದೃಶ್ಯಗಳ ವಿವರ ನೀಡಿದರು.`ನನ್ನದು ಜೋರು ಪಾತ್ರ~ ಎಂದು ನಗೆ ಅರಳಿಸಿದರು ರಾಗಿಣಿ. ನಿರ್ದೇಶಕರು ಪ್ರತಿಭಾವಂತರಾಗಿರುವುದರಿಂದ ಚಿತ್ರ ಚೆನ್ನಾಗಿ ಬಂದಿದೆ ಎಂಬುದು ಅವರ ಅನಿಸಿಕೆ. ಛಾಯಾಗ್ರಾಹಕ ನಿರಂಜನ ಬಾಬು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.