ಚಿಂಚನಸೂರ ಆದಾಯ ಶೇ 628ರಷ್ಟು ಹೆಚ್ಚಳ: ಆರೋಪ

7

ಚಿಂಚನಸೂರ ಆದಾಯ ಶೇ 628ರಷ್ಟು ಹೆಚ್ಚಳ: ಆರೋಪ

Published:
Updated:

ಯಾದಗಿರಿ: ಶಾಸಕ ಬಾಬುರಾವ ಚಿಂಚನಸೂರರು ಚುನಾವಣಾ ಆಯೋಗಕ್ಕೆ ಸುಳ್ಳು ವಿವರ ಸಲ್ಲಿಸಿದ್ದು, ಆದಾಯಕ್ಕಿಂತ ಸುಮಾರು ಶೇ.628ರಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯ ದೂರು ದಾಖಲಿಸಿದ್ದು, ತನಿಖೆಗೆ ಆದೇಶಿಸಿದೆ ಎಂದು ದೂರುದಾರ ಶಾಂತಪ್ಪ ಖಾನಳ್ಳಿ ತಿಳಿಸಿದರು.ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚಿಂಚನಸೂರ ವಿರುದ್ಧ ಆ. 23 ರಂದು ದೂರು ಸಲ್ಲಿಸಲಾಗಿತ್ತು. ಲೋಕಾಯುಕ್ತ ನ್ಯಾಯಾಲಯವು ನ. 28ರಂದು ಪ್ರಕರಣ ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿದೆ. ಜ.9ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ಇದು ಭ್ರಷ್ಟಾಚಾರದ ವಿರುದ್ಧ ತಾವು ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಚಿಂಚನಸೂರ ಅಕ್ರಮವಾಗಿ ಸಂಪಾದಿಸಿದ ಆಸ್ತಿ, ಬೇನಾಮಿ ಆಸ್ತಿ ಹಾಗೂ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದರ ಸಂಪೂರ್ಣ ವಿವರಗಳನ್ನು ದಾಖಲೆ ಸಹಿತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.14.97 ಕೋಟಿ ಮೌಲ್ಯದ ಆಸ್ತಿ: ಗುರುಮಠಕಲ್ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಘೋಷಣೆಯಲ್ಲಿ ರೂ. 1.56 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಆದರೆ ನಿಜವಾದ ಆಸ್ತಿಯ ಮೌಲ್ಯ ರೂ. 14.97 ಕೋಟಿ. ಇದರರ್ಥ ಘೋಷಿತ ಆದಾಯಕ್ಕಿಂತ ಸುಮಾರು ಶೇ.628 ಪಟ್ಟು ಹೆಚ್ಚಿನ ಆಸ್ತಿಯನ್ನು ಶಾಸಕರು ಹೊಂದಿದ್ದಾರೆ ಎಂದು ಹೇಳಿದರು.ಪತ್ನಿ, ಅಳಿಯನ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿದ್ದು, ಅವುಗಳನ್ನು ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಬಚ್ಚಿಟ್ಟಿದ್ದಾರೆ. ಗುಲ್ಬರ್ಗ ಜಿಲ್ಲೆ ಚಿತ್ತಾಪುರದಲ್ಲಿ ಶಾಸಕರ ಪತ್ನಿಯ ಹೆಸರಿನಲ್ಲಿ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಿದೆ. ಆದರೆ ಅದನ್ನು ತೋರಿಸಿಲ್ಲ.  ಹುಮ್ನಾಬಾದ್‌ನಲ್ಲಿ ಅಮರ ಡಿಸ್ಟೀಲರೀಸ್ ಕಂಪೆನಿಗೆ ಶಾಸಕರ ಹೆಸರಿನಲ್ಲಿ ಪರವಾನಿಗೆ ಪಡೆಯಲಾಗಿದೆ. ದಾಖಲೆ ತೋರಿಸದ ಇಂಥ 166 ಆಸ್ತಿಗಳನ್ನು ರಾಜ್ಯದಾದ್ಯಂತ ಗುರುತಿಸಲಾಗಿದೆ ಎಂದು ಆರೋಪಿಸಿದರು.ಬೇನಾಮಿ ಹೆಸರಿನಲ್ಲಿ ಶಾಸಕ ಚಿಂಚನಸೂರ ಅಪಾರ ಆಸ್ತಿ ಹೊಂದಿದ್ದಾರೆ. ಅಳಿಯನ ಹೆಸರಿನಲ್ಲಿ 199 ಎಕರೆ ಜಮೀನು, ಪತ್ನಿ ಅಮರೇಶ್ವರಿ ಹೆಸರಿನಲ್ಲಿ 38 ಎಕರೆ ಹಾಗೂ ಚಿಂಚನಸೂರ ಹೆಸರಿನಲ್ಲಿ 58 ಎಕರೆ ಜಮೀನಿದೆ. ಆದರೆ ಇದೆಲ್ಲವನ್ನೂ ಮುಚ್ಚಿಡಲಾಗಿದೆ. ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಚಿಂಚನಸೂರ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.ಅವರ ಮನೆ ಹಾಗೂ ಕಚೇರಿಗಳಲ್ಲಿ ಐಷಾರಾಮಿ ಪೀಠೋಪಕರಣ, ಗೃಹಬಳಕೆ ವಸ್ತುಗಳಿವೆ. ಅವುಗಳ ಮೌಲ್ಯವೇ ಕೋಟ್ಯಂತರ ಆಗುತ್ತದೆ. ಕಾರು, ವಾಹನ, ಬಂಗಾರದ ಆಭರಣ ಸೇರಿದಂತೆ ಯಾವುದರ ಲೆಕ್ಕವನ್ನೂ ತೋರಿಸಿಲ್ಲ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಜತೆಗೆ ಕೆಲವೇ ವರ್ಷಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಹೇಗೆ ಗಳಿಕೆ ಆಗಿದೆ ಎನ್ನುವುದು ಆಶ್ಚರ್ಯ ಮೂಡಿಸುತ್ತದೆ. ಲೋಕಾಯುಕ್ತ ತನಿಖೆಯಿಂದ ಇದೆಲ್ಲವೂ ಬಹಿರಂಗವಾಗಲಿದೆ ಎಂದು ಶಾಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಚಿಂಚನಸೂರ ವಿರುದ್ಧ ದೂರು ನೀಡಲು ರಾಜಕೀಯ ಕಾರಣಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಹ ಯಾವುದೇ ಕಾರಣವಿಲ್ಲ. ಗುರುಮಠಕಲ್ ಕ್ಷೇತ್ರದಲ್ಲಿ ಮಾಡಿದ ಅಕ್ರಮಗಳು ಕಣ್ಣ ಮುಂದೆಯೇ ಇವೆ. ರಸ್ತೆ, ಕೆರೆ ಇತ್ಯಾದಿ ಕಾಮಗಾರಿಗಳನ್ನು ನಡೆಸದೆಯೇ ಬಿಲ್ ಎತ್ತಲಾಗಿದೆ. ಇವುಗಳ ಬಗ್ಗೆಯೂ ಶೀಘ್ರ ದಾಖಲೆ ಬಹಿರಂಗಪಡಿಸುವುದಾಗಿ ಹೇಳಿದರು.

ಇದರ ಹಿಂದೆ ಯಾವುದೇ ರಾಜಕೀಯ ಕೈವಾಡ ಇಲ್ಲದ ಎಂದ ಅವರು, ಇದುವರೆಗೆ ಯಾರಿಂದಲೂ ಬೆದರಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.ವಕೀಲ ಚಂದ್ರಾಮಪ್ಪ, ಚಿದಾನಂದಪ್ಪ, ಶಿವಶರಣಪ್ಪ ಶಹಾಪುರ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry