ಶುಕ್ರವಾರ, ನವೆಂಬರ್ 15, 2019
22 °C

ಚಿಂಚೋಳಿ: ಪರೀಕ್ಷಾ ಮುಖ್ಯಸ್ಥರಿಗೆ ಕೊಕ್

Published:
Updated:

ಚಿಂಚೋಳಿ: ಸೋಮವಾರದಿಂದ ಆರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತಾಲ್ಲೂಕಿನಲ್ಲಿ ಒಟ್ಟು 2608 ಮಕ್ಕಳು ಹಾಜರಾಗಿ ಕನ್ನಡ ಭಾಷೆಯ ಪತ್ರಿಕೆ ಎದುರಿಸಿದರು.ತಾಲ್ಲೂಕಿನಲ್ಲಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು 8 ಕೇಂದ್ರಗಳನ್ನು ತೆರೆಯಲಾಗಿದೆ. ತಾಲ್ಲೂಕು ಕೇಂದ್ರ ಚಿಂಚೋಳಿ-2, ಸುಲೇಪೇಟ -3 ಹಾಗೂ ರಟಕಲ್, ಚಿಮ್ಮನಚೋಡ್ ಮತ್ತು ಐನೋಳ್ಳಿಯಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾದರು.

ಚಿಂಚೋಳಿಯ ಸರ್ಕಾರಿ ಕನ್ಯಾಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ಬೆಂಚುಗಳ ಮೇಲೆ ಕೂಡಿಸಿದ್ದನ್ನು ಪಾಲಕರು ವಿರೋಧಿಸಿದ ಘಟನೆ ನಡೆಯಿತು.ಬೆಳಿಗ್ಗೆ ಪ್ರಶ್ನೆ ಪತ್ರಿಕೆ ನೀಡಲು ಬಿಇಒ ಈ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಪರೀಕ್ಷಾ ಮುಖ್ಯಸ್ಥರು ಇರಲಿಲ್ಲ. ಡೆಸ್ಕ್ ವ್ಯವಸ್ಥೆ ಮಾಡಲು ಸೂಚಿಸಿದ್ದರು ಪರೀಕ್ಷಾ ಮುಖ್ಯಸ್ಥ ಮೂರು ದಿನಗಳಿಂದ ಮೊಬೈಲ್ ಬಂದ್ ಮಾಡಿಕೊಂಡಿದ್ದರು. ಇದರಿಂದ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿದ ಆರೋಪದ ಮೇರೆಗೆ ಕೇಂದ್ರದ ಪರೀಕ್ಷಾ ಮುಖ್ಯಸ್ಥ ಮಾಣಿಕ್ ಪಂಚಾಳ ಅವರನ್ನು ಬದಲಿಸಿ ಜಯಪ್ಪ ಚಾಪಲ್ ಅವರಿಗೆ ಮುಖ್ಯಸ್ಥರನ್ನಾಗಿ ನೇಮಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಾಟಿಕಾರ್ ದಿಟ್ಟ ನಿರ್ಧಾರ ಕೈಗೊಂಡರು.ಬೆಂಚಿನ ಮೇಲೆ ಕುಳಿತು ಪರೀಕ್ಷೆ ಬರೆಯುವುದು ಹೇಗೆ ಎಂದು ಪಾಲಕರು ಬಿಇಒ ಹಾಗೂ ಜಾಗೃತ ದಳದ (ಸಿಡಿಪಿಒ) ಅಧಿಕಾರಿ ಮಹಮದ್ ರಫಿ ಶಕಾಲೆ ಅವರನ್ನು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸಬ್ ಇನ್ಸ್‌ಪೆಕ್ಟರ್ ಸುರೇಶ ಬೆಂಡಗುಂಬಳ ಅವರು ಪಾಲಕರನ್ನು ಸಮಾಧಾನ ಪಡಿಸಿದರು. ನಂತರ ಕೆಲವೆ ನಿಮಿಷಗಳಲ್ಲಿ ಬಿಇಒ ಅವರು ಹತ್ತಿರದ ಪ್ರಾಥಮಿಕ ಶಾಲೆಗಳಿಂದ ಡೆಸ್ಕ್ ತರಿಸಿ ಮಕ್ಕಳಿಗೆ ಆಸನ ವ್ಯವಸ್ಥೆ ಮಾಡಿದರು.ತಾಲ್ಲೂಕಿನಲ್ಲಿ ಪರೀಕ್ಷೆಗೆ ಒಟ್ಟು 2721 ಮಕ್ಕಳು ನೋಂದಣಿ ಮಾಡಿಸಿದ್ದರು. ಇದರಲ್ಲಿ 113 ಮಕ್ಕಳು ಗೈರಾಗಿದ್ದರು. ತಾಲ್ಲೂಕಿನ ತಹಶೀಲ್ದಾರ ಜಗನ್ನಾಥರೆಡ್ಡಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಸುಸೂತ್ರವಾಗಿ ಪ್ರಾರಂಭವಾದವು. ಸರ್ಕಾರಿ ಕನ್ಯಾ ಪಿಯು ಕಾಲೇಜಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ಸೂಸೂತ್ರವಾಗಿ ನಡೆಸಲು ಮೂಲಸೌಕರ್ಯಗಳ ಕೊರತೆಯಿದ್ದು ಮುಂದಿನ ವರ್ಷದಿಂದ ಇಲ್ಲಿ ಪರೀಕ್ಷೆ ನಡೆಸಬಾರದು ಎಂದು ಪಾಲಕರಾದ ನಾಗೇಂದ್ರ ಮಾಳಾಪೂರ ಮತ್ತಿತರರು ಒತ್ತಾಯಿಸಿದರು.ಆತ್ಮಹತ್ಯೆಗೆ ಯತ್ನ

ಗುಲ್ಬರ್ಗ: ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ರಾಮಮಂದಿರ ಬಳಿಯಲ್ಲಿ ನಡೆದಿದೆ. ಸಿದ್ದೇಶ್ವರ ಕಾಲೊನಿ ಶ್ರೀಕಾಂತ ಮತ್ತು ಮಲ್ಲಮ್ಮ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಇವರಿಬ್ಬರು ಪರಸ್ಪರ ಪ್ರೀತಿಸಿದ್ದು, ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದಾರೆ. ಆದರೆ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರತಿಕ್ರಿಯಿಸಿ (+)