ಶುಕ್ರವಾರ, ಮೇ 20, 2022
27 °C

ಚಿಂಚೋಳಿ: ಸಡಗರದ ವಿಜಯದಶಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಒಂದು ತಿಂಗಳಿನಿಂದ ಮಳೆ ಕೈಕೊಟ್ಟಿದ್ದರಿಂದ ಚಿಂತಿತರಾದ ರೈತಾಪಿ ಜನರು ಬರಗಾಲದ ಭೀತಿಯ ಮಧ್ಯೆ ಪೌರಾಣಿಕ ಮಹತ್ವದ ವಿಜಯ ದಶಮಿ ಹಬ್ಬವನ್ನು ಗುರುವಾರ ತಾಲ್ಲೂಕಿನಾದ್ಯಂತ ಆಚರಿಸಿದರು.ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಂದಾಪುರದ ಬಸವ ನಗರದ ಹೃದಯಭಾಗದಲ್ಲಿ ಬರುವ ಬಸವ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ಸೀಳಿನ್, ಸದಸ್ಯೆ ಉಮಾ ಪಾಟೀಲ್, ಬಸವಣ್ಣ ಪಾಟೀಲ್ ಮುಂತಾದವರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಬಂಗಾರ ವಿನಿಮಯಕ್ಕೆ ಚಾಲನೆ ನೀಡಿದರು.ಶಿವನಾಗಯ್ಯ ಸ್ವಾಮಿ ಹಾಗೂ ಶಿವಕುಮಾರ ಪಲ್ಲೇದ್ ಪ್ರಾರ್ಥನೆ ಹಾಗೂ ಮಂಗಳಾರತಿ ನಡೆಸಿಕೊಟ್ಟರು, ಬಸವರಾಜ ಐನೋಳ್ಳಿ, ಸೂರ್ಯಕಾಂತ ಹುಲಿ, ಶೈಲೇಶ ಹುಲಿ, ನಾರಾಯಣರೆಡ್ಡಿ, ಶ್ರೀಶೈಲ್, ಚನ್ನಬಸಪ್ಪ ನಾವದಗಿ, ಸಂಪತ್ ಮುಸ್ತಾರಿ, ರಾಜು ನವಲೆ, ಸಂತೋಸ ಕಡಗದ್, ಶಂಕರಜಿ ಹಿಪ್ಪರ್ಗಿ ಮುಂತಾದವರು ಇದ್ದರು.ಚಿಂಚೋಳಿ ಪಟ್ಟಣದಲ್ಲಿ ವಾದ್ಯಮೇಳದೊಂದಿಗೆ ನಾಗರಿಕರು ಊರ ಹೊರಗಿನ ಶಮಿ ವೃಕ್ಷಕ್ಕೆ ತರಳಿ ಪೂಜಿಸಿ ಎಲೆಗಳನ್ನು ಕತ್ತಿರಿಸಿಕೊಂಡು ಬಂದು ಮಹಾಂತೇಶ್ವರ ಮಠದಲ್ಲಿ ಮಂಗಳಾರತಿ ನೆರವೇರಿಸಿ ಹಾರಕೂಡ ಚನ್ನಬಸವ ಶಿವಯೋಗಿಯ ಗದ್ದುಗೆಗೆ ಬಂಗಾರ ಅರ್ಪಿಸಿ ಬನ್ನಿ ಬಂಗಾರ ವಿನಿಮಿಯಕ್ಕೆ ಚಾಲನೆ ನೀಡಿದರು.

ಕೋಡ್ಲಿ ವರದಿ: ತಾಲ್ಲೂಕಿನ ಕೋಡ್ಲಿಯಲ್ಲಿ ವಿಜಯ ದಶಮಿ ಹಬ್ಬ ವೈಶಿಷ್ಟ್ಯಪೂರ್ಣವಾಗಿ ಆಚರಿಲಾಗುತ್ತದೆ.ಗ್ರಾಮದ ರಾಮಲಿಂಗಾರೆಡ್ಡಿ ದೇಶಮುಖ್ ಅವರ ಮನೆಯಿಂದ ಇಳೆ ಸ್ವೀಕರಿಸಿ ಗುರುವಾರ ಬೆಳಿಗ್ಗೆ ಗ್ರಾಮಸ್ಥರು ಕಾಡಿಗೆ ಹೋಗಿ ನೀಲಕಂಠ ಪಕ್ಷಿ(ಹಂಗ) ವೀಕ್ಷಿಸಿ ಹತ್ತಿರವಿರುವ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಮರಳುತ್ತಾರೆ.

ಸಂಜೆಗೆ ದೇಶಮುಖ್ ಅವರ ವಾಡಾದಿಂದಲೇ ಸಂಪ್ರದಾಯದಂತೆ ವಿಜಯ ದಶಮಿಯ ಪ್ರಮುಖ ಆಚರಣೆಯಾದ ಬನ್ನಿ ಬಂಗಾರ ವಿನಿಮಯಕ್ಕೆ ಚಾಲನೆ ನೀಡಿದರು.ತಾಲ್ಲೂಕಿನಾದ್ಯಂತ ತಂದೆ ತಾಯಿ, ಗುರು ಹಿರಿಯರಿಗೆ ಹಾಗೂ ಬಂಧು ಬಾಂಧವರಿಗೆ ವಿಜಯ ದಶಮಿಯ ಬನ್ನಿ ಬಂದಾರ ವಿನಿಮಯ ಜೋರಾಗಿ ನಡೆಯಿತು. ಸಂಜೆಯಾಗುತ್ತಿದ್ದಂತೆ ಜನರು ಬನ್ನಿ ಬಂಗಾರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಷಯ ಹಂಚಿಕೊಂಡರು.ಬುಧವಾರ ಆಯುಧ ಪೂಜೆ ಸಡಗರ ಸಂಭ್ರಮದಿಂದ ನೆರವೇರಿಸಿದ ಜನರು ಗುರುವಾರ ಹಬ್ಬದಂದು ಸತ್ಯ ನಾರಾಯಣ, ವರದಾಶಂಕರ ಕತೆ ಹೇಳಿಸುವ ಸಂಪ್ರದಾಯ ಪಾಲಿಸಿದರು. ಹಬ್ಬ ಶಾಂತಿಯುತವಾಗಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.