ಗುರುವಾರ , ಮೇ 6, 2021
23 °C

ಚಿಂಚೋಳಿ- ಸೇಡಂ ರಸ್ತೆ: ಕಾಮಗಾರಿ ನೆನಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ರಾಯಚೂರು ವನ್ಮಾರಪಳ್ಳಿ ರಾಜ್ಯ ಹೆದ್ದಾರಿ-15ರಲ್ಲಿ ಬರುವ ಚಿಂಚೋಳಿ ಸೇಡಂ ರಸ್ತೆ ಅಭಿವೃದ್ಧಿ ಕಾಮಗಾರಿ 2011ರಲ್ಲಿ ಪ್ರಾರಂಭವಾಗಿದ್ದು, ಗುತ್ತಿಗೆ ಅವಧಿ ಮುಗಿದು, 8 ತಿಂಗಳು ಗತಿಸಿದರೂ ಶೇ.40 ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ.`ಅರೆಬರೆ ನಡೆಸಿದ ಕಾಮಗಾರಿಯಿಂದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಇದಕ್ಕೆ ಯಾರು ಹೊಣೆ?' ಎಂದು ಭಾರತೀಯ ರೈತ ಸಂಘದ ಅಧ್ಯಕ್ಷ ವೀರಶೆಟ್ಟಿ ಸುಂಠಾಣ ಪ್ರಶ್ನಿಸಿದ್ದಾರೆ.2010-11ನೇ ಸಾಲಿನ 5054 (ಓಆರ್‌ಎಫ್) ಯೋಜನೆ ಅಡಿಯಲ್ಲಿ ಚಿಂಚೋಳಿ ಹೊರ ವಲಯದ ಸಕ್ಕರೆ ಕಾರ್ಖಾನೆಯಿಂದ ಸೇಡಂ ವರೆಗಿನ ರಸ್ತೆ ಅಭಿವೃದ್ಧಿಗೆ ಅಂದಾಜು 32.20 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ .ಇದೇ ರಸ್ತೆಯಲ್ಲಿ ಬರುವ ಚಿಮ್ಮೋ ಈದಲಾಯಿ ಕ್ರಾಸ್ ಚಿಂಚೋಳಿ ಮಧ್ಯೆ ರಸ್ತೆಯ ಅಗಲದಲ್ಲಿ ಅರ್ಧ ಭಾಗಕ್ಕೆ ಡಾಂಬರಿಕರಣ ನಡೆಸಲಾಗಿದ್ದು, ಇನ್ನುಳಿದ ಅರ್ಧ ಭಾಗ ಅಗೆದು ಮುರುಮ್ ಮತ್ತು ಅದರ ಮೇಲೆ ಜಲ್ಲಿ ಕಲ್ಲು ಹಾಕಿ ಕೈ ತೊಳೆದುಕೊಂಡಿದ್ದಾರೆ.ಜಲ್ಲಿಕಲ್ಲಿನ ಮೇಲೆ ನೀರು ಹಾಕಿ (ವಾಟರಿಂಗ್) ರೋಡ್ ರೋಲರ್ ಓಡಿಸಬೇಕಾದ ಗುತ್ತಿಗೆದಾರರು ಜ್ಲ್ಲಲಿಕಲ್ಲುಗಳನ್ನು ಹಾಕಿ ಹಾಗೆಯೇ ಬಿಟ್ಟಿದ್ದರಿಂದ ವಾಹನಗಳ ಸಂಚಾರಕ್ಕೆ ಅರ್ಧ ರಸ್ತೆಯನ್ನೇ ಅವಲಂಬಿಸಲಾಗಿದೆ. ಆದರೆ ಇಲ್ಲಿ ರಸ್ತೆಯ ಅಗಲ ಕಿರಿದಾಗಿ  ಅಪಘಾತ ಸಂಭವಿಸುತ್ತಿವೆ. ಮಳೆಗಾಲದ ಕಾರಣವೊಡ್ಡಿ ಸದ್ಯಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಆದರೆ ಮಳೆಗಾಲದಲ್ಲಿ ಕಾಂಕ್ರಿಟ್ (ಜಲ್ಲಿಕಲ್ಲು) ಹಾಕುವುದು, ಡಬ್ಲ್ಯೂಬಿಎಂ ಹಾಗೂ ಬಿಎಂ ಕಾಂಕ್ರಿಟ್ ಮತ್ತು ಕಾಂಕ್ರಿಟ್ ಮಿಕ್ಸ್ ಹಾಕಬಹುದಾಗಿದೆ. ಆದರೆ ನಂಬಲರ್ಹ ಮೂಲಗಳ ಪ್ರಕಾರ ಗುತ್ತಿಗೆ ಹೊಣೆ ಹೊತ್ತ ಸಂಸ್ಥೆಯು ಹಣಕಾಸಿನ ಅಭಾವದಿಂದ ನಲಗುತ್ತಿರುವುದರಿಂದ ಕಾಮಗಾರಿ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ ಎಂದು ಸುಂಠಾಣ ಆತಂಕ ವ್ಯಕ್ತಪಡಿಸಿದ್ದಾರೆ.ಕಳೆದ ಶುಕ್ರವಾರ ಜೂ. 14ರಂದು ಇದೇ ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಕನಕಪುರದ ವೀರಶೆಟ್ಟಿ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಮೃತ ವೀರಶೆಟ್ಟಿ ತಂದೆ, ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ತಮ್ಮ ಮತ್ತು ತಮ್ಮನ ಹೆಂಡತಿ ಹಾಗೂ ಮಕ್ಕಳಿಗೆ ಆಧಾರವಾಗಿದ್ದರು. ಈಗ ಆತನ ಮೂವರು ಮಕ್ಕಳು ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ವೀರಶೆಟ್ಟಿ ಸುಂಠಾಣ ಒತ್ತಾಯಿಸಿದರು.ಸಚಿವರು ಗಮನ ಹರಿಸಲಿ: ಸುಮಾರು 39 ಕಿ.ಮೀ ಉದ್ದದ ಈ ಕಾಮಗಾರಿಯಲ್ಲಿ 8 ಕಿ.ಮೀ ಚಿಂಚೋಳಿ ಮತಕ್ಷೇತ್ರದಲ್ಲಿ ಬಂದರೆ, 31 ಕಿ.ಮೀ ರಸ್ತೆ ಸೇಡಂ ಮತಕ್ಷೇತ್ರದಲ್ಲಿ ಬರುತ್ತದೆ. ಇದೇ ಮಾರ್ಗದ ಸುಲೇಪೇಟ ಸೇಡಂ ರಸ್ತೆಯಲ್ಲೂ ಜನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಸಚಿವರಾಗಿದ್ದು, ಈ ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಮುತುವರ್ಜಿ ವಹಿಸಲಿ ಎಂಬುದು ಸುಂಠಾಣ ಅವರ ಹಾರೈಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.