ಶನಿವಾರ, ಜೂಲೈ 4, 2020
24 °C

ಚಿಂತನಶೀಲ, ಚಲನಶೀಲ ಗುರು...

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

ಡಾ. ಜಿ. ಎಸ್. ಶಿವರುದ್ರಪ್ಪನವರು ಇನ್ನಿಲ್ಲ ಎನ್ನುವ ಮಾತು ಭೌತಿಕವಾಗಿ ನಿಜ; ಸಾಂಸ್ಕೃತಿಕವಾಗಿ ಸುಳ್ಳು. ಯಾರೇ ನಿಧನರಾದರೂ ಅಂಥವರ ಆದರ್ಶಗಳು ಜೀವಂತ­ವಾಗಿರು­ತ್ತವೆ ಎಂದು ಹೇಳುವುದು ಒಂದು ಕ್ಲೀಷೆ. ಆದರೆ ಜಿ.ಎಸ್.ಎಸ್. ಅವರ ವಿಷಯದಲ್ಲಿ ಹಾಗಲ್ಲ. ಯಾಕೆಂದರೆ ನಾವು ಅವರನ್ನು ಆದರ್ಶದ ಸಿದ್ಧ ಮಾದರಿಗಳಿಗಾಗಿ ನೆನೆಯುತ್ತೇವೆಂದು ಹೇಳಲಾರೆ. ಅವರು ಸಹ ಸಿದ್ಧ ಆದರ್ಶಗಳನ್ನು ಹೊತ್ತು ಬದುಕುತ್ತೇನೆಂದು ಭಾವಿಸಿದವರಂತೆ ನನಗೆ ಕಂಡಿರಲಿಲ್ಲ. ವಿದ್ಯಾರ್ಥಿಯಾಗಿ, ಕಿರಿಯ ಸಹೋದ್ಯೋಗಿಯಾಗಿ ಹತ್ತಿರದಿಂದ ಗ್ರಹಿಸಿದಂತೆ ಆದರ್ಶಗಳ ಜಾಗದಲ್ಲಿ ಆಶಯಗಳನ್ನು ಸ್ಥಾಪಿಸಿಕೊಳ್ಳಲು ಮತ್ತು ಸ್ಥಾಪಿಸಲು  ಹೋರಾಡಿದವರು ಅವರು.ಈ ಹೋರಾಟ ಅಂತರಂಗ–ಬಹಿರಂಗಗಳನ್ನು ಒಳಗೊಂಡ ಒಂದು ಸಂಘರ್ಷ. ಅದಕ್ಕಾಗಿಯೇ ಸಂಘರ್ಷಗಳನ್ನು ಮೀರಿದ ಸದಾಶಯಗಳ ಹಾದಿ ಯಾವುದೆಂದು ಹುಡುಕುತ್ತ, ತಮ್ಮದೇ ವಿಶಿಷ್ಟ ವಿನ್ಯಾಸಗಳನ್ನು ರೂಪಿಸುತ್ತ ಇಂದಿಗೂ ನಮ್ಮಲ್ಲಿ ಜೀವಂತವಾಗಿರುವ ಒಂದು ಶಕ್ತಿಯಾದದ್ದು ಜಿ.ಎಸ್‌.ಎಸ್. ವಿಶಿಷ್ಟತೆ. ಹಳೆಯ ಆದರ್ಶಗಳಲ್ಲಿ ಖಾಲಿಯಾಗುತ್ತ ಬಂದ ಜಾಗಗಳಿಗೆ ಹೊಸ ಆಶಯಗಳನ್ನು ತಂದಿಟ್ಟು ಭವಿಷ್ಯದ ಆದರ್ಶಗಳನ್ನಾಗಿಸುವ ಸಾಂಸ್ಕೃತಿಕ ಸೆಣಸು ಅವರದಾಗಿತ್ತು.ಹೀಗಾಗಿಯೇ ಅವರು ಸಾಹಿತ್ಯದ ಎಲ್ಲ ಪಂಥಗಳ ಜೊತೆ ಸ್ನೇಹಾನುಸಂಧಾನ ನಡೆಸಲು ಸಾಧ್ಯವಾಯಿತು. ಹಾಗೆಂದು ರಾಜಿ ಮಾಡಿಕೊಂಡ ಸಾಹಿತ್ಯಾಭಿವ್ಯಕ್ತಿಗೆ ಮುಂದಾಗಲಿಲ್ಲ; ಮೆಚ್ಚಿಸಲೆಂದು ಬರೆಯಲಿಲ್ಲ. ಇದು ‘ಜಿ.ಎಸ್.ಎಸ್. ಬರಹ’ ಎಂಬ ಸಾಹಿತ್ಯಕ ಛಾಪು ಕಾಣುವಂತೆ ಬರೆಯುತ್ತ, ಬದುಕುತ್ತ ಬಂದರು. ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ’ ಎಂದು ಎಲ್ಲ ಸಾಹಿತ್ಯ ಪಂಥಗಳನ್ನೂ ನಿಲ್ಲಿಸಿ, ಕುಶಲ ವಿಚಾರಿಸಿ ನಾಲ್ಕಾರು ಹನಿ ಸಂಗತಿಗಳನ್ನು ಸ್ವೀಕರಿಸಿ ಬೀಳ್ಕೊಟ್ಟು ಆಸ್ವಾದಿಸುತ್ತ, ಅಭಿವ್ಯಕ್ತಿಸುತ್ತ ಜಿ.ಎಸ್.ಎಸ್. ತಮಗೆ ತಾವೇ ಒಂದು ಮಾದರಿಯಾದರು.ಇದೆಲ್ಲ ಹೇಗೆ ಸಾಧ್ಯವಾಯಿತು? ಜಿ.ಎಸ್.ಎಸ್. ಅವರ ಆರಂಭಿಕ ಸಾಹಿತ್ಯ ಬದುಕನ್ನು ನೋಡಿ. ಕನ್ನಡದ ಅಗ್ರಮಾನ್ಯ ದಾರ್ಶನಿಕ ಕವಿ ಕುವೆಂಪುರ ದಟ್ಟ ಪ್ರಭಾವದಲ್ಲಿ ಬೆಳೆದರು. ಅವರ ಮಾರ್ಗದರ್ಶನದಲ್ಲೇ ಮಹಾಪ್ರಬಂಧ ರಚಿಸಿ ಪಿಎಚ್‌.ಡಿ ಪಡೆದರು. ಕುವೆಂಪು ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುತ್ತಲೇ ಹೊಸದರ ಹುಡುಕಾಟಕ್ಕೆ ತೊಡಗಿದರು. ಅಂದಿನ ಅನೇಕರು ಕುವೆಂಪು ಅವರ ಆರಾಧನೆಯಲ್ಲಿ ಆನಂದಪಟ್ಟರೆ, ಜಿ.ಎಸ್.ಎಸ್. ಅವರು ಕುವೆಂಪು ಅವರನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥೈಸುವ ಕ್ರಿಯೆಯಲ್ಲಿ ತಮ್ಮ ಗೌರವವನ್ನು ತೋರಿದರು. ಅವರು ಇತ್ತೀಚೆಗೆ ಬರೆದ ‘ಕುವೆಂಪು: ಪುನರಾವಲೋಕನ’ ಕೃತಿಯು ನನ್ನ ಮಾತಿಗೊಂದು ಸಾರ್ಥಕ ಉದಾಹರಣೆ.ಒಂದು ಪ್ರಸಂಗವನ್ನಿಲ್ಲಿ ಹೇಳಬೇಕು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಅವರು ಹಮ್ಮಿಕೊಂಡ ವಿಚಾರ ಸಂಕಿರಣಗಳು ಸಾಂಸ್ಕೃತಿಕ ಲೋಕದಲ್ಲಿ ಅರ್ಥಪೂರ್ಣ ಚರ್ಚೆಗೆ ಕಾರಣವಾದವು. ಬೇಂದ್ರೆ, ಕುವೆಂಪು, ಕಾರಂತ ಮುಂತಾದವರ ಬಗ್ಗೆಯೂ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದ ಜಿ.ಎಸ್.ಎಸ್. ಬೇರೆ ಯಾರ ಹೆಸರಿನ ಮುಂದೆಯೂ ‘ಶ್ರೀ’ ಎಂಬ ಗೌರವ ಸೂಚಕವನ್ನು ನೀಡದೆ ಕುವೆಂಪು ಅವರಿಗೆ ಮಾತ್ರ ನೀಡಿದ್ದರು (ಶ್ರೀ ಕುವೆಂಪು). ಅವರ ಬಗೆಗಿನ ಈ ಭಕ್ತಿ ‘ಕುವೆಂಪು: ಪುನರಾವಲೋಕನ’ ಕೃತಿಯ ವೇಳೆಗೆ ಸಾಂಸ್ಕೃತಿಕ ಗೌರವವಾಗಿ ರೂಪಾಂತರಗೊಂಡಿತು. ಇದರಿಂದ ಕುವೆಂಪು ಅವರ ಕೃತಿಗಳ ಗೌರವವೂ ಹೆಚ್ಚಾಯಿತು. ಜಿ.ಎಸ್.ಎಸ್. ಅವರ ವಿಶ್ಲೇಷಣೆಗೂ ಗೌರವ ಬಂತು. ಇದು ಜಿ.ಎಸ್.ಎಸ್. ಅವರ ವಿಕಸನಶೀಲ ಗುಣಕ್ಕೊಂದು ಸಾಕ್ಷಿ.ಇವರು ಯಾವಾಗಲೂ ಹೀಗೆಯೇ. ಸದಾ ಬೆಳೆಯುತ್ತ, ಬೆಳೆಸುತ್ತ ಬದುಕಿದರು. ತಾವು ವ್ಯವಸ್ಥೆಗೊಳಿಸಿದ ವಿಚಾರ ಸಂಕಿರಣಗಳಲ್ಲಿ ಅವರು ಬೆಳೆಸಿದ ವಿಚಾರಗಳು ಅದೆಷ್ಟು! ಕಲೆಹಾಕಿದ ವ್ಯಕ್ತಿ ವಿದ್ವಾಂಸರೆಷ್ಟು! ಒಂದು ಪಂಥದವರಲ್ಲ, ಒಂದೇ ರೀತಿಯ ಅಭಿವ್ಯಕ್ತಿಯವರಲ್ಲ, ಒಂದೇ ರೀತಿಯ ಆಲೋಚನೆಯವರಲ್ಲ. ಹೀಗಾಗಿ ವಿಚಾರಸಂಕಿರಣಗಳು ವೈಚಾರಿಕ ಅನುಸಂಧಾನದ ಆಗರಗಳಾದವು. ಒಮ್ಮೊಮ್ಮೆ ವಾಗ್ವಾದದ ಅಲೆ ಎಬ್ಬಿಸಿದವು. ಒಟ್ಟಾರೆ ವಿಚಾರ ಮಂಥನಕ್ಕೆ ಉತ್ತಮ ಉದಾಹರಣೆ ಎಂಬಂತೆ ನಡೆದವು. ಸದಾ ಹೊಸದನ್ನು ಬೆರಗಿನಿಂದ ನೋಡುವ ಸಹೃದಯತೆ, ಹೊಸದರ ಒಳಿತನ್ನು ಸ್ವೀಕರಿಸುವ ವೈಚಾರಿಕತೆ ಮತ್ತು ಸಮಚಿತ್ತದ ಸೃಜನಶೀಲತೆಗಳಿಂದ ಜಿ.ಎಸ್.ಎಸ್. ಸಾಹಿತ್ಯ, ವ್ಯಕ್ತಿತ್ವಗಳು ಬೆಳೆಯುತ್ತ ಬಂದವು.ಜಿ.ಎಸ್.ಎಸ್. ನನ್ನ ದೃಷ್ಟಿಯಲ್ಲಿ ‘ಸಾಂಸ್ಕೃತಿಕ ಪ್ರಜಾಪ್ರಭುತ್ವವಾದಿ’. ನನ್ನ ಈ ಪರಿಕಲ್ಪನೆಯನ್ನು ಹೀಗೆ ವಿವರಿಸಬಹುದು: ಪ್ರಜಾಪ್ರಭುತ್ವವು ಅನ್ಯರನ್ನು ಮತ್ತು ಅನ್ಯ ವಿಚಾರಗಳನ್ನು ಮೆಟ್ಟಿ ಹಾಕದೆ ಕಿವಿಗೊಟ್ಟು ಕೇಳುವ, ಪರಿಶೀಲಿಸುವ, ಆರೋಗ್ಯಕರ ನೆಲೆಗಳಿಗೆ ಉಪಯುಕ್ತವಾದದ್ದನ್ನು ಸ್ವೀಕರಿಸುವ, ನಿರಂತರವಾಗಿ ಬೆಳೆಯುವ ಒಂದು ಚಲನಶೀಲ ಪದ್ಧತಿ. ಜಿ.ಎಸ್.ಎಸ್. ಸಾಂಸ್ಕೃತಿಕವಾಗಿ ಈ ಪದ್ಧತಿಯ ಪತಿಮಾರೂಪವಾದರು.ನವೋದಯ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಮುಖ ಕವಿಯಾಗಿ, ವಿಮರ್ಶಕ ಹಾಗೂ ಮೀಮಾಂಸಕರಾಗ ಬೆಳೆಯುತ್ತ ಬಂದ ಜಿ.ಎಸ್.ಎಸ್. ನವೋದಯಕ್ಕೆ ಎದುರಾಗಿ ಎರಗಿದ ನವ್ಯ ಸಾಹಿತ್ಯದ ಸ್ವೀಕಾರಾರ್ಹ ಅಂಶಗಳಿಗೆ ಮನಸ್ಸು ತೆರೆದಿದ್ದರು; ಅಂಥ ಅಂಶಗಳನ್ನು ಸ್ವತಃ ಅಳವಡಿಸಿಕೊಂಡರು. ಈ ನಡುವೆ ಪ್ರಗತಿಶೀಲ ಸಾಹಿತ್ಯದ ಆಶಯಗಳಿಗೂ ಸ್ಪಂದಿಸುತ್ತ ಸಾಮಾಜಿಕ ಕಳಕಳಿಯನ್ನು ಜೀವಂತವಾಗಿಟ್ಟುಕೊಂಡರು.ಮುಂದೆ ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳ ಆಶಯಗಳಿಗೆ ಆರೋಗ್ಯಕರವಾಗಿ ಸ್ಪಂದಿಸಿದರು. ಸಾಹಿತ್ಯದ ಹೊಸ ಆಲೋಚನೆಗಳನ್ನು ಕುರಿತು ವಿಶ್ಲೇಷಣೆ ಮಾಡಿದರು. ಎಲ್ಲರಿಗೆ ಕಿವಿಯಾದರು; ಕಣ್ಣಾದರು; ಅಂತರಂಗದಲ್ಲಿ ಅರಗಿಸಿಕೊಂಡು ತಮ್ಮದೇ ಮಾತುಗಳಿಗೆ ನಾಲಿಗೆಯ ರೂಪಕವಾದರು; ಮಾತಾಡಿದರು; ಬರೆದರು; ಬರೆಸಿದರು. ಹೀಗೆ ಸಾಂಸ್ಕೃತಿಕ ಕ್ಷೇತ್ರದ ವಿವಿಧ ನೆಲೆ–ನಿಲುವುಗಳ ಜೊತೆ ಸಂವಾದಿಸುತ್ತಲೇ ಸ್ವಂತಿಕೆಯ ಸಾಧನೆ ಮಾಡಿದರು. ಹೀಗಾಗಿ ಅವರೊಬ್ಬ ಸಾಂಸ್ಕೃತಿಕ ಪ್ರಜಾಪ್ರಭುತ್ವವಾದಿಯಾದರು.ಜಿ.ಎಸ್.ಎಸ್. ಅವರ ಪ್ರಜಾಸತ್ತಾತ್ಮಕ ಗುಣಕ್ಕೆ ಅವರು ಏರ್ಪಡಿಸಿದ ವಿಚಾರ ಸಂಕಿರಣಗಳು ಮತ್ತು ಕನ್ನಡ ಅಧ್ಯಯನ ಕೇಂದ್ರದ ನಿರ್ವಹಣೆಗಳೇ ಸಾಕ್ಷಿಯಾಗಿವೆ. ಮೊದಲೇ ಹೇಳಿದಂತೆ ವಿಚಾರ ಸಂಕಿರಣಗಳಲ್ಲಿ ಎಲ್ಲ ತಲೆಮಾರಿನ ಎಲ್ಲ ವಿಚಾರಧಾರೆಯವರಿಗೂ ಅವಕಾಶವಿತ್ತು. ಕನ್ನಡ ಅಧ್ಯಯನ ಕೇಂದ್ರದಲ್ಲಿ ವಿವಿಧ ವಿಚಾರ ವಂತಿಕೆಯ ಗಟ್ಟಿ ಪಡೆಯೇ ಇತ್ತು. ಇವರನ್ನೆಲ್ಲ ನಿಭಾಯಿಸುವ ಕಷ್ಟದ ಹೊಣೆಗಾರಿಕೆ ಜಿ.ಎಸ್‌.ಎಸ್‌. ಅವರ ಮೇಲಿತ್ತು. ತಮ್ಮ ಪ್ರಜಾಸತ್ತಾತ್ಮಕ ನಡೆ – ನುಡಿಗಳಿಂದ ಅವರು ಕನ್ನಡ ಅಧ್ಯಯನ ಕೇಂದ್ರವನ್ನು ಒಂದು ಚಲನಶೀಲ ಶಕ್ತಿಯಾಗಿ ಕಟ್ಟದರು. ಇಲ್ಲಿ ಕೆಲಸ ಮಾಡಿದವರ ಚಿಂತನ ಶೀಲತೆ ಮತ್ತು ಚಲನ ಶೀಲತೆಯ ಕೊಡುಗೆಯೂ ಈ ಕಟ್ಟುವಿಕೆಯಲ್ಲಿ ಮುಖ್ಯಪಾತ್ರ ವಹಿಸಿತ್ತು. ಆದರೆ ಎಲ್ಲರನ್ನೂ ನಿಭಾಯಿಸುವ ಗೌರವಾರ್ಹ ಕೇಂದ್ರ ಶಕ್ತಿ ಬೇಕಲ್ಲ!ಆ ಶಕ್ತಿ ಜಿ.ಎಸ್‌.ಎಸ್‌. ಅವರಲ್ಲಿತ್ತು. ಆದ್ದರಿಂದ ಅವರ ಬಗ್ಗೆ ಎಲ್ಲರಿಗೂ ಗೌರವವಿತ್ತು. ಹಾಗೆಂದು ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳೂ, ಜಗಳಗಳೂ ಇರಲಿಲ್ಲವೆಂದಲ್ಲ. ಇಂಥ ವ್ಯತ್ಯಾಸ ಮತ್ತು ಜಗಳಗಳು ಜಿ.ಎಸ್‌.ಎಸ್‌. ಅವರ ಜೊತೆಗೇ ಸಂಭವಿಸಿರುವುದುಂಟು. ಗುಂಪುಗಳ ಧ್ರುವೀಕರಣವೂ ನಡೆದದ್ದುಂಟು. ಆದರೆ ಜಿ.ಎಸ್‌.ಎಸ್‌. ಯಾವತ್ತೂ ದ್ವೇಷಸಾಧಕರಾಗಲಿಲ್ಲ. ಸಹೋದ್ಯೋಗಿಗಳೂ ಆಯಾ ಸಂದರ್ಭದ ಕಹಿಗಳನ್ನು ಮೀರುತ್ತಾ ಕೆಲಸದಲ್ಲಿ ಒಂದಾಗದೆ ಇರಲಿಲ್ಲ. ತಂತಮ್ಮ ಕ್ಷೇತ್ರದ ಸಾಧನೆಗಳಿಂದ ಹಿಂದೆ ಸರಿಯಲಿಲ್ಲ. ಜಿ.ಎಸ್‌.ಎಸ್‌. ಅವರನ್ನೂ ಒಳಗೊಂಡಂತೆ ಯಾರೂ ಕೋಳಿ ಜಗಳಗಳಲ್ಲಿ ಮಗ್ನರಾಗಲಿಲ್ಲ. ಮನುಷ್ಯ ಸಹಜ ಅಸಂತೃಪ್ತಿಗಳನ್ನು ವ್ಯಕ್ತಪಡಿಸುತ್ತ ಅಧ್ಯಯನ ಕೇಂದ್ರದ ಕೆಲಸಗಳಲ್ಲಿ ಒಂದಾಗುತ್ತ, ಒಂದು ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಕೇಂದ್ರವನ್ನು ಕಟ್ಟಿದ್ದು, ಇದಕ್ಕೆ ಜಿ.ಎಸ್‌.ಎಸ್‌.  ನೇತಾರರಾಗಿದ್ದು ಒಂದು ಚಾರಿತ್ರಿಕ ಸಂಭವವೇ ಸರಿ.ಜಿ.ಎಸ್‌.ಎಸ್‌. ಅವರಿಗೆ ಮುನಿಸಿಕೊಳ್ಳುವ, ಸಿಡುಕಿನ ಸ್ವಭಾವವೂ ಇತ್ತು. ಇದು ಎಲ್ಲರಲ್ಲೂ ಇರುವ (ಅವ) ಗುಣ! ಒಂದು ಸಂಸ್ಥೆ ಮುಖ್ಯಸ್ಥರಾಗಿದ್ದ ಅವರು ಅಲ್ಲಿದ್ದ ಅನೇಕರಿಗೆ ಗುರುಗಳೂ ಆಗಿದ್ದರಿಂದ ಸಿಟ್ಟಾಗುವ ಸ್ವಾತಂತ್ರ್ಯ ಸ್ವಲ್ಪ ಹೆಚ್ಚಾಗಿಯೇ ಇತ್ತು. ಆಡಳಿತಾತ್ಮಕ ಮುಖ್ಯಸ್ಥರು ಮತ್ತು ಗುರು – ಎರಡೂ ಸ್ಥಾನದಲ್ಲಿದ್ದಾಗ ಒಂದು ಇನ್ನೊಂದನ್ನು ಮೀರಿಸುವ ಒಳಗುದಿಯೂ ಇರುತ್ತಿತ್ತೇನೊ. ಒಮ್ಮೊಮ್ಮೆ ಸುಮ್ಮನೆ ರೇಗಿದ್ದುಂಟು.ನನ್ನಂಥವನಿಗೆ ನೋಟಿಸ್‌ ನೀಡಿದ್ದು ಉಂಟು. ನಾನು ಅಷ್ಟೇ ಕಟುವಾಗಿ ಲಿಖಿತ ಉತ್ತರ ನೀಡಿದಾಗ ಕರೆದು, ಕೂಡಿಸಿ, ‘ನಾನೂ ಮನುಷ್ಯ ರಾಮಚಂದ್ರಪ್ಪ; ಏರಿಳಿತ ಇರುತ್ತೆ. ಅಷ್ಟಕ್ಕೇ ಬೇಜಾರ್‌ ಮಾಡ್ಕೊಳ್ಳೋದ? ಎಲ್ಲಾ ಮರೆತು ಬಿಡೋಣ’ ಎಂದು ಸಮಾಧಾನಿಸಿದರು. ‘ನಾನೂ ಮನುಷ್ಯನೇ’ ಎಂಬ ಈ ತಿಳಿವಳಿಕೆಯೇ ಜಿ.ಎಸ್‌.ಎಸ್‌. ಅವರನ್ನು ನನ್ನ ಕಣ್ಣಲ್ಲಿ ದೊಡ್ಡವರನ್ನಾಗಿಸಿತು. ಆಡಳಿತಾತ್ಮಕ ಮುಖ್ಯಸ್ಥರ ಸ್ಥಾನದಿಂದ ಗುರುವಿನ ಸ್ಥಾನಕ್ಕೆ, ಆನಂತರ ಮನುಷ್ಯರ ಸ್ಥಾನಕ್ಕೆ ಬಂದು ಅವರಾಡಿದ ಮಾತು ಮುಖ್ಯವೆನಿಸಿತ್ತು. ಈಗಲೂ ಆ ಮಾತು ಮುಖ್ಯವಾದುದು.ನಾನು ಎಂ.ಎ. ಮುಗಿಸಿದ ಹೊಸದರಲ್ಲಿ ನನಗೊಂದು ಕೆಲಸ ಕೊಡಿಸಲು ಜಿ.ಎಸ್‌.ಎಸ್‌. ಅವರು ಪ್ರಯತ್ನಿಸಿ ಒಂದು ಪ್ರತಿಷ್ಠಿತ ಕಾಲೇಜಿಗೆ ಶಿಫಾರಸ್ಸು ಮಾಡಿದರು. ನನ್ನನ್ನು ಕರೆದು ಆ ಕಾಲೇಜಿನ ಮುಖ್ಯಸ್ಥರನ್ನು ಕಾಣಲು ಹೇಳಿದರು. ನಾನು ಕೈಮುಗಿದು ಹೊರಟಾಗ ‘ಬನ್ರಿ ಇಲ್ಲಿ’ ಎಂದರು. ನನ್ನ ಕಡೆ ಒಮ್ಮೆ ನೋಡಿದರು. ಆ ಮೇಲೆ ‘ಈ ಮಾಸಿದ ಪೈಜಾಮ, ಷರಟು ಹಾಕ್ಕೊಂಡ್‌ ಹೋಗ್ಬೇಡಿ. ಸರ್ಯಾದ್‌ ಪ್ಯಾಂಟು ಗೀಂಟು ಹಾಕ್ಕೊಂಡು ಚೊಕ್ಕಟವಾಗ್‌ ಹೋಗಿ’ ಎಂದು ಪ್ರೀತಿಯಿಂದ ಸೂಚಿಸಿದರು. ಅವರ ಮಾತಿನಲ್ಲಿ ‘ಗುರುಗಳು’ ಕೂತಿದ್ದರು! ನಾನೂ ಅವರು ಹೇಳಿದಂತೆಯೇ (ಸ್ನೇಹಿತನ) ಹೊಸ ಪ್ಯಾಂಟ್‌ ತೊಟ್ಟು ಹೋದೆ.ಆದರೂ ಕೆಲಸ ಸಿಗಲಿಲ್ಲ! (ಪ್ಯಾಂಟ್‌ ನನ್ನ ಸ್ವಂತದ್ದಲ್ಲವಲ್ಲ!). ಇರಲಿ; ಈ ಪ್ರಸಂಗಗಳು ಜಿ.ಎಸ್‌.ಎಸ್‌. ಅವರ ಅಪ್ಪಟ ಮನುಷ್ಯ ಗುಣಕ್ಕೆ ಪುಟ್ಟ ಉದಾಹರಣೆ. ನಾನು ಸಾಂಸ್ಕೃತಿಕವಾಗಿ ಜಿ.ಎಸ್‌.ಎಸ್‌. ಅವರಲ್ಲಿ ಕಾಣುವ ಬಹುಮುಖ್ಯವಾದ ಗುಣವೆಂದರೆ – ಸದಾ ಸಮಕಾಲೀನವಾಗುವ ಅವರ ಚಿಂತನೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕದ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ ಮತ್ತು ಇದ್ಯಾವುದೂ ಅಲ್ಲವೆಂದು ಹೇಳುವ ನೆಲೆಗಳು – ಯಾವುದೇ ಆಗಲಿ, ಎಲ್ಲವನ್ನೂ ಅಧ್ಯಯನ ಮಾಡುತ್ತಾ, ವಿಶ್ಲೇಷಿಸುತ್ತ ಮತ್ತೆ ಮತ್ತೆ ಅಸಮಕಾಲೀನವಾಗುತ್ತ ಬೆಳೆದವರು ಗುರು ಜಿ.ಎಸ್‌.ಎಸ್‌. ನಾವು ಸದಾ ಸಮಕಾಲೀನರಾಗುವುದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.