ಬುಧವಾರ, ಮೇ 19, 2021
26 °C

ಚಿಂತನೆಗಳ ವೈರುಧ್ಯ ಮತ್ತು ನಾಳೆಯ ಜರಡಿ

ಡಾ. ಕೆ.ಎನ್. ಗಣೇಶಯ್ಯ Updated:

ಅಕ್ಷರ ಗಾತ್ರ : | |

ಯಾವುದೇ ಕಾಲದ ಚಿಂತನೆಗಳು, ಸಿದ್ಧಾಂತಗಳು ಅಥವಾ ನಂಬಿಕೆಗಳು ಅವುಗಳ ಪ್ರವರ್ತಕರ ಮೊಂಡುತನ ಮತ್ತು ಅನುಯಾಯಿಗಳ ಹುಚ್ಚು ಅಭಿಮಾನ ಇಲ್ಲದಿದ್ದಲ್ಲಿ ಆ ಕಾಲಘಟ್ಟ ದಾಟಿ ಉಳಿದು ಬೆಳೆಯಲಾರವು. ಅಂತಿಮವಾಗಿ ಆ ಚಿಂತನೆಗಳ ಉಳಿವು, ಅವುಗಳ ಸತ್ಯತೆ ಅಥವಾ ಗಟ್ಟಿತನದ ಮೇಲೆ ಅವಲಂಬಿತವಾಗಿದ್ದರೂ, ಮೊದಮೊದಲು ಪ್ರವರ್ತಕರ ಛಲ, ಪ್ರೀತಿ ಮತ್ತು ಮೊಂಡುತನ ಇಲ್ಲವಾದಲ್ಲಿ ಅವು ಚರ್ಚೆಗೆ ಬಾರದೆಯೇ ಮರೆಯಾಗುವ ಸಾಧ್ಯತೆಗಳಿವೆ.ಒಂದು ರೀತಿಯಲ್ಲಿ ಸ್ವಲ್ಪಮಟ್ಟಿಗಿನ ಮೊಂಡುತನ ಸ್ವಾಗತಾರ್ಹವೆ: ತಾನು ಮಂಡಿಸಿದ ಸಿದ್ಧಾಂತ ಅಥವಾ ಪ್ರತಿಪಾದಿಸಿದ ಚಿಂತನೆ ಬೇರೂರುವವರೆಗೆ ಅವುಗಳ ಪ್ರವರ್ತಕ, ತಾತ್ಕಾಲಿಕವಾಗಿಯಾದರೂ `ಚಿಂತನಾ-ಭಂಡತನ' ತೋರಲೇಬೇಕು. ಚಿಂತನೆಗಳ ಬಗ್ಗೆ ಚರ್ಚಿಸುವಾಗ ಅವುಗಳ ಪ್ರವರ್ತಕರಲ್ಲಿ ಭಂಡತನ ಮತ್ತು ಅನುಯಾಯಿಗಳಲ್ಲಿ ಹುಚ್ಚು ಅಭಿಮಾನ ಇಲ್ಲದಿದ್ದಲ್ಲಿ ಅವುಗಳ ಗಟ್ಟಿತನದ ಅರಿವಾಗದು; ಸತ್ಯ ಹೊರಬಾರದು. ಆದರೆ, ಈ ಚಿಂತನಾ-ಭಂಡತನ ಹೆಚ್ಚಾದಾಗ, ಪ್ರವರ್ತಕರೇ ಆ ಚಿಂತನೆಗಳ ಸೆರೆಯಾಳುಗಳಾಗಿ ಕುರುಡರಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಈ ಭಂಡತನವನ್ನು ಗುರ್ತಿಸುವುದು ಸಮಾಜದ ಕರ್ತವ್ಯ. ಹಾಗೆ ಗುರ್ತಿಸಲಾಗದ ಸ್ಥಿತಿಯಲ್ಲಿ, ಎಲ್ಲರೂ ತಮ್ಮ ಚಿಂತನೆಗಳೇ ಸರಿ ಎಂದು ನಂಬುವುದರಿಂದ, ಎಲ್ಲ ರೀತಿಯ  ವಿಚಾರಗಳೂ ಉಳಿದು, ಆ ವೈವಿಧ್ಯತೆಯಲ್ಲಿ ವೈರುಧ್ಯಗಳು ಕಾಣತೊಡಗುವ ಸಂಭವವಿದೆ. ಆದಕಾರಣ, ಈ ಚಿಂತನಾ-ಭಂಡತನದ ಬಗ್ಗೆ ನಾವು ಸದಾ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಲೇ ಇರುವುದು ಅವಶ್ಯಕ. ಅಂತಹ ಅವಲೋಕನ ದುರ್ಬಲವಾದಾಗ, ವೈರುಧ್ಯ ಚಿಂತನೆಗಳು ನಾಯಿಕೊಡೆಗಳಂತೆ ಹಬ್ಬಿ, ವೈಚಾರಿಕತೆಯ ವಾತಾವರಣ ಕಲುಷಿತಗೊಳ್ಳುವ ಸಂಭವವಿದೆ. ಅದು ಆ ಸಮಾಜದ ವೈಚಾರಿಕ ಅನಾರೋಗ್ಯದ ಸೂಚನೆಯೂ ಆಗಬಹುದು.ಪ್ರಸ್ತುತ ಭಾರತದ ಸಂಸ್ಕೃತಿಯ ನಂಬಿಕೆಗಳಲ್ಲಿ ಮತ್ತು ಚರಿತ್ರೆಯ ಬಗೆಗಿನ ಚಿಂತನೆಗಳಲ್ಲಿ ಅಂತಹ ವೈರುಧ್ಯಗಳು ಕಾಣಿಸುವುದನ್ನು ನಾವು ಸುಲಭವಾಗಿ ಕಾಣಬಹುದು. ಇವು ನಿಜಕ್ಕೂ ನಮ್ಮ ಈಗಿನ ಸಮಾಜದ ವೈಚಾರಿಕ ಅನಾರೋಗ್ಯವನ್ನು ಸೂಚಿಸುತ್ತವೆಯೆ? ಈ ಪ್ರಶ್ನೆಯ ಹಿನ್ನೆಲೆಯಲ್ಲಿ ನಮ್ಮ ಇಂದಿನ ಚಿಂತನೆಗಳಲ್ಲಿ ಕಾಣುವ ಕೆಲವು ವೈರುಧ್ಯಗಳನ್ನು ಚರ್ಚಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.

ಸಂಸ್ಕೃತಿ, ಚರಿತ್ರೆಯ ಬಗೆಗಿನ ಭಂಡತನ

ನಮ್ಮ ಸಂಸ್ಕೃತಿ ಅನಾದಿ ಕಾಲದ್ದು; ನಮ್ಮ ದೇಶಕ್ಕೆ ಭವ್ಯವಾದ ಚರಿತ್ರೆ ಇದೆ. ನಮ್ಮ ಪೂರ್ವಜರಿಗೆ ಎಲ್ಲವೂ ವೇದ್ಯವಾಗಿತ್ತು; ಅವರು ಬರೆದಿರುವುದನ್ನು ಡಿಕೋಡ್ ಮಾಡಿದರೆ ಸಾಕು ಈಗಿನ ವಿಜ್ಞಾನದ ಅದ್ಭುತ ಆವಿಷ್ಕಾರಗಳೇ ಅಲ್ಲಿ ಅಡಗಿವೆ... ಹೀಗೆ ಬುರುಡೆ ಬಿಡುವಲ್ಲಿ ನಾವು ನಿಸ್ಸೀಮರು. ಅದಕ್ಕೆ ಹುಚ್ಚು ಹುಚ್ಚು ಆಧಾರಗಳನ್ನೂ ಹುಡುಕಿ ತೆಗೆಯುತ್ತೇವೆ ಕೂಡ- ಪೋಸ್ಟ್‌ಮಾರ್ಟಮ್ ಆಗಿ. ಮನುಷ್ಯನು ಸರಳ ಜೀವಿಗಳಿಂದ ಹಂತ ಹಂತವಾಗಿ ವಿಕಾಸಗೊಂಡ ಒಂದು ಸಂಕೀರ್ಣ ಪ್ರಭೇದ ಎಂದು ಡಾರ್ವಿನ್ ವಾದಿಸಿದ ಕೂಡಲೆ, ನಮ್ಮ ದಶಾವತಾರಗಳನ್ನು ತೋರಿಸಿ, `ನಮ್ಮವರಿಗೆ ಅದು ಗೊತ್ತಿತ್ತು' ಎಂದು ಘೋಷಿಸಿಬಿಡುತ್ತೇವೆ- ಅದರ  ಪರಿಣಾಮದ ಬಗ್ಗೆ ಯೋಚಿಸದೆ. ದಶಾವತಾರದ ಮತ್ಸ್ಯ, ಆಮೆ, ವರಾಹ ಇವು ಮಾನವನ ವಿಕಾಸದ ಹಂತಗಳನ್ನು ತೋರುವ ಹಾಗಿದ್ದರೆ `ಸಂಭವಾಮಿ ಉಘೇ ಉಘೇ' ಒಂದು ಉಡಾಫೆಯೆ? ಅಥವಾ, `ಸಂಭವಾಮಿ ಉಘೇ ಉಘೇ' ಮತ್ತು ದಶಾವತಾರದ ಕಥೆಗಳು ಸತ್ಯವಾಗಿದ್ದಲ್ಲಿ, ಆ ಅವತಾರಗಳು ಮಾನವನ ವಿಕಾಸವನ್ನು ಸೂಚಿಸುತ್ತವೆ ಎನ್ನುವುದು ಉಡಾಫೆ ಆಗಿರಬೇಕಲ್ಲವೆ? `ಆ ಎರಡೂ ಒಂದರೊಳಗೊಂದು ಅಡಗಿಕೊಂಡಿರುವ ಸತ್ಯಗಳು' ಎಂದು ವಾದಿಸಿ, ಈ ದ್ವಂದ್ವವನ್ನು ಸುಲಭವಾಗಿ ನೀಗಿಸುವವರಿಗೂ ಬರವಿಲ್ಲ. ನಾವು ಬಹು ತತ್ವ ಪ್ರವೀಣರಲ್ಲವೆ? ಹಾಗಾಗಿ ಬಹು-ಅರ್ಥಗಳೂ ಅಲ್ಲಿರಲು ಸಾಧ್ಯ ಎಂದು ನಂಬುವುದು, ಅಥವಾ ನಂಬಿಸುವುದು ನಮಗೆ ಕಷ್ಟವಿಲ್ಲ.ನಮ್ಮ ಆದಿಕಾಲದ ಜ್ಞಾನದ ಪೋಸ್ಟ್-ಮಾರ್ಟಮ್ ಅವಲೋಕನ ಎಷ್ಟರ ಮಟ್ಟಿಗೆದೆ ಎಂದರೆ, ಇತ್ತೀಚೆಗೆ ಒಂದೆಡೆ, ಶ್ರಿಚಕ್ರದ ಪ್ರಾಕಾರವು `ಗಾಡ್ ಪಾರ್ಟಿಕಲ್'ಗಳನ್ನು ತೋರುತ್ತದೆ ಎಂಬ ವಾದವನ್ನು ಓದಿದೆ! ನನಗೆ ಆಶ್ಚರ್ಯವಾಗುವುದೆಂದರೆ, `ಗಾಡ್ ಪಾರ್ರಟಿಕಲ್' ಅನ್ನು ವಿಜ್ಞಾನಿಗಳು ಪ್ರಯೋಗ ಕೈಗೊಂಡು ತೋರುವ ಮುನ್ನವೇ ಅಂತಹ ರಹಸ್ಯ ಜ್ಞಾನ ನಮ್ಮ ಪೂರ್ವಜರು ಅರಿತಿದ್ದರೆಂದು ತೋರಿಸಬಲ್ಲವರು ಅಥವಾ ಪುರಾವೆಗಳಿಂದ ವಾದಿಸುವವರು ಏಕೆ ಯಾರೂ ಇಲ್ಲ ಎನ್ನುವುದು. ಏಕೆ ಎಲ್ಲವೂ ಪೋಸ್ಟ್ -ಮಾರ್ಟಮ್ ಆಗಿ ಅವಲೋಕನಗೊಳ್ಳುತ್ತವೆ? 

ಇಂತಹ ಕುರುಡು ಪ್ರೇಮ ಸೃಷ್ಟಿಸುವ ಅಪಾಯ ಒಂದಿದೆ: ಮುಂದಿನ ಜನಾಂಗಕ್ಕೂ ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮೆಲ್ಲ ಕುರುಡು ನಂಬಿಕೆಗಳನ್ನೂ ಸತ್ಯವೆಂದು ಬೋಧಿಸಿ, ನಂಬಿಸಿ, ಸ್ವಪ್ರಶಂಸೆಯಲ್ಲಿಯೇ ತೃಪ್ತಿ ಪಟ್ಟುಕೊಳ್ಳುವುದರ ಜೊತೆಗೆ, ಅಂತಹ ಹುಸಿ ಸಂತೃಪ್ತಿಯನ್ನು ಎಳೆ ಮನಗಳಲ್ಲಿಯೂ ತುಂಬುವುದು.ಆ ಮೂಲಕ ನಮ್ಮ ಸಂಸ್ಕೃತಿಯ ಎಲ್ಲ ಅವಶೇಷಗಳನ್ನೂ ಯಾವುದೇ ವಿವೇಚನೆಯಿಲ್ಲದೆ ಸ್ವೀಕರಿಸಲು ಪ್ರೇರೇಪಿಸಿ, ಅವರನ್ನು ವಿಚಾರವಂತಿಕೆಯಲ್ಲಿ ನಿರ್ವೀರ್ಯರನ್ನಾಗಿಸುವ ಅಪಾಯವಿದೆ. ಇದಕ್ಕೆ ಹಲವು ದೃಷ್ಟಾಂತಗಳಿವೆ: ನಮ್ಮ ದೇವರುಗಳು ಹೆಂಡತಿಯರನ್ನು ಅಡವಿಟ್ಟು ಮಾರಿಕೊಂಡರೂ ಅವರನ್ನು ಪೂಜಿಸಬೇಕೆನ್ನುತ್ತೇವೆ. `ನೀನು ಎಂದಿಗೂ ಜೂಜು ಆಡಬಾರದು' ಎಂದು ಮಕ್ಕಳಿಗೆ ನೀತಿ ಪಾಠ ಹೇಳುತ್ತಲೇ, ಆ ಜೂಜಿನಿಂದ ಒಂದು ಯುಗವನ್ನೇ ಯುದ್ಧರಂಗ ಮಾಡಿದ ಧರ್ಮರಾಯನಿಗೆ ದೇವಾಲಯ ಕಟ್ಟಿಸಿ ಪೂಜಿಸಲು ಕಲಿಸುತ್ತೇವೆ. ಈ ವೈರುಧ್ಯಗಳ ನಡುವೆ, ಮಕ್ಕಳನ್ನು ಸರಿತಪ್ಪು ತರ್ಕದ ಗೋಜಲಿಗೆ ಸಿಕ್ಕಿಸುತ್ತೇವೆ. ರಾಮಾಯಣವನ್ನು ವೈಭವೀಕರಿಸುವಾಗ ರಾಮನ `ಏಕಪತ್ನೀವ್ರತ'ದ ಬಗ್ಗೆ ಪೂಜಾ ಮನೋಭಾವ ಬೆಳೆಯುವಂತೆ ಬೋಧಿಸಿ, ಕೃಷ್ಣನ ಬೃಂದಾವನದ ಕಥೆಗೆ ಬಂದಾಗ, ಸಾವಿರ ಹೆಣ್ಣುಗಳ ಜೊತೆಯ ಅವನ ಚಕ್ಕಂದವನ್ನು ಮೆಚ್ಚಿ, `ಗೌರವಿಸಬೇಕಾದ ದೇವರ ನಡತೆ' ಎಂದು ತತ್ವೀಕರಿಸುತ್ತೇವೆ. ನಮ್ಮ ದೈವಗಳ ನೀತಿಕಥೆಗಳು ಬೋಧಿಸುವ ಈ ವೈರುಧ್ಯ ಮೌಲ್ಯಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲವನ್ನು ಪರಿಹರಿಸಲಾಗದ ಹರೆಯ ಕಂದಮ್ಮಗಳು ಕೊನೆಗೆ ಯಾವುದರ ಬಗ್ಗೆಯೂ ಯೋಚಿಸದೆ ಇರುವುದೇ ಸುಲಭೋತ್ತಮ ಕ್ರಮ ಎಂದು ಕಲಿತು, ಅವರು ತಾರ್ಕಿಕ ಮತ್ತು ಚಿಂತನಾ ಸೋಂಬೇರಿಗಳಾಗಲು ನಾವೇ ಕಾರಣವಾಗುತ್ತೇವೆ.ಭಾರತವರ್ಷದ ಇದೇ ಕಾಲಘಟ್ಟದಲ್ಲಿ ಮೇಲೆ ಹೇಳಿದ `ಸ್ವಪ್ರಶಂಸೆಯ ಗುಂಪಿಗೆ ತದ್ವಿರುದ್ಧವಾದ ಮತ್ತೊಂದು `ವಿಚಾರವಾದಿ'  ಬಳಗವನ್ನೂ ಕಾಣುತ್ತೇವೆ. ಎಸ್.ಎಲ್. ಭೈರಪ್ಪನ ಅವರು ಚರಿತ್ರೆಯಲ್ಲಿ ಉಲ್ಲೇಖಿತ ಸತ್ಯಗಳನ್ನು ಆಧರಿಸಿ ಬರೆದ `ಆವರಣ' ಕಾದಂಬರಿಯನ್ನೂ ಹಾಗೂ, ವಿ.ಎಸ್. ನೈಪಾಲ್‌ರು ತಮ್ಮ Wounded Civilization® ನಲ್ಲಿ ಉಚ್ಚರಿಸಿದ ಇತಿಹಾಸ ಸತ್ಯವನ್ನು `ಸಮಾಜ ವಿರೋಧಿ', `ಶಾಂತಿ ಕದಡುವ' ಅಥವಾ `ಅಸೂಕ್ಷ್ಮ' ಬರಹಗಳೆಂಬ ಅರ್ಥ ಲೇಪಿಸಿ, ಅವುಗಳಲ್ಲಿ `ಲಿಟರೇಚರ್- ಬಾಂಬ್' ಎಂಬಂತಹ ಭಯೋತ್ಪಾದಕ ಅಂಶಗಳನ್ನು ಹುಡುಕುವ ವಿಚಾರವಾದಿಗಳು, ಅದೇ ಭಾರತ ಚರಿತ್ರೆಯ ಜಾತಿ-ವರ್ಣ ಭೇದ, ಸತಿ ಸಹಗಮನ, ಬಾಲ್ಯವಿವಾಹ, ಮುಂತಾದ ದುರಂತ ಸತ್ಯಗಳನ್ನು ಮಾತ್ರ ಎತ್ತಿಹಿಡಿಯುವ ಅರೆ ಸತ್ಯವಾದಿಗಳು. ನಮ್ಮ ಸಂಸ್ಕೃತಿಯ ಈ ದುರಂತ ಸತ್ಯಗಳನ್ನು ಎತ್ತಿ ತೋರಬಾರದೆನ್ನುವುದು ನನ್ನ ವಾದವಲ್ಲ. ಅವೆಲ್ಲವೂ ಸತ್ಯ. ಆ ಸತ್ಯಗಳನ್ನು ಗುರುತಿಸಿ ನಾವು ಬದಲಾಗಲೇಬೇಕು. ಆದರೆ, ನಮ್ಮ ಇತಿಹಾಸದ ಬೇರೆ ಸತ್ಯಗಳನ್ನೂ ಗುರುತಿಸುವಲ್ಲಿ ನಾವು ಭೇದಭಾವ ಮಾಡಬಾರದು ಎನ್ನುವುದು ನನ್ನ ಒತ್ತಾಯ. ಚರಿತ್ರೆಯನ್ನು ಚರಿತ್ರೆಯನ್ನಾಗಿ ಮಾತ್ರ ನೋಡುವ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆನ್ನುವುದು ನನ್ನ ವಾದ. ಆದರೆ, ಈ ಬುದ್ಧಿಜೀವಿಗಳು ಚರಿತ್ರೆಯ ಕೆಲವು ಸತ್ಯಗಳನ್ನು ಮಾತ್ರ ಎತ್ತಿಹಿಡಿದು, ಕೆಲವನ್ನು ಕಾಣದಂತೆ ನಟಿಸುವ ಜಾಣಕುರುಡರು. ಚರಿತ್ರೆಯನ್ನು ತಮ್ಮ ವಾದಕ್ಕೆ ತಕ್ಕಂತೆ ಸ್ವೀಕರಿಸುವ ಅಥವಾ ತಿರಸ್ಕರಿಸುವ ಇವರು, ಪ್ರಸ್ತುತ ಸಾಮಾಜಿಕ ಮನೋಭಾವದ ದೃಷ್ಟಿಯಲ್ಲಿ ಗೌರವಕ್ಕೆ ಪಾತ್ರರಾಗುವಂತೆ, ರಾಜಕೀಯದ ಗಾಳಿಯ ದಿಕ್ಕಿಗೆ ಸರಿಹೊಂದುವಂತೆ, ತಮ್ಮ ವಾದಗಳನ್ನು ಮಂಡಿಸಿ ಬೇರೆಯವರಿಗಿಂತಲೂ ತಾವು `ಸಾಮಾಜಿಕ ನ್ಯಾಯವಂತರು', `ಸಾಮಾಜಿಕ ಪ್ರಜ್ಞಾವಂತರು' ಎಂದು ಎದೆ ತಟ್ಟಿ ಹೇಳುವಲ್ಲಿ  ನಿಸ್ಸೀಮರು. `ನಮ್ಮ ಚರಿತ್ರೆಯು ಗೆದ್ದವರು ಬರೆದ ಸುಳ್ಳಿನ ಕಂತೆ' ಎಂಬ ಸತ್ಯದ ಬಗ್ಗೆ ಬಿಡುಬೀಸಾಗಿ ಮಾತನಾಡಿ, ಅಂದಿನ ಚರಿತ್ರಕಾರರನ್ನು ಮೂದಲಿಸುವ ಈ ಬಳಗ, ಇಂದಿನ ಕಾಲಘಟ್ಟದಲ್ಲಿ ತಾವೂ ಅಂತಹುದೇ ಅರ್ಧ ಸತ್ಯವನ್ನು ಹುಟ್ಟುಹಾಕುತ್ತಿರುವ `ಚರಿತ್ರೆ-ಕಳ್ಳರು' ಎಂದು ನನ್ನ ಭಾವನೆ.ಈ `ವಿಚಾರವಾದಿ'ಗಳಿಗೆ ಮತ್ತೊಂದು ದಾಯಾದಿ ಬಳಗವಿದೆ. ಈ ಬಳಗವೂ ಹೀಗೆಯೇ ವೈರುಧ್ಯ ಮೌಲ್ಯಗಳಿಗೆ ಅಂಟಿಕೊಂಡು, ಕಾಣದ ತಮ್ಮ ಬೆನ್ನಿಗೆ  ಕನ್ನಡಿ ಹಿಡಿಯದ ಜಾಣ ಜಾತಿ. ಬಹುಪಾಲು, ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುವ ಇವರು ನಮ್ಮ ಯುವ ಜನಾಂಗವು ಅಸಭ್ಯ ಉಡುಪುಗಳನ್ನು ಧರಿಸುವುದರ ಮತ್ತು ಚಲನಚಿತ್ರಗಳ `ಐಟಂ ನೃತ್ಯ'ಗಳ ಸಾಮಾಜಿಕ ಪರಿಣಾಮವನ್ನು ಅವಲೋಕಿಸುವುದೇ ಅನಾಗರಿಕ ಎಂದು ತೀರ್ಮಾನಿಸಿದರೂ, ಅಮೆರಿಕದ ಅಧ್ಯಕ್ಷ ಒಬ್ಬಾಕೆಯನ್ನು ಗೌರವಯುತವಾಗಿ, `best looking' ಎಂದು ಹೇಳಿದರೆ, ಅದು `sexist comment’ಎಂದೇ ತೀರ್ಮಾನಿಸಿ ಖಂಡಿಸಲು ಮುಂದಾಗುತ್ತಾರೆ. ತಮ್ಮನ್ನು ತಾವು `ಲಿಬರೇಟೆಡ್' ಎಂದು ಕರೆದುಕೊಳ್ಳುವ ಇವರು, `ಲಿವಿನ್ ರಿಲೇಶನ್'ನಂತಹ ಜೀವನ ಕ್ರಮಗಳನ್ನೂ ಹೆಣ್ಣು ಅಥವಾ ಗಂಡು ಅಸಭ್ಯವಾದ ವೇಷಗಳನ್ನು ಧರಿಸುವುದನ್ನೂ ವೈಯುಕ್ತಿಕ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳುವುದೇ ಹೆಗ್ಗಳಿಕೆ ಎಂದು ಭಾವಿಸುತ್ತಾರೆ. ಆದರೆ, ಒಂದು ಹೆಣ್ಣು ಮತ್ತು ಗಂಡನ್ನು ಬೆಸೆಯಲು ನಡೆಯುವ ಮದುವೆ ಮುಂತಾದ ಸಾಂಸ್ಕೃತಿಕ ವ್ಯವಸ್ಥೆಗಳು ಮತ್ತು ಸಮಾಜದಲ್ಲಿ ನಾವು ಅಳವಡಿಸಿಕೊಳ್ಳಬೇಕಿರುವ ಸಭ್ಯ ವರ್ತನೆಗಳು, ಸಮಾಜದ ಏಳಿಗೆಗಾಗಿ ಶತಮಾನಗಳ ಕಾಲದಿಂದ ವಿಕಾಸಗೊಂಡಿರುವ ಸಾಮಾಜಿಕ ನಡತೆಗಳು ಎಂಬ ಸತ್ಯಕ್ಕೆ ಜಾಣ ಕುರುಡರಾಗಿ ವರ್ತಿಸುತ್ತಾರೆ. ಇವರನ್ನು ಕಂಡಾಗ ನನಗೆ ನೆನಪಾಗುವುದೆಂದರೆ- 17 ಮತ್ತು 18ನೇ ಶತಮಾನದ ಯೂರೋಪಿನಲ್ಲಿ ಕಂಡುಬಂದ ಇಂತಹುದೇ ಒಂದು ಚಾಲನೆ: ಅಂದಿನ ಕಾಲಘಟ್ಟದ ಯೂರೋಪಿನ ಕೆಲವರು `ಬುದ್ಧಿವಂತರು' (ಲಿನ್ನೇಸ್ ಸೇರಿ), ತಮ್ಮ ಜನಾಂಗ, ಅಂದರೆ ಬಿಳಿಯರು, ಮಾತ್ರ ಉನ್ನತ ಮಟ್ಟದ ನಾಗರಿಕರು, ಮಿಕ್ಕೆಲ್ಲರೂ ಕೀಳು ಜನಾಂಗದವರು ಎಂದು ತೀರ್ಮಾನಿಸಿ ಪುಟಗಟ್ಟಲೆ ಬರೆದು, ಭಾಷಣಗಳನ್ನು ಬಿಗಿದು ತಮ್ಮ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಈ ನಂಬಿಕೆ ಅರಿಸ್ಟಾಟಲ್‌ನ ಕಾಲದಿಂದಲೇ ರೂಢಿಯಲ್ಲಿದ್ದರೂ 17ನೇ ಶತಮಾನದ ಬುದ್ಧಿವಂತರು ಇದರ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನೂ ಮುಂದಿಡುವ ಪ್ರಯತ್ನ ಮಾಡಿದ್ದರು: ಇದರ ಬಗ್ಗೆ ಪೆಟ್ರೀಸಿಯ ತಾರ ತಮ್ಮ`Sex, Botany and Empire’ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ:‘Aristotle had envisaged the natural world arranged in an order along a great chain of being, starting with rocks…moving upwards through plants, fish and animals to reach human beings. White European men were, of course, right at the top of this ladder'. ಮುಂದುವರೆದು ಆಕೆ ಬರೆಯುತ್ತಾರೆ:

`Unsurprisingly, Linnaeus’s top race was Europaeus albus, the ingenious and sanguine white Europeans. The other three were happy go lucky Red Indians, the melancholy yellow Asians, and the idle black Africans…

.. Linnaeus put Europeans at the summit of creation,  …’.

ಈಗಿನ ಕಾಲದ ಈ ಮೀಡಿಯಾ ಬಳಗ, ಅಂದಿನ ಕಾಲದ ಯೂರೋಪಿನ ಬುದ್ಧಿವಂತರ ಹಾದಿ ತುಳಿಯುವುದೇ ನಾಗರಿಕತೆ ಎಂದು ಭಾವಿಸಿದಂತಿದೆ.ಧರ್ಮಗಳು ಮತ್ತು ಹಲವು ಧಾರ್ಮಿಕ ವಿಧಿಗಳು, ಸಾಮಾಜಿಕ ಅವಶ್ಯಕತೆಯಿಂದಾಗಿ ವಿಕಾಸಗೊಂಡ ವ್ಯವಸ್ಥೆಗಳು ಹಾಗೂ, ಮಾನವನಲ್ಲಿ ಸಮಾಜ-ಪರ ನಡತೆಗಳು ವಿಕಾಸಗೊಂಡಿರುವುದೇ ಧರ್ಮಗಳ ಆವರಣದೊಳಗೆ ಎಂಬ ವೈಜ್ಞಾನಿಕ ಸತ್ಯಕ್ಕೆ ಕೆಲವರ ಕಣ್ಣು ಮುಚ್ಚಿಬಿಟ್ಟಂತಿದೆ.ಧಾರ್ಮಿಕ ವಿಧಿಗಳನ್ನು ಧಿಕ್ಕರಿಸುವ ಮುನ್ನ ಅವುಗಳ ಅವಲೋಕನ ಅವಶ್ಯಕ ಎಂದು ವಾದಿಸುವವರನ್ನು ಇವರು, `ಮೂಲಭೂತವಾದಿ'ಗಳೆಂದು  ತಿರಸ್ಕರಿಸುತ್ತಾರೆ. ಇಂತಹ `ವಿಚಾರವಂತರ' ವಾದಗಳಲ್ಲಿರಬಹುದಾದ ಟೊಳ್ಳನ್ನು ತೆರೆದಿಡಬೇಕಾದರೆ, ಧರ್ಮಗಳ ಉಗಮ ಮತ್ತು ಅವಶ್ಯಕತೆಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ ಮುಕ್ತವಾಗಿ, ಹಾಗೂ ಕಾಲಾತೀತವಾಗಿ ಗ್ರಹಿಸಬೇಕು. ಆಗ ದೊರೆಯುವ ಉತ್ತರಗಳು, ಬಹುಶಃ ನಮ್ಮ ಈಗಿನ ರಾಜ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ತರಬೇಕಾದ ಕೆಲವು ಬದಲಾವಣೆಗಳ ಅವಶ್ಯಕತೆಯತ್ತ ಕೈಮರಗಳಾಗಬಹುದು. ಈ ನನ್ನ ನಂಬಿಕೆಯನ್ನು ಇನ್ನೂ ಹೆಚ್ಚಿನ ಚರ್ಚೆಯ ಒರೆಗಲ್ಲಿಗೆ ಹಚ್ಚಬೇಕು ಎಂದು ಒಪ್ಪಿಕೊಳ್ಳುತ್ತೇನೆ. ನಮ್ಮ ದೇಶಕ್ಕೆ ಅದ್ಭುತವಾದ ಚರಿತ್ರೆಯಿದೆ ಎಂದು ಬೊಗಳೆಬಿಡುವ ನಾವು ಅದೆಷ್ಟು `ಚರಿತ್ರೆಹೀನರು' ಎಂದು ನಾಚಬೇಕಾಗಿದೆ: ಅಶೋಕನ ಕಾಲದಲ್ಲಿ ಲಿಪಿಯನ್ನು ಅಳವಡಿಸಿಕೊಂಡ ನಂತರವೂ ಚರಿತ್ರೆಯ ಘಟನೆಗಳ ಬಗ್ಗೆ ಬರೆದು, ದಾಖಲಿಸುವ ರೂಢಿಯೇ ನಮ್ಮ ಭಾರತೀಯರ ರಕ್ತದಲ್ಲಿ ಕಂಡು ಬರುವುದಿಲ್ಲ. ವಿಜಯನಗರದ ವಿವರಗಳು ಬೇಕಿದ್ದರೆ, ಚೀನಾದ ಹುಯೆನ್‌ತ್ಸಾಂಗ್ ದಾಖಲೆಗಳಿಗೆ ಹೋಗಬೇಕು. ಚಂದ್ರಗುಪ್ತನ ಬಗ್ಗೆ ತಿಳಿಯಬೇಕೆಂದರೆ ಅಲೆಕ್ಸಾಂಡರ್ ತನ್ನೊಂದಿಗೆ ಕರೆತಂದಿದ್ದ ಚರಿತ್ರಕಾರ, ಹೆರಿಡೋಟಸ್‌ನ ಬರಹಕ್ಕೆ ಶರಣಾಗಬೇಕು. ಬುದ್ಧನ ಹಾಗೂ ಅಶೋಕನ ಬಗ್ಗೆ ಶ್ರಿಲಂಕಾದ `ಮಹಾವಂಶ'ದಂತಹ  ಪುರಾಣಗಳಿಗೆ ಮೊರೆಹೋಗಬೇಕು.  ಹೀಗೆ ನಮ್ಮ ಸಂಪೂರ್ಣ ಚರಿತ್ರೆಯ ರಚನೆಗೆ ನಾವು ಹೊರಗಿನ ದಾಖಲೆಗಳನ್ನು ಆಶ್ರಯಿಸಬೇಕಿರುವಾಗ, ನಮ್ಮ ಚರಿತ್ರೆ ಅದ್ಭುತ ಎಂದು ಯಾವ ಖಚಿತತೆಯಿಂದ ಹೇಳಬಹುದು ಎಂದು ನನಗೆ ಆಶ್ಚರ್ಯ. ಬಹುಶಃ ಇದೇ ಕಾರಣದಿಂದಲೇ ಹಲವು ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲದೆ, ಊಹಾಪೋಹಗಳ ಕಗ್ಗಂಟು ಎದುರಾಗುತ್ತದೆ. ಉದಾಹರಣೆಗೆ, `ಎರಡನೇ ಬುದ್ಧ' ಎಂದು ಹೆಸರಾದ, ಬೌದ್ಧ ಧರ್ಮಕ್ಕೆ `ಮಹಾಯಾನ' ಎಂಬ ಹೊಸ ಆಯಾಮವನ್ನು ಕಟ್ಟಿ ಕೊಟ್ಟ, ಇಂದಿನ ತತ್ವಜ್ಞಾನಿಗಳು ಕೂಡ ಅಚ್ಚರಿಪಡುವಂತಹ ತಾತ್ವಿಕ ವಾದಗಳನ್ನು ಮಂಡಿಸಿದ ನಾಗಾರ್ಜುನ ಆಚಾರ್ಯರ ಬಗ್ಗೆ ಅದೆಷ್ಟು ಊಹಾಪೋಹಗಳಿವೆ ಎಂದರೆ, ಅವೆಲ್ಲವೂ ನಿಜವಾಗಿದ್ದಲ್ಲಿ ಆತ ಕನಿಷ್ಠ 4 ಶತಮಾನಗಳವರೆಗೆ ಬದುಕಿದ್ದ ಪವಾಡ ಪುರುಷನೂ, ತಾಂತ್ರಿಕನೂ, ಕಾಮುಕನೂ, ಕಲ್ಲನ್ನು ಬಂಗಾರ ಮಾಡುವ ಕಲೆ ಕಲಿತಿದ್ದ ರಸಾಯನಶಾಸ್ತ್ರಜ್ಞನೂ, ತನ್ನ ಕಾಲಕ್ಕೆ ಮೀರಿದ ಚಿಂತನಕಾರನೂ, ತತ್ವಶಾಸ್ತ್ರ ಪ್ರವೀಣನೂ... ಏನೇನೋ ಆಗಿರಬೇಕು! ಹೀಗೆ, ನಮ್ಮಲ್ಲಿ ಬದುಕಿದ್ದ ಒಬ್ಬ ಅಪ್ರತಿಮ ತತ್ವಜ್ಞಾನಿಯೊಬ್ಬನ ಚರಿತ್ರೆಯನ್ನು ಮಸುಕಾಗಿಸಿ, ಆತನಿಗೆ ಸಲ್ಲಬೇಕಿದ್ದ ಗೌರವ ಮತ್ತು ಆಸಕ್ತಿಯನ್ನು ನಾವು ಕುಂಠಿತಗೊಳಿಸಿದ್ದೇವೆ.ನಮ್ಮ ಇತಿಹಾಸದ ಬಗ್ಗೆ ನಮಗೆ ಗೌರವ, ಹೆಮ್ಮೆ ಇರಬೇಕು. ತನ್ನ ಇತಿಹಾಸವನ್ನು ಮರೆತವ ತನ್ನನ್ನೇ ಮರೆತಂತೆ. ಆದರೆ ಆ ಗೌರವ ಮತ್ತು ಹೆಮ್ಮೆ ಹಿರಿಮೆಯ ಹುಚ್ಚು ಪರಮಾವಧಿ ಮುಟ್ಟಬಾರದು. ಹಾಗೆಯೇ ನಮ್ಮದೆನ್ನುವುದೆಲ್ಲ ಕೆಟ್ಟದೆನ್ನುವುದೂ ಹೊಲಸು ಚಿಂತನೆ.

ಚಿಂತನೆಗಳ ಭವಿಷ್ಯ

ಒಂದು ಕಾಲಘಟ್ಟದ ಸಿದ್ಧಾಂತಗಳ, ಚಿಂತನೆಗಳ ಮತ್ತು ನಂಬಿಕೆಗಳ ನಿಜವಾದ ಅಳತೆಯಾಗುವುದು ಭವಿಷ್ಯದಲ್ಲಿ. ಆಯಾ ಕಾಲ ಘಟ್ಟದಲ್ಲಿ ಅಪ್ಪಟ ಸತ್ಯ ಎಂದು ಕಂಡಿದ್ದ ಅದೆಷ್ಟೋ ಚಿಂತನೆಗಳು ಭವಿಷ್ಯದ ತಕ್ಕಡಿಯಲ್ಲಿ ನಗೆಪಾಟಲಿನ ಹುಸಿ ಯೋಚನೆಗಳಾಗಿ ತಿರಸ್ಕಾರಗೊಂಡಿವೆ. ಸಮಕಾಲೀನ ಮಸೂರದ ಮೂಲಕ ಮಾನವನ ಚಿಂತನೆಗಳನ್ನು ಅವಲೋಕಿಸಿದಾಗ, ಅವು ಕೆಲವೊಮ್ಮೆ, ಯೋಚನಾಶಾಲಿಯಾದ ಮಾನವ ಇಷ್ಟು ತರ್ಕರಹಿತವಾಗಿ ಚಿಂತಿಸಲು ಸಾಧ್ಯವೆ ಎಂದು ಅಚ್ಚರಿಪಡುವಷ್ಟು ಹುಸಿಯಾಗಿ ಕಾಣುತ್ತವೆ. ಉದಾಹರಣೆಗೆ, ವಿಧವೆ ವಿವಾಹವಾದರೆ ದುರ್ಭಿಕ್ಷವಾಗುತ್ತದೆ ಎಂಬ, ಅಥವಾ ಪತಿಯ ಚಿತೆಯಲ್ಲಿ ತನ್ನನ್ನೇ ಸುಟ್ಟುಕೊಂಡು ಸಹಗಮಿಸದಿದ್ದರೆ, ಸತಿಗೆ ಸ್ವರ್ಗ ಸಿಗದು ಎಂಬ ನಂಬಿಕೆಗಳನ್ನು ಚಿಂತಿಸಬಲ್ಲ ಮಾನವರ ಒಂದು ಇಡೀ ಸಮುದಾಯ ಹೇಗೆ ತಾನೆ ಸತ್ಯವೆಂದು ಸ್ವೀಕರಿಸಿರಲು ಸಾಧ್ಯವಾಗಿತ್ತು ಎಂದು ಇಂದಿನ ಮಕ್ಕಳೂ ಆಶ್ಚರ್ಯಪಡುವ ಸಾಧ್ಯತೆ ಇದೆ. ಹಾಗೆಯೇ, ಚಪ್ಪಟೆಯಾದ ಭೂಮಿಯು ಅಟ್ಲಾಸ್‌ನ ಭುಜದ ಮೇಲಿದೆ ಅಥವಾ ಆಮೆಯ ಬೆನ್ನಿನ ಮೇಲಿದೆ ಎಂದು ನಂಬಿದ್ದ ಕಾಲದ ಜನರ ತರ್ಕ ಶಕ್ತಿಯ ಬಗ್ಗೆ ಇಂದು ಅನುಮಾನ ಹುಟ್ಟುವುದು ಸಹಜ.ಈ ವಿಶ್ವದ ಸೃಷ್ಟಿ, ಕ್ರಿಯೆ, ಮತ್ತು ಲಯದ ಬಗ್ಗೆ ವಿಜ್ಞಾನದ ಚಿಂತನೆಯಾಗಲಿ, ಸಾಮಾಜಿಕ ಅಥವಾ ವೈಯುಕ್ತಿಕ ಜೀವನ ಕ್ರಮಗಳ ಮೌಲ್ಯಗಳ ಬಗ್ಗೆ ತತ್ವಶಾಸ್ತ್ರಗಳಾಗಲಿ, ನ್ಯಾಯ ಅನ್ಯಾಯ, ಅಥವಾ ಸರಿ ತಪ್ಪುಗಳ ಬಗ್ಗೆ ಧಾರ್ಮಿಕ ಚಿಂತನೆಗಳಾಗಲಿ, ಆಯಾ ಕಾಲದಲ್ಲಿ ತಳೆದಿದ್ದ ಧೋರಣೆಗಳ ಜೊಳ್ಳುತನವು ಕಾಲನದಿಯ ಹರಿತಕ್ಕೆ ಸಿಕ್ಕು ಕೊಚ್ಚಿಹೋಗುತ್ತದೆ. ಇದು ಮಾನವನ ಚಿಂತನೆಯ ವಿಕಾಸದಿಂದಲೇ ಇರಬಹುದು ಅಥವಾ ಸಾಮೂಹಿಕ ಚಿಂತನೆಗಳ ಪ್ರಭಾವದಿಂದಲೇ ಇರಬಹುದು. ಒಟ್ಟಿನಲ್ಲಿ ಭವಿಷ್ಯವು ನಮ್ಮ ಚಿಂತನೆಗಳ ಸತ್ಯವನ್ನು ಜರಡಿ ಹಿಡಿಯುವ ಪ್ರಭಾವಕಾರಿ ಪ್ರಯೋಗಶಾಲೆ.ಹಾಗಿದ್ದಲ್ಲಿ, ಪ್ರಸ್ತುತ ಚಿಂತನೆಗಳಲ್ಲಿನ ಜೊಳ್ಳುತನವನ್ನು ತೂರಿಕೊಳ್ಳಲು `ಭವಿಷ್ಯದ ಜರಡಿ'ಯನ್ನು ಉಪಯೋಗಿಸಬಹುದೆ? ದುರದೃಷ್ಟವೆಂದರೆ, ನಾವು ಭವಿಷ್ಯವನ್ನು ಕಾಣಲಾಗದು. ಆದರೆ ಕಾಲಾತೀತವಾಗಿ ಚಿಂತಿಸುವ, ನಿರ್ವಂಚನೆಯಿಂದ, ಉದ್ರೇಕರಹಿತವಾಗಿ ಚರ್ಚಿಸುವ  ಕ್ರಮವನ್ನು ಈ ಪ್ರಯೋಗಕ್ಕೆ ಅಳವಡಿಸಿಕೊಂಡರೆ? ಅಂತಹ ಪ್ರಯತ್ನದಿಂದ ನಮ್ಮ ನಂಬಿಕೆಗಳು ಮತ್ತು ವಿಚಾರಗಳಲ್ಲಿನ ಗಟ್ಟಿ ಸತ್ಯದ ದರ್ಶನ ಪಡೆಯಬಹುದೆ? ಆದರೆ, ಯಾವುದೇ ಚಿಂತನೆಗೆ ಅಥವಾ ನಂಬಿಕೆಗೆ ಆಯಾಕಾಲದಲ್ಲಿ ಕಟ್ಟಾ ಅನುಯಾಯಿಗಳಿದ್ದು ಅವರಿಗೆ ತಮ್ಮ ನಂಬಿಕೆಗಳು ಜೊಳ್ಳು ಎಂದು ತೋರಿಸಿಕೊಡುವುದು ಸರಿಕಾಣದು. ಆದರೂ, ಕಾಲಾತೀತವಾಗಿ ಯೋಚಿಸುವುದರಿಂದ ಚಿಂತನೆಗಳ ಭಟ್ಟಿ ಸಾಧ್ಯ ಎಂದು ಯಾರೂ ನಂಬುತ್ತಾರೆ. ಅಂತಹ ಪ್ರಯತ್ನಕ್ಕೆ ಕೈಹಾಕುವುದರಿಂದ ನಾವು ನಮ್ಮನ್ನೇ ಎಚ್ಚರಿಸಿಕೊಳ್ಳುವ ಸಾಧ್ಯತೆಯಂತೂ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.