ಚಿಂತನೆಗೆ ಹಚ್ಚುವ ಛಾಯಾಚಿತ್ರಗಳು...

7

ಚಿಂತನೆಗೆ ಹಚ್ಚುವ ಛಾಯಾಚಿತ್ರಗಳು...

Published:
Updated:

ಪತ್ರಿಕಾ ಛಾಯಾಗ್ರಹಣ, ಫ್ಯಾಷನ್, ಜಾಹೀರಾತು, ಹವ್ಯಾಸ... ಹೀಗೆ ವಿಭಿನ್ನ ಕಾರಣಕ್ಕಾಗಿ ಕ್ಯಾಮೆರಾ ಹಿಡಿಯುವ ಛಾಯಾಗ್ರಾಹಕರಿದ್ದಾರೆ. ಇವರಲ್ಲಿ ಛಾಯಾಗ್ರಹಣವನ್ನು ಮನಸ್ಸಿನ ಸಂತೋಷಕ್ಕಾಗಿ ಅಪ್ಪಿಕೊಂಡವರ ಸಂಖ್ಯೆಯೇ ದೊಡ್ಡದು.ಸಮಕಾಲೀನ ಕಲೆ, ಸಮಕಾಲೀನ ಕಾವ್ಯದಂತೆ ಛಾಯಾಗ್ರಹಣದಲ್ಲೂ ಸಮಕಾಲೀನತೆಯಿದೆ. ಈ ಸಮಕಾಲೀನ ಛಾಯಾಗ್ರಾಹಕರು ಯಾವುದೋ ಥೀಮ್‌ನ ಹಿಂದೆ ಬಿದ್ದು ಪ್ರಕೃತಿಯ ಸೌಂದರ್ಯವನ್ನೋ, ವನ್ಯಜೀವಿಗಳನ್ನೋ, ಹಸಿವು, ಬಡತನವನ್ನೋ, ಗ್ರಾಮೀಣ ಬದುಕನ್ನೋ ಸೆರೆ ಹಿಡಿಯುವುದಿಲ್ಲ. ನಿತ್ಯಜೀವನದಲ್ಲಿ ನಾವು ಗಮನಿಸದೇ ಹೋದ ಸಂಗತಿಗಳನ್ನು ಸೆರೆ ಹಿಡಿಯುತ್ತಾರೆ.ನೆಗೆಟಿವ್‌ಗಳನ್ನು ಕ್ಯಾನ್ವಾಸ್‌ನಂತೆ ಬಳಸಿಕೊಂಡು ಬಿಂಬ ಮೂಡಿಸುತ್ತಾರೆ.ಅರಮನೆ ರಸ್ತೆಯ ‘ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ಈಗ ಇಂತಹ ಸಮಕಾಲೀನ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ‘ಸಂಥಿಂಗ್ ದಾಟ್ ಐ ವಿಲ್ ನೆವರ್ ರಿಯಲಿ ಸಿ’ ಹೆಸರಿನ ಈ ಪ್ರದರ್ಶನದಲ್ಲಿ ಲಂಡನ್‌ನ ‘ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ’ ಸಂಗ್ರಹದಲ್ಲಿರುವ 30ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿಶ್ವದಲ್ಲೇ ಬೃಹತ್ತಾದ ಕಲಾಕೃತಿಗಳ ಸಂಗ್ರಹ ಇರುವ ಮ್ಯೂಸಿಯಂ ಅದು.

ಇಲ್ಲಿರುವ ಛಾಯಾಚಿತ್ರಗಳು ನಿಮ್ಮಲ್ಲಿ ವಿಸ್ಮಯ, ಬೆರಗು ಹುಟ್ಟಿಸುವುದಿಲ್ಲ. ಬದಲಾಗಿ ಚಿಂತನೆಗೆ ಹಚ್ಚುತ್ತವೆ.ಉದಾಹರಣೆಗೆ ಪ್ರವಾಸಿ ತಾಣ ಕೊಡೈಕೆನಾಲ್‌ನಲ್ಲಿ ಸೆರೆಹಿಡಿದಿರುವ ಚಿತ್ರ. ಗುಡ್ಡವೊಂದರ ತುದಿಯಲ್ಲಿ ಚರ್ಚ್ ಇದೆ. ಅದರ ಇಳಿಜಾರಿನಲ್ಲಿ ತಾರಸಿ ಮನೆಗಳು, ಹೆಂಚಿನ ಮನೆಗಳು, ತಗಡು ಹೊದಿಸಿದ ಮನೆಗಳು, ಟೆಂಟ್‌ನಂತಹ ಮನೆಗಳು ಕಾಣುತ್ತವೆ. ಸುತ್ತಲಿನ ಬೆಟ್ಟಗಳಲ್ಲಿ ಪ್ರವಾಸಿಗಳಿಗಾಗಿ ನಿರ್ಮಿಸಿರುವ ಸುಸಜ್ಜಿತ ವಸತಿಗೃಹಗಳು ಕಾಣಿಸುತ್ತವೆ. ಸಮಾಜದಲ್ಲಿನ ವೈರುಧ್ಯ ಮತ್ತು ವರ್ಗ ಅಸಮಾನತೆ ಬಿಂಬಿಸುವ ಚಿತ್ರವಿದು.ಸಂಸಾರ ಸಾಗರದಲ್ಲಿ ಸಿಲುಕಿರುವ ಮನುಷ್ಯ ಎಷ್ಟೊಂದು ಮುಖವಾಡ ಹಾಕಿಕೊಂಡಿರುತ್ತಾನೆ ಎಂಬುದನ್ನು ಮಧ್ಯವಯಸ್ಕನೊಬ್ಬ ರಬ್ಬರ್ ಮುಖವಾಡ ಹಾಕಿಕೊಂಡಿರುವ ಚಿತ್ರ ಸೂಚಿಸುತ್ತದೆ.ಈ ಪ್ರದರ್ಶನ ಫೆ. 27ರವರೆಗೆ ಮುಂದುವರಿಯಲಿದೆ.

ಸ್ಥಳ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಅರಮನೆ ರಸ್ತೆ, ವಸಂತ ನಗರ.  ಬೆಳಿಗ್ಗೆ 10ರಿಂದ ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry