ಶುಕ್ರವಾರ, ನವೆಂಬರ್ 15, 2019
20 °C

ಚಿಂತೆಯಲ್ಲಿ ಜಿಲ್ಲೆಯ ಸ್ಪರ್ಧಾಳುಗಳು

Published:
Updated:

ಚಿಕ್ಕಬಳ್ಳಾಪುರ: ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿರುವ ಪ್ರಸಕ್ತ ಸಾಲಿನ ಚುನಾವಣೆಯ ಫಲಿತಾಂಶ ಮತ್ತು ಅದರ ನಂತರದ ಪರಿಣಾಮಗಳು ಜನರಿಗೆ ಎಷ್ಟು ಕುತೂಹಲ ಮೂಡಿಸುತ್ತದೆ ಎಂಬುದು ಈಗಲೇ ಹೇಳುವುದು ಕಷ್ಟ ಎನ್ನುತ್ತಿದ್ದಾರೆ ಇಲ್ಲಿನ ಜನರು. ಆದರೆ ಮತ ಎಣಿಕೆ ದಿನದಂದು ಬೆಳಕಿಗೆ ಬರುವ ಮತಗಳ ಪ್ರಮಾಣವು ಖಂಡಿತವಾಗಿಯೂ ಕೆಲವಷ್ಟು ಅಭ್ಯರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರದೇ ಇರುವುದಿಲ್ಲ.ಅದರಲ್ಲೂ ಒಂದೇ ಹೆಸರಿನಲ್ಲಿ ಕಣಕ್ಕಿಳಿದಿರುವ ಕೆಲ ಅಭ್ಯರ್ಥಿಗಳ ನಿರೀಕ್ಷೆಗಳು ಬುಡಮೇಲಾಗಬಹುದು ಅಥವಾ ಆಗದೇನೆ ಇರಬಹುದು.

ಒಂದೇ ಹೆಸರಿನ ಅಭ್ಯರ್ಥಿಗಳು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಮತದಾರರು ಯಾರ ಪರ ಹೆಚ್ಚು ಒಲವು ತೋರುತ್ತಾರೆ ಎಂಬುದು ನಿಗೂಢವಾಗಿ ಉಳಿದುಕೊಂಡಿದೆ. ಜಿಲ್ಲೆಯ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ. ಒಂದೇ ಹೆಸರಿನಲ್ಲಿ ಸ್ಪರ್ಧಿಸುವುದರಿಂದ ತಲೆದೋರುವ ಸಂಕಷ್ಟಗಳು ಮತದಾರರಿಗಿಂತ ಅಭ್ಯರ್ಥಿಗಳಿಗೆ ಹೆಚ್ಚು ಕಾಡಲಿದೆ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳದೇ ಕೆಲ ಅಭ್ಯರ್ಥಿಗಳು ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದಾರೆ.ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 27 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಎಸ್.ಎನ್.ಸುಬ್ಬಾರೆಡ್ಡಿ ಹೆಸರಿನಲ್ಲಿ ಇಬ್ಬರು ಮತ್ತು ಸುಬ್ಬಿರೆಡ್ಡಿ ಹೆಸರಿನಲ್ಲಿ ಮೂವರು ಕಣಕ್ಕೆ ಇಳಿದಿದ್ದಾರೆ. ಇಬ್ಬರು ಎಸ್.ಎನ್.ಸುಬ್ಬಾರೆಡ್ಡಿಗಳ ಪೈಕಿ ಒಬ್ಬರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನೂ ಆಸಕ್ತಿಮಯ ಸಂಗತಿಯೆಂದರೆ, ಈ ಎಲ್ಲ ಸುಬ್ಬಾರೆಡ್ಡಿ ಮತ್ತು ಸುಬ್ಬಿರೆಡ್ಡಿ ಹೆಸರುಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಸಿಗುವುದೇ 21 ರಿಂದ 25ರವರೆಗಿನ ಸ್ಥಾನದಲ್ಲಿ. ಇಬ್ಬರೂ ಎಸ್.ಎನ್.ಸುಬ್ಬಾರೆಡ್ಡಿ ಎಂಬುವರು 22 ಮತ್ತು 23ನೇ ಸ್ಥಾನದಲ್ಲಿದ್ದರೆ, ಸುಬ್ಬಿರೆಡ್ಡಿ ಎಂಬುವರು 21, 24 ಮತ್ತು 25ನೇ ಸ್ಥಾನದಲ್ಲಿದ್ದಾರೆ.ಒಬ್ಬ ಸುಬ್ಬಾರೆಡ್ಡಿಗೆ ಕ್ಯಾಮೆರಾ ಚಿಹ್ನೆ ನೀಡಲಾಗಿದ್ದರೆ, ಮತ್ತೊಬ್ಬರಿಗೆ ಪ್ರೆಷರ್ ಕುಕ್ಕರ್ ಚಿಹ್ನೆ ಕೊಡಲಾಗಿದೆ. ಉಳಿದ ಮೂವರು ಸುಬ್ಬಿರೆಡ್ಡಿಗೆ ಹಣ್ಣುಗಳಿರುವ ಬ್ಯಾಸ್ಕೆಟ್, ಫ್ರೈಯಿಂಗ್ ಪ್ಯಾನ್ ಮತ್ತು ದ್ರಾಕ್ಷಿ ಚಿಹ್ನೆ ನೀಡಲಾಗಿದೆ. ಈ ಐವರು ಅಭ್ಯರ್ಥಿಗಳು ಪಕ್ಷೇತರರಾಗಿದ್ದು, ಯಾರು ಹೆಚ್ಚು ಮತದಾರರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಮತ ಗಳಿಸುತ್ತಾರೆ ಎಂಬುದ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮತದಾನ ಸಂದರ್ಭದಲ್ಲಿ ತಮಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬರುವುದೋ ಇಲ್ವೊ ಎಂಬ ಪ್ರಶ್ನೆ ಈ ಅಭ್ಯರ್ಥಿಗಳಿಗೆ ಕಾಡುತ್ತಿದೆ.ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರು ಕೂಡ ಇಂತಹದ್ದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಸುಧಾಕರ್ ಪ್ರೆಷರ್ ಕುಕ್ಕರ್‌ಗಳನ್ನು ವಿತರಿಸಿದ್ದರು. ಆದರೆ ಈಗ ಪ್ರೆಷರ್ ಕುಕ್ಕರ್ ಚಿಹ್ನೆಯನ್ನು ಇಟ್ಟುಕೊಂಡೇ ಸುಧಾಕರ್ ಎಂಬುವರು ಚುನಾವಣೆ ಕಣಕ್ಕೆ ಇಳಿದಿದ್ದಾರೆ.ಮತದಾನದ ವೇಳೆ ಮತದಾರರು ಡಾ. ಕೆ.ಸುಧಾಕರ್ ಅವರ ಕೈ ಚಿಹ್ನೆಯತ್ತ ಹೆಚ್ಚಿನ ಒಲವು ತೋರುವುರೋ ಅಥವಾ ಸುಧಾಕರ್ ಅವರ ಪ್ರೆಷರ್ ಕುಕ್ಕರ್‌ನತ್ತ ಆಸಕ್ತಿ ತೋರುವುರೋ ಕಾದು ನೋಡಬೇಕು. ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಡಾ. ಕೆ.ಸುಧಾಕರ್ 3ನೇ ಸ್ಥಾನದಲ್ಲಿದ್ದರೆ, ಪಕ್ಷೇತರ ಅಭ್ಯರ್ಥಿ ಸುಧಾಕರ್ 14ನೇ ಸ್ಥಾನದಲ್ಲಿದ್ದಾರೆ.ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲೂ ಇಂತಹದ್ದೇ ಸ್ಥಿತಿಯಿದೆ. ಚಿಕ್ಕಬಳ್ಳಾಪುರದಲ್ಲಿ ಹಾಲಿ ಶಾಸಕ ಕೆ.ಪಿ.ಬಚ್ಚೇಗೌಡ ಅವರಿಗೆ ಸವಾಲು ಹಾಕಲು ಡಿ.ಎ.ಬಚ್ಚೇಗೌಡ ಮತ್ತು ಬಚ್ಚೇಗೌಡ ಎಂಬ ಇಬ್ಬರು ಪಕ್ಷೇತರರು ಕಣದಲ್ಲಿ ಇದ್ದರೆ, ಚಿಂತಾಮಣಿಯಲ್ಲಿ ಜೆಡಿಎಸ್‌ನ ಜೆ.ಕೆ.ಕೃಷ್ಣಾರೆಡ್ಡಿಗೆ ಪ್ರತಿಸ್ಪರ್ಧಿಗಳಾಗಿ ಜೆಡಿಯು ಪಕ್ಷದ ಎಂ. ಕೃಷ್ಣಾರೆಡ್ಡಿ ಮತ್ತು ಪಕ್ಷೇತರ ಅಭ್ಯರ್ಥಿ ಕೃಷ್ಣಾರೆಡ್ಡಿ ಇದ್ದಾರೆ. ಚಿಂತಾಮಣಿ ಹಾಲಿ ಶಾಸಕ ಡಾ. ಎಂ.ಸಿ.ಸುಧಾಕರ್ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಸ್.ಸುಧಾಕರ್ ರೆಡ್ಡಿ ಮತ್ತು ವಿ ಹರಿ ಸುಧಾಕರ್ ಕೂಡ ಪ್ರತಿಸ್ಪರ್ಧಿಗಳಾಗಿ ಕಣದಲ್ಲಿದ್ದಾರೆ.ಗೌರಿಬಿದನೂರಿನಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಎನ್.ಎಚ್.ಶಿವಶಂಕರ ರೆಡ್ಡಿಯವರಿಗೆ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಎನ್.ಎಚ್.ಶಿವಶಂಕರ ರೆಡ್ಡಿಯೇ ಸವಾಲು ಹಾಕಿದ್ದರೆ, ಶಿಡ್ಲಘಟ್ಟದಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ವಿ.ಮುನಿಯಪ್ಪ ಅವರಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ವಿ.ಮುನಿಯಪ್ಪ ಕಣಕ್ಕೆ ಇಳಿದಿದ್ದಾರೆ. ಶಿಡ್ಲಘಟ್ಟದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎಂ.ರಾಜಣ್ಣ ಅವರಿಗೆ ಪಕ್ಷೇತರ ಅಭ್ಯರ್ಥಿ ಜಿ.ಎ.ರಾಜಣ್ಣ ಪ್ರತಿಸ್ಪರ್ಧಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)