ಶುಕ್ರವಾರ, ಮೇ 7, 2021
26 °C

ಚಿಂತೆ ತಂದ ಚಿನ್ನದಂಗಡಿ ಮುಷ್ಕರ

ನಾಗರಾಜ ರಾ. ಚಿನಗುಂಡಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತೆ ತಂದ ಚಿನ್ನದಂಗಡಿ ಮುಷ್ಕರ

ಗುಲ್ಬರ್ಗ: ಮಗಳು ದೊಡ್ಡವಳಾಗಿದ್ದಾಳೆ; ಹೊಸ ಕಿವಿಯೋಲೆ, ಕಾಲಿಗೆ ಬೆಳ್ಳಿ ಚೈನ್ ತೊಡಿಸಿ ಮಗಳನ್ನು ಖುಷಿಪಡಿಸಿ ಸಂಭ್ರಮಿಸಬೇಕಾದ ತಂದೆ-ತಾಯಿ ಮುಖದಲ್ಲಿ ಮಂದಹಾಸ ಮಾಯವಾಗಿದೆ.ವರೋಪಚಾರಕ್ಕೆಂದು ಅಳಿಯನಿಗೆ ಚಿನ್ನದುಂಗರ, ಕೊರಳಿಗೆ ಸರ ಮತ್ತು ಬ್ರಾಸ್ಲೈಟ್ ಕೊಟ್ಟು ಬಿಗಬೇಕಿದ್ದ ಬಿಗರು ಕೂಡಾ ಮುಖ ಗಂಟುಹಾಕಿದ್ದಾರೆ. ಬರೀ ಬಟ್ಟೆ ಕೊಟ್ಟರೆ ಚೆನ್ನಾಗಿರೊದಿಲ್ಲಾ... ಸಣ್ಣದಾಗಲಿ, ದೊಡ್ಡದಾಗಲಿ ಒಂದಿಷ್ಟು ಬಂಗಾರದ ಗಿಫ್ಟ್ ಹಾಕೋಣ ಎಂದು ಯೋಜಿಸಿದವರು ಕೂಡಾ ಚಿನ್ನದ ವ್ಯಾಪಾರಿಗಳು ಯಾವಾಗ ಮುಷ್ಕರ ನಿಲ್ಲಿಸುವರು ಎಂದು ಎದುರು ನೋಡುತ್ತಿದ್ದಾರೆ.ಕೇಂದ್ರ ಸರ್ಕಾರವು ವಿಧಿಸಿರುವ ಹೊಸ ತೆರಿಗೆ ನಿಯಮಗಳನ್ನು ವಿರೋಧಿಸಿ ದೇಶದಾದ್ಯಂತ ಸರಾಫ್ ಬಜಾರ್ ಮಾಲೀಕರು ಮತ್ತು ಅಕ್ಕಸಾಲಿಗರು ಎಂಟು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಉಂಟಾಗುತ್ತಿರುವ `ಸೈಡ್ ಇಫೆಕ್ಟ್ಸ್~ನ ಕೆಲವು ಉದಾಹರಣೆ ಮಾತ್ರ ಇವು. ಚಿನ್ನಾಭರಣ ವ್ಯಾಪಾರಿಗಳು, ಅಕ್ಕಸಾಲಿಗರು ಹೋರಾಟ ನಡೆಸುವುದರಿಂದ ಜನಸಾಮಾನ್ಯರ ಮೇಲೆ ನೇರವಾದ ಪರಿಣಾಮ ಬೀರುವುದಿಲ್ಲ ನಿಜ.ಆದರೆ ಆರತಕ್ಷತೆ, ಮದುವೆ ಇತ್ಯಾದಿ ಮನೆ ಕಾರ್ಯಕ್ರಮ ನಿಗದಿ ಮಾಡಿಕೊಂಡಿರುವವರ ಮನೆಯಲ್ಲಿ ಮಾತ್ರ ಅದರ ಪರಿಣಾಮ ಎದ್ದು ಕಾಣುತ್ತಿದೆ. ಚಿನ್ನ ಖರೀದಿಸಲು ಸಾಧ್ಯವಾಗದೆ; ಇರಬೇಕಾದ ಸಂಭ್ರಮ, ಉತ್ಸಾಹ ಮದುವೆ ಮನೆಗಳಲ್ಲಿ ಕಡಿಮೆಯಾಗಿದೆ. ವ್ಯಾಪಾರಿಗಳು ಅನಿರ್ದಿಷ್ಟ ಮುಷ್ಕರ ಮುಂದುವರಿಸಿರುವುದರಿಂದ ಮನೆಮನೆಗಳಲ್ಲಿನ ಸಮಾರಂಭ ಸಂಭ್ರಮ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಹೆಚ್ಚಾಗಿದೆ.ಮುಖ್ಯವಾಗಿ ಮಾಂಗಲ್ಯಸೂತ್ರ ಮಾಡಿಸಿಕೊಳ್ಳುವುದಕ್ಕೆ ಬಂಗಾರ ಖರೀದಿಸಲೆಂದು ಗುಲ್ಬರ್ಗ ಸುತ್ತಮುತ್ತಲಿನ ಗ್ರಾಮ, ತಾಲ್ಲೂಕುಗಳಿಂದ ಆಗಮಿಸುತ್ತಿದ್ದ ಹಿಂದು, ಮುಸ್ಲಿಂ ಧರ್ಮೀಯರು ತಲೆಮೇಲೆ ಕೈಹೊತ್ತು ಮರಳುತ್ತಿರುವುದು ಮಂಗಳವಾರ ಸರಾಫ್ ಬಜಾರ್‌ನಲ್ಲಿ ಸಾಮಾನ್ಯವಾಗಿ ಕಂಡುಬಂತು.`ಕರಿಮಣಿ, ಗುಳದಾಳಿ ಆದ್ರೂ ಸಿಕ್ತಾವಂತ ಇಲ್ಲಿಗೆ ಬಂದೀವ್ರಿ. ಯಾವ ದುಖಾನು ತೆರೆದಿಲ್ರಿ. ಬಂಗಾರ ಅಂಗಡಿ ಯಾವಾಗ ತೆರಿತಾವ್ ಅಂತ ಹೇಳವಲ್ರಿ. ಗಿಲಿಟ್ ಇದ್ದೂದು ತಗೋಂಡ್ ಹೋಗ್ಬೇಕಾಗೈತಿ ಈಗ~ ಎಂದು ಪೆಚ್ಚು ಮುಖದೊಂದಿಗೆ ನುಡಿದಿದ್ದು ಮಹಾಗಾಂವನಿಂದ ಮಗನೊಂದಿಗೆ ಆಗಮಿಸಿದ್ದ ಸತ್ಯಮ್ಮ.`ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ; ಜುಟ್ಟಿಗೆ ಮಲ್ಲಿಗೆ~ ಎನ್ನುವ ನಾಣ್ಣುಡಿಯಂತೆ ದುಬಾರಿಯಾದರೂ ಒಂದಿಷ್ಟಾದರೂ ಹೊಸ ನಮೂನೆಯ ಚಿನ್ನಾಭರಣಗಳನ್ನು ಖರೀದಿಸಿ ಸಂಭ್ರಮ, ಸಡಗರ ಪಡುವ ಸಂಪ್ರದಾಯ ಭಾರತದ ಎಲ್ಲ ಕಡೆಯೂ ಬೇರೂರಿದೆ. ಗುಲ್ಬರ್ಗ ಅದಕ್ಕೆ ಹೊರತಾಗಿಲ್ಲ.ಮುಷ್ಕರ: ಗುಲ್ಬರ್ಗದಲ್ಲಿ ಮಾರ್ಚ್ 27ರಿಂದ ಸರಾಫ್ ಬಜಾರ್‌ನಲ್ಲಿ ವಹಿವಾಟು ಸ್ಥಗಿತಗೊಂಡಿದೆ. ಅಚಲ ಹಾಗೂ ಅನಿರ್ದಿಷ್ಟಾವಧಿ ಹೋರಾಟಕ್ಕೆ ಅಖಿಲ ಭಾರತ ಮಟ್ಟದಲ್ಲಿ ಕರೆ ನೀಡಿರುವುದರಿಂದ ಬೇಡಿಕೆ ಈಡೇರುವತನಕ ಹೋರಾಟ ಕೊನೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.ಅಕ್ಕಸಾಲಿಗರು ಹಾಗೂ ಆಭರಣ ಮಾರಾಟಗಾರರು ಸೇರಿ ಒಟ್ಟು 600 ಅಂಗಡಿಗಳು ಗುಲ್ಬರ್ಗದಲ್ಲಿವೆ. ಸುಮಾರು ಎರಡು ಸಾವಿರ ಜನರ ಚಿನ್ನದ ವ್ಯಾಪಾರ, ಕೆಲಸದಲ್ಲಿದ್ದಾರೆ. ಉಪಜೀವನಕ್ಕೆ ಚಿನ್ನದ ಕುಸುರಿ ಕೆಲಸವನ್ನೇ ಆಧರಿಸಿರುವ ಹಲವಾರು ಜನರು ಸುದೀರ್ಘ ಹೋರಾಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.`ಇಲ್ಲಿಯವರೆಗೆ ಸರ್ಕಾರ ಕೇವಲ ಬಾಯಿಮಾತಿನ ಆಶ್ವಾಸನೆ ನೀಡಿದೆ. ಇದೇ ಮೊದಲ ಬಾರಿಗೆ ಅಕ್ಕಸಾಲಿಗರ ಮೇಲೆ ಕೇಂದ್ರ ಸರ್ಕಾರ ಕೆಂಗಣ್ಣು ಬೀರಿದೆ. ಸರ್ಕಾರದ ತೆರಿಗೆ ನೀತಿಯನ್ನು ಒಪ್ಪಿಕೊಂಡರೆ ಅಕ್ಕಸಾಲಿಗರು ಜೀವನ ಸಾಗಿಸುವುದೆ ಕಷ್ಟ. ಅಲ್ಲದೆ, ತೆರಿಗೆ ಕಟ್ಟುವ, ತೆರಿಗೆ ವಹಿವಾಟು ನಡೆಸುವುದು ಅಕ್ಕಸಾಲಿಗರಿಗೆ ಬಹಳ ಕಷ್ಟವಾಗುತ್ತದೆ. ಸಂಪೂರ್ಣ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರಿಸುತ್ತೇವೆ~ ಎನ್ನುತ್ತಾರೆ ಗುಲ್ಬರ್ಗ ಜಿಲ್ಲಾ ಅಕ್ಕಸಾಲಿಗರ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ.ಸರ್ಕಾರದ ಹೊಸ ತೆರಿಗೆ ಏನು?

ಇಲ್ಲಿಯವರೆಗೂ ಬ್ರಾಂಡೆಡ್ ಚಿನ್ನಾಭರಣಗಳಿಗೆ ಮಾತ್ರ ಕೇಂದ್ರ ಸರ್ಕಾರವು ಅಬಕಾರಿ ಸುಂಕ ವಿಧಿಸುತ್ತಿತ್ತು. ಈ ವರ್ಷದಿಂದ ಸರಾಫ್ ಬಜಾರ್‌ನ ಪ್ರತಿ ವಹಿವಾಟಿನ ಮೇಲೂ ಶೇ. 1ರಷ್ಟು ಅಬಕಾರಿ ಸುಂಕ ಹಾಕಲಾಗಿದೆ. ಅಕ್ಕಸಾಲಿಗ ಹಾಗೂ ಚಿನ್ನಾಭರಣ ಅಂಗಡಿಗಳಲ್ಲಿನ ಸೇವಾ ತೆರಿಗೆಯನ್ನು ಶೇ. 12ಕ್ಕೆ ಏರಿಕೆ ಮಾಡಲಾಗಿದೆ.ರೂ. 2 ಲಕ್ಷ ವಹಿವಾಟು ನಡೆಸುವ ಗ್ರಾಹಕನಿಂದ ಪ್ಯಾನ್ ಸಂಖ್ಯೆ ಪಡೆದುಕೊಳ್ಳುವುದು ಹಾಗೂ ಟಿಡಿಎಸ್ ತೆರಿಗೆ ಹಾಕಬೇಕು ಎಂದು ಚಿನ್ನಾಭರಣ ಅಂಗಡಿಗಳ ಮೇಲೆ ನಿಯಮ ವಿಧಿಸಲಾಗಿದೆ. ದೇಶಕ್ಕೆ ಆಮದಾಗುವ ಚಿನ್ನದ ಮೇಲಿನ ಸುಂಕವನ್ನು ಗಣನೀಯ ಏರಿಸಲಾಗಿದೆ.ಅಕ್ಕಸಾಲಿಗರ ಬೇಡಿಕೆ: ಬಹುತೇಕ ಸಂಖ್ಯೆಯ ಅಕ್ಕಸಾಲಿಗರು ಅನಕ್ಷರಸ್ಥರಾಗಿದ್ದು, ಉಪಜೀವನ ನಡೆಸಲು ತಲೆತಲಾಂತರದಿಂದ ಕಲಿತಿರುವ ಕಸುಬು ಅವಲಂಬಿಸಿದ್ದಾರೆ. ಹೀಗಾಗಿ ಗ್ರಾಹಕರ ಮೇಲೆ ತೆರಿಗೆ ವಿಧಿಸುವ, ಲೆಕ್ಕ ಇಡುವ ನಿಯಮ ಹಾಕಿದರೆ ಹೊರೆಯಾಗುತ್ತದೆ. ಗ್ರಾಮೀಣ ಭಾಗದ ಜನರು ಬ್ರಾಂಡೆಡ್ ಅಲ್ಲದ ಚಿನ್ನಾಭರಣ ಅಂಗಡಿಗಳಲ್ಲಿ ವಿಶ್ವಾಸದಿಂದ ವಹಿವಾಟು ನಡೆಸುತ್ತಾರೆ. ಅವರಿಗೂ ತೆರಿಗೆ ಕಟ್ಟುವ ಬಗ್ಗೆ ತಿಳಿವಳಿಕೆ ಇರುವುದಿಲ್ಲ.

 

ಪ್ಯಾನ್ ಸಂಖ್ಯೆ ಸಂಗ್ರಹಿಸಿ ವಹಿವಾಟು ನಡೆಸುವುದು ಇಬ್ಬರಿಗೂ ಕಷ್ಟವಾಗುತ್ತದೆ. ಸಣ್ಣಸಣ್ಣ ಕುಸುರಿ ಕೆಲಸಗಳಿಗೂ ಟಿಡಿಎಸ್ ವಿಧಿಸಿದರೆ, ಕೆಲಸ ಮುಂದುವರಿಸಿಕೊಂಡು ಹೋಗುವುದು ಅಕ್ಕಸಾಲಿಗರಿಗೆ ಅಸಾಧ್ಯದ ಕೆಲಸ. ವಿವಿಧ ತೆರಿಗೆಗಳಿಂದಾಗಿ ಅಕ್ಕಸಾಲಿಗರ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಅತಿಯಾಗುತ್ತದೆ.

 

ಈ ಕೂಡಲೇ ಕೇಂದ್ರ ಸರ್ಕಾರ ತೆರಿಗೆ ನೀತಿಯನ್ನು ಸಡಿಲಿಸಿ, ಜನಸಾಮಾನ್ಯರಿಗೂ ಅಕ್ಕಸಾಲಿಗರಿಗೂ ಅನುಕೂಲ ಮಾಡಿಕೊಡಬೇಕು.ಎಂಟು ದಿನದಿಂದ ನಡೆಸುತ್ತಿರುವ ಹೋರಾಟದಿಂದ ಸರಾಫ್ ಬಜಾರ್ ಅಂಗಡಿಯವರಿಗೂ ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ಅನಾನುಕೂಲವಾಗಿದೆ. ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಸರಾಫ್ ಬಜಾರ್ ಸ್ಥಗಿತದಿಂದ ಪ್ರತಿ ದಿನಕ್ಕೆ ರೂ. 2 ಕೋಟಿ ನಷ್ಟವಾಗುತ್ತಿದೆ~ ಎಂದು ಮೈಲಾಪುರ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.