ಚಿಂದಿ ಆಯುವವರ ಬಳಕೆ ನಿರ್ಧಾರ ಅಸ್ಪಷ್ಟ

7

ಚಿಂದಿ ಆಯುವವರ ಬಳಕೆ ನಿರ್ಧಾರ ಅಸ್ಪಷ್ಟ

Published:
Updated:
ಚಿಂದಿ ಆಯುವವರ ಬಳಕೆ ನಿರ್ಧಾರ ಅಸ್ಪಷ್ಟ

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಂಗಡಣೆ ಮಾಡುವುದನ್ನು ಬಿಬಿಎಂಪಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೂ ಬೀದಿಗೆ ಬಿದ್ದ ಕಸವನ್ನು ವಿಂಗಡಿಸುವ ಕಾರ್ಯದಲ್ಲಿ ನಿರತರಾದ ಚಿಂದಿ ಆಯುವವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.ಸಾಮಾನ್ಯವಾಗಿ ತ್ಯಾಜ್ಯದೊಂದಿಗೆ ಬೆರೆತಿರುವ ಹಳೆ ಪೇಪರ್, ಕಾರ್ಬೋ ಬಾಕ್ಸ್, ಹಾಲಿನ ಕವರು, ಪ್ಲಾಸ್ಟಿಕ್ ಬಕೆಟ್, ಟಯರ್‌ಗಳು, ಲೋಹದ ವಸ್ತುಗಳು, ಬಿಯರ್ ಹಾಗೂ ಕುಡಿಯುವ ನೀರಿನ ಬಾಟಲಿಗಳು, ಕಬ್ಬಿಣ, ಸೀಸ ಸೇರಿದಂತೆ ವಿವಿಧ ಬಗೆಯ ಲೋಹಗಳನ್ನು ಬೇರ್ಪಡಿಸಿ ಅದನ್ನು ಸಂಗ್ರಹಕಾರರಿಗೆ ಮಾರಾಟ ಮಾಡುವ ಮೂಲಕ ಚಿಂದಿ ಆಯುವವರು ಜೀವನ ಸಾಗಿಸುತ್ತಿದ್ದಾರೆ. ನಗರದಲ್ಲಿ ದಿನಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಪಾಲಿಕೆಯು ಸೋಮವಾರದಿಂದಲೇ ಮನೆಯಿಂದಲೇ ಒಣ ಮತ್ತು ಹಸಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದೆ. ಈ ಮಧ್ಯೆ ಒಣ ತ್ಯಾಜ್ಯದಲ್ಲಿ ನಾನಾ ಬಗೆಯ ತ್ಯಾಜ್ಯವನ್ನು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಚಿಂದಿ ಆಯುವ ವರ್ಗದ ಶ್ರಮವನ್ನು ಬಳಸಿಕೊಳ್ಳುವ ಅಗತ್ಯ ಎದ್ದು ಕಾಣುತ್ತಿದೆ.5200 ಮಂದಿಗೆ ಗುರುತಿನ ಚೀಟಿ: `ನಗರದಲ್ಲಿ 75 ಸಾವಿರಕ್ಕೂ ಅಧಿಕ ಚಿಂದಿ ಆಯುವವರಿದ್ದಾರೆ. ಈವರೆಗೆ ಪಾಲಿಕೆ 5,200 ಮಂದಿಗೆ ಮಾತ್ರ ಗುರುತಿನಚೀಟಿ ಒದಗಿಸಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಲ, ದೊಮ್ಮಲೂರು ಸೇರಿದಂತೆ 15 ಕಡೆಗಳಲ್ಲಿ ಒಣ ತ್ಯಾಜ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಪಾಲಿಕೆ ಈಗಾಗಲೇ ಪೌರಕಾರ್ಮಿಕರಿಗೆ ತ್ಯಾಜ್ಯ ವಿಂಗಡಣೆಯ ಕುರಿತು ತರಬೇತಿ ನೀಡುತ್ತಿದೆ. ಅವರ ಜತೆಯಲ್ಲಿಯೇ ಚಿಂದಿ ಆಯುವವರನ್ನು ಸಮರ್ಪಕವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ~ ಎಂದು `ಹಸಿರು ದಳ~ ಸ್ವಯಂಸೇವಾ ಸಂಘಟನೆಯ ನಳಿನಿ ಶೇಖರ್ ಒತ್ತಾಯಿಸಿದರು.`ಮುಂಬೈ, ಪುಣೆಯಲ್ಲಿ ಚಿಂದಿ ಆಯುವವರೇ ಮನೆಗಳಿಂದ ಕಸ ಸಂಗ್ರಹಿಸುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯ ತರಬೇತಿ ನೀಡುವ ಅಗತ್ಯ ಇರುವುದಿಲ್ಲ. ಸಂಗ್ರಹಗೊಂಡ ತ್ಯಾಜ್ಯ ವಿಂಗಡಣೆ ಕೂಡ ಇವರಿಗೆ ಸುಲಭದ ಕೆಲಸ. ಹಾಗಾಗಿ, ಈ ಜನರ ಶ್ರಮವನ್ನು ನಗರದಲ್ಲಿ ಅಗತ್ಯವಾಗಿ ಬಳಸಿಕೊಳ್ಳಬೇಕು. ನಗರದ ಕೆಲವು ಕಡೆ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಚಿಂದಿ ಆಯುವವರಿಗೆ ತ್ಯಾಜ್ಯ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲರನ್ನು ಅಲ್ಲದೇ ಇದ್ದರೂ ಸ್ವಲ್ಪ ಮಂದಿಯನ್ನಾದರೂ ತ್ಯಾಜ್ಯ ವಿಂಗಡಣೆಯ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು~ ಎಂದು ತಿಳಿಸಿದರು.ಕಾಯಂ ಪ್ರಸ್ತಾಪ ಇಲ್ಲ: ಬಿಬಿಎಂಪಿ ಜಂಟಿ ಆಯುಕ್ತರಾದ (ಆರೋಗ್ಯ) ಸಲ್ಮಾ ಕೆ. ಫಾಹಿಂ, `ಪ್ರತಿ ವಾರ್ಡ್‌ಗಳಿಗೆ ಎರಡರಂತೆ ಮೊದಲ ಹಂತದಲ್ಲಿ ಸುಮಾರು 90 ಒಣ ತ್ಯಾಜ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ಸದ್ಯಕ್ಕೆ ಚಿಂದಿ ಆಯುವವರಿಗೂ ಈ ಕಾರ್ಯದಲ್ಲಿ ಅವಕಾಶ ನೀಡಲಾಗಿದೆ. ಇವರನ್ನು ತ್ಯಾಜ್ಯ ವಿಂಗಡಣೆ ಯೋಜನೆಯಲ್ಲಿ ಕಾಯಂಗೊಳಿಸುವ ಬಗ್ಗೆ ಪಾಲಿಕೆಯ ಮುಂದೆ ಯಾವುದೇ ಪ್ರಸ್ತಾವ ಇಲ್ಲ~ ಎಂದು ಸ್ಪಷ್ಟಪಡಿಸಿದರು.`ತರಬೇತಿಗೆ ಚಿಂತನೆ ನಡೆಸಲಿ~

`ಮಾರ್ಚ್ ತಿಂಗಳೊಳಗೆ 25 ಸಾವಿರ ಮಂದಿಗೆ ಪಾಲಿಕೆಯಿಂದ ಕಾರ್ಡ್ ವಿತರಿಸುವ ಭರವಸೆ ದೊರೆತಿದೆ. ಕಸ ಸಂಗ್ರಹಿಸಿ ಮಾರಾಟ ಮಾಡುವುದು ಮಾತ್ರವಲ್ಲ, ಅನುಪಯುಕ್ತಗೊಂಡ ಕಸವನ್ನು ಉಪಯುಕ್ತಗೊಳಿಸುವ ಬಗ್ಗೆಯೂ ಚಿಂದಿ ಆಯುವವರಿಗೆ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಬೇಕು. ವಾಣಿಜ್ಯ ಸಂಕೀರ್ಣ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಕಸ ಸಂಗ್ರಹಿಸಲು ಅನುಮತಿ ನೀಡಬೇಕು. ಇವರಿಗೆ ಆರೋಗ್ಯ ಸುರಕ್ಷತೆ ಕಾಪಾಡುವುದರ ಬಗ್ಗೆಯೂ ಚಿಂತನೆ ನಡೆಸಬೇಕು~.

-ಅ.ನ. ಯಲ್ಲಪ್ಪರೆಡ್ಡಿ, ಪರಿಸರವಾದಿ

`ನಗರ ಸ್ವಚ್ಛವಾಗುತ್ತದೆ~

`ತ್ಯಾಜ್ಯ ವಿಂಗಡಣೆಯನ್ನು ಸಮರ್ಪಕವಾಗಿ ಮಾಡುವುದರಿಂದ ನಗರ ಇನ್ನಷ್ಟು ಉತ್ತಮಗೊಳ್ಳಲಿದೆ. ಆದರೆ, ಚಿಂದಿ ಆಯುವವರಿಗೆ ಕೆಲಸವಿಲ್ಲದಂತಾಗುತ್ತದೆ ಎಂಬ ಆತಂಕ ಎದುರಾಗಿರುವುದು ನಿಜ. ಹಾಲಿನ ಕವರು, ಪೇಪರ್ ಸೇರಿದಂತೆ ಶೇ 70 ರಷ್ಟು ತ್ಯಾಜ್ಯವನ್ನು ಗ್ರಾಹಕರೇ ಅಂಗಡಿಗೆ ನೀಡುತ್ತಾರೆ. ಉಳಿದ ಕಸವನ್ನು ಚಿಂದಿ ಆಯುವವರು ಸಂಗ್ರಹಿಸುತ್ತಾರೆ. ಕಸ ವಿಂಗಡಣೆಯಲ್ಲಿ ಚಿಂದಿ ಆಯುವವರನ್ನು ಬಳಸಿಕೊಂಡರೇ ಏಕಕಾಲದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಈ ವರ್ಗಕ್ಕೆ ಅನ್ನ ದೊರಕಿದಂತೆ ಆಗುತ್ತದೆ~.

-  ಶಂಕರ್, ಚಿಂದಿ ಸಂಗ್ರಹಕ

ಆದಾಯಕ್ಕೆ ಕುತ್ತು: ಆತಂಕ

`30 ವರ್ಷಗಳಿಂದ ಚಿಂದಿ ಆಯುವ ವೃತ್ತಿಯಿಂದಲೇ ಜೀವನ ನಡೆಸುತ್ತಿದ್ದೇನೆ. ಕನಕಪುರ ರಸ್ತೆಯ ಬದಿಗಳಲ್ಲಿ ಚಿಂದಿ ಸಂಗ್ರಹಿಸಿ ಮೈಸೂರು ರಸ್ತೆಯಲ್ಲಿರುವ ಚಿಂದಿ ಸಂಗ್ರಹ ಅಂಗಡಿಯೊಂದಕ್ಕೆ ಮಾರಾಟ ಮಾಡುತ್ತೇನೆ. ನಿತ್ಯ ಇದರಿಂದಲೇ 200 ರೂಪಾಯಿ ಆದಾಯ ಬರುತ್ತಿದೆ. ಕೆಲವೊಮ್ಮೆ 500 ರೂ. ದೊರೆಯುತ್ತದೆ. ಮನೆಯಿಂದಲೇ ಕಸ ವಿಂಗಡಿಸುವ ಪ್ರಕ್ರಿಯೆ ಜಾರಿಯಾಗುವುದರಿಂದ ರಸ್ತೆಗೆ ಕಸ ಬೀಳುವುದು ಕಡಿಮೆಯಾಗಬಹುದು. ಇದರಿಂದ ಹೊಟ್ಟೆಗೆ ಏನು ಮಾಡುವುದು ಎಂದು ಪ್ರಶ್ನೆ ಕಾಡುತ್ತಿದೆ

- ಲಕ್ಷ್ಮಿ, ಚಿಂದಿ ಆಯುವಾಕೆ`ಉದ್ಯೋಗ ನೀಡಬೇಕು~

`ನಗರವೂ ಕಸಮುಕ್ತವಾಗಿರಬೇಕು ಎಂಬ ಆಸೆ ನನಗೂ ಇದೆ. ಮೊದಲೆಲ್ಲಾ ಕಸ ಆಯುವವರನ್ನು ಮಾನಸಿಕ ಅಸ್ವಸ್ಥರಂತೆ ನೋಡುತ್ತಿದ್ದರು. ಈಗ ಪಾಲಿಕೆ ನೀಡಿರುವ ಗುರುತಿನ ಚೀಟಿಯಿಂದ ನಮಗೂ ಸ್ವಾಭಿಮಾನದ ಬದುಕಿದೆ ಎಂಬ ಆತ್ಮವಿಶ್ವಾಸ ಮೂಡಿದೆ. ಆದರೆ, ಕೇವಲ ಗುರುತಿನ ಚೀಟಿ ನೀಡಿದರೆ ಸಾಲದು, ಉದ್ಯೋಗವನ್ನೂ ನೀಡಬೇಕು. ಚಿಂದಿ ಆಯುವುದು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಒಣ ತ್ಯಾಜ್ಯ ವಿಂಗಡಣೆ ಕೇಂದ್ರಗಳಲ್ಲಿ ಪೌರಕಾರ್ಮಿಕರೊಂದಿಗೆ ನಮಗೂ ಕೆಲಸ ನೀಡಿದರೆ ನೆರವಾಗುತ್ತದೆ

 - ಸೂರಪ್ಪ, ಚಿಂದಿ ಆಯುವಾತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry