ಚಿಂದಿ ಆಯುವ ಕೈಯಲ್ಲಿ ತ್ಯಾಜ್ಯ ನಿರ್ವಹಣೆ

ಬುಧವಾರ, ಜೂಲೈ 17, 2019
26 °C

ಚಿಂದಿ ಆಯುವ ಕೈಯಲ್ಲಿ ತ್ಯಾಜ್ಯ ನಿರ್ವಹಣೆ

Published:
Updated:

ಬೆಂಗಳೂರು: ಚಿಂದಿ ಆಯುವವರು ಎಂದರೆ ಮೂಗು ಮುರಿಯುವ ಹಾಗೂ ಅಸಹ್ಯ ಪಡುವ ದಿನಗಳು ದೂರಾಗುತ್ತಿವೆ. ನಗರದ ತ್ಯಾಜ್ಯ ನಿರ್ವಹಣೆಗೆ ಇಷ್ಟು ದಿನ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಚಿಂದಿ ಆಯುವವರು, ಈಗ ಮುನ್ನೆಲೆಗೆ ಬಂದು ಒಣತ್ಯಾಜ್ಯ ಸಂಗ್ರಹ ಕೇಂದ್ರಗಳ ನಿರ್ವಹಣೆಗೆ ಮುಂದಾಗಿದ್ದಾರೆ.

ಸದ್ಯ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ನಗರದ ಕೆಲವು ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಚಿಂದಿ ಆಯವವರೇ ಸಮರ್ಥವಾಗಿ ನಿಭಾಯಿಸುತ್ತಾರೆ. ನಗರದಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ತಗ್ಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈವರೆಗೆ ಒಂಬತ್ತು ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಿದೆ.

ಇದಲ್ಲದೇ ಸ್ವಯಂಸೇವಾ ಸಂಸ್ಥೆಗಳು ಸುಮಾರು 20 ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ನಡೆಸುತ್ತಿವೆ. ಈ ಕೇಂದ್ರಗಳ ನಿರ್ವಹಣೆಯ ಹೊಣೆಯನ್ನು ಚಿಂದಿ ಆಯುವವರಿಗೇ ನೀಡಲು ಚಿಂತನೆ ನಡೆದಿದ್ದು, ಇದಕ್ಕಾಗಿ ಚಿಂದಿ ಆಯುವವರನ್ನು ಸಂಘಟಿಸುವ ಹಾಗೂ ಪೂರಕ ಸಹಕಾರ ನೀಡುವ ಕೆಲಸವನ್ನು `ಹಸಿರುದಳ' ಸಂಘಟನೆ ಮಾಡುತ್ತಿದೆ.`ನಗರದಲ್ಲಿ ಪ್ರತಿನಿತ್ಯ 500ರಿಂದ 600 ಟನ್ ಒಣತ್ಯಾಜ್ಯವನ್ನು ಚಿಂದಿ ಆಯುವವರು ಸಂಗ್ರಹ ಮಾಡಿ ಪುನರ್ ಬಳಕೆಗಾಗಿ ನೀಡುತ್ತಿದ್ದಾರೆ. ಇದು ಅವರ ಆದಾಯದ ಮೂಲವೂ ಹೌದು. ಹೀಗಾಗಿ ಈ ಜನರ ಸೇವೆಯನ್ನು ಬಳಸಿಕೊಂಡು ನಗರದ ತ್ಯಾಜ್ಯದ ಸಮಸ್ಯೆಯನ್ನು ತಗ್ಗಿಸುವ ಮತ್ತು ಚಿಂದಿ ಆಯುವವರ ಜೀವನಮಟ್ಟವನ್ನು ಉತ್ತಮಗೊಳಿಸುವ ಕಾರ್ಯವನ್ನು ಹಸಿರುದಳ ಕಳೆದ ಒಂದು ವರ್ಷದಿಂದ ಮಾಡುತ್ತಿದೆ' ಎಂದು ಹಸಿರುದಳ ಸಂಘಟನೆಯ ಸಂಸ್ಥಾಪಕಿ ನಳಿನಿ ಶೇಖರ್ ತಿಳಿಸಿದರು.`ಚಿಂದಿ ಆಯುವವರನ್ನು ಗುರುತಿಸಿ ಅವರಿಗೆ ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಹಾಗೂ ಸಂಗ್ರಹದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಬಿಬಿಎಂಪಿ ವತಿಯಿಂದ ಅವರಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಈವರೆಗೆ ಐದು ಸಾವಿರ ಚಿಂದಿ ಆಯುವವರಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಇನ್ನೂ ಸುಮಾರು ಏಳು ಸಾವಿರ ಜನರಿಗೆ ಗುರುತಿನ ಚೀಟಿ ನೀಡುವುದು ಬಾಕಿ ಇದೆ' ಎಂದು ಅವರು ವಿವರಿಸಿದರು.`ನಗರದಲ್ಲಿ ಸುಮಾರು 20 ಸಾವಿರ ಚಿಂದಿ ಆಯುವವರಿದ್ದು, ಅವರನ್ನೂ ಗುರುತಿಸುವ ಕೆಲಸ ಆಗುತ್ತಿದೆ. ಚಿಂದಿ ಆಯುವವರಿಗಾಗಿಯೇ ಸಹಕಾರ ಸಂಘ ಹಾಗೂ ಬ್ಯಾಂಕ್ ಸ್ಥಾಪಿಸುವ ಚಿಂತನೆ ಇದೆ. ತ್ಯಾಜ್ಯ ನಿರ್ವಹಣೆಯ ಜತೆಗೆ ಚಿಂದಿ ಆಯುವವರನ್ನು ಮುನ್ನೆಲೆಗೆ ತರಲು ಪ್ರಯತ್ನಿಸಲಾಗುತ್ತಿದೆ' ಎಂದು ಅವರು ಹೇಳಿದರು.`ದೊಮ್ಮಲೂರಿನ ಒಣತ್ಯಾಜ್ಯ ಸಂಗ್ರಹ ಕೇಂದ್ರವನ್ನು ಸಂಪೂರ್ಣವಾಗಿ ಚಿಂದಿ ಆಯುವವರೇ ನಿಭಾಯಿಸುತ್ತಿದ್ದಾರೆ. ಸ್ವಾತಂತ್ರ್ಯ ಉದ್ಯಾನ ಹಾಗೂ ಯಲಹಂಕದಲ್ಲಿನ ಕೇಂದ್ರಗಳನ್ನು ಚಿಂದಿ ಆಯುವವರೇ ನಿರ್ವಹಣೆ ಮಾಡಲು ಮುಂದಾಗುತ್ತಿದ್ದಾರೆ. ಅವರಿಗೆ ಅಗತ್ಯ ಸಹಕಾರವನ್ನು ನೀಡಲಾಗುತ್ತಿದೆ.

ನಗರದಲ್ಲಿ ಹೊಸದಾಗಿ 50 ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಬಿಬಿಎಂಪಿ ಹಾಗೂ ಇತರೆ ಸ್ವಯಂಸೇವಾ ಸಂಸ್ಥೆಗಳು ಚಿಂತನೆ ನಡೆಸಿವೆ. ಇದಕ್ಕಾಗಿ ಚಿಂದಿ ಆಯುವವರನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ' ಎಂದು ನಮನ ಪ್ರತಿಷ್ಠಾನದ ಯೋಜನಾ ಸಂಯೋಜಕ ಕೃಷ್ಣಮೂರ್ತಿ ತಿಳಿಸಿದರು.`ದೊಮ್ಮಲೂರಿನ ತ್ಯಾಜ್ಯ ಸಂಗ್ರಹ ಕೇಂದ್ರವನ್ನು ಐದು ಜನ ಚಿಂದಿ ಆಯುವವರು ಸೇರಿ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿದಿನ ಸುಮಾರು ಐದು ಟನ್ ಒಣತ್ಯಾಜ್ಯ ಸಂಗ್ರಹ ಮಾಡಿ, ಪುನರ್ ಬಳಕೆಗಾಗಿ ನೀಡುತ್ತಿದ್ದೇವೆ. ತಿಂಗಳಿಗೆ ರೂ 65 ರಿಂದ 70 ಸಾವಿರ ಆದಾಯ ಬರುತ್ತಿದೆ. ಸದ್ಯ ನಿರ್ವಹಣೆಯ ಖರ್ಚು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವೆಚ್ಚವನ್ನು ತಗ್ಗಿಸಲು ಪ್ರಯತ್ನ ನಡೆಯುತ್ತಿದೆ' ಎಂದು ದೊಮ್ಮಲೂರಿನ ಒಣತ್ಯಾಜ್ಯ ಸಂಗ್ರಹ ಕೇಂದ್ರದ ಮೇಲ್ವಿಚಾರಕ ಸಂತೋಷ್ ಹೇಳಿದರು.

ಗುತ್ತಿಗೆದಾರರಿಗೆ ದಂಡ

ಪ್ರಜಾವಾಣಿ ವಾರ್ತೆ ಬೆಂಗಳೂರು:
ನಗರದ ನಾಗವಾರ ಹಾಗೂ ಕುಶಾಲನಗರ ಪ್ರದೇಶದಲ್ಲಿ ಸೂಕ್ತವಾಗಿ ಕಸ ವಿಲೇವಾರಿ ಮಾಡದ ಗುತ್ತಿಗೆದಾರರಿಗೆ ರೂ 10,000 ದಂಡ ವಿಧಿಸಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಶನಿವಾರ ನಡೆಸಿದ ನಗರ ಪ್ರದಕ್ಷಿಣೆ ಕಾಲಕ್ಕೆ ಈ ಭಾಗದಲ್ಲಿ ಕಸದ ರಾಶಿಯೇ ಕಂಡುಬಂದಿತ್ತು. ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದು ಸಚಿವರು ಸ್ಥಳದಲ್ಲೇ ಆದೇಶ ಹೊರಡಿಸಿದ್ದರು.ಎ.ಎಂ.ಸಿ. ರಸ್ತೆ ಹಾಗೂ ಶಾಂಪುರ ಮುಖ್ಯ ರಸ್ತೆಗಳ ಉದ್ದಕ್ಕೂ ಕಸದ ರಾಶಿ ಕಂಡು ಬಂದಿತ್ತು. ತ್ಯಾಜ್ಯ ನಿರ್ವಹಣೆ  ಸಮರ್ಪಕವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ಸಚಿವರ ಎದುರು ನೋವು ತೋಡಿಕೊಂಡಿದ್ದರು. ರಸ್ತೆಗಳಲ್ಲಿ ಗಬ್ಬುನಾತ ಹರಡಿದ್ದ ಕಸವನ್ನೂ ತೆಗೆಯಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ನಿರ್ವಹಣೆಗಾಗಿ ತರಬೇತಿ

`ಒಣತ್ಯಾಜ್ಯ ಸಂಗ್ರಹ ಕೇಂದ್ರಗಳ ಕಟ್ಟಡಗಳನ್ನು    ಬಿಬಿಎಂಪಿ ನಿರ್ಮಿಸಿಕೊಡುತ್ತದೆ. ಬಿಬಿಎಂಪಿ ಸಹಯೋಗದಲ್ಲಿ ಒಣತ್ಯಾಜ್ಯ ಸಂಗ್ರಹ ಕೇಂದ್ರಗಳ ನಿರ್ವಹಣೆ ಮಾಡಲು ಚಿಂದಿ ಆಯುವವರಿಗೆ ತರಬೇತಿ ನೀಡಲಾಗುತ್ತಿದೆ. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ, ವಿಂಗಡಣೆ ಹಾಗೂ ಪುನರ್ ಬಳಕೆದಾರರಿಗೆ ತ್ಯಾಜ್ಯವನ್ನು ಮಾರುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಹಸಿರುದಳ ಮಾತ್ರವಲ್ಲದೇ ಈ ಕಾರ್ಯಕ್ಕಾಗಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು ನೆರವು ನೀಡುತ್ತಿವೆ. ಮುಂದಿನ ದಿನಗಳಲ್ಲಿ ನಗರದ ಚಿಂದಿ ಆಯುವವರನ್ನು ಒಗ್ಗೂಡಿಸಿ ತ್ಯಾಜ್ಯದ ಸಮಸ್ಯೆ ತಗ್ಗಿಸಲು ಪ್ರಯತ್ನಿಸಲಾಗುವುದು' -ನಳಿನಿ ಶೇಖರ್,

-ಸಂಸ್ಥಾಪಕಿ, ಹಸಿರುದಳ ಸಂಘಟನೆ .

ಹೊಸ ಜೀವನ ಸಿಕ್ಕಿದೆ

`ಸುಮಾರು 20 ವರ್ಷಗಳಿಂದ ಚಿಂದಿ ಆಯುತ್ತಲೇ ಜೀವನ ಸಾಗಿಸಿದೆ. ಕಳೆದ ವರ್ಷ ಹಸಿರುದಳದ ಸದಸ್ಯರು ನನ್ನನ್ನು ಗುರುತಿಸಿ ತರಬೇತಿ ನೀಡಿ, ಪ್ರೋತ್ಸಾಹ ನೀಡಿದೆ. ಚಿಂದಿ ಆಯುತ್ತಿದ್ದ ನನ್ನಂಥ ಅದೆಷ್ಟೋ ಜನಕ್ಕೆ ಈಗ ಹೊಸ ಜೀವನ ಸಿಕ್ಕಿದೆ. ಚಿಂದಿ ಆಯುವವರು ಎಂದು ಅಸಹ್ಯ ಪಟ್ಟುಕೊಳ್ಳುತ್ತಿದ್ದ ನಮಲ್ಲಿ ಈಗ ಆತ್ಮ ವಿಶ್ವಾಸ ಮೂಡಿದೆ. ನಗರ ತ್ಯಾಜ್ಯದ ಸಮಸ್ಯೆಯನ್ನು ತಗ್ಗಿಸಲು ನಾವು ಮಾಡುತ್ತಿರುವ ಕಾರ್ಯದ ಬಗ್ಗೆ ನಮಗೆ ಹೆಮ್ಮೆಇದೆ. ನಮ್ಮೆಲ್ಲ ಕೆಲಸಕ್ಕೆ ಹಸಿರುದಳ ಬೆನ್ನಿಗೆ ನಿಂತಿದೆ'

-ಸಂತೋಷ್, ಮೇಲ್ವಿಚಾರಕ, ಒಣತ್ಯಾಜ್ಯ ಸಂಗ್ರಹ ಕೇಂದ್ರ, ದೊಮ್ಮಲೂರು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry