ಚಿಕಿತ್ಸೆಗೆ ಲಕ್ಷಾಂತರ ಹಣ; ಪೋಷಕರ ಪರದಾಟ

ಭಾನುವಾರ, ಜೂಲೈ 21, 2019
22 °C

ಚಿಕಿತ್ಸೆಗೆ ಲಕ್ಷಾಂತರ ಹಣ; ಪೋಷಕರ ಪರದಾಟ

Published:
Updated:

ತುಮಕೂರು: `ಅಂಕಲ್ ನನ್ಗೆ ಏನಾಗಿದೆ. ಅಪ್ಪ, ಅಮ್ಮ ಇಬ್ಬರೂ ಮೌನ. ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಂದಾಗಿನಿಂದಲೂ ಊರೂರು ತಿರುಗುತ್ತಿದ್ದಾರೆ. ಯಾಕೆಂದು ಗೊತ್ತಾಗುತ್ತಿಲ್ಲ. ನನ್ನ ಬಲ ಕೈಗೆ ಶಕ್ತಿಯೇ ಇಲ್ಲ. ಅಪ್ಪನನ್ನು ಕೇಳಿದರೆ ಸರಿಯಾಗಿ ಉತ್ತರವೇ ಕೊಡುತ್ತಿಲ್ಲ~...ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನಡೆಸಿದ ಸಾಮಾನ್ಯ ಜ್ಞಾನದಲ್ಲಿ (ಜನರಲ್ ನಾಲ್ಡೆಜ್) ದೇಶಕ್ಕೆ 37ನೇ ಸ್ಥಾನಗಳಿಸಿ ಮೆರೆದ ಪುಟಾಣಿ ಮಾನಸಾ (11) ಕೇಳುತ್ತಿದ್ದಳು.ಎಲ್ಲಾಪುರದ ಚಿಕ್ಕ ಬಾಡಿಗೆ ಮನೆಯಲ್ಲಿ ಮಾನಸಾ ಮಾತುಗಳು ನೋವಿನ ಸುನಾಮಿ ಅಲೆ ಹುಟ್ಟಿಸಿದರೂ ಅಲ್ಲಿದ್ದ ಎಲ್ಲರಲ್ಲೂ ದುಃಖ ತುಂಬಿದ ನೋವಿನ ನಗು.ಜಿಲ್ಲೆಯ ಪ್ರತಿಭಾವಂತೆ ಮಾನಸಾ ತುಮಕೂರಿನ ಚೈತನ್ಯ ವಿದ್ಯಾ ಮಂದಿರದ 6ನೇ ತರಗತಿ ವಿದ್ಯಾರ್ಥಿನಿ. ತಂದೆ ಜಿ.ರಂಗನಾಥ್ ನಗರದ ಬಟವಾಡಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಮ್ಯಾನೇಜರ್.ಒಂದನೇ ತರಗತಿಯಿಂದಲೂ `ಎ~ ಪ್ಲಸ್ ಶ್ರೇಣಿಯಲ್ಲೇ ತೇರ್ಗಡೆಯಾಗುತ್ತಿದ್ದ ಮಗಳನ್ನು ಕಂಡರೆ ರಂಗನಾಥ್‌ಗೆ ಎಲ್ಲಿಲ್ಲದ ಪ್ರೀತಿ. ಹಿರೇಹಳ್ಳಿಯಲ್ಲಿದ್ದ ಸರ್ಕಾರಿ ಮುದ್ರಣಾಲಯದಲ್ಲಿ ಹನ್ನೊಂದು ವರ್ಷ ಕಾಲ ಗುತ್ತಿಗೆ ಆಧಾರದಲ್ಲಿ ರಂಗನಾಥ್ ದುಡಿದಿದ್ದರು. ರಾಜಕೀಯ ಕಾರಣದಿಂದ ಮುದ್ರಣಾಲಯ ಮುಚ್ಚಿದಾಗ ಮುದ್ರಣಾಲಯದಲ್ಲಿದ್ದ 200 ಗುತ್ತಿಗೆ ಕಾರ್ಮಿಕರು ಬೀದಿಗೆ ಬಿದ್ದರು. ದೇವಸ್ಥಾನದಲ್ಲಿ ಬದುಕು ಕಂಡುಕೊಂಡ ರಂಗನಾಥ್ ತನ್ನೆಲ್ಲ ಕನಸುಗಳನ್ನು ಮಗಳ ಮೇಲೆ ಎಣೆದಿದ್ದರು. ಆದರೆ ಕ್ರೂರ ವಿಧಿ ಈಗ ರಂಗನಾಥ್ ಕುಟುಂಬವನ್ನೇ ದಿಕ್ಕಾಪಾಲು ಮಾಡಿದೆ.ಹರುಳು ಹುರಿದಂತೆ ಮಾತನಾಡುತ್ತಿದ್ದ ಮಾನಸಾ ಮೂರು ತಿಂಗಳ ಹಿಂದೆ ಮಾತಿನ ಮಧ್ಯೆ ತೊದಲು ಆರಂಭಿಸಿದಾಗ ನಗರದ ಎರಡು-ಮೂರು ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತು. ಬಳಿಕ ಕಳೆದ ತಿಂಗಳು ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದಾಗ ಬ್ರೈನ್ ಟ್ಯೂಮರ್ ಆಗಿರುವುದು ಕಂಡುಬಂದಿದೆ.6ನೇ ತರಗತಿಗಾಗಲೇ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರಿಗೂ ಪ್ರಶಸ್ತಿ ಪಡೆದಿರುವ ಮಾನಸಾ ಹಿಂದಿ ಪ್ರಥಮ್ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ತಲೆದೂಗಿ ಮನೆಯವರೆಗೂ ಬಂದು ಬೆನ್ನುತಟ್ಟಿ ಹೋಗಿದ್ದರು ಎಂದು ನೆನಪಿಸಿಕೊಂಡು ಬಿಕ್ಕಳಿಸುತ್ತಾರೆ ರಂಗನಾಥ್.`ಬ್ರೈನ್ ಟ್ಯೂಮರ್ 3ನೇ ಹಂತದಲ್ಲಿದ್ದು ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗಿದೆ. ಚಿಕಿತ್ಸೆ ಶೇ 90ರಷ್ಟು ಯಶಸ್ವಿಯಾಗಲಿದೆ ಎಂದು ಜೈನ್ ಆಸ್ಪತ್ರೆಯ ವೈದ್ಯ ಮಹೇಶ್, ತಂಡ ಹೇಳಿದೆ. ಈಗಾಗಲೇ ರೂ. 50 ಸಾವಿರ ವೆಚ್ಚವಾಗಿದೆ. ಚಿಕಿತ್ಸೆ ಹಾಗೂ ಚಿಕಿತ್ಸೆ ನಂತರ ರೇಡಿಯೊ, ಕಿಮೋ ಥೆರಪಿ ಸೇರಿ ರೂ. 8 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಾರದಿಂದ ಮನೆ ಮನೆ ಅಲೆದರೂ ರೂ. 50 ಸಾವಿರ ಸಾಲ ಸಿಕ್ಕಿಲ್ಲ. ನನ್ನ ಪ್ರತಿಭಾವಂತ ಮಗಳನ್ನು ಉಳಿಸಿಕೊಳ್ಳಲು ಯಾರಾದರೂ ದಾನ ನೀಡಬೇಕು. ಶಿಕ್ಷಣ ಇಲಾಖೆಯಾದರೂ ನೆರವಿಗೆ ಧಾವಿಸಲಿ~ ಎಂದು ರಂಗನಾಥ್ ಮನವಿ.ಈಗಾಗಲೇ ಚಿಕಿತ್ಸೆ ವಿಳಂಬದ ಕಾರಣ ಮಾನಸಾ ಬಲ ಕೈ ಸ್ವಾಧೀನ ಕಳೆದುಕೊಂಡಿದೆ. ನೆರವು ನೀಡಲು ರಂಗನಾಥ್ ಮೊಬೈಲ್- 9902749970 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry