ಚಿಕಿತ್ಸೆ ಅಲ್ಪ ತಡವಾಗಿದೆ

7

ಚಿಕಿತ್ಸೆ ಅಲ್ಪ ತಡವಾಗಿದೆ

Published:
Updated:

ಚಂಡೀಗಡ (ಪಿಟಿಐ): ಯುವರಾಜ್ ಸಿಂಗ್ ಕ್ಯಾನ್ಸರ್‌ಗೆ ತುತ್ತಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ತಿಳಿಸಿರುವ ಅವರ ತಂದೆ ಯೋಗರಾಜ್ ಸಿಂಗ್, `ಚಿಕಿತ್ಸೆ ಬೇಗನೇ ಆರಂಭಿಸಬೇಕಿತ್ತು~ ಎಂದಿದ್ದಾರೆ.`ವೈದ್ಯರ ಬಳಿ ಆರೋಗ್ಯ ತಪಾಸಣೆ ನಡೆಸುವಂತೆ ಎರಡು ವರ್ಷಗಳ ಹಿಂದೆಯೇ ಸೂಚಿಸಿದ್ದೆ. ಆದರೆ ಅದನ್ನು ಯುವರಾಜ್ ಗಂಭೀರವಾಗಿ ಪರಿಗಣಿಸಿರಲಿಲ್ಲ~ ಎಂಬುದನ್ನು ಯೋಗರಾಜ್ ಸೋಮವಾರ ಬಹಿರಂಗಪಡಿಸಿದರು.

ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಇದೀಗ ಶ್ವಾಸಕೋಶದ ಕ್ಯಾನ್ಸರ್‌ಗೆ ಅಮೆರಿಕದ ಬಾಸ್ಟನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. `ಯುವಿ~ಗೆ ಕ್ಯಾನ್ಸರ್ ಇರುವುದು ಎರಡು ತಿಂಗಳ ಹಿಂದೆ ಪತ್ತೆಯಾಗಿತ್ತು.

 

ಆದರೆ ಕುಟುಂಬ ಸದಸ್ಯರು ಇದನ್ನು ಯಾರಿಗೂ ತಿಳಿಸಿರಲಿಲ್ಲ. ಯುವರಾಜ್ ಫಿಸಿಯೋ ಡಾ. ಜತಿನ್ ಚೌಧರಿ ಭಾನುವಾರ ಮೊದಲ ಬಾರಿಗೆ ಈ ವಿಷಯ ಬಹಿರಂಗಪಡಿಸಿದ್ದರು.`ನಾನು ಯಾರನ್ನೂ ದೂರುತ್ತಿಲ್ಲ. ಆದರೆ ಅಂದು ನನ್ನ ಮಾತನ್ನು ಕೇಳಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ನಿಮಗೆ ನೆನಪಿರಬಹುದು. ಎರಡು ವರ್ಷಗಳ ಹಿಂದೆ ಯುವಿ ಮೊಹಾಲಿಯಲ್ಲಿ ಟ್ವೆಂಟಿ-20 ಪಂದ್ಯ ಆಡಿದ್ದರು.

 

`ಮ್ಯಾಚ್ ವಿನ್ನಿಂಗ್~ ಇನಿಂಗ್ಸ್ ವೇಳೆ ಸಿಕ್ಸರ್ ಸಿಡಿಸಿದ ಬಳಿಕ ಅವರು ಸುರೇಶ್ ರೈನಾ ಬಳಿ ಓಡುತ್ತಾ ಬಂದರು. ಈ ವೇಳೆ ಯುವರಾಜ್ ಒಂದೇ ಸಮನೆ ಕೆಮ್ಮುತ್ತಿದ್ದರು~ ಎಂದು ಯೋಗರಾಜ್ ತಿಳಿಸಿದರು.

`ತಜ್ಞ ವೈದ್ಯರ ಬಳಿ ಪರೀಕ್ಷೆಗೆ ಒಳಗಾಗುವಂತೆ ನಾನು ಆಗಲೇ ಸೂಚಿಸಿದ್ದೆ. ಆದರೆ `ನಾನು ಚಿಕ್ಕ ಮಗುವಲ್ಲ~ ಎನ್ನುತ್ತಾ ಯುವರಾಜ್ ನನ್ನ ಸಲಹೆಯನ್ನು ಕಡೆಗಣಿಸಿದ್ದ~ ಎಂದು ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆದಿರಿಸಲು ಪ್ರಯತ್ನಿಸುತ್ತಾ ಯೋಗರಾಜ್ ನುಡಿದರು.`ಪುತ್ರನ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬುದು ಆರಂಭದಲ್ಲೇ ನನ್ನ ಗಮನಕ್ಕೆ ಬಂದಿತ್ತು. ಆರು ತಿಂಗಳ ಹಿಂದೆ ಅವರು ಪರೀಕ್ಷೆಗೆ ಒಳಗಾಗಿದ್ದರು. ಆ ವರದಿಯನ್ನು ನೋಡಿದ ವೈದ್ಯರು, ಯುವಿ ಅವರನ್ನು ಚಿಕಿತ್ಸೆಗಾಗಿ ಈ ಕೂಡಲೇ ಅಮೆರಿಕಕ್ಕೆ ಕರೆದೊಯ್ಯಬೇಕೆಂದು ತಿಳಿಸಿದ್ದರು. ಅಮೆರಿಕದಲ್ಲಿ ಮಾತ್ರ ಉತ್ತಮ ಚಿಕಿತ್ಸೆ ದೊರೆಯಲು ಸಾಧ್ಯ ಎಂದಿದ್ದರು. ಆದರೆ ಆ ವೈದ್ಯರ ಸಲಹೆಯನ್ನೂ ಕಡೆಗಣಿಸಲಾಯಿತು. ನಾನು ಯಾರನ್ನೂ ದೂರಲು ಇಷ್ಟಪಡುವುದಿಲ್ಲ~ ಎಂದರು.ಯುವರಾಜ್ ತಂದೆಗಿಂತಲೂ ತಮ್ಮ ತಾಯಿ ಶಬ್ನಮ್ ಸಿಂಗ್ ಅವರೊಂದಿಗೆ ಹೆಚ್ಚು ನಿಕಟವಾಗಿದ್ದಾರೆ. ಗುಡಗಾಂವ್‌ನಲ್ಲಿ ನೆಲೆಸಿರುವ ಶಬ್ನಮ್ ಇದೀಗ `ಯುವಿ~ ಅವರೊಂದಿಗೆ ಅಮೆರಿಕದಲ್ಲಿದ್ದಾರೆ. ಯೋಗರಾಜ್ ಚಂಡೀಗಡದಲ್ಲಿ ನೆಲೆಸಿದ್ದಾರೆ.`ಯುವರಾಜ್ ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದೆ ಸರಿಯುವ ಮೂಲಕ ಸರಿಯಾದ ನಿರ್ಧಾರ ಕೈಗೊಂಡರು. ಇಲ್ಲದಿದ್ದಲ್ಲಿ, ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿತ್ತು~ ಎಂದು ಯೋಗರಾಜ್ ತಿಳಿಸಿದರು.

ಪುತ್ರನ ಜೊತೆ ಮಾತನಾಡಿರುವುದಾಗಿ ತಿಳಿಸಿದ ಅವರು, `ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.ದೇವರ ದಯೆಯಿಂದ ಅವರು ಶೀಘ್ರದಲ್ಲೇ ಗುಣಮುಖರಾಗಲಿ~ ಎಂದರು. `ಯುವರಾಜ್ ಧೈರ್ಯವಂತ. ಅವನೊಬ್ಬ ಸಿಂಹ ಇದ್ದಂತೆ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಿಂಹದ ಘರ್ಜನೆಯನ್ನು ನೀವು ಸದ್ಯದಲ್ಲೇ ಕೇಳುವಿರಿ~ ಎಂದು ಮಗನ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.ಸೈಕ್ಲಿಂಗ್ ದಂತಕತೆ ಅಮೆರಿಕದ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಅವರಿಗೆ ಚಿಕಿತ್ಸೆ ನೀಡಿದ್ದ ಅದೇ ವೈದ್ಯರು ಯುವರಾಜ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. 1996 ರಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ಆರ್ಮ್‌ಸ್ಟ್ರಾಂಗ್ ಸಂಪೂರ್ಣ ಗುಣಮುಖರಾಗಿದ್ದರು. ಮಾತ್ರವಲ್ಲ `ಟೂರ್ ಡಿ ಫ್ರಾನ್ಸ್~ ಸೈಕಲ್ ರೇಸ್‌ನ್ನು ದಾಖಲೆಯ ಏಳು ಜಯಿಸುವಲ್ಲಿ ಯಶಸ್ವಿಯಾಗಿದ್ದರು.`ಯುವರಾಜ್ ಹೊಸ ಚಾಂಪಿಯನ್ ಆಗಿ ಭಾರತಕ್ಕೆ ಮರಳಲಿದ್ದಾರೆ~ ಎಂಬ ಭರವಸೆಯನ್ನು ಆರ್ಮ್‌ಸ್ಟ್ರಾಂಗ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರು ನೀಡಿರುವುದಾಗಿ ಯೋಗರಾಜ್ ಬಹಿರಂಗಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry