ಚಿಕ್ಕಪೇಟೆಯಲ್ಲಿ ರಿಯಾಯ್ತಿ ಹಬ್ಬ

‘ಬನ್ನಿ ಮೇಡಂ... ರೇಷ್ಮೆ ಸೀರೆನಾ.. ಡ್ರೆಸ್ ಮೆಟೀರಿಯಲ್ಲಾ... ಡಿಸ್ಕೌಂಟ್ ಇದೆ. ಹೋಲ್ಸೇಲ್ ರೇಟು...’ ಎಂದು ಅಂಗಡಿಯ ವಿಸಿಟಿಂಗ್ ಕಾರ್ಡು ಹಿಡಿದು ಹೆಜ್ಜೆಹೆಜ್ಜೆಗೂ ತಡೆದು ನಿಲ್ಲಿಸುವ ಹುಡುಗರು.
ಬಾಳೆ, ಚೆಂಡು ಹೂವಿನಿಂದ ಅಲಂಕೃತಗೊಂಡಿರುವ ಸೀರೆ ಮಳಿಗೆಗಳು. ರಸ್ತೆಯ ತುಂಬ ಜನಸಾಗರ. ಜನನಿಬಿಡ ರಸ್ತೆ ಮಧ್ಯೆ ಸೀರೆಗಳ ಬಂಡಲ್ ಹೊತ್ತು ಸಾಗುತ್ತಿರುವ ಕೈಗಾಡಿಗಳು, ಗೂಡ್ಸ್ ಆಟೊಗಳು. ಇದು ಚಿಕ್ಕಪೇಟೆಯಲ್ಲಿ ಒಂದು ವಾರದಿಂದ ಕಂಡು ಬರುತ್ತಿರುವ ದೃಶ್ಯ.
ಆಗಸ್ಟ್ 12 ವರಮಹಾಲಕ್ಷ್ಮಿ ಹಬ್ಬ. ಇದು ಶ್ರಾವಣ ಮಾಸದ ಮೊದಲ ಹಬ್ಬವೂ ಹೌದು. ವರಮಹಾಲಕ್ಷ್ಮಿ ಹಬ್ಬವೆಂದರೆ ಹಾಗೆ, ಅದು ಮಹಿಳೆಯರ ಹಬ್ಬ. ಹೊಸ ರೇಷ್ಮೆಸೀರೆ ಕೊಂಡು ಮಹಾಲಕ್ಷ್ಮಿಗೆ ತೊಡಿಸಿ ನಂತರ ತಾವು ಉಡುವುದು ಅನೇಕರು ಪಾಲಿಸುವ ಸಂಪ್ರದಾಯ.
ಲಕ್ಷ್ಮಿಯ ನೆಪದಲ್ಲಿ ಹಬ್ಬ ಆಚರಿಸುವ ಎಲ್ಲರೂ ಹೊಸ ಬಟ್ಟೆ ಖರೀದಿಸುವುದು ನಗರದಲ್ಲಿ ಸಾಮಾನ್ಯ. ರಿಯಾಯ್ತಿ ಇದೆ ಎಂಬ ಕಾರಣಕ್ಕೆ ಸೀರೆ ಖರೀದಿಸುವ ಜಾಯಮಾನದವರೂ ಇದ್ದಾರೆ.
ಚಿಕ್ಕಪೇಟೆಯಲ್ಲಿ ಸುಮಾರು 40 ವರ್ಷ ಹಳೆಯದಾದ ಚಿಕ್ಕಪುಟ್ಟ ಸೀರೆ ಅಂಗಡಿಗಳಿಂದ ಹಿಡಿದು ಪ್ರಸಿದ್ಧ ಮಳಿಗೆಗಳವರೆಗೆ ಎಲ್ಲ ಅಂಗಡಿಗಳಲ್ಲೂ ಮಹಿಳೆಯರು ಕುಟುಂಬ ಸಮೇತರಾಗಿ ಸೀರೆ ಖರೀದಿಸುತ್ತಿದ್ದಾರೆ.
ಕೆಲವು ದೊಡ್ಡ ಮಳಿಗೆಗಳು ‘ಶೇ 50ರವರೆಗೆ ರಿಯಾಯ್ತಿ’ ಎಂಬ ಬೃಹತ್ ಬ್ಯಾನರ್ಗಳನ್ನು ಹಾಕಿವೆ. ಕೆಲವು ಅಂಗಡಿಗಳಲ್ಲಿ ರಿಯಾಯ್ತಿ\ ಘೋಷಿಸಿಲ್ಲ. ಆದರೆ, ಅಲ್ಲೆಲ್ಲ ವರ್ಷದ ಎಲ್ಲ ದಿನವೂ ಶೇ 30ರಷ್ಟು ರಿಯಾಯ್ತಿ ನೀಡಲಾಗುತ್ತಿದೆ.
ರೇಷ್ಮೆ, ಕಾಟನ್, ಶಿಫಾನ್, ಡಿಸೈನರ್ ಸೀರೆಗಳಲ್ಲದೆ ಡ್ರೆಸ್ ಮೆಟೀರಿಯಲ್, ಘಾಗ್ರಾ ಚೋಲಿ, ಕುರ್ತಾಗಳಿಗೂ ಕೆಲವು ಮಳಿಗೆಗಳು ರಿಯಾಯ್ತಿ ನೀಡಿವೆ.
ಮಧ್ಯಮ ವರ್ಗದ ಗ್ರಾಹಕರು
ಹಬ್ಬದ ಶಾಪಿಂಗ್ಗೆಂದು ಚಿಕ್ಕಪೇಟೆಗೆ ಬರುವವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದವರು. ಸಂಪ್ರದಾಯ ಎಂಬ ಕಾರಣಕ್ಕೆ ಸೀರೆ ಖರೀದಿಸುವುದೇ ಹೆಚ್ಚು. ₹ 1ರಿಂದ 3 ಸಾವಿರ ಬೆಲೆಯ ಸೀರೆಗಳಿಗೆ ಹೆಚ್ಚು ಬೇಡಿಕೆ ಇದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೆಂಗಸರು ಗರಿಷ್ಠ ₹ 5 ಸಾವಿರದವರೆಗಿನ ಸೀರೆ ಕೊಳ್ಳುವುದು ವಾಡಿಕೆ.
ಡಿಸೈನರ್ ಸೀರೆಗಳು ಬಂದ ನಂತರ ಹೆಣ್ಣುಮಕ್ಕಳು ಅತ್ತ ಆಕರ್ಷಿತರಾಗಿದ್ದರು. ಆದರೆ ಈ ಬಾರಿ ಮತ್ತೆ ಘಾಗ್ರಾ ಚೋಲಿ ಜನಪ್ರಿಯವಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಈ ಬಾರಿ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಡಿಸೈನರ್ ಸೀರೆ ಖರೀದಿಸಲು ಒಲವು ತೋರುತ್ತಿಲ್ಲ ಎಂದು ಸೀರೆ ವ್ಯಾಪಾರಿಯೊಬ್ಬರು ಬದಲಾದ ಟ್ರೆಂಡ್ ಬಗ್ಗೆ ವಿವರಿಸಿದರು.
ಒಂದು ತಿಂಗಳ ರಿಯಾಯ್ತಿ
ನಮ್ಮಲ್ಲಿ ರಿಯಾಯ್ತಿ ಮಾರಾಟ ಒಂದು ತಿಂಗಳವರೆಗೆ ಇರುತ್ತದೆ. ಶೇ5ರಿಂದ 50ರವರೆಗೆ ರಿಯಾಯ್ತಿ ನೀಡುತ್ತಿದ್ದೇವೆ. ಹಬ್ಬದ ಶಾಪಿಂಗ್ ದಿನಗಳಲ್ಲಿ ವಾರದಲ್ಲಿ 500 ಸೀರೆಗಳನ್ನು ತರಿಸುತ್ತೇವೆ. ನಮ್ಮಲ್ಲಿ ಕಾಂಜೀವರಂ, ಧರ್ಮಾವರಂ, ಆಣಿ ರೇಷ್ಮೆ ಸೀರೆಗಳು ಇವೆ.
–ರಮೇಶ್, ಶ್ರೀ ಸಾಯಿ ಕುಮಾರನ್ಸ್ ಸಿಲ್ಕ್ಸ್
ಗ್ರಾಹಕರ ಚೌಕಾಸಿ ಇದ್ದಿದ್ದೆ
ನಮ್ಮದು 35 ವರ್ಷ ಹಳೆಯ ಅಂಗಡಿ. ನಮಗೆ ಸ್ಥಿರ ಗ್ರಾಹಕರಿದ್ದಾರೆ. ವರ್ಷವಿಡೀ ಶೇ 10ರಿಂದ 20ರಷ್ಟು ರಿಯಾಯ್ತಿ ನೀಡುತ್ತೇವೆ. ಹಬ್ಬಕ್ಕೆಂದು ವಿಶೇಷ ರಿಯಾಯ್ತಿ ನೀಡುವುದಿಲ್ಲ. ಆದರೂ ಗ್ರಾಹಕರು ಚೌಕಾಸಿ ಮಾಡಿಯೇ ಮಾಡುತ್ತಾರೆ.
–ಡಿ.ಟಿ.ಜವಾಹರ ಲಾಲ್, ಕಂಚಿ ಕೋ ಶೃಂಗಾರ್ ಸಿಲ್ಕ್ಸ್
ಸ್ಪರ್ಧೆ ಹೆಚ್ಚಿದೆ
ರೇಷ್ಮೆ ಸೇರಿದಂತೆ ಎಲ್ಲ ಬಗೆಯ ಸೀರೆಗಳಿಗೆ ನಾವು ರೆಗ್ಯುಲರ್ ಆಗಿ ಶೇ 30 ರಿಯಾಯ್ತಿ ನೀಡುತ್ತೇವೆ. ಮಳಿಗೆಗಳ ಸಂಖ್ಯೆ ಹೆಚ್ಚಿದಂತೆ ಸ್ಪರ್ಧೆಯೂ ಹೆಚ್ಚು. ಹಬ್ಬಕ್ಕೆಂದು ರಿಯಾಯ್ತಿ ಇಲ್ಲ. ಆದರೂ, ವ್ಯಾಪಾರ ತಕ್ಕಮಟ್ಟಿಗೆ ನಡೆಯುತ್ತಿದೆ.
–ದೀಪಕ್, ಗಜೇಂದ್ರ ಸಿಲ್ಕ್ಸ್
ವರ್ಷವಿಡೀ ರಿಯಾಯ್ತಿ
ನಮ್ಮಲ್ಲಿ ವರ್ಷವಿಡೀ ಶೇ 30ರ ರಿಯಾಯ್ತಿ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಶೇ 40ರಷ್ಟು ರಿಯಾಯ್ತಿ\ ನೀಡುತ್ತೇವೆ.
–ಪ್ರಶಾಂತ್, ಶ್ರೀ ವರದೇವಿ
ಸೊಸೈಟಿ ಸಿಲ್ಕ್ಸ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.