ಬುಧವಾರ, ಜೂನ್ 16, 2021
28 °C
ಹಿರಿತೆರೆ, ಕಿರುತೆರೆ ಖ್ಯಾತನಾಮರಿಂದ ಸ್ಪರ್ಧೆ

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಚಿತ್ರರಂಗಕ್ಕೂ ಗಾಢ ನಂಟು!

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕ­ಸಭಾ ಕ್ಷೇತ್ರಕ್ಕೂ ಮತ್ತು ಸಿನಿಮಾ ಮಂದಿಗೂ ಗಾಢವಾದ ನಂಟು ಇದ್ದು, ಪದೇ ಪದೇ ಸಾಬೀತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಿದ್ದ­ರೇನಂತೆ ವಿಧಾನಸಭಾ ಚುನಾವಣೆ­ಯ­ಲ್ಲಾ­ದರೂ ಸ್ಪರ್ಧಿಸಿ ಗೆಲುವನ್ನು ಪಡೆ­ಯೋಣ ಎಂದು ಕನ್ನಡ ಚಿತ್ರರಂಗದ ಕೆಲ ಘಟಾನುಘಟಿಗಳು ಪ್ರಯತ್ನಿಸಿದ್ದಾರೆ.ಅವರಲ್ಲಿ ಕೆಲವರು ಜಯ ದಾಖ­ಲಿಸಿದ್ದರೆ, ಇನ್ನೂ ಕೆಲವರು ಸೋಲಿನಲ್ಲೇ ಸಂತೃಪ್ತರಾಗಿ ಮೌನವಾಗಿದ್ದಾರೆ. ನಟ, ನಟಿಯರು ಅಷ್ಟೇ ಅಲ್ಲ, ಹಿರಿತೆರೆ ಮತ್ತು ಕಿರುತೆರೆಯ ನಿರ್ಮಾಪಕರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು–ಗೆಲುವಿನ ಲೆಕ್ಕಾಚಾರ ಹಾಕಿದ ನಿದ­ರ್ಶನಗಳು ಸಹ ಇವೆ.ರಾಜಕೀಯ ರಂಗದ ಸಂಪರ್ಕ ಹೊಂದಿ­ರದ ಹಿರಿಯ ನಟಿ ಜಯಂತಿ ಅವರು ಮೊದಲ ಬಾರಿಗೆ 1998ರಲ್ಲಿ ರಾಜಕಿಯ ಕ್ಷೇತ್ರದ ಬಗ್ಗೆ ಆಸಕ್ತಿ ತಳೆ­ದರು. ರಾಮಕೃಷ್ಣ ಹೆಗಡೆಯವರು ಸ್ಥಾಪಿ­ಸಿದ ಲೋಕಶಕ್ತಿ ಪಕ್ಷದೊಂದಿಗೆ ಗುರುತಿಸಿಕೊಂಡರು. ನಂತರ ಅದೇ ಪಕ್ಷದ ಅಭ್ಯರ್ಥಿಯಾಗಿ 1998ರ ಲೋಕ­ಸಭೆ ಚುನಾವಣೆಯಲ್ಲಿ  ಚಿಕ್ಕ­ಬಳ್ಳಾ­ಪುರ ಕ್ಷೇತ್ರದಿಂದ ಸ್ಪರ್ಧಿಸಿಯೇ­ಬಿಟ್ಟರು.ಅಂದಿನ ಚುನಾವಣೆಯಲ್ಲಿ ಜಯಂತಿ ಅವರು 2,04,359 ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಎಲ್.­ಜಾಲಪ್ಪ 3,60,761 ಮತ ಗಳಿಸಿ­ದರು. 1,56,402 ಮತಗಳ ಅಂತರ­ದಿಂದ ಜಾಲಪ್ಪ ವಿಜೇತರಾಗಿದ್ದರು.ನಟ ಶಶಿಕುಮಾರ್‌ ಕೂಡ ಚಿಕ್ಕಬಳ್ಳಾ­ಪುರ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿ­ಕೊಂಡರು. ಚಿತ್ರದುರ್ಗ ಸಂಸದರಾಗಿ ಕೊಂಚ ಅನುಭವ ಗಳಿಸಿದ್ದ ಅವರು 2004ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕ್ಷೇತ್ರದ ಜನರಿಗೆ ಚಿತ್ರಗಳ ಮೂಲಕ ಮಾತ್ರ ಪರಿಚಿತರಾಗಿದ್ದರೂ ಜಾಲಪ್ಪ ಅವರಿಗೆ ಉತ್ತಮ ಪೈಪೋಟಿ ನೀಡಿದರು. ಶಶಿಕುಮಾರ್ 3,16,182 ಮತ ಗಳಿಸಿ­ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆರ್.ಎಲ್‌.­ಜಾಲಪ್ಪ 3,76,204 ಮತ ಗಳಿಸಿದರು. 60,022 ಮತಗಳಿಂದ ಗೆಲುವು ದಾಖಲಿಸಿದ್ದರು.2009ರ ಲೋಕಸಭೆ ಚುನಾವಣೆ­ಯಲ್ಲಿ ಚಿತ್ರ ನಿರ್ಮಾಪಕ ಸಿ.ಆರ್‌.­ಮನೋಹರ್‌ ಜೆಡಿಎಸ್‌ ಅಭ್ಯರ್ಥಿ­ಯಾಗಿ ಸ್ಪರ್ಧಿಸಿ ಗೆಲ್ಲುವ ಉಮೇದು ಹೊಂದಿದ್ದರು. ‘ಒರಟ ಐ ಲವ್‌ ಯೂ’, ‘ಜನುಮದ ಗೆಳತಿ’ ಮುಂತಾದ ಚಿತ್ರ­ಗಳನ್ನು ನಿರ್ಮಿಸಿದ್ದ ಅವರು 1,86,075 ಮತಗಳನ್ನು ಗಳಿಸಿದರೆ, ಕಾಂಗ್ರೆಸ್‌ನ ವೀರಪ್ಪ ಮೊಯಿಲಿ 3,90,500 ಮತ ಗಳಿಸಿದರು. 2,04,425 ಮತಗಳ ಅಂತರ­ದಿಂದ ವಿಜೇತರಾಗಿದ್ದರು.ಆಸಕ್ತಿಕರ ಸಂಗತಿಯೆಂದರೆ, ಚಿತ್ರರಂಗ ಮತ್ತು ಚುನಾವಣೆಯ ಈ ನಂಟು ಮೊದಲು ಆರಂಭಗೊಂಡಿದ್ದು 1989­ರಲ್ಲಿ. ಚಿತ್ರರಂಗದಲ್ಲಿ ಅಪಾರ ಅನುಭವ ಗಳಿಸಿದ್ದ ‘ಮುಖ್ಯಮಂತ್ರಿ’ ಚಂದ್ರು ರಾಜ­ಕೀಯ ರಂಗದಲ್ಲೂ ಒಮ್ಮೆ ಅದೃಷ್ಟ ಪರೀಕ್ಷಿಸಿಯೇ ಬಿಡೋಣ­ವೆಂದು ಜನತಾ ದಳ ಅಭ್ಯರ್ಥಿಯಾಗಿ ಕಣಕ್ಕಿಳಿದರು.  2,30,750 ಮತ ಗಳಿಸಿದರೆ, ಪ್ರತಿ­ಸ್ಪರ್ಧಿ ಕಾಂಗ್ರೆಸ್‌ನ ವಿ.ಕೃಷ್ಣರಾವ್‌ 3,67,638 ಮತ ಗಳಿಸಿ ವಿಜೇತ­ರಾಗಿದ್ದರು. ಅವರಿಬ್ಬರಿಗೂ 1,36,888 ಮತಗಳ ಅಂತರವಿತ್ತು.ಆದರೆ, ಗಮನಾರ್ಹ ಸಂಗತಿ­ಯೆಂದರೆ ಈ ಲೋಕಸಭೆ ಚುನಾ­ವಣೆಗೂ ಮುನ್ನ ನಡೆದ 1985ರ ವಿಧಾನ­ಸಭಾ ಚುನಾವಣೆಯಲ್ಲಿ ಗೌರಿ­ಬಿದನೂರು ಕ್ಷೇತ್ರದಿಂದ ಸ್ಪರ್ಧಿಸಿ ‘ಮುಖ್ಯ­ಮಂತ್ರಿ’ ಚಂದ್ರು ಅವರು ಆಯ್ಕೆ­ಗೊಂಡು ಶಾಸಕರಾಗಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರು 34,291 ಮತ ಗಳಿಸಿ ವಿಜೇತರಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಎನ್‌.ಕೆ.ಪಾಪಯ್ಯ 27,660 ಮತ ಗಳಿಸಿದ್ದರು.ಕನ್ನಡ ಮತ್ತು ತೆಲುಗು ಚಿತ್ರ­ರಂಗ­ದಲ್ಲಿ ಗುರುತಿಸಿಕೊಂಡಿರುವ ಸಾಯಿ­ಕುಮಾರ್‌ 2008ರ ವಿಧಾನಸಭೆ ಚುನಾ­ವಣೆಯಲ್ಲಿ ಬಾಗೇಪಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಾಗೇಪಲ್ಲಿ ತಮ್ಮ ತವರೂರು ಎಂದು ಹೇಳುವ ಅವರು ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕಾಂಗ್ರೆಸ್‌ನ ಎನ್.ಸಂಪಂಗಿ ಅವರು 32,244 ಮತಗಳನ್ನು ಗಳಿಸಿ ವಿಜೇತ­ರಾದರೆ, ಸಾಯಿಕುಮಾರ್‌ ಅವರು 26,070 ಮತ ಪಡೆದು ಸೋಲು ಅನುಭವಿಸಿದರು. 6,174 ಮತಗಳ ಅಂತರ­ದಿಂದ ಪರಾಭವಗೊಂಡಿದ್ದ ಅವರು ಸ್ಪರ್ಧಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು.ಹಿರಿತೆರೆಗಿಂತ ಕಿರುತೆರೆಯಲ್ಲಿ ಹೆಚ್ಚು ಹೆಸರು ಗಳಿಸಿರುವ ನಿರ್ದೇಶಕ ಟಿ.ಎನ್‌.­ಸೀತಾರಾಂ ಅವರು ಕೂಡ 1999ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿ­ಸಿ­ದ್ದರು. ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು 6,965 ಮತ­ಗಳನ್ನು ಗಳಿಸಿ ಸೋಲುಂಡರೆ, ಪಕ್ಷೇತರ­ರಾಗಿ ಸ್ಪರ್ಧಿಸಿದ ಎನ್‌.ಎಚ್‌.ಶಿವಶಂಕರ ರೆಡ್ಡಿ­ಯವರು 34,541 ಮತ ಗಳಿಸಿ ವಿಜೇತ­ರಾದರು. ಒಟ್ಟು 27,576 ಮತಗಳ ಅಂತರದಿಂದ ಸೀತಾರಾಂ ಸ್ಪರ್ಧಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.