ಶುಕ್ರವಾರ, ಜೂನ್ 18, 2021
28 °C

ಚಿಕ್ಕಭಂಡಾರ ಅಭಿವೃದ್ಧಿಗೆ ರೂ 98 ಲಕ್ಷ: ರಂಜನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ರೂ.98 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಸೋಮವಾರ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನಂತರ ಶಾಸಕರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು ಗ್ರಾಮ ಪಂಚಾಯಿತಿಗೆ ಕಾವೇರಿ ನೀರಾವರಿ ನಿಗಮದಿಂದ ರೂ.23ಕೋಟಿ ಅನುದಾನ ಒದಗಿಸಲಾಗಿದೆ ಎಂದರು.ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಈ ಹಣವನ್ನು ವಿನಿಯೋಗಿಸಲಾಗುತ್ತಿದ್ದು, ಈ ಪೈಕಿ ಚಿಕ್ಕಭಂಡಾರ ಗ್ರಾಮದ ಅಭಿವೃದ್ಧಿಗೆ 98ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ ಎಂದರು.ಗ್ರಾಮೀಣ ಜನರ ಕಷ್ಟ ಸುಖಗಳನ್ನು ಹತ್ತಿರದಿಂದ ನೋಡಲು ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದು, ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಹಿಂದಿನಿಂದಲೂ ಬೇಡಿಕೆಯಿದ್ದು, ಇದೀಗ ಭೂಮಿ ಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.ಹಬ್ಬದ ವಾತಾವರಣ

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗೆ ಸೋಮವಾರ ಆಗಮಿಸಿದಾಗ ಗ್ರಾಮದಲ್ಲಿ ಹಬ್ಬದ ವಾತಾವರಣ. ವಾದ್ಯಗೋಷ್ಠಿಗಳ ನಾದದ ಮೂಲಕ ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಶಾಸಕರು ಅಲ್ಲಿನ ಕನ್ನಂಬಾಡಿಯಮ್ಮ ದೇವಾಲಯಕ್ಕೆ ತೆರಳಿ ಪ್ರಥಮ ಪೂಜೆ ಸಲ್ಲಿಸಿದರು. ನೂರಾರು ಮಂದಿ  ಶಾಸಕರ ಪರ ಜಯಕಾರ ಕೂಗಿದರು. ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗ್ರಾಮದಲ್ಲಿ  ನೂತನ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು.ನಂತರ ಶನಿದೇವರ ದೇವಾಲಯ ಹಾಗೂ ದಂಡಿ ಮಾರಿಯಮ್ಮ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಕಾಲೋನಿ ನಿವಾಸಿಗಳ ಜನಪದ ನೃತ್ಯ, ಸೋಬಾನೆ ಪದ, ಕೋಲಾಟ, ಸುಗ್ಗಿ ಕುಣಿತ, ದೇವರ ಕುಣಿತ, ಹುಲಿಯಾಟ ಸೇರಿದಂತೆ ಇನ್ನಿತರ ನೃತ್ಯ ಪ್ರಕಾರಗಳನ್ನು ಶಾಸಕರು ವೀಕ್ಷಿಸಿದರು.ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ ಗ್ರಾಮಸ್ಥರ ಜೀವನವನ್ನು ಹತ್ತಿರದಿಂದ ಕಂಡ ಶಾಸಕರು ಸಂಜೆ ಧರ್ಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಲು ಅಣಿಯಾದರು.ಅಧಿಕಾರಿಗಳ ದಂಡು

ತಮ್ಮ ಬೇಡಿಕೆಗಳ ಈಡೇರಿಕೆಗೆ ಹಲವಷ್ಟು ಬಾರಿ ಸಂಬಂಧಪಟ್ಟ ಇಲಾಖೆಗಳ ಬಾಗಿಲು ಬಡಿದು ಸುಸ್ತಾಗಿದ್ದ ಗ್ರಾಮಸ್ಥರಿಗೆ ಶಾಸಕರ ಗ್ರಾಮ ವಾಸ್ತವ್ಯ ನೆಪದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಬಳಿಯೇ ಬಂದಿದ್ದು, ಹೊಸ ಭರವಸೆಯನ್ನು ಮೂಡಿಸಿತು. ನೀರು, ವಿದ್ಯುತ್ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿವರ್ಗದ ಗಮನ ಸೆಳೆಯುತ್ತಿದ್ದುದು ಕಂಡುಬಂತು.ನಂತರ ಧರ್ಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಶಾಸಕರೊಂದಿಗೆ ಗ್ರಾಮಸ್ಥರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಗ್ರಾಮ ವಾಸ್ತವ್ಯದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್,ಉಪಾಧ್ಯಕ್ಷೆ ನೇತ್ರಾವತಿ ಈರಪ್ಪ, ಬೆಸೂರು ಗ್ರಾ.ಪಂ.ಅಧ್ಯಕ್ಷ ಜೆ.ಆರ್.ಹೊನ್ನಪ್ಪ, ಜಿ.ಪಂ.ಸದಸ್ಯರಾದ ಚಂದ್ರಿಕಾ ಯೋಗೇಶ್, ಡಿ.ಬಿ.ಧರ್ಮಪ್ಪ, ಬಿ.ಶಿವಪ್ಪ, ತಾ.ಪಂ.ಸದಸ್ಯರಾದ ಪ್ರಮೀಳಾ ಜೋಯಪ್ಪ, ಜ್ಯೋತಿ ಶಿವಣ್ಣ, ಶಂಕರ ನಾರಾಯಣ, ಬಿ.ವಿ.ಸತೀಶ್ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.