ಚಿಕ್ಕಮಗಳೂರು: ಅಭಿವೃದ್ಧಿಗೆ ಚಾಲನೆ ನೀಡಿದ್ದೇ ತಪ್ಪಾ: ರವಿ ಪ್ರಶ್ನೆ

7

ಚಿಕ್ಕಮಗಳೂರು: ಅಭಿವೃದ್ಧಿಗೆ ಚಾಲನೆ ನೀಡಿದ್ದೇ ತಪ್ಪಾ: ರವಿ ಪ್ರಶ್ನೆ

Published:
Updated:

ಚಿಕ್ಕಮಗಳೂರು: `ಶಾಸಕನಾದ ಮೇಲೆ ಎಂದೂ ಜಾತಿ ರಾಜಕಾರಣ ಮಾಡಲಿಲ್ಲ, ಭೀತಿ ಹುಟ್ಟಿಸುವ ಕೆಲಸವನ್ನು ಮಾಡಲಿಲ್ಲ. ಯಾವುದೇ ಹಳ್ಳಿಗಳಿಗೆ ಹೋದರು ಜನರು ಪ್ರೀತಿಯಿಂದ ಮಾತನಾಡಿ ಸು ತ್ತಾರೆ. ಕೊನೆಯ ಉಸಿರು ಇರುವವರೆಗೂ ಜನರ ಪ್ರೀತಿವಿಶ್ವಾಸ ಉಳಿಸಿಕೊಳ್ಳುತ್ತೇನೆ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.ನಗರದಲ್ಲಿ ಮಂಗಳವಾರ ಬಿಜೆಪಿ ಹಮ್ಮಿ ಕೊಂಡಿದ್ದ ವಿಕಾಸಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

`ರವಿಗೆ ಹುಚ್ಚು ಹಿಡಿದಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಿಜ 25 ವರ್ಷಗಳ ಹಿಂದೆಯೇ ರಾಷ್ಟ್ರಭಕ್ತಿ ಮತ್ತು ಪಕ್ಷದ ತತ್ವಸಿದ್ಧಾಂತದ ಹುಚ್ಚು ಹಿಡಿದೆ. ನಮ್ಮಂತಹ ಹುಚ್ಚರ ಶ್ರಮದ ಫಲ ಧನಂಜಯ ಕುಮಾರ್ ಅವರಂತಹವರೂ ಐದು ಬಾರಿ ಆಯ್ಕೆಯಾಗಲು ಸಾಧ್ಯವಾಯಿತು' ಎಂದು ಮೂದಲಿಸಿದರು.ಅಧಿಕಾರ ಇಲ್ಲದಿದ್ದಾಗಲೂ ನಿಮ್ಮ ಹೋರಾಟಕ್ಕೆ ಬೆಂಗಳೂರಿನವರೆಗೂ ಸ್ವಂತ ಕರ್ಚಿನಲ್ಲಿ ಬಂದವರು ನಾವು. ಅವಕಾಶವಾದಿಗಳ ಮಾತುಕೇಳಿಕೊಂಡು ನಮ್ಮಂತಹ ನಿಷ್ಠಾವಂತರನ್ನು ದೂರವಿಟ್ಟಿರಿ. ನಿಮ್ಮ ವಿರುದ್ಧವೇ ಬಂಡಾಯ ಸಾರಿ ರೆಸಾರ್ಟ್‌ಗೆ ಹೋದವರಿಗೆ ಎಲ್ಲರಿಗಿಂತ ಮೊದಲೇ ಸಚಿವ ಸ್ಥಾನ ನೀಡಿದಿರಿ. ನಿಮ್ಮ ಸುತ್ತಲೂ ನಮ್ಮಂತ ನಿಷ್ಠಾವಂತರನ್ನು ಇಟ್ಟುಕೊಂಡಿದ್ದರೆ ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತಿದ್ದೀರಿ. ರಾಜಕೀಯ ಸ್ಥಿತ್ಯಂತರದಲ್ಲಿಯೂ ಪಕ್ಷಕ್ಕೆ ದ್ರೋಹ ಮಾಡದೆ, ತತ್ವಸಿದ್ಧಾಂತಗಳಿಗೆ ಬದ್ಧರಾಗಿ, ನಿಮ್ಮ ನಾಯಕತ್ವ ಗೌರವಿಸಿ, ನಿಮ್ಮ ಪರ ನಿಂತಿದ್ದು ನಾವೇ. ನಮ್ಮನ್ನೆ ನಿಮ್ಮ ಬೆನ್ನಿಗೆ ಚೂರಿ ಹಾಕಿದವರು ಎನ್ನಲು ಮನಸು ಹೇಗೆ ಬರುತ್ತದೆ? ಎಂದು ಯಡಿಯೂರಪ್ಪ ಮತ್ತವರ ಬೆಂಬಲಿಗರ ಆರೋಪಕ್ಕೂ ಪ್ರತ್ಯುತ್ತರ ನೀಡಿದರು.ಹಳ್ಳಿಗಳ ಮತ್ತು ನಗರದ ಅಭಿವೃದ್ಧಿಗೆ ಚಾಲನೆ ನೀಡಿದ್ದು ತಪ್ಪಾ? ನಗರದ ಯುಜಿಡಿಗೆ ಹಣ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿ ಅನುದಾನ ತಂದಿದ್ದು ತಪ್ಪಾ? ಎಂದು ತಮ್ಮ ಟೀಕಾಕಾರನ್ನು ಪ್ರಶ್ನಿಸಿದ ಸಚಿವರು, ಜನರೊಟ್ಟಿಗೆ ನಡೆಯುವ ಶಾಸಕ ಎನ್ನುವುದನ್ನು ತೋರಿಸಲು ಪಾದಯಾತ್ರೆ ಮಾಡಿದ್ದೇನೆ. ನಾವು ಸಾತ್ವಿಕರು ನಿಜ. ಅದೇ ನಮ್ಮ ದೌರ್ಬಲ್ಯವಲ್ಲ. ಜನರಿಗೆ ಅಭಿವೃದ್ಧಿಯ ಲೆಕ್ಕ ನೀಡಿದ್ದೇನೆ. ಹಾಗೆಯೇ ನಾನು ಮಾಡಿರುವ ತಪ್ಪಾದರೂ ಏನು? ಎಂದು ಜನರ ಬಳಿ ಕೇಳಿದ್ದೇನೆ. ಈ ಯಾತ್ರೆ ವಿಧಾನಸಭೆ ಚುನಾವಣೆ ಗೆಲ್ಲಲು ಮಾತ್ರವಲ್ಲ, ಲೋಕಸಭೆ ಚುನಾವಣೆ ಗೆದ್ದು, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಸಂಕಲ್ಪವೂ ಇದೆ ಎಂದರು.`ರವಿಗೆ ನಡುಕ ಹುಟ್ಟಿದೆ. ಚಿಕ್ಕಮಗಳೂರು ತೊರೆದು ಬಸವನಗುಡಿ ಕ್ಷೇತ್ರಕ್ಕೆ ಹೋಗುತ್ತಾನೆ' ಎಂಬ ಹೇಳಿಕೆಯನ್ನು ಪ್ರತಿಪಕ್ಷದವರು ನೀಡುತ್ತಿದ್ದಾರೆ. ಆದರೆ ಒಂದೇ ಒಂದು ಹಳ್ಳಿಯಲ್ಲಿ ಒಬ್ಬೇ ಒಬ್ಬರು ನಾನು ಕ್ಷೇತ್ರ ಬಿಡಲಿ ಎಂದು ಹೇಳಲಿಲ್ಲ. ಈಗ ನೀವು ನಿರ್ಧರಿಸಿ, ನಾನು ಚಿಕ್ಕಮಗಳೂರಿನಲ್ಲಿ ಇರಬೇಕೆಂದರೆ ಎರಡೂ ಕೈಗಳನ್ನು ಮೇಲೆತ್ತಿ ಆಶೀರ್ವದಿಸಿ ಎಂದು ಸಭಿಕರಲ್ಲಿ ಮನವಿ ಮಾಡಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಬೆಂಬಲಿಸಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನು ಪ್ರಕಾಶ್ ಮತನಾಡಿ,  ಕಾಂಗ್ರೆಸ್‌ನ ಲೆಕ್ಕಕೊಡಿ ಚಳ ವಳಿಗೆ ನಮ್ಮ ಕಾರ್ಯಕರ್ತರು ಅಂಜುವ ಅಗತ್ಯ ವಿಲ್ಲ. ಕಾಂಗ್ರೆಸಿಗರು ಹತ್ತಾರು ಹಗರಣಗಳನ್ನು ನಡೆಸಿ ಈ ದೇಶದ ಸಂಪನ್ಮೂಲ ಲೂಟಿ ಹೊಡೆದು ವಿದೇಶಿ ಬ್ಯಾಂಕ್‌ಗಳಲ್ಲಿಟ್ಟಿರುವ ಹಣದ ಲೆಕ್ಕ ತಪ್ಪಿದೆ. ಅದರ ಲೆಕ್ಕವನ್ನು ಅವರು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಕಾಂಗ್ರೆಸ್ ಅಧ್ಯಕ್ಷರಾಗಲು ದೇಶದಲ್ಲಿ ಯಾರೂ ಇಲ್ಲವೇ? ಇನ್ನೂ ಇಟಲಿ ಪೌರತ್ವ ಉಳಿಸಿ ಕೊಂಡಿರುವ ಸೋನಿಯಾ ಗಾಂಧಿಯವರೇ ಕಾಂಗ್ರೆಸ್ ಮುನ್ನಡೆಸಬೇಕೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೀತಿಗಳು ಈ ದೇಶಕ್ಕೆ ವಿರುದ್ಧ ವಾಗಿವೆ. ದೇಶದ ಅಖಂಡತೆಗೆ ಧಕ್ಕೆಯನ್ನುಂಟು ಮಾಡುತ್ತವೆ. ರಾಷ್ಟ್ರದ ಸಂಪನ್ಮೂಲ ಲೂಟಿ ಯಾಗುತ್ತಿದೆ ಎಂದು ಹರಿಹಾಯ್ದರು.ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ಮಾತನಾಡಿ, ಕೆಜೆಪಿ ರಾಜ್ಯ ಅಧ್ಯಕ್ಷ ಧನಂಜಯ ಕುಮಾರ್ ಅವರಿಗೆ ಬೇರೆ ಪಕ್ಷದಲ್ಲಾಗಿದ್ದರೆ ಕನಿಷ್ಠ ಪುರಸಭೆ ಸದಸ್ಯನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿ ಯಪ್ಪಗೌಡ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಮುರಡಪ್ಪ, ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್, ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಖುರೇಷಿ, ಎಪಿಎಂಸಿ ಅಧ್ಯಕ್ಷ ಬೆಳವಾಡಿ ರವೀಂದ್ರ, ಜಿ.ಪಂ. ಸದಸ್ಯ ಮುಗುಳು ವಳ್ಳಿ ನಿರಂಜನ, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಡಿ.ತಮ್ಮಯ್ಯ, ಕೋಟೆ ರಂಗನಾಥ್, ಮುಖಂಡರಾದ ಮಂಜುನಾಥ್, ವೆಂಕಟೇಶ್ ಮಾತನಾಡಿದರು. ಸಿಡಿಎ ಅಧ್ಯಕ್ಷ ಬಿ.ರಾಜಪ್ಪ, ಜಿ.ಪಂ.ಮಾಜಿ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್, ಡಿ.ಕೆ.ನಿಂಗೇಗೌಡ, ಪಕ್ಷದ ನಗರ ಘಟಕ ಅಧ್ಯಕ್ಷ ನಾರಾಯಣಗೌಡ, ಕನಕರಾಜ್ ಅರಸ್, ವರಸಿದ್ದಿ ವೇಣುಗೋಪಾಲ್, ಎಚ್.ಎಸ್.ಪುಟೇಗೌಡ, ಶ್ರೀನಿವಾಸ್ ಇನ್ನಿತರರು ವೇದಿಕೆಯಲ್ಲಿದ್ದರು.ಇದಕ್ಕೂ ಮೊದಲು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗದ ಹಳ್ಳಿಗಳ 11 ಕಡೆಗಳಲ್ಲಿ ಮೂರು ದಿನಗಳಿಂದ ನಡೆದ ಬಿಜೆಪಿ ವಿಕಾಸ ಯಾತ್ರೆ ಪಾದಯಾತ್ರಿಗಳು ಮಂಗಳವಾರ ನಗರ ಪ್ರವೇಶಿಸಿದರು. ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಒಂಬತ್ತು ತಂಡಗಳಲ್ಲಿ ಆಗಮಿಸಿದ ಪಾದಯಾತ್ರಿಗಳು ನಗರದ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಚಿವ ಸಿ.ಟಿ.ರವಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಮಾವೇಶದ ವೇದಿಕೆವರೆಗೂ ಮೆರವಣಿಗೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry