ಶನಿವಾರ, ಮಾರ್ಚ್ 6, 2021
31 °C

ಚಿಕ್ಕಮಗಳೂರು: ಚೀಲದಲ್ಲೇ ಮೊಳಕೆಯೊಡೆದ ಬಿತ್ತನೆ ಆಲೂಗಡ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಚೀಲದಲ್ಲೇ ಮೊಳಕೆಯೊಡೆದ ಬಿತ್ತನೆ ಆಲೂಗಡ್ಡೆ

ಚಿಕ್ಕಮಗಳೂರು: ಮುಂಗಾರು ಆರಂಭವಾಗಿ ತಿಂಗಳು ಕಳೆದಿದ್ದರೂ ಜಿಲ್ಲೆಯ ಬಯಲು ಪ್ರದೇಶಕ್ಕೆ ಮುಂಗಾರು ಮಳೆ ಕಾಲಿಟ್ಟಿಲ್ಲ.ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಹೋಬಳಿಗಳಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಬಂದಿದ್ದರೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅಧಿಕ ಹಣ ನೀಡಿ ಬಿತ್ತನೆಗೆ ತಂದಿಟ್ಟಿದ್ದ ಆಲೂಗೆಡ್ಡೆ ಕರಗಿಹೋಗುತ್ತಿದೆ.ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಪ್ರತಿನಿತ್ಯ ಅನ್ನದಾತ ಆಗಸವನ್ನು ದಿಟ್ಟಿಸಿ ನಿಟ್ಟಿಸಿರು ಬಿಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಮತ್ತು ಹಳೇ ಲಕ್ಯಾ ಮತ್ತು ಹೊಸಲಕ್ಯಾ ಗ್ರಾಮಗಳಲ್ಲಿ ರೈತರು ಜಮೀನಿನಲ್ಲಿ ಬೇಸಾಯ ಮಾಡಿ ವಿವಿಧ ಬೆಳೆಗಳನ್ನು ಹಾಕಲು ಮಳೆ ಎದುರು ನೋಡುತ್ತಿದ್ದಾರೆ. ಕೊಳೆತು ಹೋಗಿರುವ ಆಲೂಗೆಡ್ಡೆಯನ್ನು ಜಮೀನಿನಲ್ಲಿ ರಾಶಿಮಾಡಿ ಮುಂದೇನು ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.`ಮೂರು ಎಕರೆಯಲ್ಲಿ ಬಟಾಣಿ ಮತ್ತು ಬೀನ್ಸ್ ಬೆಳೆಯಲಾಗಿದೆ. ಸುಮಾರು 1ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದೆ. ಆದರೆ ಮಳೆ ಸರಿಯಾಗಿ ಆಗದೆ ಬೆಳೆ ಒಣಗಿ ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ~ ಎಂದು ಗಂಗಾಧರಪ್ಪ ಸಂಕಷ್ಟ ತೋಡಿಕೊಂಡರು.`ಉತ್ತಮ ಬೆಲೆ ಇದ್ದಾಗ ಎಕರೆಯಲ್ಲಿ ಬಟಾಣಿ ಹಾಕಿದ್ದೆ. ಆದರೆ ಮಳೆ ಇಲ್ಲದೆ ಖರ್ಚುಮಾಡಿರುವ ಹಣ ಕೈಗೆ ಬರುತ್ತಿಲ್ಲ~ ಎಂದು ರೈತ ಲಕ್ಕಪ್ಪ ಅಸಮಾಧಾನ ಹೊರಹಾಕಿದರು. `10 ಸಾವಿರ ರೂಪಾಯಿ ಖರ್ಚುಮಾಡಿ  ಒಂದೂವರೆ ಎಕರೆಯಲ್ಲಿ ಬಟಾಣಿ ಬಿತ್ತನೆ ಮಾಡಿದ್ದೆ.  ಮಳೆ ಕೊರತೆಯಿಂದಾಗಿ ಪೈರು ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮಳೆ ಬಂದರೆ ಉಕ್ಕೆ ಹೊಡೆದು ಬೇರೆ ಬೆಳೆ ಬೆಳೆಯಲು ಯೋಚಿಸುತ್ತಿದ್ದೇನೆ~ ಎಂದು ರೈತ ಗೋವಿಂದಪ್ಪ ನೊಂದು ನುಡಿದರು. `ಹಾಸನದಿಂದ ಬಿತ್ತನೆ ಮಾಡಲು 10 ಚೀಲ ಆಲೂಗೆಡ್ಡೆ ಖರೀದಿಸಿ ತರಲಾಗಿತ್ತು. ಮಳೆಬಾರದಿರುವುದರಿಂದ ಬಿತ್ತನೆ ಮಾಡಲಾಗಿಲ್ಲ. ಬಹುತೇಕ ಆಲೂಗೆಡ್ಡೆ ಕೊಳೆತು ಹೋಗುತ್ತಿವೆ. ಕೆಲವು ಮೊಳಕೆಯೊಡೆದಿವೆ. ಮುಂದೆ ಏನು ಮಾಡಬೇಕೆಂ ಬುದೆ ತೋಚದಂತಾಗಿದೆ~ ಎಂದು ಲಕ್ಷ್ಮಣ್ ವಿವರಿಸಿದರು.`ಬಿತ್ತನೆ ಮಾಡಲು 20ಕ್ವಿಂಟಲ್ ಆಲೂಗೆಡ್ಡೆಯನ್ನು ಹಾಸನದಿಂದ ತಂದಿದ್ದೆ. ಬಾಡಿಗೆ ಸೇರಿ ಪ್ರತಿ ಕ್ವಿಂಟಲ್‌ಗೆ 2ಸಾವಿರ ರೂಪಾಯಿ ಖರ್ಚು ಬಂದಿದೆ. ಮಳೆ ಇಲ್ಲದೆ ಬಿತ್ತನೆ ಮಾಡಲು ತಂದಿದ್ದ ಆಲೂಗೆಡ್ಡೆ ಕರಗಿಹೋಗಿದ್ದು, ತಿಪ್ಪೆಗೆ ಸುರಿಯುವುದೊಂದೆ ಬಾಕಿ. ಸುಮಾರು 25ಸಾವಿರ ರೂಪಾಯಿ ಸಾಲ ಮಾಡಿದ್ದೇನೆ. ಮುಂದೇನೆಂಬ ಚಿಂತೆ ಕಾಡ ತೊಡಗಿದೆ~ ಎನ್ನುತ್ತಾರೆ ಹೊಸಲಕ್ಯಾ ಗ್ರಾಮದ ಮಹೇಶ್.ಈ ಭಾಗದಲ್ಲಿ ಬಟಾಣಿ, ಸೋಸುವ ಕಾಳು ಬಿತ್ತನೆ ಮಾಡಲಾಗಿತ್ತು.  ಪೈರು ಸಂಪೂರ್ಣ ಸುಟ್ಟುಹೋಗಿದೆ. ಮುಂಗಾರು ಪೂರ್ವ ಮಳೆ ಎರಡು ಹದ ಬಂತು. ಜಮೀನನ್ನು ಸಿದ್ಧಮಾಡಿಕೊಂಡು ಬಿತ್ತನೆ ಬೀಜ ತಂದರೆ ಮುಂಗಾರು ಮಳೆ ಕೈಕೊಟ್ಟಿದೆ. ರೈತರು `ವಿಷ ಕುಡಿಯುವುದೊಂದೆಬಾಕಿ~ ಇದೆ ಎನ್ನುತ್ತಾರೆ ಕೆಲ ರೈತರು.   ಪ್ರತಿ ಚೀಲಕ್ಕೆ ಒಂದೂವರೆ ಸಾವಿರದಂತೆ 15ಚೀಲ ಆಲೂಗೆಡ್ಡೆ ತರಲಾಗಿದೆ. ಮಳೆ ಬಾರದೆ ನಷ್ಟ ಉಂಟಾಗಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಉಚಿತ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡಲು ಮುಂದಾಗಬೇಕೆಂದು  ಲಕ್ಯಾ ಗ್ರಾಮದ ರೈತ ಪರಮೇಶ್ ಮನವಿ.  `ಸರ್ಕಾರ ನೆರವಿಗೆ ಬರಲಿ~

ಚಿಕ್ಕಮಗಳೂರು:  ಕಳೆದ ಒಂದೂವರೆ ತಿಂಗಳ ಹಿಂದೆ ಖರೀದಿಸಿದ್ದ ಬಿತ್ತನೆ ಆಲೂಗಡ್ಡೆ ಈಗಾಗಲೇ ಸುಮಾರು ನಾಲ್ಕು ಇಂಚು ಉದ್ದ ಮೊಳಕೆ ಒಡೆದಿವೆ. ಮಳೆ ಅಭಾವದಿಂದ ಭೂಮಿಗೆ ಬಿತ್ತನೆ ಮಾಡಲಾಗದೆ ಮನೆಯಲ್ಲಿ ಇಟ್ಟಲ್ಲೇ ಆಲೂಗಡ್ಡೆ ಬತ್ತಿ, ಕೊಳೆತು ಹಾಳಾಗುತ್ತಿದೆ.

 

ಹಾಸನ ಜಿಲ್ಲೆಗೆ ತೆರಳಿ ಪಹಣಿ ನೀಡಿ ಬಿತ್ತನೆಗೆ ಆಲೂಗೆಡ್ಡೆಯನ್ನು ಹರಸಾಹಸ ಮಾಡಿ ತರಲಾಗಿತ್ತು. ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಆಲೂಗಡ್ಡೆಯನ್ನು ತರಕಾರಿ ಮಾರುಕಟ್ಟೆಗೆ ಮಾರುವ ಪರಿಸ್ಥಿತಿ ಬಂದೊದಗಿದೆ ಎಂದು ಕಸಬಾ ಹೋಬಳಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಬೀಕನಹಳ್ಳಿ ಭರತ್ ಆತಂಕ ವ್ಯಕ್ತ ಪಡಿಸಿದ್ದಾರೆ.ಮಲೆನಾಡು ಭಾಗದಲ್ಲಿಸ್ವಲ್ಪಮಟ್ಟಿಗ ಮಳೆಯಾಗುತ್ತಿದ್ದರೆ ಬಯಲುಸೀಮೆಗೆ ಇನ್ನೂ ಹದ ಮಳೆ ಬೀಳದೆ ಬಿತ್ತಿದ್ದ ಬೆಳೆ  ಸೊರಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಿತ್ತನೆ ಮಾಡಿರುವ ದ್ವಿದಳ ಧಾನ್ಯ ಮತ್ತು ಆರ್ಥಿಕ ಬೆಳೆಗಳು ಸುಟ್ಟುಹೋಗುತ್ತವೆ. ಸರ್ಕಾರ ಕೂಡಲೇ ರೈತರ ನೆರವಿಗೆ ಮುಂದಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.