ಗುರುವಾರ , ಮಾರ್ಚ್ 4, 2021
18 °C

ಚಿಕ್ಕಮಗಳೂರು: ಮತ್ತೆ ಅಬ್ಬರಿಸಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಮತ್ತೆ ಅಬ್ಬರಿಸಿದ ಮಳೆ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಕಳೆದ ಎರಡುಮೂರು ದಿನಗಳಿಂದ ಮುಂಗಾರು ಮಳೆ ಚುರುಕಾಗಿದ್ದು, ಶುಕ್ರವಾರವೂ ಮಲೆನಾಡಿನಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ.ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಕಡೂರು ತಾಲ್ಲೂಕಿನಲ್ಲಿ ಮಾತ್ರ ತುಂತುರು ಮಳೆಯಾಗುತ್ತಿದೆ.ಸಸಿಮಡಿಗಳು ಕರಗುವ ಭೀತಿಯಲ್ಲಿ ರೈತ

ಮೂಡಿಗೆರೆ:
ತಾಲ್ಲೂಕಿನಾದ್ಯಂತ ಗುರುವಾರ ಸಂಜೆಯಿಂದ ಮಳೆ ಬಿರುಸುಗೊಂಡಿದ್ದು, ಕಳೆದ ವಾರ ಮಳೆ ಬಿಡುವು ನೀಡಿದ್ದರಿಂದ ಹರಿವಿನ ಮಟ್ಟ ಕಡಿಮೆಗೊಂಡಿದ್ದ ತಾಲ್ಲೂಕಿನ ನದಿಗಳೆಲ್ಲವೂ ಈಗ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ತುಂಬಿ ಹರಿಯುತ್ತಿವೆ. ಕಳೆದ ವಾರ ಕುಂಠಿತವಾಗಿದ್ದ ಮಳೆಯಿಂದಾಗಿ ಬತ್ತದ ಗದ್ದೆಗಳೆಲ್ಲವೂ ನಾಟಿಗೆ ಸಿದ್ಧವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಟಿ ಕೆಲಸಕ್ಕೆ ಅಡ್ಡಿಯುಂಟಾಗುತ್ತಿದೆ.

ಹೊರಟ್ಟಿ, ಕೊಟ್ರಕೆರೆ, ಗುತ್ತಿ, ತ್ರಿಪುರ, ಉಗ್ಗೆಹಳ್ಳಿ ಗದ್ದೆ ಬಯಲುಗಳು ನಾಲ್ಕು ದಿನಗಳಿಂದ ನೀರಿನಿಂದ ಆವೃತ್ತವಾಗಿದ್ದು, ಬತ್ತದ ಬೆಳೆಗಾಗಿ ಗದ್ದೆ ಬಯಲಿನಲ್ಲಿ ನಿರ್ಮಿಸಿರುವ ಸಸಿಮಡಿಗಳು ನೀರಿನೀಮದ ಮುಳುಗಿದ್ದು, ಸಸಿ ಕರಗುವ ಭೀತಿ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಕಾಳು ಮೆಣಸಿಗೆ ಕೊಳೆರೋಗ ಕಾಣಿಸಿಕೊಳ್ಳುತ್ತಿದ್ದು, ಔಷಧಿ ಸಿಂಪಡಣೆಗೂ ಮಳೆ ಬಿಡುವು ನೀಡುತ್ತಿಲ್ಲ. ಗದ್ದೆ ಬಯಲಿನಲ್ಲಿ ಶೀತ ಹೆಚ್ಚಳವಾಗಿದ್ದು, ಶುಂಠಿ ಬೆಳೆಗೆ ಕೊಳೆರೋಗ ಹರಡುವ ಅಪಾಯ ಸೃಷ್ಟಿಯಾಗಿದೆ.

ಹೇಮಾವತಿ ನದಿ ತೀರ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಹಮಾವತಿ ನದಿಯ ನೀರಿನ ಹರಿಯುವ ಮಟ್ಟ ಹೆಚ್ಚಳವಾಗಿದ್ದು, ಉಗ್ಗೆಹಳ್ಳಿ ಗ್ರಾಮದಲ್ಲಿ ಗದ್ದೆಬಯಲಿನವರೆಗೂ ನೀರಿನ ಮಟ್ಟ ಏರಿಕೆ ಕಂಡಿದೆ.ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯ ವಿಪತ್ತನ್ನು ಎದುರಿಸಲು ತಾಲ್ಲೂಕು ಆಡಳಿತ ಸಿದ್ಧವಾಗಿದ್ದು, ತುರ್ತು ಕಾರ್ಯಚರಣೆಗಾಗಿ ಈಗಾಗಲೇ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮಳೆಯಿಂದಾಗಬಹುದಾದ ತುರ್ತು ಸಮಸ್ಯೆಗಳ ಬಗ್ಗೆ ಮಾಹಿತಿ ರವಾನೆಗಾಗಿ ಈಗಾಗಲೇ ತುರ್ತು ದೂರವಾಣಿ ಸಂಖ್ಯೆಯನ್ನು ಪಡೆಯಲಾಗಿದ್ದು, 08263 220204 ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಈ ದೂರವಾಣಿ ಸಂಖ್ಯೆಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಶನಿವಾರ ತಾಲ್ಲೂಕಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಎಂದು ತಹಶೀಲ್ದಾರ್ ಎ.ವಿ.ರುದ್ರಪ್ಪಾಜಿ ರಾವ್ ತಿಳಿಸಿದ್ದಾರೆ.ಕುದುರೆಮುಖ, ಕಳಸದಲ್ಲಿ ಮುಸಲಧಾರೆ

ಕಳಸ:
ಹೋಬಳಿಯಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿದಿದೆ. ಗುರುವಾರ ದಿನವಿಡೀ ಮಳೆಯಾಗಿತ್ತು. ಶುಕ್ರವಾರ ಕೂಡ ಬೆಳಗ್ಗಿನಿಂದಲೇ ಸುರಿದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.ಸತತ ಮಳೆಯಿಂದಾಗಿ ಹೋಬಳಿಯ ಎಲ್ಲ ಹಳ್ಳಗಳು ತುಂಬಿ ಹರಿದವು. ಕೆಂಪಾದ ನೀರು ತುಂಬಿದ್ದ ಭದ್ರಾ ನದಿಯಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ಏರಿತು. ತೋಟ, ಗದ್ದೆಗಳಲ್ಲಿ ಕೃಷಿ ಕಾರ್ಯವು ಮಳೆಯಿಂದಾಗಿ ತಾತ್ಕಾಲಿಕ ಹಿನ್ನಡೆ ಪಡೆದಿವೆ.ರಸ್ತೆ ಬದಿಯ ಚರಂಡಿಗಳಲೆಲ್ಲಾ ನೀರು ತುಂಬಿ ರಸ್ತೆಗಳ ಮೇಲೆಯೇ ನೀರು ಹರಿಯುತ್ತಿದ್ದು ರಸ್ತೆಗಳಿಗೆ ಹಾನಿ ಖಚಿತವಾಗಿದೆ. ಕಳಸದಲ್ಲಿ ಮಳೆ ಪ್ರಮಾಣ ಈಗಾಗಲೇ 70 ಇಂಚು ದಾಟಿದೆ. ಸಂಸೆ ಗ್ರಾಮದಲ್ಲಿ ಈ ಪ್ರಮಾಣ 95 ಇಂಚು ಮಳೆ ಆಗಿದೆ. ಕುದುರೆಮುಖದಲ್ಲಿ ಈಗಾಗಲೇ 120 ಇಂಚಿಗಿಂತ ಹೆಚ್ಚು ಮಳೆ ಆಗಿದೆ.ಶೃಂಗೇರಿ: ತುಂಗೆಯಲ್ಲಿ ಪ್ರವಾಹ

ಶೃಂಗೇರಿ
: ಪುನರ್ವಸು ಮಳೆಯ ಕೊನೆಯ ದಿನವಾದ ಶುಕ್ರವಾರ ತಾಲೂಕಿನಾದ್ಯಾಂತ ಸತತ ಮಳೆ ಸುರಿದಿದ್ದು, ತುಂಗಾ ನದಿಯಲ್ಲಿ ಪ್ರವಾಹದ ಉಂಟಾಗಿದೆ. ತಾಲ್ಲೂಕಿನಾದ್ಯಂತ ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭಗೊಂಡ ಮಳೆ ಇದುವರೆಗೂ ಎಡೆಬಿಡದೆ ಸುರಿಯುತ್ತಿದ್ದು, ಇತ್ತೀಚಿನ ವರ್ಷದಲ್ಲೇ ಈ ಬಾರಿ ಮಳೆಯ ಪ್ರಮಾಣ ಅತ್ಯಧಿಕವಾಗಿ ಕಂಡುಬಂದಿದೆ. ಇದರ ಪರಿಣಾಮ ತುಂಗಾ ನದಿ ತುಂಬಿ ಹರಿಯುತ್ತಲೇ ಇದ್ದು, ತುಸು ಮಳೆ ಹೆಚ್ಚಾದರೂ ನೀರಿನ ಮಟ್ಟ ಪ್ರವಾಹದ ಸ್ಥಿತಿ ತಲುಪುತ್ತಿದೆ.ತಾಲ್ಲೂಕಿನ ಕೆರೆಕಟ್ಟೆ, ನೆಮ್ಮೋರ್, ಕಿಗ್ಗ ಭಾಗಗಳಲ್ಲಿ ಶುಕ್ರವಾರ ದಿನವಿಡೀ ಮಳೆ ಸುರಿದ ಪರಿಣಾಮ ಶಾರದಾ ಪೀಠದ ಕಪ್ಪೆ ಶಂಕರ ನೀರಿನಲ್ಲಿ ಮುಳುಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಸಾಮಾನ್ಯ ಜನ ಜೀವನ ಅಸ್ತವ್ಯಸ್ತವಾಗಿದೆ.ನದಿಯ ಮಟ್ಟ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವ ಸಂಭವವಿರುವುದರಿಂದ ಗಾಂಧಿ ಮೈದಾನ ಮತ್ತು ಕುರಬರಕೇರಿಯಲ್ಲಿರುವ ಅಂಗಡಿ ಮಾಲಿಕರಿಗೆ ಸ್ಥಳಾಂತರ ಮಾಡಲು ಸೂಚಿಸಲಾಗಿದೆ.ನರಸಿಂಹರಾಜಪುರ: ಭಾರಿ ಮಳೆ

ನರಸಿಂಹರಾಜಪುರ:
ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಭಾರಿ ಪ್ರಮಾಣದಲ್ಲಿ ಮಳೆಸುರಿಯಲು ಪ್ರಾರಂಭಿಸಿದ್ದು ಶುಕ್ರವಾರವೂ ಸಹ ಮುಂದುವರೆದಿದೆ. ಶುಕ್ರವಾರ ಬೆಳಿಗ್ಗೆಯವರೆಗೆ 26.2 ಮಿ.ಮೀ ಮಳೆಯಾಗಿದೆ.ಭಾರಿ ಪ್ರಮಾಣದಲ್ಲಿ ಮಳೆಸುರಿಯುತ್ತಿರುವುದರಿಂದ ತಾಲ್ಲೂಕಿನ ಕಾನೂರು ಗ್ರಾಮಕ್ಕೆ ಹೋಗುವ ಕುದುರೆಗುಂಡಿಯ ಬಳಿ ಹಳ್ಳ ತುಂಬಿ ಹರಿದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಾರೆಕೊಪ್ಪ ಹಾಗೂ ಶಂಕರಾಪುರ ಗ್ರಾಮದ ವ್ಯಾಪ್ತಯಲ್ಲಿನ ಹಳ್ಳಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು ಇದೇ ರೀತಿ ಮಳೆ ಮುಂದುವರೆದರೆ ರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಗದ್ದೆಗಳೆಲ್ಲವೂ ಜಲಾವೃವಾಗಿದ್ದು ಭಾರಿ ಪ್ರಮಾಣದಲ್ಲಿ ನೀರು ಹರಿದು ಭದ್ರಾಹಿನ್ನೀರಿಗೆ ಸೇರುತ್ತಿದೆ. ಶುಕ್ರವಾರ ಸಂಜೆಯಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.ತರೀಕೆರೆ: ಎಡೆಬಿಡದ ಮಳೆ

ತರೀಕೆರೆ
: ಪಟ್ಟಣದಲ್ಲಿ ಸತತ ಮೂರು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂತೆ ದಿನವಾದ ಶುಕ್ರವಾರ ಮಳೆಯ ಆರ್ಭಟ ಹೆಚ್ಚಾಗಿತ್ತು. ಬಸ್ ನಿಲ್ದಾಣದ ಬಳಿ ಕೆಸರು ತುಂಬಿ ನಾಗರಿಕರು ಪರದಾಡುವಂತಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.