ಚಿಕ್ಕವಂಕಲಕುಂಟಿ ಹಾಲ ಓಕಳಿಗಿಲ್ಲ ಸಾಟಿ

7

ಚಿಕ್ಕವಂಕಲಕುಂಟಿ ಹಾಲ ಓಕಳಿಗಿಲ್ಲ ಸಾಟಿ

Published:
Updated:
ಚಿಕ್ಕವಂಕಲಕುಂಟಿ ಹಾಲ ಓಕಳಿಗಿಲ್ಲ ಸಾಟಿ

ಹಬ್ಬ-ಹರಿದಿನಗಳ ವೈಭವದ ಆಚರಣೆ ಆಗಿರಲಿ,  ರಥೋತ್ಸವ, ಜಾತ್ರೆಗಳ ಸಡಗರವೇ ಇರಲಿ, ಉತ್ತರ ಕರ್ನಾಟಕ ಎಂದಾಕ್ಷಣ ಇದು ಎಲ್ಲರ ಕಣ್ಣ ಮುಂದೆ ಬರುವುದು ಸಹಜ. ಇವುಗಳ ಸಾಲಿಗೆ ಸೇರಿದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕವಂಕಲಕುಂಟಿಯ ಮಾರುತೇಶ್ವರ ಜಾತ್ರೆ. ಹಾಲ ಓಕಳಿಯ ವೈಭವೋಪೇತ ಯಾತ್ರೆ ಕೂಡ ಇದು.ಮಾರ್ಚ್ 4ರ ಸಪ್ತಮಿಯ ದಿನ ಇಲ್ಲಿನ ಗೊಲ್ಲರ ಜನಾಂಗದಿಂದ ನಡೆಯುತ್ತದೆ ಈ ಹಾಲ ಓಕಳಿ, ನಂತರ ನಡೆಯುವುದೇ ಸಂಭ್ರಮದ ಮಹಾರಥೋತ್ಸವ. ಇವುಗಳ ಜೊತೆ ಸಾಮೂಹಿಕ ಮದುವೆ, ಅನ್ನ ಸಂತರ್ಪಣೆ ಆಚರಣೆ, ಜೊತೆಗೆ ಕುಸ್ತಿಯಂತಹ ಆಟೋಟ. ಔಷಧೀಯ ಗುಣವುಳ್ಳ ಹಾಲು ದೇಹಕ್ಕೆ ತಾಕಿದರೆ ಹಲವು ಸಮಸ್ಯೆಗಳು ವಾಸಿಯಾಗುತ್ತವೆ ಎಂಬ ವೈದ್ಯಕೀಯ ಕಾರಣವೂ ಈ ಓಕುಳಿಯ ವಿಶೇಷತೆ.ಐತಿಹಾಸಿಕ ಹಿನ್ನೆಲೆ

ಈ ವಿಶಿಷ್ಟ ಆಚರಣೆಗೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಈ ಉತ್ಸವದ ಕೇಂದ್ರ ಬಿಂದು ಇಲ್ಲಿನ ಹನುಂತದೇವರು. ಈ ಭಾಗದಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಏಕೈಕ ಆರಾಧ್ಯ ದೇವ ಈ ಮಾರುತಿ. ಬಹಳ ವರ್ಷಗಳ ಹಿಂದೆ ಈ ಭಾಗದ ಜನರಿಗೆ ಮತ್ತು ದನ ಕರುಗಳಿಗೆ ಕಾಡಾಟ (ರೋಗಗಳು) ಬಂದು ತೀವ್ರವಾದ ಪ್ರಾಣ ಹಾನಿಯಾಗಿತ್ತು.ಹಾಲಿನ ಓಕುಳಿ ನಡೆದರೆ ರೋಗಗಳು ವಾಸಿಯಾಗುತ್ತವೆ ಎಂಬ ಅನುಭವಸ್ಥರ ಹೇಳಿಕೆಯಂತೆ ಅಂದಿನಿಂದ ಈ ಉತ್ಸವ ಆರಂಭವಾಯಿತು. ಈ ಆಚರಣೆಯಿಂದ ಊರ ಜನರಿಗೆ, ಜನ ಜಾನುವಾರುಗಳಿಗೆ ಶುಭವಾದ ಕಾರಣದಿಂದ ಇದನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಐತಿಹಾಸಿಕ ಹಿನ್ನೆಲೆ, ಹಿರಿಯರ ಮಾತು.ಸುಮಾರು ಇನ್ನೂರು ವರ್ಷಗಳ ಹಿಂದೆ ವ್ಯಾಸರಾಯರು ಈ ದೇವಾಲಯವನು ಸ್ಥಾಪನೆ ಮಾಡಿದ್ದಾರೆ. ಕೈಯಲ್ಲಿ ಗರಗಸ ಹಿಡಿದ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಕುರುಹುಗಳೂ ಇವೆ. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಭಾರತ ಹುಣ್ಣಿಮೆಯಿಂದ ಸಪ್ತಮಿಯವರೆಗೆ ಜಾತ್ರೆಯನ್ನು ಏಳು ದಿನಗಳವರೆಗೆ ಆಚರಣೆ ನಡೆಯುತ್ತಿದೆ.ಮಾರ್ಚ್ 3ರಂದು ಮಾರುತೇಶ್ವರ ಪೂಜಾರಿಯಿಂದ ನಡೆಯುವ ಹೇಳಿಕೆಯಿಂದ ಜಾತ್ರೆಯ ಉತ್ಸವ ಆರಂಭ. 4ರಂದು ಹಾಲಿನ ಓಕಳಿ, ನಂತರ ಮಹಾರಥೋತ್ಸವ. ಇಂಥ ದೇವಸ್ಥಾನ ವಿರುವುದು ಕರ್ನಾಟಕದಲ್ಲಿ ಎರಡು ಕಡೆ ಮಾತ್ರ. ಈ ಆಂಜನೇಯನ ದರ್ಶನ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತವೆ ಎನ್ನುವುದು ಈ ದೇವರ ಭಕ್ತರ ಅಂಬೋಣ.ಅಂದು ಜನರು ಹಸು ಮತ್ತು ಕುರಿ, ಮೇಕೆಗಳಿಂದ ಸಾವಿರಾರು ಲೀಟರ್ ಹಾಲನ್ನು ಸಂಗ್ರಹಿಸಿರುತ್ತಾರೆ. ತಾವು ಸಂಗ್ರಹಿಸಿದ ಹಾಲನ್ನು ದೊಡ್ಡ ಮಡಿಕೆಯಲ್ಲಿ ತಂದು ಜಾತ್ರೆಗೆ ಬಂದಿರು ಭಕ್ತರ ಮೇಲೆ ಬಣ್ಣದ ರೀತಿಯಲ್ಲಿ ಹಾಲನ್ನು ಎರಚಿ ಹಾಲೊಕಳಿ ಆಡುವುದರೊಂದಿಗೆ ರಥೋತ್ಸವಕ್ಕೆ ಸಿದ್ಧತೆ ನಡೆಯುತ್ತದೆ. ಇದು ಈ ಜಾತ್ರೆಯ ವಿಶೇಷ. ಕೊಪ್ಪಳ ಜಿಲ್ಲೆಯಲ್ಲಿ ಎರಡನೆಯ ದೊಡ್ಡ ಜಾತ್ರೆ ಇದಾಗಿರುವುದರಿಂದ ಲಕ್ಷಾನುಗಟ್ಟಲೆ ಭಕ್ತರು ಸೇರುವುದು ಸಹ ನೋಡುಗರಿಗೆ ಮುದ ನೀಡುತ್ತದೆ.ಹೀಗೆ ಬನ್ನಿ

ಏಳು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಕೊಪ್ಪಳದಿಂದ ಬಸ್ ಮುಖಾಂತರ ಕೇವಲ 40 ಕಿ.ಮೀ. ಹಾಗೂ ರೈಲು ಮುಖಾಂತರ ಬರುವುದಾದರೆ ಗಿಣಗೇರಿಯಿಂದ 30 ಕಿ.ಮೀ ದೂರವಿದೆ ಈ ಸ್ಥಳ. ಚಿತ್ರದುರ್ಗ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 13 ರಿಂದ ಕೇವಲ 2 ಕಿ.ಮೀ ಅಂತರದಲ್ಲಿದೆ ಚಿಕ್ಕವಂಕಲಕುಂಟಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry