ಗುರುವಾರ , ಮೇ 13, 2021
17 °C

ಚಿಕ್ಕೋಡಿಯಲ್ಲಿ ವಿಟಿಯು ಕೇಂದ್ರ: ದೇಶಪಾಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಅಥವಾ ಸಂಶೋಧನಾ ಕೇಂದ್ರವನ್ನು ಚಿಕ್ಕೋಡಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭರವಸೆ ನೀಡಿದರು.ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ `ಸೌಥ್ ಎಂಡ್ ಬ್ಲಾಕ್' ಕಟ್ಟಡಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇ ರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.`ಗಡಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ವಿಟಿಯು ಸ್ನಾತಕೋತ್ತರ ಕೇಂದ್ರ ಸ್ಥಾಪಿಸುವಂತೆ ಸಚಿವ ಪ್ರಕಾಶ ಹುಕ್ಕೇರಿ ಪ್ರಸ್ತಾವ ಸಲ್ಲಿಸಿದ್ದಾರೆ. ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನಾ ಕೇಂದ್ರಗಳ ಪೈಕಿ ಯಾವುದನ್ನು ಚಿಕ್ಕೋಡಿಯಲ್ಲಿ ಸ್ಥಾಪಿಸಿದರೆ ಒಳಿತು. ಇವುಗಳಿಗೆ ಏನೇನು ಸೌಲಭ್ಯ ಅಗತ್ಯವಿದೆ ಎಂಬ ಕುರಿತು ಒಂದು ತಿಂಗಳೊಳಗೆ ವರದಿಯನ್ನು ಕಳುಹಿಸಿಕೊಡಬೇಕು' ಎಂದು ಸಚಿವರು ಕುಲಪತಿಗಳಿಗೆ ಸೂಚಿಸಿದರು.`ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಅಂತರ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಜ್ಜು ಗೊಳಿಸಬೇಕು. ಗುಣಮಟ್ಟದ ಎಂಜಿನಿ ಯರ್‌ಗಳನ್ನು ಸೃಷ್ಟಿಸುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿಸ ಬೇಕು' ಎಂದು ಸಲಹೆ ನೀಡಿದರು.`ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಪಠ್ಯವು ಉದ್ಯಮಗಳಿಗೆ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಹೀಗಾಗಿ ಉದ್ಯಮಗಳಿಗೆ ಯಾವ ರೀತಿಯ ಶಿಕ್ಷಣ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ಪಠ್ಯವನ್ನು ಸಿದ್ಧಪಡಿಸಬೇಕಾಗಿದೆ' ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು.`ವಿಶ್ವವಿದ್ಯಾಲಯಗಳಲ್ಲಿ ಸಂಶೋ ಧನೆಗೆ ಒತ್ತು ನೀಡಬೇಕಾಗಿದೆ. ವಿಟಿಯು ಸಂಶೋಧನಾ ನಿಧಿಯನ್ನಾಗಿ 5 ಕೋಟಿ ರೂಪಾಯಿ ಸಂಗ್ರಹಿಸಿದೆ. ಎಂಜಿನಿಯ ರಿಂಗ್ ಹಾಗೂ ಡಿಪ್ಲೊಮಾ ಕಾಲೇಜು ಗಳಲ್ಲಿನ ಅತ್ಯುತ್ತಮ ಸಂಶೋಧನೆಗೆ ಪ್ರೋತ್ಸಾಹ ನೀಡಲು ಈ ಹಣ ಬಳಕೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ' ಎಂದು ಹರ್ಷ ವ್ಯಕ್ತಪಡಿಸಿದರು.`ಮೂಲಸೌಲಭ್ಯದ ಜೊತೆಗೆ ಗುಣಮಟ್ಟದ ಮಾನವ ಸಂಪನ್ಮೂಲ ಇದ್ದಾಗ ದೇಶವು ಶೀಘ್ರವಾಗಿ ಪ್ರಗತಿ ಹೊಂದಲು ಸಾಧ್ಯವಿದೆ. ಚೀನಾ ನಂತರ ಭಾರತವು ವೇಗವಾಗಿ ಪ್ರಗತಿ ಹೊಂದುತ್ತಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು, ಉತ್ತಮ ಚಾರಿತ್ರ್ಯ ನಿರ್ಮಿಸಿಕೊಂಡು ದೇಶವನ್ನು ಮುನ್ನಡೆಸಬೇಕು' ಎಂದು ಹೇಳಿದರು.ಸಂಸದ ಸುರೇಶ ಅಂಗಡಿ, `ಸಾಮಾನ್ಯ ಜನರಿಗೆ ಸಂಬಂಧಿಸಿದ ಆರೋಗ್ಯ, ಕುಡಿಯುವ ನೀರಿನ ಕುರಿತು ಎಂಜಿನಿಯರ್‌ಗಳು ಸಂಶೋಧನೆ ಮಾಡ ಬೇಕು. ಶುದ್ಧ ಕುಡಿಯುವ ನೀರನ್ನು ಕೊಡುವ ಜವಾಬ್ದಾರಿ ಎಂಜಿನಿಯರ್‌ಗಳ ಮೇಲಿದೆ' ಎಂದರು.ಶಾಸಕ ಸಂಭಾಜಿ ಪಾಟೀಲ, `ಗಡಿ ವಿವಾದದ ಬಗ್ಗೆ ಪದೇ ಪದೇ ಉಲ್ಲೇಖಿಸದೇ ಇರುವುದು ಒಳಿತು. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಹೀಗಾಗಿ ಗಡಿ ವಿವಾದಕ್ಕೆ ಪೂರ್ಣವಿರಾಮ ಹಾಡಬೇಕು' ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ, ವಿಟಿಯುವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಹೀಗಾಗಿ ಇದರ ಪಕ್ಕದಲ್ಲಿ ಇರುವ 100 ಎಕರೆ ಸರ್ಕಾರಿ ಭೂಮಿ ಯನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕು' ಎಂದು ಪ್ರಸ್ತಾವ ಸಲ್ಲಿಸಿದರು.ವಿಟಿಯು ವಾರ್ತಾ ಪತ್ರಿಕೆಯನ್ನು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಬಿಡುಗಡೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಟಿಯು ಪರಿಚಯ ಪತ್ರಿಕೆ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಸಂಭಾಜಿ ಪಾಟೀಲ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಜನೀಶ ಗೋಯೆಲ್, ಕುಲಸಚಿವ ಡಾ. ಕೆ.ಇ. ಪ್ರಕಾಶ ಹಾಜರಿದ್ದರು.ಪ್ರತಿಭಟನೆ ಇಂದು

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟ ಇದೇ 19ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಆಗಮಿಸಬೇಕು ಎಂದು ಜಿಲ್ಲಾ ಅಧ್ಯಕ್ಷ ಮಡಿವಾಳಪ್ಪ ಅಸುಂಡಿ ತಿಳಿಸಿದ್ದಾರೆ.ಸಹಕಾರಿ ಸಂಸ್ಥೆ ಉದ್ಘಾಟನೆ

ಸಂಗಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಉದ್ಘಾಟನೆ ಇದೇ 21ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಕಚೇರಿ ರಸ್ತೆಯಲ್ಲಿ ನಡೆಯಲಿದೆ. ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸ್ಥಾಪಕ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.