ಬುಧವಾರ, ನವೆಂಬರ್ 20, 2019
28 °C

ಚಿಕ್ಕೋಡಿ ಬಸ್‌ನಲ್ಲಿ `ಹುಸಿ ಬಾಂಬ್'

Published:
Updated:

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪತ್ತೆಯಾದ ಟೈಂ ಬಾಂಬ್ ಹೋಲುವ ವಸ್ತುವೊಂದು ರಾತ್ರಿಯಿಡೀ ಆತಂಕ ಸೃಷ್ಟಿಸಿದ ಘಟನೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ಸಂಸ್ಥೆಯ ಚಿಕ್ಕೋಡಿ ಘಟಕಕ್ಕೆ ಸೇರಿದ ಬಸ್ಸಿನಲ್ಲಿ ಈ ಹುಸಿ ಬಾಂಬ್ ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಪತ್ತೆಯಾಗಿದೆ. ಬೆಳಗಾವಿಯಿಂದ ಸಂಜೆ 4.15ಕ್ಕೆ ಹೊರಟ ಈ ಬಸ್ ಸಂಜೆ ಸುಮಾರು 6.15ಕ್ಕೆ ಚಿಕ್ಕೋಡಿ ಬಸ್‌ನಿಲ್ದಾಣ ತಲುಪಿದೆ.ಬಸ್ಸಿನ ದಿನದ ಸಂಚಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಡಿಪೋದಲ್ಲಿ ನಿಲ್ಲಿಸಿ, ಅಧಿಕಾರಿಗಳಿಗೆ ವರದಿ ನೀಡಿ, ಮನೆಗೆ ತೆರಳಿದ್ದಾರೆ. ನಂತರ ರಾತ್ರಿ ಸಂಸ್ಥೆಯ ಸಿಬ್ಬಂದಿಯೊಬ್ಬರು ಈ ಬಸ್ಸನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನ ಸೀಟ್‌ನ  ಕೆಳಗೆ ಪ್ಲಾಸ್ಟಿಕ್ ಚೀಲ ದೊರೆತಿದೆ. ಕುತೂಹಲದಿಂದ ಅದನ್ನು ತೆಗೆದು ನೋಡಿದಾಗ ಅದರಲ್ಲಿದ್ದ ವಸ್ತುವಿನೊಳಗಿಂದ ಬೆಳಕು ಮಿನುಗುತ್ತಿರುವುದು ಕಂಡಿದೆ.

ಇದರಿಂದ ಗಾಬರಿಗೊಂಡ ಅವರು ಆ ವಸ್ತುವನ್ನು ಮೇಲಧಿಕಾರಿಗಳಿಗೆ ತೋರಿಸಿದ್ದಾರೆ. ಪರಿಶೀಲಿಸಿದ ಸಂಸ್ಥೆಯ ಅಧಿಕಾರಿಗಳು ಇದು ಬಾಂಬ್ ಇರಬಹುದೆಂದು ಊಹಿಸಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಬೆಳಗಾವಿಯಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಬಂದು ಪರಿಶೀಲಿಸಿದಾಗ ಅದೊಂದು ಹುಸಿ ಬಾಂಬ್ ಎಂದು ಗೊತ್ತಾಯಿತು. ಆ ವಸ್ತುವಿನಲ್ಲಿ ಪ್ಲಾಸ್ಟಿಕ್ ಪೈಪ್ ಇದ್ದು, ಅದರೊಳಗೆ ಮೇಣದ ಬತ್ತಿ ಮತ್ತು ವೈರ್‌ಗಳನ್ನು ಅಳವಡಿಸಲಾಗಿದ್ದು, ಬ್ಯಾಟರಿಗೆ ಬಳಸುವ ಪೆನ್ಸಿಲ್ ಸೆಲ್‌ಗಳಿದ್ದವು.

ಪ್ರತಿಕ್ರಿಯಿಸಿ (+)