ಬುಧವಾರ, ಮಾರ್ಚ್ 3, 2021
23 °C
ಮಾರುಕಟ್ಟೆ ಮಾತು

ಚಿಕ್ಕ ವಯಸ್ಸಿನಲ್ಲಿ ಉಳಿತಾಯದಿಂದ ಹೆಚ್ಚು ಲಾಭ!

– ಮನೋಜ್‌ ಜೈನ್‌ (ಶ್ರೀರಾಂ ಲೈಫ್‌ ಇನ್ಶುರನ್ಸ್‌ ವ್ಯವಸ್ಥಾಪಕ ನಿರ್ದೇಶಕ) Updated:

ಅಕ್ಷರ ಗಾತ್ರ : | |

ಚಿಕ್ಕ ವಯಸ್ಸಿನಲ್ಲಿ ಉಳಿತಾಯದಿಂದ ಹೆಚ್ಚು ಲಾಭ!

‘ಎಲ್ಲವನ್ನೂ ಬೇಗ ಆರಂಭಿಸಿದರೆ ಜೀವನದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬಹುದು’ ಎನ್ನುವ ಮಾತಿದೆ. ಇದು ಜೀವ ವಿಮೆ ವಿಷಯಕ್ಕೆ ಹೆಚ್ಚು ಅನ್ವಯವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಜೀವ ವಿಮೆಗೆ ಒಳಗಾದರೆ ಕಡಿಮೆ ಮೊತ್ತದ ಪ್ರಿಮಿಯಂಗಳನ್ನು ಪಾವತಿಸುವ ಮೂಲಕ ಹೆಚ್ಚಿನ ಉಳಿತಾಯ ಮತ್ತು ಲಾಭ ಪಡೆಯಬಹುದು.ಜೀವ ವಿಮೆಯ ಪಾಲಿಸಿಗಳು ವೈಯಕ್ತಿಕ ಹಣಕಾಸಿನ ಯೋಜನೆಯ ಭಾಗವಾಗಿವೆ. ಇಂದು ಬಹುಪಾಲು ಮಂದಿ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಅದರಲ್ಲೂ ಆದಾಯ ತೆರಿಗೆ ಉಳಿತಾಯಕ್ಕೂ ಜೀವ ವಿಮೆ ಅಗತ್ಯ ಎನ್ನುವಂತಾಗಿದೆ. ಹೀಗಾಗಿ ವಯಸ್ಸಿನ ತಕ್ಕಂತೆ ವಿಮಾ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.ಪ್ರಿಮಿಯಂ ಪಾವತಿಸುವುದು ವಿವಿಧ ಪಾಲಿಸಿಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾವಿನ ನಂತರ ದೊರೆಯುವ ಮೊತ್ತ, ವಯಸ್ಸು, ಆರೋಗ್ಯ ಮುಂತಾದ ಮಾನದಂಡಗಳ ಮೇಲೆ ಪ್ರಿಮಿಯಂ ಪಾವತಿಸುವ ವರ್ಷವನ್ನು ನಿಗದಿಪಡಿಸಲಾಗುತ್ತದೆ.ಕಡಿಮೆ ವಯಸ್ಸಿನವರ ಪಾಲಿಸಿಗಳಿಗೆ ಪ್ರಿಮಿಯಂ ಮೊತ್ತ ಕಡಿಮೆ. ಒಂದು ಪಾಲಿಸಿಯ ಅವಧಿ ಮತ್ತು ಒಟ್ಟಾರೆ  ವಿಮೆ ಮೊತ್ತ ಆಧರಿಸಿ ಹೇಳುವುದಾದರೆ, ಹಿರಿಯ ನಾಗರಿಕರಿಗೆ ಹೋಲಿಸಿದರೆ ಯುವಕರಿಗೆ ಅತಿ ಕಡಿಮೆ ಪ್ರಿಮಿಯಂ ನಿಗದಿಪಡಿಸಲಾಗುತ್ತದೆ. ಯುವಕರು ಪಡೆಯುವ ಪಾಲಿಸಿಗಳಿಗೆ ಇಡೀ ಅವಧಿಯ ಉದ್ದಕ್ಕೂ ಕಡಿಮೆ ಪ್ರಿಮಿಯಂ ಇರುತ್ತದೆ.ವಯಸ್ಸು ಹೆಚ್ಚಾದಂತೆ ಆರೋಗ್ಯದಲ್ಲಿ ಏರುಪೇರುಗಳಾಗುತ್ತವೆ. ಜೀವನಶೈಲಿಯೂ ಇದಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಾಮಾನ್ಯ ದರಗಳಲ್ಲೇ ಜೀವ ವಿಮಾ ಪಾಲಿಸಿಗಳು ದೊರೆಯುವುದು ಕಷ್ಟವಾಗುತ್ತದೆ.ಆದ್ದರಿಂದ, ಸಾಧ್ಯವಾದಷ್ಟು ಚಿಕ್ಕವಯಸ್ಸಿನಲ್ಲೇ ವಿಮಾ ಪಾಲಿಸಿಗಳನ್ನು ಖರೀದಿಸುವುದು ಉತ್ತಮ ಉಳಿತಾಯಕ್ಕೆ ರಹದಾರಿಯಾಗಿದೆ. ಭವಿಷ್ಯದಲ್ಲಿ ಆರೋಗ ಪರಿಸ್ಥಿತಿ ಹದಗೆಟ್ಟರೂ ಪ್ರಿಮಿಯಂ ಪಾವತಿಸುವ ದರಗಳ ಮೇಲೆ ಯಾವುದೇ ರೀತಿಯಲ್ಲೂ ಬದಲಾವಣೆಯಾಗುವುದಿಲ್ಲ. ಪಾಲಿಸಿಗಳನ್ನು ಖರೀದಿಸಿದ ಸಂದರ್ಭದಲ್ಲಿ ನಿಗದಿಪಡಿಸಿದ್ದ ಪ್ರಿಮಿಯಂ ದರವನ್ನೇ ಯೋಜನಾ ಅವಧಿಯ ಕೊನೆಯವರೆಗೂ ಪಾವತಿಸಬೇಕಾಗುತ್ತದೆ. ಹೀಗಾಗಿ ಇದು ಯುವ ಜನರಿಗೆ ಹೆಚ್ಚು ಅನುಕೂಲ.ಜೀವ ವಿಮಾ ಪಾಲಿಸಿಗಳನ್ನು ಚಿಕ್ಕ ವಯಸ್ಸಿನಲ್ಲೇ ಖರೀದಿಸಬೇಕು ಮತ್ತು ಸಾಧ್ಯವಾದಷ್ಟು ದೀರ್ಘಾವಧಿಯವರಿಗೆ ಇರಬೇಕು ಎನ್ನುವ ಸೂತ್ರ ಉಳಿತಾಯದ ಮಂತ್ರದಲ್ಲಿರಬೇಕು. ಇದರಿಂದ ಇನ್ನೂ ಒಂದು ಅನುಕೂಲವಿದೆ. ಪಾಲಿಸಿ ಅವಧಿ ಮುಕ್ತಾಯವಾದ ನಂತರ ಹೆಚ್ಚಿನ ಮೊತ್ತವೂ ದೊರೆಯುತ್ತದೆ.ಷೇರುಗಳಲ್ಲಿ ಹೂಡಿಕೆ

ಕೆಲ ವಿಮೆ ಸಂಸ್ಥೆಗಳು ವಿಮೆ ಸೌಲಭ್ಯದ ಜತೆಗೆ ಷೇರುಗಳಲ್ಲಿ ಹೂಡಿಕೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿರುತ್ತವೆ. ಈ ಯೋಜನೆಗೆ ‘ಯುಲಿಪ್‌’ (Unit Linked Insurance Plan –ULIP) ಎನ್ನುತ್ತಾರೆ.ಸಾಂಪ್ರದಾಯಿಕವಾಗಿರುವ ಮತ್ತು ಯುನಿಟ್‌ಗೆ ಸಂಬಂಧಿಸಿದ ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ವಿಮಾ ಪಾಲಿಸಿಗಳನ್ನು ಪಡೆದರೂ ಪಾಲಿಸಿದಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ.ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸುವ ಪಾಲಿಸಿಗಳಲ್ಲೂ ಹಣ ಹೂಡಿಕೆಯಿಂದ ಹೆಚ್ಚಿನ ಮೊತ್ತ ಪಡೆಯಬಹುದು. ಯುನಿಟ್‌ ಸಂಬಂಧಿತ ಪಾಲಿಸಿಗಳಲ್ಲಿ ಯುವ ಗ್ರಾಹಕರು ದೀರ್ಘಾವಧಿ ಪಾಲಿಸಿಗಳನ್ನು ಪಡೆಯುವುದು ಉತ್ತಮ. ಷೇರುಗಳಲ್ಲಿ ಹಣ ಹೂಡಿಕೆಗೆ ಯುವ ಗ್ರಾಹಕರು ನಿರ್ಧರಿಸಿದ್ದರೆ ಹಣದುಬ್ಬರದಿಂದ ಆಗುವ ನಷ್ಟದ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಲಿದೆ.ಯುನಿಟ್‌ಗೆ ಸಂಬಂಧಿಸಿದ ಹೂಡಿಕೆಗಳಲ್ಲಿ ಕೆಲವು ಪ್ರಕ್ರಿಯೆಗಳಿಗೆ ಶುಲ್ಕವನ್ನು ಒಟ್ಟಾರೆ ಪ್ರಿಮಿಯಂನಲ್ಲಿ ಕಡಿತಗೊಳಿಸಲಾಗುತ್ತದೆ. ಯುವ ಗ್ರಾಹಕರಿಗೆ ಅತಿ ಕಡಿಮೆ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ಹೆಚ್ಚಿನ ಮೊತ್ತವನ್ನು ದೀರ್ಘಾವಧಿಗೆ ಹೂಡಿಕೆ ಮಾಡಬಹುದಾಗಿದೆ.ಆದರೆ, ಯುನಿಟ್‌ ಸಂಬಂಧಿತ ವಿಮಾ ಯೋಜನೆಯಲ್ಲಿ (ಯುಲಿಪ್‌) 45ನೇ ವಯಸ್ಸಿಗೆ ಪಾವತಿಸಿದ ಒಟ್ಟಾರೆ ಪ್ರಿಮಿಯಂ ಮೊತ್ತದ ಬಹುಪಾಲನ್ನು ಕಡಿತಗೊಳಿಸುವ ಸಾಧ್ಯತೆ ಇರುತ್ತದೆ ಮತ್ತು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಲು ಲಭ್ಯವಾಗುತ್ತದೆ. ಜತೆಗೆ ಹೂಡಿಕೆಗೆ ಅವಧಿಯೂ ಕಡಿಮೆ ಇರುತ್ತದೆ. ಮಾರುಕಟ್ಟೆ ಸನ್ನಿವೇಶಗಳ ಆಧಾರದ ಮೇಲೆಯೇ ಗ್ರಾಹಕರಿಗೆ ಲಾಭ ದೊರೆಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.