ಶನಿವಾರ, ಮೇ 21, 2022
20 °C

ಚಿಗುರಿದ ಚಿನ್ನದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರದ ಚಿನ್ನದ ನೆಲದಲ್ಲಿ ಕ್ಷೀಣಿಸಿದ್ದ ಕನಸಿಗೆ ಪುನಃ ರೆಕ್ಕೆ ಮೂಡಿದೆ. ಚಿನ್ನದ ಗಣಿಯ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್ ಕರೆಯುವ ಉದ್ದೇಶದ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿರುವುದರಿಂದ ಗಣಿ ಬಾಗಿಲು ಪುನಃ ತೆರೆದುಕೊಳ್ಳುವ ವಿಶ್ವಾಸ ಚಿಗುರಿದೆ.

2001ರಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಈ ಚಿನ್ನದ ಗಣಿಯನ್ನು ಮುಚ್ಚಲಾಗಿತ್ತು. ಜಾಗತಿಕ ಟೆಂಡರ್ ಮೂಲಕ ಪುನಶ್ಚೇತನಗೊಳಿಸುವ ನಿರ್ಧಾರವನ್ನು ಯುಪಿಎ ನೇತೃತ್ವದ ಕೇಂದ್ರ ಸರ್ಕಾರ 2006ರಲ್ಲಿ ಪ್ರಕಟಿಸಿತು. ನಡುವಿನ ಅವಧಿಯಲ್ಲಿ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆದು ಇದೀಗ ಅಂತಿಮ ತೀರ್ಪು ಹೊರಬಿದ್ದಿದೆ. ಗಣಿ ಮುಚ್ಚಿದ್ದರಿಂದ ಸಾವಿರಾರು ಕುಟುಂಬಗಳು ಆಸರೆ ಕಳೆದುಕೊಂಡಿವೆ.

ಗಣಿ ಪುನರಾರಂಭವಾದರೆ ಅಲ್ಲಿ ಕೆಲಸ ಮಾಡುವ ಅವಕಾಶ ಪುನಃ ದೊರೆಯಬಹುದು ಎನ್ನುವ ಆಸೆ ಕಾರ್ಮಿಕರಲ್ಲಿ ಮೂಡಿದೆ. ಕಾರ್ಮಿಕರ ಸತತ ಹೋರಾಟ ಮತ್ತು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಪುನಶ್ಚೇತನದ ನಿರ್ಧಾರ ಪ್ರಕಟಿಸಿತ್ತು. ಆದರೆ, ಫಲ ಪಡೆಯಲು ಆಗಿರಲಿಲ್ಲ. ಕರ್ನಾಟಕಕ್ಕೆ `ಚಿನ್ನದ ನಾಡು' ಎಂಬ ಗರಿಮೆ ಬರಲು ಕಾರಣವಾಗಿದ್ದ, ಭವ್ಯ ಇತಿಹಾಸವುಳ್ಳ ಚಿನ್ನದ ಗಣಿಯ ಪುನರಾರಂಭಕ್ಕೆ ಇದ್ದ ಅಡೆತಡೆಗಳು ಈ ತೀರ್ಪಿನಿಂದ ನಿವಾರಣೆ ಆಗಿವೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) 12,095 ಎಕರೆ ಜಮೀನು ಒಳಗೊಂಡಂತೆ ಅಪಾರ ಆಸ್ತಿಯನ್ನು ಹೊಂದಿದೆ.  ಯಂತ್ರೋಪಕರಣಗಳು, ಐದು ನಿಲ್ದಾಣಗಳನ್ನು ಒಳಗೊಂಡ ರೈಲ್ವೆ ಸಂಪರ್ಕ ಜಾಲ, 12 ಸಾವಿರದಷ್ಟು ಸಿಬ್ಬಂದಿ ವಸತಿಗೃಹ, ನಾಲ್ಕು ಮೆ.ವಾ. ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಘಟಕ ವ್ಯರ್ಥವಾಗಿ ಬಿದ್ದಿದೆ. ಇದರ ಸದ್ಬಳಕೆ ಆಗಬೇಕು. ಗಣಿಗಾರಿಕೆ ನಷ್ಟದ ಬಾಬತ್ತಾಗಿ ಪರಿಣಮಿಸಿದ ಕಾರಣ ಗಣಿ ಚಟುವಟಿಕೆ ಸ್ಥಗಿತಗೊಂಡಿತ್ತು.

ಗಣಿ ಬಾಗಿಲು ಮುಚ್ಚಿದಾಗ ನಷ್ಟದ ಮೊತ್ತ ರೂ 1,200 ಕೋಟಿಗೆ ಏರಿತ್ತು. ಈ ಗಣಿಯಲ್ಲಿ ಚಿನ್ನದ ಲಭ್ಯತೆ ಪ್ರಮಾಣ ಕಡಿಮೆ ಆಗಿದೆ. ಆದಕಾರಣ ಉತ್ಪಾದನೆಗೆ ತಗಲುವ ವೆಚ್ಚ ಅಧಿಕವಾಗಿದೆ ಎನ್ನುವ ತಜ್ಞರ ಸಲಹೆ ಮೇರೆಗೆ ಗಣಿಯನ್ನು ಮುಚ್ಚಲಾಗಿತ್ತು. ನಂತರ ನಡೆಸಿದ ಸಮೀಕ್ಷೆ ಪ್ರಕಾರ ಗಣಿ ಪ್ರದೇಶದ ಆಸುಪಾಸಿನ 80 ಕಿ.ಮೀ. ಪ್ರದೇಶದಲ್ಲಿ ಉತ್ತಮ ಚಿನ್ನದ ಅದಿರು ಇರುವುದು ಬೆಳಕಿಗೆ ಬಂದಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಮೂಲಕ ಲಾಭದಾಯಕವಾಗಿ ಗಣಿಗಾರಿಕೆ ನಡೆಸಬಹುದು ಎಂದು ವಿದೇಶಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಖಾಸಗಿ ಕಂಪೆನಿಗಳೂ ಈ ಪ್ರದೇಶದ ಸಮೀಕ್ಷೆ ನಡೆಸಿ, ಗಣಿ ಪುನರಾರಂಭಕ್ಕೆ ಒಲವು ತೋರಿದ್ದವು. ಪುನಶ್ಚೇತನ ಟೆಂಡರ್ ಪ್ರಕ್ರಿಯೆ ಐದು ತಿಂಗಳಲ್ಲಿ ಅಂತಿಮಗೊಳ್ಳಲಿದೆ. ಬಳಿಕ ಗಣಿಗಾರಿಕೆ ಪುನರಾರಂಭ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿನ್ನದ ನೆಲದ ಕಳೆದುಹೋದ ವೈಭವ ಆದಷ್ಟು ಬೇಗ ಮರಳಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.