ಶುಕ್ರವಾರ, ಮೇ 20, 2022
24 °C

ಚಿಗುರು ಮೇಳದಲ್ಲಿ ಅರಳಿದ ಸುಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿಳಿಯಂಗಿ, ಮೊಣಕಾಲಿಗಿಂತ ಮೇಲಿನ ಬೂದುವರ್ಣದ ತುಂಡು ಅಂಗಿ, ಮೊಣಕಾಲು ಮುಚ್ಚುವ ಬಿಳಿ ಕಾಲುಚೀಲ, ಅದೇ ಬಣ್ಣದ ಸೊಂಟಪಟ್ಟಿ ಹಾಗೂ ಬಿಳಿ, ಕೆಂಪು ಕೇಸರಿ ಕ್ಯಾಪ್ ಧರಿಸಿದ ಆ ಹುಡುಗಿಯರು ಕಾನ್ವೆಂಟ್ ಶಾಲೆಯ ಬಾಲಕಿಯರಂತೆ ಕಂಗೊಳಿಸುತ್ತಿದ್ದರು. ಆದರೆ ಅವರೆಲ್ಲ ಒಂದು ಹಂತದಲ್ಲಿ ಶಾಲೆ ಮರೆತ ಬಾಲೆಯರಾಗಿದ್ದರು. ಅವರನ್ನು ಮುಖ್ಯವಾಹಿನಿಗೆ ಸೇರಿಸಲು ಮನವೊಲಿಸಿ ಸಜ್ಜುಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಲೇ ಇರಲಿಲ್ಲ.ಗುಲ್ಬರ್ಗದ ಹೊರವಲಯದಲ್ಲಿರುವ ಸ್ವಾಮಿ ಸಮರ್ಥಾನಂದ ಆಶ್ರಮದಲ್ಲಿ ಹದಿಹರೆಯದ ಬಾಲೆಯರ ಕಲರವ ಬುಧವಾರ ಅಲ್ಲಿಯ ವಾತಾವರಣಕ್ಕೆ ನಾವೀನ್ಯವನ್ನು ತಂದು ಕೊಟ್ಟಿತ್ತು. ಗುಲ್ಬರ್ಗ, ರಾಯಚೂರು ಹಾಗೂ ಬೀದರ್ ಜಿಲ್ಲೆಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮಕ್ಕಳ ಮೂರು ದಿನದ ‘ಚಿಗುರು ಮೇಳ’ವನ್ನು ಮಹಿಳಾ ಸಮಾಖ್ಯಾ ಕರ್ನಾಟಕದ ಗುಲ್ಬರ್ಗ ಘಟಕವು ಆಯೋಜಿಸಿತ್ತು.ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ಸೇರಿಸುವ ಉದ್ದೇಶದಿಂದ ಆರಂಭವಾಗಿರುವ ಈ ಕೇಂದ್ರಗಳಲ್ಲಿ ಚಿಂದಿ ಆಯುವ ಮಕ್ಕಳು, ಕೂಲಿ ಕಾರ್ಮಿಕರ, ದಲಿತ ವರ್ಗದ ಮಕ್ಕಳೇ ಬಹುಸಂಖ್ಯಾತರಾಗಿದ್ದಾರೆ. ಯಾವುದೋ ಕಾರಣಕ್ಕೆ ಶಾಲೆಯಿಂದ ವಿಮುಖರಾದ ಮಕ್ಕಳಿಗೆ ಮತ್ತೆ ಶಿಕ್ಷಣದ ಮುಖ್ಯವಾಹಿನಿಯತ್ತ ಕರೆತರುವ ಗುರುತರ ಜವಾಬ್ದಾರಿ ಈ ಶಾಲೆಗಳದ್ದಾಗಿದೆ.ಇಂಥ 450 ವಿದ್ಯಾರ್ಥಿನಿಯರು, ಬುಧವಾರದಿಂದ ಶುಕ್ರವಾರದವರೆಗೆ ಮೂರು ದಿನಗಳ ಕಾಲ ತಮ್ಮ ಪ್ರತಿಭಾ ಪ್ರದರ್ಶನವನ್ನು ‘ಚಿಗುರು ಮೇಳ’ದಲ್ಲಿ ಮಾಡಲಿದ್ದಾರೆ. ಅವರೇ ಸಿದ್ಧಪಡಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ.ಇದರಲ್ಲಿ ದೇವದುರ್ಗ ತಾಲ್ಲೂಕಿನ ಶಾಲಾ ಮಕ್ಕಳು ಹೂಜಿಯ ಮೇಲೆ ರಾಗಿ ಉದುರಿಸಿ ಅದಕ್ಕೆ ನೀಡಿರುವ ಬೆಳ್ಳಿ ವರ್ಣ ಜನರ ಮನಸೆಳೆಯುತ್ತಿದೆ. ಇದಲ್ಲದೇ ಒಣಗಿದ ತೆಂಗಿನ ಗರಿಗಳಿಗೂ, ಸ್ಥಳೀಯವಾಗಿ ಲಭ್ಯವಿರುವ ಕಾಯಿಗಳಿಗೂ ಬಣ್ಣ ನೀಡಿ ಸಂಪೂರ್ಣವಾಗಿ ಪರಿಸರ ಸ್ನೇಹಿ ಆಲಂಕಾರಿಗ ಉತ್ಪನ್ನಗಳನ್ನು ಸಿದ್ಧ ಪಡಿಸಿದ್ದಾರೆ.

ಇದಲ್ಲದೇ ಪಠ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಶಾಲೆಯ ಮಕ್ಕಳು  ಥರ್ಮಕೋಲ್, ಕಾರ್ಡ್ ಬೋರ್ಡ್ ಮುಂತಾದ ವುಗಳನ್ನು ಬಳಸಿ ಪಾಠೋಪ ಕರಣಗಳನ್ನು ಸಿದ್ಧ ಪಡಿಸಿದ್ದಾರೆ. ಜರಿ ಕಸೂತಿ, ಬಣ್ಣದ ಬೊಂಬೆ, ಮಣ್ಣಿನ ಉತ್ಪನ್ನಗಳನ್ನೂ, ನಿಟ್ಟಿಂಗ್, ಕಸೂತಿ, ಹೊಲಿಗೆ ಮುಂತಾದ ಜೀವನ ಕೌಶಲಗಳನ್ನು ಈ ಶಾಲೆಯಲ್ಲಿ ಕಲಿಸಲಾಗುತ್ತದೆ ಎಂದು ಮಹಿಳಾ ಸಮಾಖ್ಯಾದ ಜ್ಯೋತಿ ಕುಲಕರ್ಣಿ ವಿವರಿಸಿದರು.ಮಹತ್ವಾಕಾಂಕ್ಷೆಯಿಂದ ಮುನ್ನುಗ್ಗುವ ಶಕ್ತಿ:ಮಹತ್ವಾಕಾಂಕ್ಷೆ ಇದ್ದರೆ ಬದುಕಿನಲ್ಲಿ ಮುನ್ನುಗ್ಗು ಶಕ್ತಿ ತಾನೇ ತಾನಾಗಿ ಬರುತ್ತದೆ ಎಂದು ಡಿಡಿಪಿಐ ಪರಮೇಶ್ ಅವರು  ಹೇಳಿದರು.ಅವರು ಬುಧವಾರ ‘ಚಿಗುರು ಮೇಳ’ ಉದ್ಘಾಟಿಸಿ ಮಾತನಾಡುತ್ತಿದ್ದರು. ಬದುಕಿನಲ್ಲಿ ಉನ್ನತ ಗುರಿ, ಕನಸು ಹಾಗೂ ಮಹತ್ವಾಕಾಂಕ್ಷೆ ಇದ್ದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ಹೇಳಿದರು.ಇದಕ್ಕೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕಿನ ಅನುಭವಗಳನ್ನೂ ನಿದರ್ಶನವಾಗಿ ವಿವರಿಸಿದರು.ಶಿಕ್ಷಣ ಇಲಾಖೆಯ ಮುಧೋಳ ಅವರು ಈಗ ಬಡ ಮಕ್ಕಳು ಓದಲು ಕಷ್ಟ ಪಡಬೇಕಿಲ್ಲ. ಇಷ್ಟ ಪಡಬೇಕಿದೆ. ಇಷ್ಟ ಪಟ್ಟರೆ ಅವರ ಓದಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಹಲವಾರು ಯೋಜನೆ   ಅನುಷ್ಠಾನದಲ್ಲಿವೆ ಎಂದು ಅವರು ಹೇಳಿದರು.ಶೋಷಣೆಯ ವಿರುದ್ಧ ಹೋರಾಡಲು ಅಕ್ಷರಗಳೇ ಅಸ್ತ್ರವಾಗುತ್ತವೆ. ಅಕ್ಷರದಿಂದ ಅರಿವು ಮೂಡುತ್ತದೆ. ಆಗ ಶೋಷಕರ ವಿರುದ್ಧಧ್ವನಿ ಎತ್ತುವ ಬಲ ಬರುತ್ತದೆ ಎಂದು ಬರಹಗಾರ ಲಕ್ಷ್ಮಣ ಕೌಂಟೆ ವಿವರಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕಿನ ಶಾಲಾ ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.