ಚಿಟ್ಟೆ

7
ಕವನ ಸ್ಪರ್ಧೆ : ಮೆಚ್ಚುಗೆ ಪಡೆದ ಕವಿತೆ

ಚಿಟ್ಟೆ

Published:
Updated:

ಸ್ಕೂಲಲ್ಲಿ ಮೇಷ್ಟ್ರು ಹೇಳಿದ

ಚಿಟ್ಟೆ ಪದ್ಯ ಕೇಳಿ ಮಗಳು ಪುಟ್ಟಿ

ತನಗೂ ಒಂದು

ಚಿಟ್ಟೆ ಬೇಕೆಂದು

ರಚ್ಚೆ ಹಿಡಿದಳು

ಮನೆಹಿತ್ತಿಲು, ಬೇಲಿ ಬಾವಿಕಟ್ಟೆ

ಹುಲ್ಲು ಮುಳ್ಳು, ಹೊಂಗೆ ಸಂಪಿಗೆ

ಗೋರಟೆಗಳ ಇಕ್ಕೆಲದಲ್ಲಿ

ಗುರುತು ಬಿಟ್ಟುಕೊಡದ

ಚಿಟ್ಟೆ ವಾಸನೆ ಹಿಡಿದು

ಮೊಹಲ್ಲು, ಮಾರ್ಕೆಟು

ಧೂಳಿಡಿದ ಫುಟ್‌ಪಾತ್

ಹಚ್ಚನೆ ಕೊಯ್ದು ಕಸಿ ಮಾಡಿದ

ಕ್ರೋಟನ್ ಗಿಡಗಳ ಮಧ್ಯೆ

ಭೂತಗನ್ನಡಿಗೂ ನಿಲುಕದೆ

ಭೂತವಾದ ಹಾಗೆ!

ಇನ್ನೂ ಸಣ್ಣವನಿದ್ದಾಗ

ಗಿಡಗಳಲ್ಲಿ, ಎಲೆಗಳಲ್ಲಿ

ಹೂವಿನ ಪಕಳೆಗಳಲ್ಲಿ

ಕೈತುಂಬ ಚಿತ್ತಾರವಾಗಿದ್ದ

ಬೆಳ್ಳನೆ ಚಿಟ್ಟೆ ಕೆಂಪನೆ ಚುಕ್ಕೆ

ಬೂದಿನ ಚಿಟ್ಟೆ ಕಪ್ಪನೆ ಚುಕ್ಕೆ

ಚಿಟ್ಟೆಗಳೆಲ್ಲಾ ಈಗೆಲ್ಲಿ?

ಚಿಟ್ಟೆಗಾಗಿ ಸುತ್ತಿ ಸುತ್ತಿ

ಬಳಲಿ ಬೆಂಡಾಗಿ

ಬತ್ತಾಸಿನ ಅಂಗಡಿಯಲಿ

ಅರೆ ಸುಧಾರಿಸಿಕೊಂಡೆ

ಇದ್ದಕ್ಕಿದ್ದಂತೆ

ಎಲ್ಲವೂ ಕಣ್ಣೆದುರಿಗೆ

ನನ್ನೂರಲ್ಲಿ ಕಂಡು ಹೌಹಾರಿ

ಬೆಚ್ಚಿಬೀಳಿಸುತ್ತಿದ್ದ

ನೀರು ಹಾವು, ಕೇರೆ ಹಾವು,

ಕರಿ ನಾಗರ, ಕಪ್ಪೆ, ಗಿಳಿ

ಗುಬ್ಬಚ್ಚಿ ಎಲ್ಲವೂ ಅಂಗಡಿ ಬಗಲಿನ

ಕಂಬದಲಿ ಜೋತುಬಿದ್ದಿವೆ

ಅಲ್ಲೊಂದು ಮೂಲೆಯಲ್ಲಿ

ಕಣ್ಣು ಕೋರೈಸುವ ಬಣ್ಣದ

ಪಾತರಗಿತ್ತಿ

ಕಂಡದ್ದೇ

ಮೆಲ್ಲ ಸುಧಾರಿಸಿಕೊಂಡೆ

ಎಷ್ಟಪ್ಪಾ ಬೆಲೆ ಎಂದು ಅಂಗಡಿಯವನ

ಆರು ಕಾಸಿನ ಚಿಟ್ಟೆಗೆ ಚೌಕಾಸಿ ಮಾಡಿ

ಮೂರು ಕಾಸಿಗೆ ಕೊಂಡೆ

ಆತನೋ

ಚಿಟ್ಟೆಯನ್ನೊಮ್ಮೆ ಎತ್ತಿ ಕೀಕೊಟ್ಟು

ಬಯಲಿಗೆ ಬಿಟ್ಟ

ಚಿಟ್ಟೆ ಟಿಕ್ ಟಿಕ್ ಸದ್ದು ಮಾಡಿ

ಮೂರು ಸುತ್ತು ಗಿರಕಿ ಹೊಡೆದು

ನೆಲ್ಲಕ್ಕಪ್ಪಳಿಸಿತು

ಲೆಕ್ಕ ಚುಕ್ತಾ ಮಾಡಿ

ಚಿಟ್ಟೆ ಕೊಂಡು

ಬಣ್ಣ ಕೈಗಂಟಿದರೆ....

ಎಂದು ಮನೆಗೆ ನಡೆದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry