ಬುಧವಾರ, ನವೆಂಬರ್ 13, 2019
24 °C

ಚಿಣ್ಣರನ್ನು ಆಕರ್ಷಿಸುತ್ತಿರುವ ಬೇಸಿಗೆ ಶಿಬಿರಗಳು

Published:
Updated:

ಹಾಸನ: ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗಿದೆ. ಫಲಿತಾಂಶವೂ ಬಂದಾಗಿರುವುದರಿಂದ ಮಕ್ಕಳು ರಜೆಯ ಮಜಾ ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತ್ದ್ದಿದಾರೆ.ಬೇರೆ ಊರಿನಿಂದ ಬಂದಿರುವವರು ರಜೆ ಸಿಕ್ಕಾಗ ತಮ್ಮ ಊರುಗಳಿಗೆ ಹೋದರೆ, ಸ್ಥಳೀಯ ಪಾಲಕರು ಮಕ್ಕಳನ್ನು ಇನ್ಯಾವುದಾ ದರೂ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಬೇಕೆಂದು ಹುಡುಕಾಟ ಆರಂಭಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ನಗರದ ಹಲವೆಡೆ ಬೇಸಿಗೆ ಶಿಬಿರಗಳು ಆರಂಭವಾಗಿವೆ. ಇನ್ನೂ ಕೆಲವು ಆರಂಭವಾಗುವ ಹಂತದಲ್ಲಿವೆ.ಒಂದಷ್ಟು ಹೊತ್ತು ಮನೆಯಿಂದ ಆಚೆ ಇದ್ದರೆ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ಮಕ್ಕಳನ್ನು ಶಿಬಿರಕ್ಕೆ ಕಳುಹಿಸುವವರೂ ಇದ್ದಾರೆ. ಹೀಗೆ ಸಮಯ ಕಳೆಯಲು ಶಿಬಿರಕ್ಕೆ ಕಳುಹಿಸುವ ಬದಲು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವಂಥ ಶಿಬಿರಗಳನ್ನು ಆಯ್ದುಕೊಳ್ಳುವುದು ಮಕ್ಕಳ ಭವಿಷ್ಯ ಹಾಗೂ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದಲೂ ಉತ್ತಮವಾಗಬಹುದು.ಸಾಮಾನ್ಯವಾಗಿ ಕ್ರೀಡಾ ಶಿಬಿರಗಳು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆಯಾದರೂ ಈಚಿನ ದಿನಗಳಲ್ಲಿ ಕ್ರಿಕೆಟ್ ಬಿಟ್ಟರೆ ಬೇರೆ ಆಟವೇ ಇಲ್ಲ ಎಂಬಂತಾಗಿದೆ. ನಗರದಲ್ಲಿ ಎರಡು ಕ್ರಿಕೆಟ್ ಶಿಬಿರಗಳು ಆರಂಭವಾಗಿವೆ. ಇತರ ಕ್ರೀಡೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.ಕಳೆದ ಬಾರಿ ನಗರಸಭೆಯವರೇ ಮಹಾ ರಾಜ ಪಾರ್ಕ್‌ನಲ್ಲಿದ್ದ ಈಜು ಕೊಳದಲ್ಲಿ ಮಕ್ಕಳಿಗಾಗಿ ಈಜು ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಈ ಬಾರಿ ಅವರೂ ಶಿಬಿರದ ಗೋಜಿಗೆ ಹೋಗಿಲ್ಲ. ಆದರೆ ಹಾಸನಾಂಬಾ ಒಳಾಂಗಣ ಕ್ರೀಡಾಂಗಣದಲ್ಲಿ ಶಿಬಿರ ಆರಂಭವಾಗಿದೆ.ಇದು ಬಿಟ್ಟರೆ ಭಾರತ ಜ್ಞಾನ ವಿಜ್ಞಾನ ಸಮಿತಿಯವರು ಶಿಬಿರ ಆರಂಭಿಸುವುದಾಗಿ ಪ್ರಕಟಣೆ ನೀಡಿದ್ದಾರೆ. ಅದರಂತೆ ಕೆ.ಆರ್.ಪುರಂನಲ್ಲಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ವೇದಭಾರತಿ ಸಂಸ್ಥೆಯವರು ಭಾರತೀಯ ಸಂಸ್ಕೃತಿ, ಧ್ಯಾನ- ಶ್ಲೊಕಗಳನ್ನು ಕಲಿಸುವ `ಬಾಲ ಸಂಸ್ಕಾರ ಶಿಬಿರ' ಆಯೋಜಿಸಿದ್ದಾರೆ. ಇಂಥ ಇನ್ನೂ ಒಂದು ಶಿಬಿರ ಆಯೋಜಿಸುವ ನಿಟ್ಟಿನಲ್ಲಿ ಬೇರೆ ಸಂಸ್ಥೆ ಯೋಜನೆ ರೂಪಿಸುತ್ತಿದೆ.ಸೃಜನಶೀಲತೆ ಬೇಕು: ಈಜು, ಕ್ರೀಡೆಗಳು ಮಕ್ಕಳಿಗೆ ಅಗತ್ಯ. ಇವುಗಳಜತೆಗೆ ಸೃಜನಾತ್ಮಕ ಶಿಬಿರಗಳೂ ಆಯೋಜನೆಯಾಗಿದ್ದರೆ ಮಕ್ಕಳಿಗೆ ಹೆಚ್ಚು ಸಂತೋಷವಾಗುತ್ತಿತ್ತು ಎನ್ನಿಸುತ್ತದೆ.ಶಾಲಾ ವಾರ್ಷಿಕೋತ್ಸವಗಳು ಇಂದು ಚಿತ್ರ ಗೀತೆಗಳು ಹಾಗೂ ಫಿಲ್ಮಿ ಡಿಡ್ಯಾನ್ಸ್‌ಗಳಿಗೆ ಸೀಮಿತವಾಗಿರುವಾಗ, ಮಕ್ಕಳಿಗೆ ನಮ್ಮ ಜನಪದ ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವಂಥ ಶಿಬಿರಗಳನ್ನೂ ಯಾರಾದರೂ ಆಯೋಜಿಸಿದ್ದರೆ ಮಕ್ಕಳು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದರು.ಮಕ್ಕಳಿಗೆ ಇಂಥ ಕಾರ್ಯಕ್ರಮಗಳಲ್ಲಿ ಆಸಕ್ತಿ ಇಲ್ಲ ಎಂಬ ಮಾತು ಪೂರ್ತಿಯಾಗಿ ಒಪ್ಪಲಾಗದು. ಈಚೆಗೆ ನಗರದ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಕಲಾ ಮೇಳದಲ್ಲಿ ಕಾಲೇಜಿನ ಮಕ್ಕಳು ಕಲಾವಿದರ ಜತೆಗೆ ಹೆಜ್ಜೆ ಹಾಕಿದ್ದನ್ನು ಮರೆಯುವಂತಿಲ್ಲ. ಬಾನಂದೂರು ಕೆಂಪಯ್ಯ ಜನಪದ ಗೀತೆಗಳನ್ನು ಹಾಡುತ್ತಿದ್ದರೆ ಅಷ್ಟೇ ತನ್ಮಯರಾಗಿ ವಿದ್ಯಾರ್ಥಿಗಳು ಕೇಳುತ್ತಿದ್ದರು. ಅವರಲ್ಲಿ ಆಸಕ್ತಿ ಇದೆ, ಅದನ್ನು ಪೋಷಿಸುವ ಕಾರ್ಯ ಆಗಬೇಕಾಗಿದೆ.ಹಾಸನದಲ್ಲಿ ರಂಗ ಚಟುವಟಿಕೆಗಳು ಸಕ್ರಿಯ ವಾಗಿ ನಡೆಯುತ್ತಿವೆ. ಮಕ್ಕಳಲ್ಲೂ ನಾಟಕದ ಬೀಜ ಬಿತ್ತುವ ಸಲುವಾಗಿಯಾದರೂ ಒಂದು ರಂಗ ಶಿಬಿರ ಆಯೋಜನೆಯಾಗಬೇಕಿತ್ತು. ರಂಗಾಯಣದ ಹಿಂದಿನ ನಿರ್ದೇಶಕರು ಹಾಸನಕ್ಕೆ ಬಂದಿದ್ದಾಗ ಬೇಸಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಬಿರ ಹಮ್ಮಿಕೊಳ್ಳುವುದಾಗಿ ಹೇಳಿದ್ದರು. ಅದೀಗ ಹುಸಿಯಾಗಿದೆ.ಮುಂದಿನ ದಿನಗಳಲ್ಲಾದರೂ ಇಂಥ ಶಿಬಿರಗಳು ನಗರದಲ್ಲಿ ನಡೆಯುವಂತಾಗಲಿ ಎಂಬುದು ಪಾಲಕರ ನಿರೀಕ್ಷೆ.

ಪ್ರತಿಕ್ರಿಯಿಸಿ (+)