ಚಿಣ್ಣರಿಂದ ಮಿಂಚಿದ ಕಿಟ್ಟಿಕಥೆ

7

ಚಿಣ್ಣರಿಂದ ಮಿಂಚಿದ ಕಿಟ್ಟಿಕಥೆ

Published:
Updated:
ಚಿಣ್ಣರಿಂದ ಮಿಂಚಿದ ಕಿಟ್ಟಿಕಥೆ

ಬೇಸಿಗೆ ಶಿಬಿರದ ಪ್ರಯುಕ್ತ ಸುಚಿತ್ರ ಬಾಲಜಗತ್ ಆಯೋಜಿಸಿದ್ದ ನಾಟಕ ಪ್ರಯೋಗದಲ್ಲಿ ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಜಾನಪದ ಕಥೆ ಆಧರಿಸಿ ರಚಿಸಿರುವ `ಕಿಟ್ಟಿ ಕಥೆ~ ಮಕ್ಕಳ ನಾಟಕ ಪ್ರಯೋಗವಾಯಿತು.ಈ ಹಿಂದೆ `ಆಷಾಢದ ಒಂದು ದಿನ~, `ಪೋಲಿ ಕಿಟ್ಟಿ~, `ಬಂಡ್ವಾಳಿಲ್ಲದ ಬಡಾಯಿ~ ಮುಂತಾದ ನಾಟಕ ನಿರ್ದೇಶಿಸಿರುವ ಅಭಿರುಚಿ ಚಂದ್ರು ನಿರ್ದೇಶನದಲ್ಲಿ ಈ ನಾಟಕ ಸುಚಿತ್ರದಲ್ಲಿ ಶಸ್ವಿಯಾಗಿ ಪ್ರಯೋಗವಾಯಿತು.ಒಬ್ಬ ಸೋಮಾರಿ ಯುವಕ ಕಿಟ್ಟಿ ತನ್ನ ಮಾತು ಹಾಗೂ ಕುತಂತ್ರದಿಂದ ಜನರನ್ನು `ಕುರಿ~ಗಳನ್ನಾಗಿಸಿ ತಾನು ಇಚ್ಛಿಸಿದಂತೆ ಸುಂದರ ಯುವತಿಯನ್ನು ಮದುವೆಯಾಗಿ, ಕಡೆಗೆ ರಾಜನಾಗಿ ಮೆರೆಯುವ ಜಾನಪದ ಕತೆಯನ್ನೇ ಕಂಬಾರರು ಸಮಕಾಲೀನಗೊಳಿಸಿ, ಇಂದಿನ ಕಾಲದಲ್ಲಿ ಮಾತು ಬಲ್ಲವನು ಬದುಕಬಲ್ಲ, ಅಪ್ರಾಮಾಣಿಕರಲ್ಲಿ ಹೆಚ್ಚು ಪ್ರಾಮಾಣಿಕ ಗದ್ದುಗೆಗೆ ಏರುತ್ತಾನೆ ಎಂಬುದನ್ನು ಮಕ್ಕಳ ಮೂಲಕ ಎಚ್ಚರಿಸುವ ಕಥಾ ಹಂದರ ಒಳಗೊಂಡಿದೆ.ರಂಗಕೃತಿಯ ಆರಂಭವೇ `ನಾವು ಹಾಡಿ ಕುಣಿಯುತ್ತೇವೆ... ನಿಮ್ಮ ಮುಂದ~... ಎಂದು ರಂಗ ಮದ್ಯದಲ್ಲಿ ಕುಳಿತ ಪುಟಾಣಿಗಳ ಮೇಳದ ಹಾಡಿನೊಂದಿಗೆ ದೀಪದ ಬೆಳಕು ರಂಗದ ಮೇಲೆ ತೆರೆದುಕೊಳ್ಳುತ್ತದೆ.ಎಡಬದಿಗೆ ನಾಯಕ ಕಿಟ್ಟಿ ರಗ್ಗು ಹೊದ್ದು ಮಲಗಿದ್ದಾನೆ. ಅಜ್ಜಿ `ಎಳೋ ಟೈಂ ಆಯ್ತು~ ಎನ್ನುತ್ತಿದ್ದ ಹಾಗೆ ಪಂಚೆ, ಬಣ್ಣದ ಜುಬ್ಬ ಪೇಟ ತೊಟ್ಟ ಭಾಗವತ (ಚಲನ.ಜಿ) ಇದೇನೊ! ನಾನು ಬರುವ ಮುಂಚೆಯೇ ನಾಟಕ ಶುರು ಮಾಡೋದೆ ಶಾಸ್ತ್ರದ ಪ್ರಕಾರ ನಾಟಕ ಶುರು ಆಗಬೇಕು ಆ ಮೇಲ ನಿನ್ನ ಎಂಟ್ರಿ ಎಂದು ಹೇಳುವ ಮೂಲಕ ಪ್ರಯೋಗ ಅಧಿಕೃತ ಚಾಲನೆ ಪಡೆಯುತ್ತದೆ. ಇಲ್ಲಿ ಕಂಬಾರರು ಬೇಕಂತಲೇ ಶಾಸ್ತ್ರಿಯವಾದ ಒಂದು ನಾಟಕ ಆರಂಭದ ಚೌಕಟ್ಟನ್ನು ಮುರಿದು, ನಾಟಕ ಆರಂಭಿಸುವುದು ಗೋಚರಿಸುತ್ತದೆ.ನಾಯಕ ಕಿಟ್ಟಿ (ಸೂರಜ್) ಮಾತ್ರ ಮಾರ್ಡನ್ ಹುಡುಗನಂತೆ ಕೆಂಪು ಬಣ್ಣದ ಷರ್ಟ್ ಹಾಗೂ ಚಡ್ಡಿ ತೊಟ್ಟಿರುತ್ತಾನೆ. ಕಿಟ್ಟಿಯು ಒಬ್ಬ ಸುಂದರಿಯನ್ನು ಮದುವೆಯಾಗಲು 10 ಪೈಸೆ ತೆಗೆದುಕೊಂಡು ಮನೆಬಿಟ್ಟು ಹೊರಟು ಸಂತೆಯಲ್ಲಿ ಒಂದು ಮಡಿಕೆ, ಒಂದು ಕೆ.ಜಿ ಅಕ್ಕಿ ಕೊಳ್ಳುತ್ತಾನೆ. ಅದರಿಂದ ದಾರಿಯಲ್ಲಿ ಸಿಕ್ಕ ಅಜ್ಜಿಯ ಕೈಯಲ್ಲಿ ಅನ್ನ ಮಾಡಿಸಿಕೊಂಡು ತಿಂದು, ಆಕೆ ಬಳಿ ಇದ್ದ ಟಗರು ಪಡೆಯಲು ಮಡಿಕೆ ಮಾತಾಡುತ್ತದೆ ನಿನಗೆ ಸಂಗಾತಿಯಾಗುತ್ತಾಳೆ ಎಂದು ಟಗರು ಪಡೆದುಕೊಳ್ಳುತ್ತಾನೆ.ಆ ಟಗರನ್ನು ಒಬ್ಬ ವ್ಯಕ್ತಿಯ ಮುದಿ ತಂದೆಗೆ ಚಳಿ ಹೆಚ್ಚಾಗಿದ್ದನ್ನು ಕಂಡು, ಟಗರು ಚಳಿ ಮೇಯುತ್ತೆ ಎಂದು 4 ಸಾವಿರ ರೂಗಳಿಗೆ ಮಾರುತ್ತಾನೆ. ಅಲ್ಲಿಂದ ಬರುವಾಗ ಕರಡಿ ಆತನನ್ನು ಹಿಡಿಯುತ್ತದೆ. ಅದರಿಂದ ತಪ್ಪಿಸಿಕೊಂಡು ಆ ಕರಡಿಯನ್ನೇ ಭಗವಂತನಿಗೆ ಕೊಟ್ಟು ಕರಡಿಯೊಂದಿಗೆ ಗುದ್ದಾಡಿದರೆ ಹಣ ಉದುರುವುದು ಎಂದು ಸುಳ್ಳು ಹೇಳಿ ಅವನಿಂದ ಕುದುರೆ ಪಡೆದು ಅದನ್ನು ನರ್ತಕಿಗೆ ಕೊಟ್ಟು ಅಲ್ಲಿಂದ ಆನೆ ಪಡೆಯುತ್ತಾನೆ. ಆನೆ ರೂಪಾಯಿಯ ಲದ್ದಿ ಹಾಕುತ್ತದೆ ಎಂದೂ ನಂಬಿಸುವನು.ಕಡೆಗೆ ಮೋಸ ಹೋದವರೆಲ್ಲ ಈತನನ್ನು ಹಿಡಿದುಕೊಂಡಾಗಲೂ, ಅವರಿಂದ ಪಡೆದ ವಸ್ತು, ಪ್ರಾಣಿಗಳನ್ನು ಅವರಿಗೆ ಕೊಟ್ಟು ತಾನು ಒಬ್ಬ ಪ್ರಾಮಾಣಿಕ ರಾಜಕಾರಣಿಯಂತೆ ವರ್ತಿಸಿ ಅವರನ್ನು ಕುರಿಗಳಾಗಿಸಿ, ನಾನು ಪ್ರಾಮಾಣಿಕ, ನಿಮಗೆಲ್ಲ ತಿಳಿದ ಹಾಗೆಯೇ ಮೋಸ ಮಾಡಿದ್ದೇನೆ.ನಮ್ಮ ರಾಜಕಾರಣಿಗಳ ಹಾಗೆ ನಿಮಗೆ ತಿಳಿಯದಂತೆ ಮೊಸ ಮಾಡಬಹುದಾಗಿತ್ತು ಹಾಗೆ ಮಾಡಲಿಲ್ಲ, ನೀವು ಅಂತಃಕರಣದ ಜನ ಎಂದು ನಂಬಿಸಿ ಅವರನ್ನು ಶಿಷ್ಯರನ್ನಾಗಿಸಿ ತಾನು ಸುಂದರಿಯನ್ನು ಮದುವೆಯಾಗಿ ರಾಜನಾಗುತ್ತಾನೆ. ಪ್ರಯೋಗ ಹಾಸ್ಯದೊಂದಿಗೆ ಹದಮೀರದ ಮಕ್ಕಳ ಅಭಿನಯದೊಂದಿಗೆ ರಂಜಿಸುತ್ತದೆ.ಕಿಟ್ಟಿ ರಾಜನಾಗಿ ಪಟ್ಟಕ್ಕೇರುವ ಅಂತಿಮ ದೃಶ್ಯಕ್ಕೆ ರಂಗದ ಎರಡು ಬದಿಯಿಂದ ಅರವತ್ತಕ್ಕೂ ಹೆಚ್ಚಿನ ಮಕ್ಕಳು ಪಂಜು-ಫಲಕ, ಒಡ್ಡೋಲಗದೊಂದಿಗೆ ರಾಜನ ಮೆರವಣಿಗೆ ಬರುವ ದೃಶ್ಯ ಕಳೆಕಟ್ಟಿತು. ನಿರ್ದೇಶಕ ಚಂದ್ರು ಅವರು ಅತ್ಯಂತ ಪರಿಶ್ರಮದಿಂದ ಮಕ್ಕಳನ್ನು ತಿದ್ದಿ ತೀಡಿ ಪ್ರಯೋಗಕ್ಕೆ ಪಳಗಿಸಿರುವುದು ನಾಟಕದಿಂದ ಸಾಬೀತಾಗಿತ್ತು. ನಾರಾಯಣ ರಾಯಚೂರು ಮತ್ತು ರಾಘವೇಂದ್ರ ಸಂಗೀತ ನೀಡಿದರೆ, ಅರುಣ್‌ಮೂರ್ತಿ ಅವರ ಬೆಳಕು ವಿನ್ಯಾಸ ಇದೆ. ಮಕ್ಕಳಿಗೆ ಎಚ್.ಎಸ್.ವೆಂಕಟೇಶಮೂರ್ತಿ, ವಿ.ಎನ್.ಸುಬ್ಬರಾವ್, ವೆಂಕಟಸ್ವಾಮಿ, ಬಿ.ಆರ್. ಲಕ್ಷ್ಮಣರಾವ್ ಅವರಂತಹ ಹಿರಿಯರ ಪ್ರೀತಿ ಶಿಬಿರದಲ್ಲಿ ಸಿಕ್ಕಿದೆ.ಭಾಗವತನಾಗಿ (ಚಲನ.ಜಿ), ಕಿಟ್ಟಿಯಾಗಿ (ಸುರಜ್),ಅಜ್ಜಿ (ರಾಜಸ್ವಿ), ಕರಡಿ (ಲೇಹರ್), ನರ್ತಕಿ (ನಿಮಿಷ), ಟಗರಜ್ಜಿ (ಅಕ್ಷತ), ಭಗವಂತ (ಹಿತೈಷಿ) ಮುಂತಾದವರು ಮನೋಜ್ಞವಾಗಿ ಅಭಿನಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry