ಚಿಣ್ಣರಿಗೆ ಭತ್ತದ ಕೃಷಿಯ ಪಾಠ

ಶುಕ್ರವಾರ, ಜೂನ್ 21, 2019
22 °C

ಚಿಣ್ಣರಿಗೆ ಭತ್ತದ ಕೃಷಿಯ ಪಾಠ

Published:
Updated:ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತದ ಕೃಷಿಗೆ ಇಳಿಲೆಕ್ಕ. ಕೃಷಿಗೆ ಬಳಸುತ್ತಿದ್ದ ಪರಿಕರಗಳು ಕೃಷಿವೈಭವಕ್ಕೆ ಸಾಕ್ಷಿಯಾಗಿ ಮೂಕವಾಗಿವೆ. ಭತ್ತದ ಕೃಷಿಯ ಸಂಸ್ಕೃತಿ ಮಸುಕಾಗಿದೆ. ಹಿರಿಯರ ಜತೆಯಲ್ಲಿದ್ದು ಕೃಷಿಯ ಸೂಕ್ಷ್ಮಗಳನ್ನು ಅರಿವ ದಿವಸಗಳೆಲ್ಲಾ ಈಗ ಕಾಲದ ಕಥನ. ಶಾಲಾ ಪಠ್ಯಗಳಲ್ಲಿ ಕೃಷಿಯ ಕುರಿತಾದ ಪಠ್ಯ ದೂರದ ಮಾತು.ಈ ಸಂಕಟಗಳ ನಡುವೆ ಕೆಲವು ಕೃಷಿ ತುಡಿತದ ಅಧ್ಯಾಪಕರಿಂದ ಮಕ್ಕಳಿಗೆ ಕೃಷಿ ಪಾಠ ಸಿಗುವುದಿದೆ. ಇತ್ತೀಚೆಗೆ ಸುಳ್ಯ ಸನಿಹದ ಪೆರಾಜೆಯ (ಕೊಡಗು) ಕುಂಬಳಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಭತ್ತದ ಕೃಷಿಯ ನೇರ ಪಾಠ. ಶೈಕ್ಷಣಿಕ ಕ್ಷೇತ್ರದ ಪ್ರಮುಖರೂ ಒಮ್ಮೆ  ಯೋಚಿಸಬಹುದಾದ ವಿಚಾರ.ಮಳೆಗಾಲದ ಆರಂಭದಲ್ಲಿ ನೇಜಿ ನೆಡುವ ಪ್ರಾತ್ಯಕ್ಷಿಕೆ ನಡೆದಿತ್ತು. ಇದರಲ್ಲಿ ನೇರವಾಗಿ ಗದ್ದೆ ಉಳುವ, ಗದ್ದೆಯಲ್ಲಿ ಪೇರಿಸಿಟ್ಟ ಹಟ್ಟಿಗೊಬ್ಬರನ್ನು ಕಾಲಿಂದ ತುಳಿದು ಹದ ಮಾಡುವ, ನೇಜಿ ತಯಾರು ಮಾಡುವ, ನೆಡುವ ಕುರಿತಾಗಿ ನೂರಕ್ಕೂ ಮಿಕ್ಕಿ ಮಕ್ಕಳು ಗದ್ದೆಗಿಳಿದಿದ್ದರು. ಅಂದು ನೆಟ್ಟ ನೇಜಿ ತೆನೆ ಬಿಟ್ಟು ಕೊಯಿಲಿಗೆ ಸಿದ್ಧವಾದಾಗ ಕಟಾವ್ ಪ್ರಕ್ರಿಯೆಯ ನೇರ ಪಾಠ. ಮಕ್ಕಳ ಅರಿವಿಗೆ ಕೃಷಿಯನ್ನು ಬಿತ್ತುವ ತಾಣವಾಗಿ ಪೆರಾಜೆ ದೇವಸ್ಥಾನದ ಸನಿಹದ ಯೋಗೀಶ್ ನಾಯಕ್‌ರ ಗದ್ದೆ.ಪೈರು ಕಟಾವ್, ಕೊಯ್ದ ಪೈರನ್ನು ಸೂಡಿ ಕಟ್ಟುವ, ತಲೆಹೊರೆಯಲ್ಲಿ ಹೊತ್ತು ಅಂಗಳದಲ್ಲಿ ಪೇರಿಸುವ ಕೃಷಿ ಜಾಣ್ಮೆಯು ಹಿರಿಯರಿಂದ ಕಿರಿಯರಿಗೆ ಪಾಠ. ಹೀಗೆ ತೋರಿಸಿದ ವಿಚಾರವನ್ನು ಅನುಷ್ಠಾನಿಸುವತ್ತ ಒತ್ತು. ಮಕ್ಕಳು ತಪ್ಪಿದಾಗ ಹಿರಿಯರಿಂದ ಸರಿಪಡಿಸುವಿಕೆ.ಕೊಯ್ದ  ಪೈರನ್ನು ತಲೆಹೊರೆ ಮೂಲಕ ಮಕ್ಕಳೇ ಅಂಗಳಕ್ಕೆ ತಂದರು. ಪಡಿಮಂಚಕ್ಕೆ ಬಡಿದರು. ಭತ್ತ ಒಗ್ಗೂಡಿಸಿದರು. ಗೆರಸೆಯಲ್ಲಿ ಗೇರಿದರು.ಕಸ-ಕಡ್ಡಿಗಳನ್ನು ಆಯ್ದರು. ಒಂದೊಂದು ಗುಂಪು ಈ ಕೆಲಸ ಮಾಡುತ್ತಿದ್ದರೆ, ಮತ್ತೆ ಕೆಲವರು ಇದನ್ನು ವೀಕ್ಷಿಸಿ ತಿಳಿದುಕೊಳ್ಳುತ್ತಿದ್ದರು. ತಿಳಿದ ಬಳಿಕ ತಕ್ಷಣ ಪ್ರಯೋಗ. ಸ್ಥಳದಲ್ಲೇ ಸಂಶಯ ಪರಿಹಾರ. ‘ಯಾವ ಮಗು ಕೂಡಾ ತನ್ನಿಂದಾಗದು ಎಂದು ಮರೆಯಲ್ಲಿ ನಿಂತಿಲ್ಲ’ ಎನ್ನುತ್ತಾರೆ ಶಾಲಾ ಅಧ್ಯಾಪಕ ಮೋಹನ್ ಕುಮಾರ್.ಮತ್ತೊಂದೆಡೆ ಭತ್ತವನ್ನು ಬೇಯಿಸಲು ಒಲೆ ಸಿದ್ಧವಾಗಿತ್ತು. ಬೇಯಿಸಿದ ಭತ್ತವನ್ನು ಒಣಗಿಸಿ, ಕುಟ್ಟಿ ಅಕ್ಕಿ ಮಾಡುವ ಕಲಿಕೆ. ಭತ್ತದಿಂದ ಅಕ್ಕಿ ಮಾಡುವ ಪ್ರಕ್ರಿಯೆ ಒಂದೇ ದಿವಸದಲ್ಲಿ  ಆಗುವಂತಹುದಲ್ಲವಾದರೂ, ಮಕ್ಕಳಿಗೆ ಕಲಿಕಾ ದೃಷ್ಟಿಯಿಂದ ಪ್ರತ್ಯೇಕವಾಗಿ ರೂಢಿಸಿಕೊಳ್ಳಲಾಗಿತ್ತು.ಮಕ್ಕಳು ಮನೆಗೆ ತೆರಳುವಾಗ ಎಲ್ಲರ ಕೈಯಲ್ಲೂ ಎರಡೆರಡು ತೆನೆ. ಅದರ ಭತ್ತದಿಂದ ನೇಜಿ ತಯಾರಿಸಿ; ತಂತಮ್ಮ ತೋಟದಲ್ಲಿ ಪುಟ್ಟ ಗದ್ದೆ ಮಾಡಿ, ಆ ನೇಜಿಯನ್ನು ನೆಟ್ಟು ಭತ್ತ ಪಡೆಯುವ ಕುರಿತು ಮಕ್ಕಳಿಗೆ ಪ್ರಾಕ್ಟಿಕಲ್ ಹೋಂವರ್ಕ್.‘ಒಂದರಿಂದ ಏಳನೇ ತರಗತಿ ತನಕ ನೂರಕ್ಕೂ ಮಿಕ್ಕಿ ಮಕ್ಕಳು ಕೃಷಿ ಪಾಠಕ್ಕೆ ತಯಾರಾಗಿದ್ದರು. ಪಾಲಕರೂ ಸಮ್ಮತಿಸಿದ್ದರು. ಪೆರಾಜೆಯಂತಹ ಹಳ್ಳಿಯು ಭತ್ತದ ಕೃಷಿಯಲ್ಲಿ ಮುಂದಿದ್ದ ಸಮಯವೊಂದಿತ್ತು. ಅಂತಹ ಊರಲ್ಲೇ ಈಗ ಮಕ್ಕಳಿಗೆ ಭತ್ತದ ಬೇಸಾಯದ ಕುರಿತಾದ ಪಾಠ ಹೇಳಬೇಕಾದ ಅನಿವಾರ್ಯತೆ ಇದೆಯಲ್ಲಾ ನಿಜಕ್ಕೂ ಇದು ನಮ್ಮ ಬದುಕಿನ ದುರಂತ’ ಎನ್ನುತ್ತಾರೆ ಮೋಹನ್ ಕುಮಾರ್.ಇಷ್ಟೆಲ್ಲಾ ಪಾಠ ನಡೆದುದು ಶಾಲಾ ಸಮಯದಲ್ಲಿ  ಅಲ್ಲ, ದಸರಾ ರಜೆಯಲ್ಲಿ ಎಂಬುದು ಗಮನಾರ್ಹ. ಅಜ್ಜಿಮನೆಯಲ್ಲೋ, ಸಮಾರಂಭದಲ್ಲೋ ರಜೆಯ  ಕಾಲಯಾಪನೆಯನ್ನು ಮಾಡಬೇಕಾದ ಮಕ್ಕಳು ಗದ್ದೆಯಲ್ಲಿ ಆಡಿದರು !ಮೈ-ಕೈಗೆಲ್ಲ  ಕೆಸರು ಮೆತ್ತಿಸಿಕೊಂಡರು. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಿಳಿಪಾಠ ಸಾಕಾರವಾಗಿತ್ತು!ಇದು ಕಾಲದ ಅನಿವಾರ್ಯತೆ.

ಬೆಳೆದ ತರಕಾರಿ ಬಿಸಿಯೂಟಕ್ಕೆ : ಇದೇ ಶಾಲೆಯಲ್ಲಿ ಇತರ ಸ್ಥಳೀಯ ಸಂಘಟನೆಯೊಂದಿಗೆ ಮಕ್ಕಳಿಂದಲೇ ತರಕಾರಿ ಬೆಳೆಯುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಪಡೆದ ತರಕಾರಿ ಬಿಸಿಯೂಟಕ್ಕೆ ಬಳಕೆ.ಕುಂಬಳಚೇರಿ ಶಾಲೆಯ ಈ ಕೃಷಿ ಪಾಠ ಇತರ ಶಾಲೆಗಳಿಗೆ ಮಾದರಿ. ಪಾಠಪಠ್ಯದ ಹೊರತಾಗಿ ಕೃಷಿಗೂ ಪ್ರತ್ಯೇಕವಾದ ಅವಧಿಯನ್ನು ಗೊತ್ತು ಮಾಡಬಹುದು. ಇದಕ್ಕೆ ನಾಡಿನ ದೊರೆಗಳ ಅನುಮತಿಗೆ ಕಾಯಬೇಕಾಗಿಲ್ಲ. ಮನಸ್ಸು ಮತ್ತು ಪ್ರಯತ್ನವಿದ್ದರೆ ಶಾಲಾಡಳಿತ, ಅಧ್ಯಾಪಕ ವೃಂದ ಅನುಷ್ಠಾನಿಸಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry