ಚಿಣ್ಣರ ಅಂಗಳದಲ್ಲಿ ಅಲೆಮಾರಿ ಮಕ್ಕಳು...

7

ಚಿಣ್ಣರ ಅಂಗಳದಲ್ಲಿ ಅಲೆಮಾರಿ ಮಕ್ಕಳು...

Published:
Updated:
ಚಿಣ್ಣರ ಅಂಗಳದಲ್ಲಿ ಅಲೆಮಾರಿ ಮಕ್ಕಳು...

ತಿಪಟೂರು: ಈ ಮಕ್ಕಳು ಈವರೆಗೆ ಶಾಲೆಯ ಬಾಗಿಲು ತುಳಿದವರಲ್ಲ. ತಮ್ಮ ಪೋಷಕರ ಅಲೆದಾಟದ ಬದುಕಿನಂತೆಯೇ ಅಕ್ಷರ ಸಂಪರ್ಕ ವಿಲ್ಲದ ಈ ಮಕ್ಕಳ ಬಾಲ್ಯ ನೀರಸವಾಗಿತ್ತು.ಮಾದರಿ ಕನ್ನಡ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳ ಅಲೆಮಾರಿ ಮಕ್ಕಳನ್ನು ಶಾಲೆಗೆ ಕರೆತರುವ ಸಿದ್ಧತೆಯಲ್ಲಿದೆ. ತಿಪಟೂರು ಪಕ್ಕ ಮಂಜುನಾಥ ನಗರದ ಆಚೆ ಗುಡ್ಡದ ಪಕ್ಕದಲ್ಲಿ ಸುಮಾರು 12 ವರ್ಷಗಳಿಂದ ಟೆಂಟ್‌ಗಳಲ್ಲಿ ಬದುಕುತ್ತಿರುವ ಅಲೆಮಾರಿ ಕುಟುಂಬ ಹಾಗೂ ಶಾರದಾ ನಗರ ರೈಲ್ವೆ ನಿಲ್ದಾಣ ಮುಂದೆ ಬಯಲಿ ನಲ್ಲಿ ಕೆಲ ತಿಂಗಳಿಂದ ತಾತ್ಕಾಲಿಕ ನೆಲೆಯೂರಿರುವ ಪ್ಲಾಸ್ಟಿಕ್ ಸಾಮಗ್ರಿ ಮಾರಾಟಗಾರರ ಮಕ್ಕಳು ಚಿಣ್ಣರ ಅಂಗಳಕ್ಕೆ ಬಂದು ನಲಿಯುತ್ತಿದ್ದಾರೆ. ಮಂಜುನಾಥನಗರ ಸಮೀಪದ ಮಕ್ಕಳಂತೂ ಹಳ್ಳಿಹಳ್ಳಿ ಸುತ್ತಿ ಕೂದಲು ಕೊಂಡು ಬದುಕು ಸಾಗಿಸುವ ಪೋಷಕರ ಜತೆ ತಾವೂ ಅಲೆದಾಡಿ ಬಾಲ್ಯವನ್ನು ದುಸ್ಥಿತಿಯಲ್ಲಿ ಕಳೆಯುತ್ತಿದ್ದರು.ಮಾಸಿದ ಬಟ್ಟೆ, ಉದ್ದ ಕೂದಲು, ಗೊಣ್ಣೆ ಸುರಿಸಿಕೊಂಡು ನಾಗರಿಕ ಪ್ರಪಂಚದಿಂದ ದೂರ ಉಳಿದಂತಿದ್ದ ಈ ಮಕ್ಕಳು ಈಗ ಚಿಣ್ಣರ ಅಂಗಳದಲ್ಲಿ ಮುಖ ಅರಳಿಸಿದ್ದಾರೆ. ಸ್ವಚ್ಛತೆಯೊಂದಿಗೆ ಆನಂದದಿಂದಿದ್ದಾರೆ. ಬಿಇಒ ಕಚೇರಿ ಹಿಂದಿನ ಮಾದರಿ ಕನ್ನಡ ಶಾಲೆಯಲ್ಲಿ ತಿಂಗಳಿಂದ ನಡೆಯುತ್ತಿರುವ ಚಿಣ್ಣರ ಅಂಗಳದ ಆಟಪಾಟಗಳಲ್ಲಿ ತೊಡಗಿರುವ ಈ ಮಕ್ಕಳಲ್ಲಿ ಶಾಲೆಗೆ ಸೇರಿ ಓದಬೇಕೆಂಬ ಆಸೆ ಕುಡಿಯೊಡೆದಿದೆ.ಲಕ್ಷ್ಮೀ ಎಂಬ 10 ವರ್ಷದ ಹುಡುಗಿ ತಾನು ಓದಿ ಲಾಯರ್ ಆಗುತ್ತೇನೆಂದು ಕಣ್ಣರಳಿಸುತ್ತಾಳೆ. ಇದೇ ಕ್ಯಾಂಪಿನ ಮಕ್ಕಳಾದ ಅಣ್ಣಪ್ಪ (9), ಕರಿಯಪ್ಪ (8), ದಿನೇಶ್ (7) ತಾವು ಇನ್ನು ಮುಂದೆ ಶಾಲೆಗೆ ಹೋಗುತ್ತೇವೆ ಎನ್ನುತ್ತಾರೆ. ಪ್ಲಾಸ್ಟಿಕ್ ವ್ಯಾಪಾರಿಗಳ ಮಕ್ಕಳ ಮಾತೃಭಾಷೆ ಉರ್ದು ಆದರೂ ಕನ್ನಡವನ್ನು ಕಲಿತು ಮಾತನಾಡುತ್ತಿದ್ದಾರೆ. ಆ ಗುಂಪಿನ ಸಿಮ್ರೋನ್, ಹಿನಾ ಕೌಸರ್, ಐಶಾ, ಶೌಖತ್ ಆಲಿ ಚಿಣ್ಣರ ಅಂಗಳದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ ಇವರಿಗೆ ಒಳ್ಳೆಯ ಊಟದ ವ್ಯವಸ್ಥೆಯಿದೆ. ಆದರೆ ಬಟ್ಟೆ ಮತ್ತು ಪುಸ್ತಕದ ವ್ಯವಸ್ಥೆ ಆಗಬೇಕಿದೆ.ಈ ಮಕ್ಕಳು ಚಿಣ್ಣರ ಅಂಗಳ ಮುಗಿಸಿದ ಮೇಲೆ ಅವರವರ ವಯಸ್ಸಿಗೆ ಅನುಗುಣವಾಗಿ ಪ್ರಾಥಮಿಕ ತರಗತಿಗಳಿಗೆ ಸೇರಿಸುವ ಉದ್ದೇಶವಿದೆ. ಮಂಜು ನಾಥ ನಗರದ ಮಕ್ಕಳ ಪೋಷಕರಂತೂ ಅಲ್ಲಿಯೇ ನೆಲೆಸಲು ಉದ್ದೇಶಿಸಿರುವುದರಿಂದ ಸಮೀಪದ ಶಾಲೆಗೆ ಮಕ್ಕಳನ್ನು ಸೇರಿಸಲು ತಾಪತ್ರಯವಿಲ್ಲ.

 

ಆದರೆ ಪ್ಲಾಸ್ಟಿಕ್ ಸಾಮಗ್ರಿ ವ್ಯಾಪಾರಿಗಳ ಮಕ್ಕಳಿಗೆ ಚಿಣ್ಣರ ಅಂಗಳ ಮುಗಿಸಿದ ಪ್ರಮಾಣ ಪತ್ರ ನೀಡಿ ಅವರು ನೆಲೆಯೂರುವ ಸ್ಥಳಗಳಲ್ಲಿ ಶಾಲೆಗೆ ಸೇರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮಕ್ಕಳಿಗೆ ಶಿಕ್ಷಕ ಜಿ.ಟಿ.ಲಕ್ಷ್ಮಯ್ಯ, ಸ್ವಯಂ ಸೇವಕರಾದ ರತ್ನಮ್ಮ, ಹನುಮಂತಪ್ಪ ಆಟಪಾಟ ಹೇಳಿಕೊಡುತ್ತಿದ್ದಾರೆ.ಶಾಲೆ ಬಿಟ್ಟ ನಗರದ ಸುಮಾರು 25ಕ್ಕೂ ಹೆಚ್ಚು ಮಕ್ಕಳನ್ನು ಚಿಣ್ಣರ ಅಂಗಳಕ್ಕೆ ಸೇರಿಸುವ ಉದ್ದೇಶ ಶಿಕ್ಷಣ ಇಲಾಖೆಗಿತ್ತು. ಆದರೆ ಪೋಷಕರು ಸಹಕಾರ ತೋರಿಲ್ಲ. ಆ ಮಕ್ಕಳನ್ನು ಚಿಣ್ಣರ ಅಂಗಳದಲ್ಲಿ ಸಿದ್ಧಪಡಿಸಿ ಶಾಲೆಗೆ ಸೇರಿಸುವ ಕೆಲಸ ಆಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry