ಚಿಣ್ಣರ ಚಿತ್ತ ಮತ್ತೆ ಶಾಲೆಯತ್ತ

7

ಚಿಣ್ಣರ ಚಿತ್ತ ಮತ್ತೆ ಶಾಲೆಯತ್ತ

Published:
Updated:

ಯಾದಗಿರಿ: ಅರಳುವ ಮನಸ್ಸಿನ ಮಕ್ಕಳಲ್ಲಿ ಅದೇನೋ ಸಂತೋಷ. ಯಾವುದೇ ಚಿಂತೆ, ಹೆದರಿಕೆಗಳ ಸುಳಿವಿಲ್ಲ. ಎಲ್ಲರಂತೆ ತಾವು ಆಟ ಆಡಿ ನಲಿಯಬಹುದು. ಪಾಠ ಓದಬಹುದು ಎಂಬ ಹುಮ್ಮಸ್ಸು ಅಲ್ಲಿತ್ತು. ಮನೆಯ ಕೆಲಸಗಳಿಂದಾಗಿ ಶಾಲೆಯಿಂದ ದೂರ ಉಳಿದ ಪುಟಾಣಿಗಳಿಗೆ, ಶಾಲೆಯ ವಾತಾವರಣ ಸಿಕ್ಕಿತ್ತು. ಜೊತೆಗೆ ಒಂದಿಷ್ಟು ಮನೋರಂಜನೆಯೂ ದೊರೆಯಿತು.ನಗರದ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಬೇಸಿಗೆಯ ವಸತಿ ಸಹಿತ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಿತು. ಸುಮಾರು 24 ಹಳ್ಳಿಗಳ 84 ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ತಾಲ್ಲೂಕಿನ 24 ಹಳ್ಳಿಗಳ 6 ರಿಂದ 14 ವರ್ಷದ ಒಳಗಿರುವ ಮಕ್ಕಳು ದನ ಕಾಯುವುದು, ಕುರಿ ಕಾಯುವುದು ಹಾಗೂ ಮನೆಯಲ್ಲಿನ ಚಿಕ್ಕಮಕ್ಕಳ ಪಾಲನೆ, ಪೋಷಣೆ ಹೀಗೆ ಹತ್ತಾರು ಕೆಲಸಗಳಿಂದಾಗಿ ಶಾಲೆಯಿಂದ ಹೊರಗೆ ಉಳಿದಿದ್ದರು. ವಿವಿಧ ಹಳ್ಳಿಗಳಲ್ಲಿ ಓಡಾಡಿದ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ 24 ಹಳ್ಳಿಗಳ ಸಮಾಜ ಸೇವಕರು, ಅಂತಹ 84 ಮಕ್ಕಳನ್ನು ವಸತಿ ಸಹಿತ ಚಿಣ್ಣರ ಅಂಗಳಕ್ಕೆ ಕರೆತಂದಿದ್ದರು.10 ದಿನಗಳ ಈ ಶಿಬಿರದಲ್ಲಿ ಮಕ್ಕಳ ಕಲಿಕೆಯ ಜೊತೆಗೆ, ಅವರ ವಯಸ್ಸಿಗೆ ತಕ್ಕಂತಹ ಜ್ಞಾನ ನೀಡುವ ಕೆಲಸವನ್ನು ಮಾಡಲಾಯಿತು. ಸಂಸ್ಥೆಯ ಸಮಾಜ ಸೇವಕರು ಮಕ್ಕಳಿಗೆ ನೋಟ್‌ಬುಕ್, ಪೆನ್, ಪುಸ್ತಕಗಳನ್ನು ನೀಡಿ, ಓದು-ಬರಹ ಕಲಿಸಿದರು.ವಯಸ್ಸಿಗೆ ಅನುಗುಣವಾಗಿ ಈ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಮೂಲಕ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ಹಾಗೂ ಸತತವಾಗಿ ಶಾಲೆಗೆ ಹಾಜರು ಪಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂಬುದು ಇಲ್ಲಿ ಕೆಲಸ ಮಾಡುವ ಸಮಾಜ ಸೇವಕರ ಸ್ಪಷ್ಟ ನುಡಿ.ಕೇವಲ ಓದು-ಬರಹವಲ್ಲದೇ ಈ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ನಡೆಯಿತು. ಈ ಮಕ್ಕಳಿಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಂದ ಅಭಿನಯ ಗೀತೆ, ಜಾನಪದ ಹಾಡು, ಚಿತ್ರಕಲೆ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಲಾಯಿತು. ಸ್ಪರ್ಧಾತ್ಮಕ ಆಟಗಳನ್ನು ಆಡಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ನಗರ ಪೊಲೀಸ್ ಅಧಿಕಾರಿಗಳು, ಫಾ. ಸನ್ನಿ ಟಿ.ಜೆ ಮತ್ತು ಫಾ. ರೆಜಿ ಜೆಕೆಬ್ ಸಾಕ್ಷಿಯಾದರು. ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

“ಮನ್ಯಾಗಿನ ಕೆಲಸ ಭಾಳ ಇರತಿತ್ರಿ. ಹಿಂಗಾಗಿ ಸಾಲಿಗೆ ಹೋಗಾಕ ಆಗಿಲ್ಲ. ಬೆಳಗಾದ ಕೂಡಲೇ ಊಟಾ ಮಾಡಿ, ದನ ಹೊಡಕೊಂಡ ಅಡವಿಗೆ ಹೋಗತಿದ್ದೆ. ನಮ್ಮ ಜೋಡಿ ಹುಡಗೋರು, ಸಾಲಿ ಡ್ರೆಸ್ ಹಾಕ್ಕೊಂಡ, ಪಾಟಿ ಚೀಲ ತಗೊಂಡ ಸಾಲಿಗೆ ಹೋಗ್ತಿದ್ರು.

 

ನನಗೂ ಹೋಗಬೇಕಂತ ಆಸೆ ಆಗತಿತ್ತು. ಆದ್ರ ಮನ್ಯಾಗಿನ ಕೆಲಸ ಬಿಟ್ಟ ಹೆಂಗ ಹೋಗೋದು ಅಂತ ಚಿಂತಿ ಆಕ್ಕಿತ್ರಿ. ಇಲ್ಲಿ ಬಂದ ಮ್ಯಾಲ 10 ದಿನಾ ಅಭ್ಯಾಸ ಮಾಡೇವ್ರಿ. ಆಟ ಆಡೇವಿ. ಮತ್ತ ಸಾಲಿಗೆ ಹೋಗಬೇಕ ಅಂತ ಅನ್ನಕೊಂಡೇವ್ರಿ” ಎಂದು ಶಿಬಿರದಲ್ಲಿ ಪಾಲ್ಗೊಂಡಿದ ಬಾಲಕ ಶಿವಬಸವ ತನ್ನ ಅನಿಸಿಕೆ ಹಂಚಿಕೊಂಡರು.ಬುಧವಾರ ಮಧ್ಯಾಹ್ನ ನಡೆದ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಬಾಲ ಕಾರ್ಮಿಕ ಮಕ್ಕಳ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್, ಶಾಲೆ ಬಿಟ್ಟಿರುವ ಮಕ್ಕಳನ್ನು ಒಂದೆಡೆ ಸೇರಿಸಿ, ಅವರಲ್ಲಿ ಶಾಲೆಗೆ ಹೋಗುವಂತೆ ಪ್ರೋತ್ಸಾಹ ನೀಡುತ್ತಿರುವ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ ಕಾರ್ಯ ಶ್ಲಾಘನೀಯ.ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಮಕ್ಕಳ ಜೊತೆಗೆ ಪಾಲಕರಲ್ಲೂ ಪರಿವರ್ತನೆ ತರುವುದು ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.ಸರ್ಕಲ್ ಇನ್ಸ್‌ಪೆಕ್ಟರ್ ದತ್ತಾತ್ರೇಯ ಕಾರ್ನಾಡ್ ವೇದಿಕೆಯಲ್ಲಿದ್ದರು. ಸಿಸ್ಟರ್ ಮಿನಿ ಪ್ರಾರ್ಥಿಸಿದರು. ಮಲ್ಲಪ್ಪ ಆಶನಾಳ ಸ್ವಾಗತಿಸಿದರು.  ಶರಣಪ್ಪ ನಿರೂಪಿಸಿದರು. ಶ್ವೇತಾ ಎಂ.ಕೆ. ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry