ಬುಧವಾರ, ಸೆಪ್ಟೆಂಬರ್ 30, 2020
21 °C

ಚಿಣ್ಣರ ಚಿತ್ರವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಣ್ಣರ ಚಿತ್ರವರ್ಷ

ಬೆಂಗಳೂರಿನ ‘ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ’ ರಾಜ್ಯದ ಮಕ್ಕಳಿಗೆ ಜಗತ್ತಿನ ಅತ್ಯುತ್ತಮ ಮಕ್ಕಳ ಚಲನಚಿತ್ರಗಳನ್ನು ‘ಮನೆ ಮುಂದೆ ಮಕ್ಕಳ ಸಿನಿಮಾ’ ಪರಿಕಲ್ಪನೆಯಡಿ ತೋರಿಸಲಿದೆ. ಇದೇ 5ರಿಂದ ಡಿಸೆಂಬರ್ 25ರವರೆಗೆ ಹಮ್ಮಿಕೊಂಡಿರುವ ಈ ಚಿತ್ರೋತ್ಸವದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಿನಿಮಾಗಳನ್ನು ತೋರಿಸಲಾಗುತ್ತದೆ.ಆರಂಭಿಕ ಹಂತದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳ ಬಯಲು ರಂಗಮಂದಿರ/ಆಟದ ಮೈದಾನಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ನಂತರ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ನಾಲ್ಕು ಭಾನುವಾರಗಳ ಸಂಜೆ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಸಾಂಸ್ಕೃತಿಕ, ನೈತಿಕ, ಸಾಮಾಜಿಕ ಮೌಲ್ಯಗಳು ಹಾಗೂ ಜಾಗತೀಕರಣದ ಬಗ್ಗೆ ಅರಿವು ಮೂಡಿಸುವುದು ಈ ಚಿತ್ರೋತ್ಸವದ ಉದ್ದೇಶವಾಗಿದೆ.‘ಎಲ್ಲಾ ವರ್ಗದ ಮಕ್ಕಳಿಗೂ ಸಿನಿಮಾ ಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಹೊಸ ಪ್ರಯೋಗ ಹುಟ್ಟುಹಾಕಲಾಗಿದೆ. ಜಗತ್ತಿನ ವಿವಿಧ ಭಾಷೆಯ ಚಿತ್ರಗಳೊಂದಿಗೆ ಪ್ರಾದೇಶಿಕ ಚಿತ್ರಗಳನ್ನೂ ತೋರಿಸಲಾಗುತ್ತದೆ. ಪ್ರಾದೇಶಿಕ ಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆಯಾ ಬಡಾವಣೆಯ ಪಾಲಿಕೆ ಸದಸ್ಯರು, ಸಂಘ ಸಂಸ್ಥೆಗಳ ಸಲಹೆ ಮೇರೆಗೆ ಮುಂದುವರಿಯಲಾಗುತ್ತದೆ’ ಎನ್ನುವುದು ಚಿತ್ರವರ್ಷದ ಬಗ್ಗೆ ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡರ ವಿವರಣೆ.ಮಕ್ಕಳ ಸಿನಿಮಾ ಪ್ರದರ್ಶನ ಚಿತ್ರವರ್ಷದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದ ನಂಜುಂಡೇಗೌಡರು ಪತ್ರಕರ್ತರ ಪ್ರಶ್ನೆಗಳ ವರ್ಷವನ್ನೂ ಎದುರಿಸಬೇಕಾಯಿತು.‘ಈಗ ಬಳ್ಳಾರಿಯಲ್ಲಿ, ಬೆಂಗಳೂರಿನಲ್ಲಿ ಮರಾಠಿ ಚಿತ್ರ ತೋರಿಸೋದಕ್ಕೆ ಆಗತ್ತಾ? ಮಕ್ಕಳಿಗೆ ಭಾಷೆ ಅರ್ಥವಾಗದಿದ್ದರೆ ಚಿತ್ರ ಹೇಗೆ ನೋಡುತ್ತಾರೆ? ಬೆಂಗಳೂರಿನ ಯಾವ ಬಡಾವಣೆಯಲ್ಲಿ ಯಾವ ಭಾಷೆಯ ಮಕ್ಕಳ ಸಂಖ್ಯೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಂಡು ಆಯಾ ಭಾಷೆಯ ಚಿತ್ರಗಳನ್ನು ತೋರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದೊಂದು ಮಕ್ಕಳ ಚಿತ್ರಗಳ ಚಳವಳಿಯಾಗುವ ಮಾದರಿಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ’- ಹೀಗೆ, ನಂಜುಂಡೇಗೌಡರು ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರು.ಅಂದಹಾಗೆ, ‘ಚಿಣ್ಣರ ಚಿತ್ರವರ್ಷ’ ಶೀರ್ಷಿಕೆಯಡಿ ಸದ್ಯಕ್ಕೆ ಬೆಂಗಳೂರಿನಲ್ಲಿ ತೋರಿಸಲಾಗುವ ಸಿನಿಮಾಗಳ ಪಟ್ಟಿ ತಯಾರಾಗಿದೆ. ಹನ್ನೊಂದು ಕನ್ನಡ ಚಿತ್ರಗಳು. ‘ಅಪಾಲಜಿ’ ಎಂಬ ಚೀನಿ ಚಿತ್ರವೂ ಪಟ್ಟಿಯಲ್ಲಿದೆ. ಗೋಷ್ಠಿಯಲ್ಲಿ ನಿರ್ದೇಶಕ ಭಗವಾನ್, ಪತ್ರಕರ್ತ ಸೀತಾರಾಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.