ಶನಿವಾರ, ಮೇ 21, 2022
26 °C

ಚಿತ್ತಾಲರ ಅಧ್ಯಯನಕ್ಕೆ ಯುವಕರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಇಂದಿನ ಯುವಪೀಳಿಗೆ ಸಾಹಿತಿ ಯಶವಂತ ಚಿತ್ತಾಲ ಅವರ ಬಗ್ಗೆ ಅಧ್ಯಯನ ನಡೆಸುವುದು ಅಗತ್ಯವಾಗಿದ್ದು, ಅವರ ಶಿಕಾರಿ, ಪುರುಷೋತ್ತಮ, ಮೂರು ದಾರಿಗಳು ಕೃತಿಗಳಿಂದಲೇ ಅವರ ಬರಹದ ಆಳದ ಅರಿವು ತಿಳಿಯುತ್ತದೆ” ಎಂದು ಸಾಹಿತಿ ಜಯಂತ ಕಾಯ್ಕಿಣಿ ನುಡಿದರು.ಅವನಿ ರಸಿಕರ ರಂಗ ವೇದಿಕೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ಸಾಹಿತಿ ಯಶವಂತ ಚಿತ್ತಾಲರ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ~ದಲ್ಲಿ ಮಾತನಾಡಿದ ಅವರು, “ಶಿಕಾರಿ ಕಾದಂಬರಿಯ ನಾಯಕನ ಪಾತ್ರ ಚಿತ್ತಾಲರ ನೈಜ ಜೀವನವನ್ನೇ ಹೋಲುತ್ತದೆ. ಅವರ ತಂದೆ ತಮಗೆ ಬಾಧಿಸುತ್ತಿದ್ದ ಕಾಯಿಲೆಯ ನೋವು ತಡೆಯಲಾಗದೇ ಬಾವಿಗೆ ಹಾರಿ ಪ್ರಾಣ ಬಿಟ್ಟರು. ಅದರ ಬಗ್ಗೆಯೇ ಚಿಂತಿಸಿದ ಚಿತ್ತಾಲರು ಬೆಂಕಿಯನ್ನು ಕಂಡರೆ ಭಯಪಡುವ ನಾಯಕನನ್ನು ಶಿಕಾರಿಯಲ್ಲಿ ಸೃಷ್ಟಿಸಿದರು. ನಗರ ಜೀವನದ ಬಗ್ಗೆಯೂ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ತಮ್ಮ ಪ್ರೌಢಶಾಲೆಯನ್ನು ಧಾರವಾಡದಲ್ಲೇ ಪೂರೈಸಿದ್ದುದರಿಂದ ವಿಶೇಷ ನಂಟನ್ನು ಈ ನಗರದ ಬಗ್ಗೆ ಇಟ್ಟುಕೊಂಡಿದ್ದರು” ಎಂದು ಹೇಳಿದರು.ಉಷಾ ನರಸಿಂಹನ್ ಅವರ `ಮಾಮಿ ಮತ್ತು ಇತರ ಕಥೆಗಳು~ ಹಾಗೂ ಅನ್ನಪೂರ್ಣ ಅಗಡಿ ಅವರ `ಗಗನ ಕುಸುಮಗಳು~ ಎಂಬ ಕೃತಿಗಳಿಗೆ ಅವನಿ ರಸಿಕರ ರಂಗದ ವತಿಯಿಂದ ನೀಡಲಾದ ದೇವಾಂಗನಾ ಶಾಸ್ತ್ರಿ ಸಾಹಿತ್ಯ ಬಹುಮಾನವನ್ನು ಕಾಯ್ಕಿಣಿ ಪ್ರದಾನ ಮಾಡಿದರು. ಶ್ರೀಧರ ಹೆಗಡೆ ಭದ್ರನ್ ಕೃತಿಗಳ ಪರಿಚಯ ಮಾಡಿದರು.ಪ್ರಶಸ್ತಿ ಸ್ವೀಕರಿಸಿದ ಉಷಾ ನರಸಿಂಹನ್ ಹಾಗೂ ಅನ್ನಪೂರ್ಣ ಅಗಡಿ ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.ಹಿರಿಯ ವಿಮರ್ಶಕ ಪ್ರೊ.ಎಸ್.ಎಂ.ವೃಷಭೇಂದ್ರಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.