ಗುರುವಾರ , ಫೆಬ್ರವರಿ 25, 2021
31 °C
ನಾದ ನೃತ್ಯ

ಚಿತ್ತೈಕಾಗ್ರದಿಂದ ಅವತರಿಸಿದ ಅವಧಾನ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಚಿತ್ತೈಕಾಗ್ರದಿಂದ ಅವತರಿಸಿದ ಅವಧಾನ

ಅವಧಾನ ಪಲ್ಲವಿ..! ತಾಳ ಪ್ರಧಾನವಾದ ಈ ವಿಶಿಷ್ಟ ಸಂಗೀತ ಪ್ರಕಾರವನ್ನು ಪ್ರಾತ್ಯಕ್ಷಿಕೆ ಮೂಲಕ ಸವಿಯುವ ಸುಯೋಗ ಒದಗಿದ್ದು ಭಾರತೀಯ ವಿದ್ಯಾಭವನದಲ್ಲಿ.ಪಲ್ಲವಿ ಚಂದ್ರಪ್ಪ ಅವರ ಶತಮಾನೋತ್ಸವ ಆಚರಣೆ ಪ್ರಯುಕ್ತ ಈಚೆಗೆ ನಡೆದ ‘ಪಲ್ಲವಿ ಸಂಗೀತೋತ್ಸವ’ದಲ್ಲಿ ವೈವಿಧ್ಯಮಯ ಸಂಗೀತ ಕಛೇರಿ ಜತೆಗೆ ಪ್ರಾತ್ಯಕ್ಷಿಕೆಯೂ ನಡೆಯಿತು. ಮೈಸೂರಿನ ವಿದ್ವಾನ್‌ ನಂದಕುಮಾರ್‌ ‘ಅವಧಾನ ಪಲ್ಲವಿ’ ಪ್ರಾತ್ಯಕ್ಷಿಕೆಯನ್ನು ಅತ್ಯಂತ ವಿಶಿಷ್ಟವಾಗಿ ನಡೆಸಿಕೊಟ್ಟರು.ಎರಡು ಕೈಗಳಲ್ಲಿ ತಾಳಗಳನ್ನು ಬ್ಯಾಲೆನ್ಸ್‌ ಮಾಡುತ್ತಾ ಹಾಡುವುದನ್ನು ಕೇಳುವುದು ಬಹುತೇಕ ಕೇಳುಗರಿಗೆ ಹೊಸ ಅನುಭವ. ಏಕೆಂದರೆ ನಗರದಲ್ಲಿ ಅವಧಾನ ಪಲ್ಲವಿ ಸಂಗೀತ ಕಛೇರಿ ನಡೆಯುವುದೇ ಬಹಳ ಅಪರೂಪ.ಹೀಗಾಗಿ ಪ್ರತಿಯೊಂದು ಐಟಂ ಆರಂಭಿಸಿದಾಗಲೂ ಕುತೂಹಲ, ಮತ್ತಷ್ಟು ತಿಳಿದುಕೊಳ್ಳುವ ಕೌತುಕ, ಅವಧಾನದ ಬಗ್ಗೆ ಮಾತು ಕೇಳುವ ತರಾತುರಿ, ರಾಗವನ್ನು ಆಸ್ವಾದಿಸುವ ಉತ್ಸಾಹ, ತಾಳಗಳನ್ನು ಹಾಕುವ ಪದ್ಧತಿಯನ್ನು ನೋಡುವ ಕಾತರ.ಇವೆಲ್ಲವನ್ನೂ ವಿದ್ವಾನ್‌ ನಂದಕುಮಾರ್‌ ಅವರ ಏಕಕಾಲಕ್ಕೆ ನಿರ್ವಹಿಸುವ ಮೂಲಕ ಕೇಳುಗರಿಗೆ ಎಂದೂ ಮರೆಯಲಾರದ ವಿಶಿಷ್ಟ ಅನುಭವ ನೀಡಿದರು.

ಅವಧಾನ ಎಂಬುದು ಒಂದು ಕಲೆ. ಇದನ್ನು ಶ್ರುತಿಯಲ್ಲಿಯೂ ಮಾಡಬಹುದು, ತಾಳದಲ್ಲೂ ಮಾಡಬಹುದು.‘ಚಿತ್ತೈಕಾಗ್ರಂ ಅವಧಾನಂ’ (ಚಿತ್ತದಲ್ಲಿ ಏಕಾಗ್ರತೆ ಇದ್ದರೆ ಅದು ಅವಧಾನ) ಎನ್ನುತ್ತಲೇ ಕರ್ನಾಟಕ ಸಂಗೀತದ ಆದಿತಾಳ, ತ್ರಿಪುಟ, ಝಂಪೆ, ಮಠ್ಯ, ಅಟ್ಟ, ಮಿಶ್ರ ತಾಳಗಳನ್ನು ಹಂತಹಂತವಾಗಿ ವಿವರಿಸುತ್ತಾ, ಪ್ರಾಯೋಗಿಕವಾಗಿಯೂ ತೋರಿಸುತ್ತಾ ಸಂಗೀತವನ್ನು ವಿಭಿನ್ನವಾಗಿ, ವಿದ್ವತ್‌ಪೂರ್ಣವಾಗಿ ನಂದಕುಮಾರ್‌ ಪ್ರಸ್ತುತಪಡಿಸಿದರು.ಅಂದಿನ ಆ ಅವಧಾನ ಪಲ್ಲವಿ ಸಂಗೀತ ಪ್ರಾತ್ಯಕ್ಷಿಕೆ ತಾಳ ಪ್ರಧಾನವಾಗಿತ್ತು. ಸಂಗೀತದಲ್ಲಿ ರಾಗ– ಶ್ರುತಿಯಷ್ಟೇ ತಾಳಕ್ಕೂ ಮಹತ್ವವಿದೆ. ಕಲಾವಿದರ ಪಾಂಡಿತ್ಯ, ಸಾಮರ್ಥ್ಯ, ಸಂಗೀತದ ಪ್ರಭುತ್ವ, ಹಿಡಿತ, ಸಾಧನೆ ಎಲ್ಲವೂ ಅನಾವರಣ ಗೊಳ್ಳುವುದು ಅವಧಾನ ಪಲ್ಲವಿ ಸಂಗೀತದಲ್ಲಿ.ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ತಾಳವನ್ನು ಒಂದೇ ಕೈಯಲ್ಲಿ ಎಣೆಕೆಯ ರೂಪದಲ್ಲಿ ಹಾಕಿ ತೋರಿಸುವುದು ಪದ್ಧತಿ. ಆದರೆ ಅವಧಾನ ಪಲ್ಲವಿಯಲ್ಲಿ ತಾಳವನ್ನು ಎರಡು ಕೈಗಳಲ್ಲಿ ಸಮತೋಲನ ಮಾಡುತ್ತಾ ಹಾಕುತ್ತಾರೆ.ಇದು ಅತ್ಯಂತ ಕ್ಲಿಷ್ಟಕರ ಪದ್ಧತಿ, ಆದರೆ ಅಷ್ಟೇ ರೋಚಕ. ಸಂಗೀತ ಕಛೇರಿಯ ಸಂಪ್ರದಾಯದಂತೆ ಮೊದಲಿಗೆ ವಿದ್ವಾನ್‌ ನಂದಕುಮಾರ್ ತಮ್ಮ ಅವಧಾನ ಪಲ್ಲವಿ ಪ್ರಾತ್ಯಕ್ಷಿಕೆಯನ್ನು ಆದಿತಾಳದ ವರ್ಣದೊಂದಿಗೆ ಆರಂಭಿಸಿದರು.ಮೈಸೂರು ಸದಾಶಿವರಾಯರ ರಚನೆಯನ್ನು ‘ಜತಿ–ಜಾತಿ ವಿನ್ಯಾಸ’ದೊಂದಿಗೆ ವೈವಿಧ್ಯಮಯವಾಗಿ ಹಾಡುವುದರ ಜತೆಗೆ ತಾಳವನ್ನು ಹಾಕುತ್ತಾ, ಅದರ ವಿವರಣೆ ನೀಡುತ್ತಾ ವಿಶಿಷ್ಟವಾಗಿ ಪ್ರಸ್ತುತಪಡಿಸಿದರು. ‘ಗುರುಸ್ಮರಣಂ– ಚಿತ್ತೈಕಾಗ್ರಂ’ ಎರಡೇ ಅವಧಾನ ಪಲ್ಲವಿ ಕಲಿಯುವ ಸುಲಭ ಸೂತ್ರ; ಇದೇ ಈ ಪದ್ಧತಿ ಕಲಿಕೆಯ ಯಶಸ್ಸಿನ ಗುಟ್ಟು ಎಂಬುದನ್ನು ಕೇಳುಗರಿಗೆ ಮನದಟ್ಟು ಮಾಡಿದರು.ಅವಧಾನ ಪಲ್ಲವಿ ಹಾಡುವಾಗ ಮನಸ್ಸು ಏಕಾಗ್ರವಾಗಿರಬೇಕು, ಇಲ್ಲದಿದ್ದರೆ ತಾಳ, ನಡೆ, ಲಯ, ಸ್ಥಾಯಿ ಯಾವುದೂ ಇಲ್ಲದೆ ಸಂಗೀತ ಹಳಿ ತಪ್ಪಿದ ರೈಲಿನಂತಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾ ಮುಂದಿನ ಭಾಗದಲ್ಲಿ ಭಾನುಚಂದ್ರಿಕೆ ರಾಗವನ್ನು ಆಯ್ದುಕೊಂಡರು.ಮೈಸೂರು ಮಹಾರಾಜರು ಬರೆದಿರುವ ‘ಭಜರೇರೆ ಭಜ ಮಾನಸ... ಸಿದ್ಧಿವಿನಾಯಕಂ...’ ಕೀರ್ತನೆ ತ್ರಿಶ್ಯ ನಡೆಯಲ್ಲಿ ಸಂಚರಿಸಿತು. ರೂಪಕ ತಾಳವನ್ನು ಸ್ಪಷ್ಟವಾಗಿ ಎಣಿಕೆ ಮೂಲಕ ಎರಡು ಕೈಗಳಲ್ಲಿ ಹಾಕುತ್ತಾ, ರಾಗಕ್ಕೆ ಭಾವದ ಪೋಷಾಕು ತೊಡಿಸುತ್ತಾ,ತಾಳಕ್ಕೆ ಲಯದ ಸಾಥಿ ಪಡೆಯುತ್ತಾ ಹಾಡಿದ್ದು ಇವರ ಕಲಾ ಪ್ರೌಢಿಮೆಯನ್ನು ಸಾಕಾರಗೊಳಿಸಿದಂತಿತ್ತು. ಕೀರ್ತನೆ ಭಾನುಚಂದ್ರಿಕೆ ರಾಗದಲ್ಲಿ ಅಲೆ ಅಲೆಯಾಗಿ ತೇಲಿಬಂದಾಗ ಭಕ್ತಿರಸದ ಸಿಂಚನವಾಯಿತು.ಪಲ್ಲವಿ ಚಂದ್ರಪ್ಪನವರೇ ರಚಿಸಿದ ಪಲ್ಲವಿ ‘ಸುಂದರಿ ಬ್ರೋವವೇ ಶ್ರೀ... ಮಹಾ ತ್ರಿಪುರ ಸುಂದರಿ...’ ಚತುರಶ್ರ ರೂಪಕ ಮತ್ತು ಮಿಶ್ರ ಝಂಪೆ ತಾಳಗಳಲ್ಲಿ ಅವತರಿಸಿತು. ಲಘು ಮತ್ತು ಧೃತಗಳ ನಿಭಾವಣೆ ಏಕಕಾಲದಲ್ಲಿ ಕಷ್ಟವೇ ಆದರೂ ಈ ಸಂಕೀರ್ಣ ತಾಳಗಳನ್ನು ಅತ್ಯಂತ ಸುಲಲಿತವಾಗಿ ಪ್ರಸ್ತುತಪಡಿಸಿದ ರೀತಿ ಅಚ್ಚರಿ ಮೂಡಿಸುವಂತಿತ್ತು.ತಾಳಗಳಲ್ಲಿನ ಆವರ್ತವನ್ನು ಚಂದ್ರಪ್ಪನವರು ಹೇಗೆ ಹೇಳಿಕೊಡುತ್ತಿದ್ದರು ಎಂಬುದನ್ನು ವಿವರಿಸುತ್ತಾ ಮುಂದಿನ ಭಾಗದಲ್ಲಿ ‘ಭಾನುಮತಿ ರಾಗ’ವನ್ನು ಖಂಡ ತ್ರಿಪುಟ ತಾಳದಲ್ಲಿ ಹಾಡುತ್ತಾ, ಒಂದು ಆವರ್ತವನ್ನು ಬಲಗೈಯಲ್ಲಿ, ಇನ್ನೊಂದು ಆವರ್ತವನ್ನು ಎಡಗೈಯಲ್ಲಿ ಹಾಕಿ ತೋರಿಸಿ ‘ಗುರುಗುಹ ಸ್ವಾಮಿ ನಿ ಭಕ್ತಿಂ ಕರೋಮಿ..’ ಎಂಬ ಕೀರ್ತನೆಯನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಕಲಾವಿದರು ತಮ್ಮ ಸಂಗೀತ ಜ್ಞಾನವನ್ನು ವಿನಮ್ರವಾಗಿ ಕೇಳುಗರಿಗೆ ಧಾರೆಯೆರೆದಾಗ ಅದು ಅಕ್ಷರಶಃ ‘ಸಂಗೀತ ದಾಸೋಹ’ದಂತಿತ್ತು.ಪಕ್ಷಿಗಳ ಇಂಚರ; ಅಶ್ವದ ನಡೆ...

ತಾಳದಲ್ಲಿ ಬ್ಯಾಲೆನ್ಸ್‌ ಇರಬೇಕು. ಅದು ಇದ್ದರೆ ಮಾತ್ರ ಅವಧಾನ ಸಾಧ್ಯ ಎಂಬುದನ್ನು ಪಲ್ಲವಿಯ ಮೂಲಕ ತೋರಿಸಿಕೊಟ್ಟು ಚತುರಶ್ರದ ಮೂರು ಕಾಲ ಮತ್ತು ತ್ರಿಶ್ಯ ನಡೆಯ ಮೂರು ಕಾಲಗಳನ್ನು ಎಡ–ಬಲ ಕೈಗಳಲ್ಲಿ ಹಾಕುತ್ತಾ ‘ಚಾರುಕೇಶಿ’ ರಾಗವನ್ನು ಹಾಡಿದರು.ವೈವಿಧ್ಯಮಯ ‘ತಾನಂ’ಗಳು ಇಲ್ಲಿ ವಿಶಿಷ್ಟ ಅನುಭೂತಿ ಮೂಡಿಸಿದವು. ಕುಕ್ಕುಟಾದಿ ತಾನ, ಮಂಡೂಕಾದಿ ತಾನ, ಅಶ್ವ ತಾನಗಳು ವೇದಿಕೆಯಲ್ಲಿ ವಿವಿಧ ಸ್ವರಮಾಲೆಗಳೊಂದಿಗೆ ಹೊರಹೊಮ್ಮಿತು. ಕುಕ್ಕುಟಾದಿ ತಾನದಲ್ಲಿ ಪಕ್ಷಿಗಳ ಇಂಚರವಿದ್ದರೆ, ಮಂಡೂಕಾದಿ ತಾನದಲ್ಲಿ ಕಪ್ಪೆ ಶಾಸ್ತ್ರೀಯವಾಗಿ ವಟಗುಟ್ಟಿತು.

ಅಶ್ವದ ತಾನ ‘ತಕ ತಕಿಟ.. ತಕ ತಕಿಟ..’ ಎಂಬ ನೃತ್ಯದ ಪರಿಭಾಷೆಯನ್ನು ಬಳಸಿ ಅವಧಾನದಲ್ಲಿ ಪಡಿಮೂಡಿಸಿದ್ದು ರೋಚಕ ಹಾಗೂ ಕುತೂಹಲಭರಿತ. ಇದರೊಂದಿಗೆ ನೋಂ..ತೋಂ.. ತಾನಗಳೂ ಮೇಳೈಸಿ ಪ್ರಾತ್ಯಕ್ಷಿಕೆಗೆ ವಿಶಿಷ್ಟ ಶೋಭೆ ತಂದಿತು.ಮುಂದಿನ ಭಾಗದಲ್ಲಿ ಮಿಶ್ರ ಅಟ್ಟತಾಳ ಮತ್ತು ಖಂಡ ಮಠ್ಯ ತಾಳದಲ್ಲಿ ಅವಧಾನ ಪಲ್ಲವಿ ಹಾಡಿದರು. ಇಡೀ ಕಾರ್ಯಕ್ರಮ ತಾಳಕ್ಕೇ ಮೀಸಲಾಗಿದ್ದರೂ ಕೇಳುಗರಿಗೆ ಕೊಂಚವೂ ಬೇಸರ ತರಲಿಲ್ಲ. ಸಂಗೀತದ ಮಾಧುರ್ಯವೂ ಅನುರಣಿಸಿದ್ದಲ್ಲದೆ ರಾಗ– ತಾಳ– ಭಾವ– ಭಕ್ತಿ ಎಲ್ಲವೂ ಒಂದರೊಳಗೊಂದಾಗಿ ಅಲ್ಲಿ ಅದ್ಭುತ ರಸಪಾಕ ಸೃಷ್ಟಿಯಾಗಿತ್ತು.ಕರ್ನಾಟಕ ಸಂಗೀತದಲ್ಲಿ ಮೋಹನ, ಖರಹರಪ್ರಿಯ ರಾಗಗಳನ್ನು ಇಷ್ಟಪಡದವರೇ ಇಲ್ಲ. ಈ ರಾಗಗಳ ಸೊಬಗೇ ಅಂಥದ್ದು. ‘ರಾಗಾವಧಾನ’ವನ್ನೂ ಮಾಡಿದ ವಿದ್ವಾನ್‌ ನಂದಕುಮಾರ್‌, ಆದಿತಾಳದಲ್ಲಿ ಖರಹರಪ್ರಿಯ ರಾಗವನ್ನು ‘ಪಲ್ಲವಿಗುಂ ಖರಹರ ಪ್ರಿಯಂ ಸ್ವರಾಸನದಿಂ..’ ಕೃತಿಯ ಮೂಲಕ ಪ್ರಸ್ತುತಪಡಿಸಿದರು.ಹಾಡುವ ಕಂಠದ ಶ್ರುತಿಯೇ ಬೇರೆ; ಹೇಳುವ ಕಂಠದ ಶ್ರುತಿಯೇ ಬೇರೆ ಎಂಬುದು ಸಾರ್ವಕಾಲಿಕ ಸತ್ಯವಾದರೂ ಹೇಳುವ– ಹಾಡುವ ಕಂಠಕ್ಕೆ ಒತ್ತಾಸೆಯನ್ನು ನೀಡಿದವರು ಪಕ್ಕವಾದ್ಯಗಾರರು.ವಿದ್ವಾನ್‌ ಚೆಲುವರಾಜು ಅವರ ಮೃದಂಗ ಲಯ ಸುಖಾನುಭೂತಿ ನೀಡಿದರೆ ವಿಶ್ವಜೀತ್‌ ಅವರ ಪಿಟೀಲು ತಂತಿಯ ಮೀಟುಗಳು ಎಳೆಎಳೆಯಲ್ಲೂ ಮಾಧುರ್ಯದ ಹನಿಗಳನ್ನು ಸಿಂಪಡಿಸುತ್ತಿದ್ದವು. ರಘುನಂದನ್‌ ತಂಬೂರದಲ್ಲಿ ಸಹಕಾರ ನೀಡಿ ಪ್ರಾತ್ಯಕ್ಷಿಕೆಗೆ ಮೆರುಗು ತಂದರು.ಸ್ವರವನ್ನು ಶ್ರುತಿಯಲ್ಲಿ– ತಾಳವನ್ನು ಲಯದಲ್ಲಿ ಹಿಡಿದರೇ ಸಹಜ ಸುಖ. ಈ ಎರಡೂ ಒಂದೇ ಕಡೆ ಸಿಕ್ಕರೆ ಅದು ವಿಶಿಷ್ಟ ‘ಅವಧಾನ’ ಎಂಬ ಮಹತ್ತರ ಸಂದೇಶ ವಿದ್ವಾನ್‌ ನಂದಕುಮಾರ್‌ ಅವರ ಪ್ರಾತ್ಯಕ್ಷಿಕೆಯಲ್ಲಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.