ಬುಧವಾರ, ಮೇ 18, 2022
23 °C

ಚಿತ್ರಕಲೆ: ಸಂವಹನಕ್ಕೆ ವ್ಯಾಕರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆಧುನಿಕ ಚಿತ್ರಕಲೆಯನ್ನು ಅರ್ಥೈಸುವಂತಹ ವ್ಯಾಕರಣವನ್ನು ಕಟ್ಟಿಕೊಟ್ಟರೆ ಸಾಮಾನ್ಯರು ಚಿತ್ರಕಲೆಯೊಂದಿಗೆ ಸಂವಾದ ನಡೆಸಲು ಅನುಕೂಲವಾಗುತ್ತದೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ನಗರದಲ್ಲಿ ಸೋಮವಾರ ಕಲಾವಿದ ಸಿ.ಚಂದ್ರಶೇಖರ್ ಅವರ `ಸಂಚಲನ ಕಲಾ ಪ್ರದರ್ಶನ ಯಾನ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಪಶ್ಚಿಮದ ಬೆಳಕಿನಲ್ಲಿ ಮೂಡಿ ಬಂದ ಹೊಸ ಬಗೆಯ ಚಿತ್ರಕಲೆ ಹಾಗೂ ಸಹೃದಯನ ನಡುವೆ ಸಂವಹನ ಏರ್ಪಡುತ್ತಿಲ್ಲ. ಬಣ್ಣ, ಗೆರೆಗಳು ಸೊಗಸಾಗಿ ಕಂಡು ಬಂದರೂ ಅವು ಏನನ್ನು ಹೇಳಲು ಹೊರಟಿವೆ ಎಂಬುದು ತಿಳಿಯುವುದಿಲ್ಲ. ಇವುಗಳನ್ನು ವ್ಯಾಖ್ಯಾನಿಸುವಂತಹ ವ್ಯಾಕರಣವನ್ನು ರೂಪಿಸಬೇಕಿದೆ~ ಎಂದು ಅವರು ತಿಳಿಸಿದರು.`ಚಂದ್ರಶೇಖರ್ ನಾಡಿನ ಹಿರಿಯ ಕಲಾವಿದರು. ಕನ್ನಡ ವಿಶ್ವವಿದ್ಯಾಲಯದ ಲಾಂಛನವನ್ನು ರೂಪಿಸಿದ ಕಲಾವಿದ ಇವರು. ಈ ಹಿಂದೆ ಮೂಡಿ ಬಂದ ಹೊಲಿಗೆ ಸರಣಿಯ ಕಲಾಕೃತಿಗಳಲ್ಲಿ ಛಿದ್ರಗೊಂಡ, ಮುರಿದ, ಹಾಗೂ ಹರಿದು ಹೋದ ಸಂಸ್ಕೃತಿ, ಮನಸ್ಸುಗಳನ್ನು ಒಂದು ಮಾಡುವ ಯತ್ನ ಕಂಡು ಬರುತ್ತದೆ. ಅತಿ ಬಡತನವನ್ನು ಸೂಚಿಸುವಂತಹ ಅರ್ಥ ಪ್ರಪಂಚ ಅವರ ಕೃತಿಗಳಲ್ಲಿದೆ. ಈಗ ಅವರು ಆತ್ಮ ನಿರೀಕ್ಷೆಯನ್ನು ಮುಖ್ಯ ಆಶಯವಾಗಿಟ್ಟುಕೊಂಡು ಚಿತ್ರಿಸಿದ್ದಾರೆ. ಅವರ ಚಿತ್ರಗಳನ್ನು ನೋಡಿ ಸಂತಸಪಟ್ಟವರಲ್ಲಿ ನಾನೂ ಒಬ್ಬ~ ಎಂದರು.ಸಾಹಿತಿ ಬರಗೂರು ರಾಮಚಂದ್ರಪ್ಪ, `ನಾಟಕ ಸಾಹಿತ್ಯ ಮತ್ತಿತರ ಕಲೆಗಳಂತೆ ಚಿತ್ರಕಲೆ ಸಾಮಾನ್ಯರಿಗೆ ಅರ್ಥವಾಗದೆ ಕಲಾವಿದರ ನಡುವೆಯೇ ಸಂವಹನಗೊಳ್ಳುತ್ತಿದೆಯೇ ಎಂಬ ಆತಂಕ ನನ್ನದು. ಇದನ್ನು ದಾಟಿ ಎಲ್ಲರನ್ನೂ ತಲುಪುವಂತಹ ಸಾಧನವೇನಾದರೂ ಚಿತ್ರಕಲೆಗೆ ಅಗತ್ಯವಿದೆಯೇ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದೆ~ ಎಂದರು.``ಕಲಾವಿದ ಚಂದ್ರಶೇಖರ್ ರಚನಾತ್ಮಕವಾಗಿ ಕನ್ನಡಪರ ಹೋರಾಟ ನಡೆಸಿದವರು. `ಕಲೆಕ್ಷನ್~ ಪರ ಕನ್ನಡ ಹೋರಾಟಕ್ಕೆ ಹೊರತಾಗಿ ನಿಂತವರು. ದಂತ ಗೋಪುರದಲ್ಲಿ ಕೂರದೇ ತಮ್ಮ ಅನುಭವವನ್ನು ವಿಸ್ತರಿಸಿಕೊಂಡವರು. ಜನಪರ ಕಾಳಜಿಯ ಇವರ ಸಾಮಾಜಿಕ ಕ್ರಿಯಾಶೀಲತೆ ಕೂಡ ಅನನ್ಯವಾದುದು~~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಲಾವಿದ ಚಂದ್ರಶೇಖರ್, `ಕಲೆಯ ಭಾಷೆ ಬೇರೆ ಆದದ್ದು. ಕವಿ ರಾಮಚಂದ್ರ ಶರ್ಮರಿಂದ ಹಿಡಿದು ಅನೇಕ ಸಾಹಿತಿಗಳು ಕಲೆ ಅರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯದ ಉತ್ತುಂಗದಲ್ಲಿರುವವರಿಗೇ ಕಲೆ ತಲುಪದ ಸ್ಥಿತಿ ಇರುವಾಗ ಸಾಮಾನ್ಯ ಜನರಿಗೆ ತಲುಪುವುದು ಕಷ್ಟ.

 

ಹೀಗಾಗಿ ಅದಕ್ಕೊಬ್ಬ ಭಾಷಾಂತರಕಾರ, ವ್ಯಾಖ್ಯಾನಕಾರ ಇದ್ದರೆ ಸರಳವಾಗಿ ಹೆಚ್ಚು ಜನರನ್ನು ತಲುಪುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಕೃತಿಗಳನ್ನು ಅರ್ಥೈಸುವಂತಹ ಪುಸ್ತಕವನ್ನು ಹೊರತರುವ ಅಗತ್ಯವಿದೆ~ ಎಂದರು.`ಕಲಾವಿದನಿಗಿಂತ ಕಲಾಕೃತಿಗಳು ಮಾತನಾಡಬೇಕು. ಸೃಜನಶೀಲರು ಬೇರು ಮತ್ತು ತುದಿಯ ನಡುವೆ ಇರುತ್ತಾರೆ. ಎರಡನ್ನೂ ಮುಟ್ಟುವ ಏರಿಳಿಯುವ ಪ್ರಕ್ರಿಯೆಯಲ್ಲಿ ಹೊಸತನ್ನು ಕಂಡುಕೊಳ್ಳುತ್ತಾರೆ. ಪ್ರಸ್ತುತ ಪ್ರದರ್ಶನಕ್ಕಿಡಲಾದ ಕಲಾಕೃತಿಗಳನ್ನು ಅಮೂರ್ತ ಶೈಲಿಯಲ್ಲಿ ರಚಿಸಿದ್ದೇನೆ. ಆತ್ಮದ ನಿರೀಕ್ಷೆಗಳು ಕೂಡ ಅಮೂರ್ತವಾಗಿರುವುದರಿಂದ ಇದು ಹೆಚ್ಚು ಒಪ್ಪುತ್ತದೆ~ ಎಂದು ತಿಳಿಸಿದರು.ಕಲಾಕೃತಿಗಳ ಕ್ಯಾಟಲಾಗ್ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, `ಸಮಾಜದಲ್ಲಿ ಶೋಷಣೆಗೆ ಒಳಗಾದವರೇ ಸಾಧಕರಾಗಿ ಮೆರೆದಿದ್ದಾರೆ. ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್, ಆ್ಯಪಲ್ ಸಂಸ್ಥೆಯ ಸ್ಟೀವ್ ಜಾಬ್ಸ್ ಮುಂತಾದವರು ಒಂದಲ್ಲಾ ಒಂದು ಕಾರಣಕ್ಕೆ ಮನೆ ಬಿಟ್ಟು ಹೊರಬಂದವರೇ ಆಗಿದ್ದಾರೆ. ಕಲಾವಿದ ಚಂದ್ರಶೇಖರ್ ಹಾಗೂ ಅವರ ಗುರು ಹಡಪದರು ಕೂಡ ಶೋಷಿತ ನೆಲೆಯಿಂದ ಮೂಡಿಬಂದ ಸಾಧಕರೇ ಆಗಿದ್ದಾರೆ~ ಎಂದರು.ಈ ಸಂದರ್ಭದಲ್ಲಿ ಕಲಾವಿದ ಚಂದ್ರಶೇಖರ್ ಮತ್ತು ರಾಜ್ಯ ಸಣ್ಣ ಪತ್ರಿಕೆಗಳ ವೇದಿಕೆಯ ಸದಸ್ಯರು ಕಂಬಾರರನ್ನು ಸನ್ಮಾನಿಸಿದರು. ಕಲಾವಿದ ಎಸ್.ಜಿ.ವಾಸುದೇವ್, ಲೇಖಕ ಆರ್.ಜಿ.ಹಳ್ಳಿ ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.