ಚಿತ್ರದುರ್ಗ–ಚಳ್ಳಕೆರೆ ರಸ್ತೆ ದುರಸ್ತಿಗೆ ಆಗ್ರಹ

7
ರಾಷ್ಟ್ರೀಯ ಕಿಸಾನ್‌ ಸಂಘ, ಗ್ರಾಮಸ್ಥರಿಂದ ಪ್ರತಿಭಟನೆ

ಚಿತ್ರದುರ್ಗ–ಚಳ್ಳಕೆರೆ ರಸ್ತೆ ದುರಸ್ತಿಗೆ ಆಗ್ರಹ

Published:
Updated:

ಚಿತ್ರದುರ್ಗ: ಚಿತ್ರದುರ್ಗ-–ಚಳ್ಳಕೆರೆ ಮಾರ್ಗದ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಮದಕರಿಪುರ ಗ್ರಾಮದ ಬಳಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜಮಾಯಿಸಿದ ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಹಾಗೂ ಅಲ್ಲಿನ ಗ್ರಾಮಸ್ಥರು ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸುವಂತೆ ಮಂಗಳವಾರ ಪ್ರತಿಭಟನೆ ನಡೆಸಿದರು.ಈ ಮಾರ್ಗದ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪದೇ ಪದೇ ಚಿಕ್ಕಪುಟ್ಟ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಮದಕರಿಪುರ ಗ್ರಾಮವು ನಗರದಿಂದ ಕೇವಲ ನಾಲ್ಕೈದು ಕಿ.ಮೀ. ದೂರವಿದ್ದರೂ ಈ ಭಾಗದ ರಸ್ತೆಯಲ್ಲಿ ಸಾಗಬೇಕೆಂದರೆ ಹರಸಾಹಸ ಪಡಬೇಕಾಗಿದೆ. ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನಗಳು, ಆಟೊ ರಿಕ್ಷಾಗಳು ಸಂಚರಿಸುವುದೇ ಕಷ್ಟಕರವಾಗಿದೆ. ಈ ಹಿಂದೆ ಸಂಭವಿಸಿದ ಅವಘಡದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕುರಿತು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.ರಾಜ್ಯ ಹೆದ್ದಾರಿ ೪೮ನೇ ಮಾರ್ಗ ವಾಗಿರುವ ಈ ರಸ್ತೆ ದುರಸ್ತಿ ಕೈಗೊಳ್ಳುವಂತೆ ಸ್ಥಳೀಯರು ಮೂರು ಬಾರಿ ರಸ್ತೆ ತಡೆ ಮಾಡಿದ್ದಾರೆ. ಆದರೆ, ಇದಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತಗಳು ನಡೆಯುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರ ರಾಗಲಿದ್ದಾರೆ ಎಂದು ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಗ್ರಾಮಸ್ಥರ ಮನವಿ ಆಲಿಸಿದ ನಂತರ ಆದಷ್ಟು ಬೇಗ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದಲಿಂಗಪ್ಪ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಆದಷ್ಟು ಬೇಗ ದುರಸ್ತಿ ಕಾಮಗಾರಿ ಆರಂಭಿಸಿ ಮುಂದಿನ ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಬಸವರಾಜ್, ಹೇಮಂತ್‌ಕುಮಾರ್, ಪರಮೇಶ್ವರಪ್ಪ, ಮದಕರಿಪುರ ಗ್ರಾಮಸ್ಥರಾದ ಮಲ್ಲಿಕಾರ್ಜುನ, ಶಂಕರಪ್ಪ, ರಾಜಣ್ಣ ತಿಮ್ಮಣ್ಣ, ಅಚ್ಚಮ್ಮ, ವೆಂಕಟೇಶ, ಕೆಂಚಣ್ಣ, ಭೈರಣ್ಣ, ಸಿದ್ದೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry