ಶನಿವಾರ, ಏಪ್ರಿಲ್ 17, 2021
30 °C

ಚಿತ್ರದುರ್ಗ, ಅರಸೀಕೆರೆಯಲ್ಲಿ ಗಲಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ/ ಚಿತ್ರದುರ್ಗ: ಹಾಸನ ಜಿಲ್ಲೆ ಅರಸೀಕೆರೆ ಮತ್ತು ಚಿತ್ರದುರ್ಗದಲ್ಲಿ ಕೋಮು ಘರ್ಷಣೆ ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದರೂ ಬಿಗುವಿನಿಂದ ಕೂಡಿದೆ.ಚಿತ್ರದುರ್ಗದಲ್ಲಿ ಶನಿವಾರ  ಟಿಪ್ಪು ಸುಲ್ತಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಅನೇಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಭಾನುವಾರ ಬೆಳಿಗ್ಗೆ 6 ಗಂಟೆವರೆಗೂ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ವತಿಯಿಂದ ಟಿಪ್ಪುಸುಲ್ತಾನ್ ಜಯಂತಿ ಅಂಗವಾಗಿ ನಗರದ ಕನಕವೃತ್ತದಿಂದ ಹಳೇ ಮಾಧ್ಯಮಿಕ ಶಾಲಾ ಆವರಣದವರೆಗೆ ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಮೆರವಣಿಗೆ ಹೊಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಆಗಮಿಸಿದಾಗ ಕೆಲ ಯುವಕರು ಪ್ರತಿಮೆ ಸ್ಥಾಪಿಸಿರುವ ಕಟ್ಟೆ ಹತ್ತಿ ನೃತ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಗುಂಪೊಂದು `ಚಪ್ಪಲಿ ಹಾಕಿಕೊಂಡು ಕಟ್ಟೆ ಹತ್ತಿ ಪ್ರತಿಮೆಗೆ ಅವಮಾನ ಮಾಡುತ್ತಿದ್ದೀರಾ~ ಎಂದು ಆಕ್ಷೇಪ ವ್ಯಕ್ತಪಡಿಸಿತು.ಜತೆಗೆ ಪ್ರತಿಮೆ ಬಳಿ ಅಳವಡಿಸಿದ್ದ ಟೈಲ್ಸ್ ಭಗ್ನಗೊಂಡಿದ್ದರಿಂದ ಒಂದು ಕೋಮಿನ ಜನತೆ ಸ್ಥಳದಲ್ಲಿಯೇ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೆಲವರು ರಸ್ತೆ ಬದಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಹರಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಲು ಯತ್ನಿಸಿದರು.ಮೆರವಣಿಗೆ ಮುಂದಕ್ಕೆ ಸಾಗುತ್ತಿದ್ದಂತೆ ಟಿಪ್ಪು ಜಯಂತಿಗಾಗಿ ಕಟ್ಟಿದ್ದ ಬ್ಯಾನರ್ ಕಿತ್ತು ಹಾಕಲಾಗಿದೆ ಎನ್ನುವ ಸುದ್ದಿ ಹಬ್ಬಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇನ್ನೊಂದು ಗುಂಪೊಂದು ಹಿಂದಿರುಗಿ ಬಂದು ಕಲ್ಲು ತೂರಾಟದಲ್ಲಿ ತೊಡಗಿತು. ಆಗ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದರು.ಇದೇ ವೇಳೆ ನಗರ ಸಂತೆ ಮೈದಾನ, ಬುರುಜನಹಟ್ಟಿ ಸೇರಿದಂತೆ ವಿವಿಧೆಡೆ ಕೋಮುಗಳ ನಡುವೆ ಘರ್ಷಣೆಗಳು ಸಂಭವಿಸಿದವು. ಸಂತೆಮೈದಾನದ ವಾಹನ ಷೋರೂಂನ ಗಾಜುಗಳನ್ನು ಕಲ್ಲೆಸೆದು ಒಡೆದುಹಾಕಲಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕಲ್ಲು ತೂರಾಟದಿಂದ ಎರಡು ಬಸ್‌ಗಳ ಗಾಜುಗಳು ಒಡೆದಿವೆ.ಮೆರವಣಿಗೆ ಎಸ್‌ಜೆಎಂ ಡೆಂಟಲ್ ಕಾಲೇಜು ಬಳಿ ಆಗಮಿಸಿದಾಗ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಅರಸೀಕೆರೆ ವರದಿ: ಪಟ್ಟಣದಲ್ಲಿ ಗಣಪತಿ ಮೂರ್ತಿಯ ಮೆರವಣಿಗೆಗೆ ಸಂಬಂಧಿಸಿದಂತೆ ಎರಡು ಕೋಮುಗಳ ಮಧ್ಯೆ ಘರ್ಷಣೆ ನಡೆದು, ಸುಮಾರು 40 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪಟ್ಟಣದ ಪ್ರಸಿದ್ಧ ಪ್ರಸನ್ನ ಗಣಪತಿ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ ಆರಂಭವಾಗಿತ್ತು. 11.45ರ ಸುಮಾರಿಗೆ ಮೆರವಣಿಗೆ ಹುಳಿಯಾರು ರಸ್ತೆಗೆ ಬರುತ್ತಿತ್ತು. ಆಗ ಆ ಭಾಗದ ಒಂದು ಕೋಮಿನ ಕೆಲವರು ಈ ರಸ್ತೆಯಲ್ಲಿ ಮೆರವಣಿಗೆ ಬರಬಾರದು ಎಂದು ತಡೆದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.ಇದರ ಹೊರತಾಗಿಯೂ  ಹುಳಿಯಾರು ರಸ್ತೆಯಲ್ಲಿ ಮೆರವಣಿಗೆ ಸಾಗಲು ಮುಂದಾಗುತ್ತಿದ್ದಂತೆ ಆ ಬದಿಯಿಂದ ಬಾಟಲಿ, ಕಲ್ಲುಗಳನ್ನು ಎಸೆದು ತಡೆ ಒಡ್ಡಲಾಯಿತು. ಪರಿಸ್ಥಿತಿ ಹದಗೆಡುತ್ತಿದ್ದುದನ್ನು ಗಮನಿಸಿದ ಪೊಲೀಸರು ಲಾಠಿ ಬೀಸಿ ಎರಡೂ ಗುಂಪುಗಳನ್ನು ಚದುರಿಸಿದರು.ಬಾಟಲಿ ಹಾಗೂ ಕಲ್ಲುಗಳನ್ನು ಎಸೆದ ಪರಿಣಾಮ 40 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರಲ್ಲಿ ಹೆಚ್ಚಿನವರು ಪೊಲೀಸರೇ ಆಗಿದ್ದಾರೆ. ಶನಿವಾರ ಬೆಳಿಗ್ಗೆ ಶಾಂತಿ ಸಭೆ ನಡೆಸಲಾಯಿತಾದರೂ ಅಲ್ಲೂ ಮಾತಿನ ಚಕಮಕಿ ನಡೆದು ವಿಫಲವಾಯಿತು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.