ಚಿತ್ರದುರ್ಗ: ಇಂದಿನಿಂದ ಶರಣ ಸಂಸ್ಕೃತಿ ಉತ್ಸವ

7

ಚಿತ್ರದುರ್ಗ: ಇಂದಿನಿಂದ ಶರಣ ಸಂಸ್ಕೃತಿ ಉತ್ಸವ

Published:
Updated:

ಚಿತ್ರದುರ್ಗ: ಬಯಲುಸೀಮೆಯ ಕಲ್ಲಿನ ಕೋಟೆಯ ನಾಡಿನಲ್ಲಿ ವೈಚಾರಿಕ ಚಿಂತನೆಗಳ ಸಿಂಚನಕ್ಕೆ ವೇದಿಕೆ ಸಜ್ಜುಗೊಂಡಿದೆ. ಜಾತಿ, ಮತ, ಧರ್ಮ ರಹಿತವಾದ ಸಮಾನತೆಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಉದ್ದೇಶದೊಂದಿಗೆ ನಗರದ ಮುರುಘಾಮಠ ಮತ್ತು ಬಸವಕೇಂದ್ರ ಆರಂಭಿಸಿರುವ `ಶರಣ ಸಂಸ್ಕೃತಿ ಉತ್ಸವ~ಕ್ಕೆ ಅ. 2ರಂದು ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು, ಮುರುಘಾ ಮಠದ ಆವರಣದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಿಸುವ ಮೂಲಕ `ವೈಚಾರಿಕ ದಸರಾ~ ಎಂದೇ ಖ್ಯಾತಿ ಪಡೆದಿರುವ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅ. 2ರಿಂದ 7ರವರೆಗೆ ಉತ್ಸವ ನಡೆಯಲಿದೆ. 8ರಂದು ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ ಆಯೋಜಿಸಲಾಗಿದೆ. 17ನೇ ಶತಮಾನದಲ್ಲಿ ಚಿತ್ರದುರ್ಗದಲ್ಲಿ ಮುರುಘಾಮಠ ಸ್ಥಾಪನೆಯಾದ ನಂತರ ಪ್ರತಿ ವರ್ಷ ದಸರಾ ಉತ್ಸವ ಅಥವಾ ವಿಜಯದಶಮಿ ಉತ್ಸವದ ಹೆಸರಿನಲ್ಲಿ ಆಚರಣೆಗಳು ನಡೆಯುತ್ತಿದ್ದವು. 1993ರಲ್ಲಿ ಶಿವಮೂರ್ತಿ ಮುರುಘಾ ಶರಣರು ಪೀಠಾರೋಹಣ ಮಾಡಿದ ನಂತರ ಉತ್ಸವದ ರೂಪುರೇಷೆ, ಚಿಂತನೆಗಳು ಬದಲಾದವು. ಸಂಪ್ರದಾಯಗಳಿಗೆ ಕಡಿವಾಣ ಹಾಕಿ ಸಮಾಜಮುಖಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು `ಶರಣ ಸಂಸ್ಕೃತಿ ಉತ್ಸವ~ ಆರಂಭಿಸಿದರು. ಅನುಭವಮಂಟಪದಲ್ಲಿನ ಶರಣರ ಅನುಭವಗಳನ್ನು ಜನತೆಗೆ ಮುಟ್ಟಿಸುವ ಉದ್ದೇಶದೊಂದಿಗೆ ಉತ್ಸವಕ್ಕೆ ವೈಚಾರಿಕತೆಯ ಮೆರುಗು ದೊರೆಯಿತು.ಮುರುಘಾಮಠದ ಆವರಣದಲ್ಲಿ ನಡೆಯುವ ಈ ಉತ್ಸವದಲ್ಲಿ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು, ಗೋಷ್ಠಿಗಳು ಜನಮನ ತಣಿಸಲಿವೆ. ಉತ್ಸವದಲ್ಲಿ ಸಹಜ ಶಿವಯೋಗ, ಕೃಷಿ ಮೇಳ, ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಸಮಾವೇಶ, ಬಸವತತ್ವ ಸಮಾವೇಶ, ಮಹಿಳಾ ಸಮಾವೇಶ, ಬಸವಶ್ರೀಪ್ರಶಸ್ತಿ ಪ್ರದಾನ, ಜಾನಪದ ಸಮಾವೇಶ ಹಮ್ಮಿಕೊಳ್ಳಲಾಗಿದೆ.  ಈ ಸಲದ `ಬಸವಶ್ರೀ~ ಪ್ರಶಸ್ತಿಯನ್ನು ರೈತ ಮುಖಂಡರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಮರಣೋತ್ತರ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಉತ್ಸವಕ್ಕೆ ಮಠದ ಆವರಣದಲ್ಲಿ ಅಲ್ಲಮಪ್ರಭು ಮಂಟಪ ಮತ್ತು ಶರಣ ಮಾದಾರ ಚನ್ನಯ್ಯ ವೇದಿಕೆ ನಿರ್ಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry