ಚಿತ್ರನಟ ಕರಿಬಸವಯ್ಯ ಇನ್ನಿಲ್ಲ

7

ಚಿತ್ರನಟ ಕರಿಬಸವಯ್ಯ ಇನ್ನಿಲ್ಲ

Published:
Updated:

ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯನಟ ಮತ್ತು ರಂಗಭೂಮಿ ಕಲಾವಿದ ಕರಿಬಸವಯ್ಯ (51) ಅವರು ಶುಕ್ರವಾರ ಮಧಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಜನವರಿ 31ರಂದು ಕನಕಪುರದಲ್ಲಿ ಹರಿಕತೆ ಕಾರ್ಯಕ್ರಮ ನಡೆಸಿ ಮನೆಗೆ ಹಿಂದಿರುಗುತ್ತಿದ್ದಾಗ ತಲಘಟ್ಟಪುರ ಬಳಿ ಅವರ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡಿದ್ದ ಕರಿಬಸವಯ್ಯ ಅವರನ್ನು ಪ್ರಿಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಧ್ಯಾಹ್ನ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ದರ್ಶನ ಮತ್ತು ಅಂತ್ಯಕ್ರಿಯೆ: ಕರಿಬಸವಯ್ಯನವರ ಮೃತಶರೀರವನ್ನು ಶನಿವಾರ ಬೆಳಿಗ್ಗೆ 10ರಿಂದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.ಮಧ್ಯಾಹ್ನ ಅವರ ಹುಟ್ಟೂರಾದ ತ್ಯಾಮಗೊಂಡ್ಲುವಿನ ಕೊಡಿಗೇಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.ರಂಗಭೂಮಿ ಹಿನ್ನೆಲೆಯಿಂದ ಬಂದ ಕರಿಬಸವಯ್ಯ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಉಂಡೂ ಹೋದ ಕೊಂಡೂ ಹೋದ~ ಅವರ ಮೊದಲ ಚಿತ್ರ. `ತಾಯಿ~, `ಉಲ್ಟಾಪಲ್ಟಾ~, `ಪರಿಚಯ~, `ಯಾರಿಗೆ ಸಾಲತ್ತೆ ಸಂಬಳ~, `ಜನುಮದ ಜೋಡಿ~, `ಹೋಳಿ~, `ನೂರೂ ಜನ್ಮಕು~, `ಮುಂಗಾರಿನ ಮಿಂಚು~, `ಕೊಟ್ರೇಶಿ ಕನಸು~, `ಭೂಮಿ ತಾಯಿಯ ಚೊಚ್ಚಲ ಮಗ~, `ಅರಮನೆ~ ಮುಂತಾದ ಚಿತ್ರಗಳಲ್ಲಿ ಹಾಸ್ಯಕಲಾವಿದರಾಗಿ ಅವರು ನಟಿಸಿದ್ದರು. `ಸಂಗೊಳ್ಳಿ ರಾಯಣ್ಣ~, `ಬ್ರೇಕಿಂಗ್ ನ್ಯೂಸ್~, `ನೆನಪಿನಂಗಳ~, `ಮಂಜುನಾಥ ಬಿಎಎಲ್‌ಎಲ್‌ಬಿ~ ಮುಂತಾದವು ಅವರ ಬಿಡುಗಡೆಯಾಗಬೇಕಿದ್ದ ಅವರ ಅಭಿನಯದ ಚಿತ್ರಗಳು.ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲ ವರ್ಷ ಅವರು ಸೇವೆ ಸಲ್ಲಿಸಿದ್ದರು. `ಕೊಟ್ರೇಶಿ ಕನಸು~ ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಅವರ ಮುಡಿಗೇರಿತ್ತು. ಒಬ್ಬ ಮಗಳು ರಾಧಾ 2009ರಲ್ಲಿ ಆತ್ಮಹತ್ಯೆಗೆ ಶರಣಾದ ಬಳಿಕ ಕರಿಬಸವಯ್ಯ ಮಾನಸಿಕವಾಗಿ ಕುಗ್ಗಿದ್ದರು. ಚಲನಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾದ ಬಳಿಕ ಅವರು `ಲಕುಮಿ~ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದರು.ಮರೆಯಲಾಗದ ಪಾತ್ರ:
ತಮ್ಮ ಬಹುತೇಕ ಚಿತ್ರಗಳಲ್ಲಿ ಕರಿಬಸವಯ್ಯ ನಟಿಸಿದ್ದನ್ನು ನೆನಪು ಮಾಡಿಕೊಂಡಿರುವ ಪ್ರೊ.ಬರಗೂರು ರಾಮಚಂದ್ರಪ್ಪ, `ಜನುಮದ ಜೋಡಿಯಲ್ಲಿನ ಅವರ ನಟನೆ ಎಂದಿಗೂ ಮರೆಯಲಾಗದ್ದು~ ಎಂದು ಬಣ್ಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry