ಸೋಮವಾರ, ಜನವರಿ 27, 2020
26 °C

ಚಿತ್ರಪ್ರೀತಿಯ ಉಮಂಗ್

–ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಮಂಗ್ ಭಾಟಿಯಾ ಎಂಬ ಈ ಹುಡುಗನ ಮೂಗಿನ ಕೆಳಗೆ ಮೀಸೆಯಿನ್ನೂ ಅಚ್ಚುಕಟ್ಟಾಗಿ ಪಡಿಮೂಡಿಲ್ಲ. ಆದರೆ, ಅವರ ಹೆಸರನ್ನು ಗೂಗಲ್ ಸರ್ಚ್ ಮಾಡಿದರೆ ಅವರ ಪ್ರತಿಭೆಯ ಗಣಿಯೇ ತೆರೆದುಕೊಳ್ಳುತ್ತದೆ. ಸರಳವಾಗಿ ಹೇಳುವುದಾದರೆ ಅವರೊಬ್ಬ ಹವ್ಯಾಸಿ ಛಾಯಾಗ್ರಾಹಕ. ಪ್ರತಿಭೆಯ ಮಾನದಂಡದಲ್ಲಿ ವಿಶ್ಲೇಷಿಸುವುದಾದರೆ ಹದಿನಾರೂವರೆ ವರ್ಷದ ಉಮಂಗ್, ಛಾಯಾಗ್ರಹಣ ಕ್ಷೇತ್ರದಲ್ಲಿನ ಹೊಸ ಮಿಂಚು!ಬನ್ನೇರುಘಟ್ಟ ರಸ್ತೆಯಲ್ಲಿರುವ  ಗ್ರೀನ್‌ವುಡ್ ಪ್ರೌಢಶಾಲೆಯಲ್ಲಿ 11ನೇ ತರಗತಿಯಲ್ಲಿ ಇಂಟರ್‌ನ್ಯಾಷನಲ್ ಬ್ಯಾಚುಲರೇಟ್ (ಐಬಿ) ವಿದ್ಯಾರ್ಥಿಯಾಗಿರುವ ಉಮಂಗ್ ಭಾಟಿಯಾ ಅವರ ಪರಿಚಯ ಹೀಗೆ ಶುರುವಾಗುತ್ತದೆ. ಕೇವಲ ಐದು ವರ್ಷಗಳ ಕ್ಯಾಮೆರಾ ಸಾಂಗತ್ಯದಲ್ಲಿ ಅವರು ದಕ್ಕಿಸಿಕೊಂಡದ್ದು ಪ್ರಕೃತಿ, ಭೂದೃಶ್ಯ (ಲ್ಯಾಂಡ್‌ಸ್ಕೇಪ್) ಹಾಗೂ ವನ್ಯಜೀವಿಗಳ ಜಗತ್ತಿನ ಅಪರೂಪದ ನೋಟಗಳನ್ನು. ಕಳೆದ ಮೂರು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ 11 ಸ್ಪರ್ಧೆಗಳಿಗೆ ಇವರ ಛಾಯಾಚಿತ್ರಗಳು ಆಯ್ಕೆಯಾಗಿವೆ.ಕಂದನಿಗೆ ಕ್ಯಾಮೆರಾ ಕತೆ

ಇಷ್ಟಕ್ಕೂ ಈ ಹುಡುಗ ಕ್ಯಾಮೆರಾ ಸಾಂಗತ್ಯಕ್ಕೆ ಬಿದ್ದುದು ಹೇಗೆ ಎಂದು ಕೇಳಿದರೆ ತಮ್ಮ ತಾತ, ಛಾಯಾಗ್ರಾಹಕ ನಾಮ್‌ಪ್ರಸಾದ್ ಸತ್ಸಂಗಿ ಅವರತ್ತ ಹೆಮ್ಮೆಯ ನೋಟ ಬೀರುತ್ತಾರೆ. ಮೊಮ್ಮಗನನ್ನು ತಾತ ಛಾಯಾಗ್ರಹಣದತ್ತ ಸೆಳೆದ ಪರಿ ಹೇಗಿತ್ತೆಂದರೆ, ‘ತಾತ, ಕತೆ ಹೇಳ್ತೀಯಾ ಬೇಗ ನಿದ್ದೆ ಮಾಡ್ತೇನೆ’ ಅಂತ ವಿರಮಿಸಿದ ಪುಟ್ಟ ಬಾಲಕನಿಗೆ ತಾತ ಹೇಳುತ್ತಿದ್ದುದು ತಮ್ಮ ಛಾಯಾಗ್ರಹಣದ ಕ್ಷಣಗಳ ಕತೆಗಳನ್ನು! ತಾತನ ಜೊತೆ ಓಡಾಡುತ್ತಾ, ಅವರು ಫೋಟೊ ತೆಗೆಯಲು ಹೋದಾಗ, ತಾನೂ ಅವರೊಟ್ಟಿಗೆ ಹೋಗತೊಡಗಿದ. ಕ್ಯಾಮೆರಾ ಮೋಹ ಆವರಿಸಿದ್ದು ಹೀಗೆ. ‘ಅದೆಲ್ಲ ಒಂದು ರೀತಿಯಲ್ಲಿ ಪ್ರಾಥಮಿಕ ತರಬೇತಿಯಂತೆಯೇ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಉಮಂಗ್.ಕ್ಷಣ... ತಕ್ಷಣ...

ಸಣ್ಣ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ಅಂತರರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿರುವ ಉಮಂಗ್ ಛಾಯಾಗ್ರಹಣದ ಕುರಿತು ಹೇಳುವುದಿಷ್ಟು: ‘ಕಣ್ಣಿಗೆ ಬೀಳುವ ದೃಶ್ಯ ಮನಸ್ಸಿಗೆ ಮುದಕೊಡುತ್ತದೆ ಎನಿಸಿದಾಗ ಅರೆಕ್ಷಣ ತಡೆದರೂ ಅದು ಸಿಗದೇಹೋಗಬಹುದು.

ತಕ್ಷಣ ಅದನ್ನು ಸೆರೆಹಿಡಿಯುವುದೇ ನನ್ನ ಪ್ರಕಾರ ಛಾಯಾಗ್ರಹಣ. ತಾಂತ್ರಿಕವಾಗಿ ಉತ್ತಮವಾದ, ನೆರಳು–ಬೆಳಕಿನ ಅರ್ಥವನ್ನು ಹಾಳುಗೆಡಹದಂಥ ಕ್ಯಾಮೆರಾ ನಿಮ್ಮಲ್ಲಿದ್ದರೆ ಒಂದೊಂದು ಕ್ಲಿಕ್ ಕೂಡ ಪಾಠವಾದೀತು. ಆದರೆ ಶ್ರದ್ಧೆ, ಶ್ರಮ ಇದ್ದರೆ ಯಾವುದೇ ಕ್ಲಿಕ್ ವ್ಯರ್ಥವಾಗದು’.ಉಮಂಗ್ ಒಮ್ಮೆ ಹೊರಗೆ ಹೋದರೆ ಕನಿಷ್ಠ ಒಂದು ಸಾವಿರ ಫೋಟೊಗಳನ್ನು ಕ್ಲಿಕ್ಕಿಸುವುದು ಗ್ಯಾರಂಟಿ.  ಐದು ವರ್ಷಗಳಿಂದ ಈ ಹವ್ಯಾಸ ಅವರಿಗೆ ಇರುವುದರಿಂದ  ಸುಮಾರು 30 ಸಾವಿರ ಉತ್ತಮ ಗುಣಮಟ್ಟದ ಫೋಟೊಗಳು ಅವರ ಸಂಗ್ರಹದಲ್ಲಿವೆ.ಹವ್ಯಾಸದ ಹುಚ್ಚಿನಲ್ಲಿ

ಅಂದಹಾಗೆ, ಅಪ್ಪ, ಅಮ್ಮ, ತಾತ ಪಂಜಾಬ್‌ನವರಾದರೂ ಉಮಂಗ್ ಭಾಟಿಯಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ‘ನಮ್ಮ ಮನೆಯಲ್ಲಿ ಕನ್ನಡದ ವಾತಾವರಣವಿಲ್ಲ. ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಹೇಳಿಕೊಡುವ ಶಾಲೆಯಲ್ಲಿ ಕಲಿಯುತ್ತಿರುವುದರಿಂದ ಕನ್ನಡದ ಗಂಧವಿಲ್ಲ. ಹಾಗಿದ್ದೂ ಬೆಂಗಳೂರಿನ ಗಾಳಿಯಲ್ಲೇ ಕನ್ನಡವಿದೆಯಲ್ಲ? ಅದನ್ನು ಕೇಳಿ ಕೇಳಿ ಅರ್ಥ ಮಾಡಿಕೊಳ್ಳುವಷ್ಟು ತಿಳಿದುಕೊಂಡಿದ್ದೇನೆ‘ ಎಂದು ನಗುತ್ತಾರೆ ಉಮಂಗ್.

ಉಮಂಗ್ ಎಂದರೆ ಮಹತ್ವಾಕಾಂಕ್ಷರ ಎಂದರ್ಥ. ಹಾಗಾಗಿ ಇವರು ಹೆಸರಿಗೆ ತಕ್ಕಂಥ ಹುಡುಗ. ಹನ್ನೊಂದನೇ ತರಗತಿಯ ಅಧ್ಯಯನದೊಂದಿಗೆ ಸ್ಯಾಟ್ (ಸ್ಕಾಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್) ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಅಮೆರಿಕದ ವಿಶ್ವವಿದ್ಯಾಲಯಗಳತ್ತ ಕಣ್ಣು ನೆಟ್ಟಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಅತ್ಯಗತ್ಯ. ಆದರೆ ಕೆಮಿಕಲ್ ಎಂಜಿನಿಯರ್ ಆಗಿ ಏನಾದರೂ ಸಾಧಿಸಬೇಕೆಂಬ ಗುರಿ ಉಮಂಗ್‌ ಅವರದ್ದು.

ಶಿಕ್ಷಣದಲ್ಲಿ ಏನನ್ನೇ ಆಯ್ಕೆ ಮಾಡಿಕೊಂಡರೂ ಛಾಯಾಗ್ರಹಣವನ್ನು ಬದಿಗಿರಿಸುವ ಪ್ರಶ್ನೆಯೇ ಇಲ್ಲವಂತೆ. ಸಂಗೀತ, ಬ್ಯಾಡ್ಮಿಂಟನ್ ಇವರ ಮೆಚ್ಚಿನ ಹವ್ಯಾಸಗಳು. ಯಾವುದೇ ಹವ್ಯಾಸಗಳು ನಮ್ಮನ್ನು ಸದಾ ಕ್ರಿಯಾಶೀಲರಾಗಿರಿಸುತ್ತವೆ. ಒಂದಾದ ಮೇಲೆ ಮತ್ತೊಂದರಲ್ಲಿ ತೊಡಗಿಕೊಳ್ಳುವಂತೆ ಮಾಡುವುದೇ ಹವ್ಯಾಸಗಳು ಎಂದು ಹೇಳುವ ಉಮಂಗ್, ಉತ್ತಮ ಅಥ್ಲೀಟ್ ಕೂಡ ಹೌದು. ಕ್ರೀಡಾಪಟುಗಳು ದೈಹಿಕವಾಗಿ ಫಿಟ್‌ ಆಗಿರಬೇಕು. ಸೇವಿಸುವ ಆಹಾರ ಪೌಷ್ಟಿಕಾಂಶಗಳಿಂದ ಕೂಡಿರಬೇಕು ಎಂಬ ಸೂತ್ರ ಈ ಹುಡುಗನದ್ದು. ಅದಕ್ಕೇನು ಮಾಡುತ್ತೀರಾ ಅಂದರೆ, ‘ಜಿಮಿಂಗ್’ ಅನ್ನುತ್ತಾರೆ.ಓದು ಮೊದಲು

ಫೋಟೊಗ್ರಾಫರ್ ಆಗಿ ಏನು ಸಾಧಿಸಬೇಕೆಂದಿದ್ದೀರಿ ಎಂದು ಕೇಳಿದಾಕ್ಷಣ ಉಮಂಗ್ ಯೋಚಿಸಲಾರಂಭಿಸಿದರು. ‘ಫೋಟೊಗ್ರಫಿಯಲ್ಲಿ ಸಾಧಿಸಲು ಹೊರಟರೆ ಬಹಳ ಇದೆ. ದೇಶಗಳನ್ನು ಸುತ್ತಿದರೆ ಮನಸ್ಸನ್ನು ಮುದಗೊಳಿಸುವ ಸರಕುಗಳು ಸಿಗುತ್ತವೆ. ಈಗಾಗಲೇ ನಮ್ಮ ಬನ್ನೇರುಘಟ್ಟ ನ್ಯಾಶನಲ್‌ ಪಾರ್ಕ್‌ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು ಸೆರೆಹಿಡಿದಿದ್ದೇನೆ.

ಮಹಾರಾಷ್ಟ್ರದ ತಾಡೋಬ ರಾಷ್ಟ್ರೀಯ ಹುಲಿ ರಕ್ಷಿತಾರಣ್ಯದಲ್ಲಿ ಕ್ಯಾಮರಾಭಿಮುಖವಾಗಿ ಬರುತ್ತಿದ್ದ ಬಿಳಿ ಹುಲಿ, ಮರದ ಬುಡದಲ್ಲಿ ಎರಡೂ ಕೈಗಳನ್ನು ಚಾಚಿಕೊಂಡು ನಿಂತ ಕರಡಿ ಮುಂತಾದ ಅಪರೂಪದ ಕ್ಷಣಗಳನ್ನು ದಾಖಲಿಸಿದ್ದೇನೆ. ಕಾಶ್ಮೀರದ ಲೇಹ್ ಲಡಾಕ್‌ನಲ್ಲಿ ಸೂರ್ಯಾಸ್ತವನ್ನೂ ಸೆರೆಹಿಡಿದಿದ್ದೇನೆ. ದೊಡ್ಡ ಕನಸೊಂದು ಇದೆ.

ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಅಲೆದು ಜೀವಮಾನದ ಫೋಟೊ ಸಂಗ್ರಹವನ್ನು ಕಲೆಹಾಕಬೇಕು ಎಂದು.  ನನ್ನ ಆದ್ಯತೆ  ಓದು. ಪರೀಕ್ಷೆಗಳೆಲ್ಲ ಮುಗಿದ ಮೇಲೆ ಫೋಟೊಗ್ರಫಿಗೆ ಪ್ರವಾಸ ಕೈಗೊಳ್ಳುತ್ತೇನೆ. ರಜೆಯಲ್ಲಿ ಆಸಕ್ತ ಮಕ್ಕಳಿಗೆ ಫೋಟೊಗ್ರಫಿ ತರಬೇತಿ ಕೊಡುತ್ತೇನೆ. ಈಗ ಬೈ ಬೈ. ಜಿಮ್‌ಗೆ ಹೋಗೋ ಸಮಯ’ ಎಂದು ಮಾತು ಮುಗಿಸಿದರು ಉಮಂಗ್.

ಪ್ರತಿಕ್ರಿಯಿಸಿ (+)