ಬುಧವಾರ, ಮಾರ್ಚ್ 3, 2021
30 °C

ಚಿತ್ರರಂಗಕ್ಕೆ ಜಿಲ್ಲೆಯ `ನೆರಳು'

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ಚಿತ್ರರಂಗಕ್ಕೆ ಜಿಲ್ಲೆಯ `ನೆರಳು'

ಬೆಳಗಾವಿಯ ಆನಂದ ಅಪ್ಪುಗೋಳ ನಿರ್ಮಾಣದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಲನಚಿತ್ರ ಅದ್ದೂರಿ ಯಶಸ್ಸು ಕಂಡಿರುವ ಬೆನ್ನಲ್ಲೇ ಇದೇ ನೆಲದ ಇನ್ನೊಬ್ಬ ನಿರ್ಮಾಪಕರ `ನೆರಳು' ಚಲನಚಿತ್ರ ತೆರೆ ಕಾಣಲು ಸಿದ್ಧಗೊಂಡಿದೆ.ಮೂಲತಃ ಚಿಕ್ಕೋಡಿ ತಾಲ್ಲೂಕಿನ ಪಟ್ಟಣಕುಡಿ ಗ್ರಾಮದವರಾದ ಉದ್ಯಮಿ ಅತುಲ್ ಕುಲಕರ್ಣಿ ಅವರ ನಿರ್ಮಾಣದ ಚೊಚ್ಚಲ ಚಲನಚಿತ್ರ `ನೆರಳು' ಇದೇ 19ರಂದು ಬಿಡುಗಡೆ ಆಗಲಿದೆ ಎಂದು ಅತುಲ್ ಕುಲಕರ್ಣಿ ತಿಳಿಸಿದರು.ಬೆಂಗಳೂರು, ಚಿಕ್ಕಮಗಳೂರು, ಕೆಜಿಎಫ್ ಸೇರಿದಂತೆ ರಾಜ್ಯದ ಹಲವು ಪ್ರೇಕ್ಷಣೀಯ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಇದೇ 19ರಂದು ಚಲನಚಿತ್ರವು ಉತ್ತರ ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ, ಅಂಕಲಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದಾದ್ಯಂತ 25 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ.`ಮೈ ಆಟೋಗ್ರಾಫ್' ಖ್ಯಾತಿಯ  ಸಂಜೀವ, `ಮೊಗ್ಗಿನ ಮನಸ್ಸು' ಚಿತ್ರದ ಆಕಾಶ, `ಗುಂಡರ ಗೋವಿ' ಖ್ಯಾತಿಯ ನವ್ಯಶ್ರಿ, ತೆಲುಗು ಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಕನ್ನಡದ ಕುವರಿ ಶ್ರುತಿರಾಜ ತಾರಾಗಣದಲ್ಲಿದ್ದಾರೆ. ಇವರ ಜೊತೆಗೆ ಪತ್ತೇದಾರಿ ಪಾತ್ರದಲ್ಲಿ ಶಶಿಕುಮಾರ, ಪೋಷಕರ ಪಾತ್ರದಲ್ಲಿ ಅವಿನಾಶ, ಸುಧಾ ಬೆಳವಡಿ, ಶಂಕರ ಅಶ್ವಥ, ಹೊನ್ನಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ವಿನೋದ ಖಣದಾಳೆ ನಿರ್ದೇಶನದ `ನೆರಳು' ಚಿತ್ರದಲ್ಲಿ ಸ್ಟಂಟ್ ಶಿವು ಅವರ ಸಾಹಸ ಅದ್ಬುತವಾಗಿದೆ. ಶಿವರಾಜ ಮೆಹು ಅವರ ಸಂಕಲನ ಮಾಡಿದ್ದು, ಶಂಕರ ಅವರ ಕೈಚಳಕದಲ್ಲಿ ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ.  ಶ್ರಿಹರ್ಷ ಅವರ ಇಂಪಾದ ಸಂಗೀತ ಪ್ರೇಕ್ಷಕರ ಮನ ತಣಿಸಲಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಧ್ವನಿ ಮುದ್ರಿಕೆ ಬಿಡುಗಡೆ ಮಾಡಲಾಗಿದೆ ಎಂದು ಅತುಲ್ ಕುಲಕರ್ಣಿ ಹೇಳಿದರು.ಎಂಜಿನಿಯರಿಂಗ್ ಪದವೀಧರರಾದ ಅತುಲ್ ಕುಲಕರ್ಣಿ ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ಉದ್ಯಮಿಯಾಗಿದ್ದಾರೆ. ಅವರಲ್ಲಿ ವೃತ್ತಿಯೇ ಸಿನಿಮಾ ಬಗೆಗೆ ಸೆಳೆತ ಹಾಗೂ ಸ್ನೇಹಿತರ ಒತ್ತಾಸೆಯ ಮೇರೆಗೆ ಕೋಟಿಗೂ ಮಿಕ್ಕಿದ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಅತುಲ್ ಕುಲಕರ್ಣಿ ಅವರೂ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.`ಯುವಕರ ಕಾಲೇಜು ದಿನಗಳ ಮೋಜು ಮಸ್ತಿಯಿಂದ ಹಿಡಿದು ಅವರು ಮದುವೆಯಾಗಿ ಸಂಸಾರವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದರ ಸುತ್ತ ಹೆಣೆದುಕೊಂಡಿರುವ ಚಿತ್ರದಲ್ಲಿ ಸಸ್ಪೆನ್ಸ್ ಇದೆ. ಕುಟುಂಬ ಸಮೇತರಾಗಿ ಥಿಯೇಟರ್‌ಗೆ ಬಂದು ನೋಡಬಹುದಾದ ಚಿತ್ರ ಇದಾಗಿದೆ. ಹಣ ಗಳಿಸುವುದಕ್ಕಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಿದ್ದಾಗಿ' ಅತುಲ್ ಕುಲಕರ್ಣಿ ಹೇಳುತ್ತಾರೆ.ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರದ ನಿರ್ದೇಶನ ಮಾಡಿದ್ದ ಯುವ ಪ್ರತಿಭೆ ವಿನೋದ ಖಣದಾಳೆ ಚಿತ್ರ ಬಿಡುಗಡೆಗೂ ಮುನ್ನವೇ ಅನಾರೋಗ್ಯದಿಂದ ವಿಧಿವಶರಾಗಿದ್ದು ಮಾತ್ರ ವಿಪರ್ಯಾಸ. ವಿನೋದ ಖಣದಾಳೆ ಈ ಮುಂಚೆ ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ `ಪ್ರೇಮಪೂಜೆ' ಎಂಬ ಕಿರುಚಿತ್ರ ನಿರ್ಮಿಸಿ ಸೈ ಎನಿಸಿಕೊಂಡಿದ್ದರು. ಅವರ ನಿರ್ದೇಶನದ ಇನ್ನೊಂದು ಚಿತ್ರ `ಪವಿತ್ರ ಪ್ರೇಮ'ವೂ ತೆರೆ ಕಾಣಲು ಸಿದ್ಧಗೊಂಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.