ಚಿತ್ರ+ರಂಗದ ಬಹುರೂಪಿ ಶೃಂಗೇರಿ ರಾಮಣ್ಣ

7

ಚಿತ್ರ+ರಂಗದ ಬಹುರೂಪಿ ಶೃಂಗೇರಿ ರಾಮಣ್ಣ

Published:
Updated:
ಚಿತ್ರ+ರಂಗದ ಬಹುರೂಪಿ ಶೃಂಗೇರಿ ರಾಮಣ್ಣ

ನಾಟಕ, ಸಿನಿಮಾ, ಟಿವಿ ಧಾರಾವಾಹಿ, ಸಾಕ್ಷ್ಯಚಿತ್ರಗಳ ಹಿರಿಯ ನಟರು ಶೃಂಗೇರಿ ರಾಮಣ್ಣ. ತೆಲುಗು, ತಮಿಳು ಭಾಷೆಯ ಹೆಸರಾಂತ ನಟರಿಗೆ, `ಪ್ರಜಾಶಕ್ತಿ~ ಸಿನಿಮಾದ ಅತಿಥಿ ನಟ- ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಹಿರಿಯ ಚಿತ್ರ ಸಾಹಿತಿ ಆರ್.ಎನ್.ಜಯಗೋಪಾಲ್ ಅವರಿಗೆ ಕಂಠದಾನ ಮಾಡಿರುವ ರಾಮಣ್ಣ, ಗಿರೀಶ್ ಕಾಸರವಳ್ಳಿ ಹಾಗೂ ಕವಿತಾ ಲಂಕೇಶರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. `ಮೂಡಲಮನೆ~ ಧಾರಾವಾಹಿಯ ಜಯತೀರ್ಥಾಚಾರ್, `ಅಣ್ಣ ಬಸವಣ್ಣ~ದ ಅಲ್ಲಮಪ್ರಭು, `ಮಹಾನವಮಿ~ಯ ಸುಗುಣಿ ಕಾಕಾ ಆಗಿ ಅವರು ಮನೆ ಮನೆ ಮಾತು. ಹಾಲಿ ಪ್ರಸಾರವಾಗುತ್ತಿರುವ `ಸೀತೆ~ಯಲ್ಲಿ ವಾಲ್ಮೀಕಿಯಾಗಿ, `ಸೌಭಾಗ್ಯವತಿ~ಯಲ್ಲಿ ರಾಜ ದೇಸಾಯಿ ಪಾತ್ರದಲ್ಲಿ ಕಲಾರಸಿಕರ ಮನಸೂರೆ ಗೊಂಡಿದ್ದಾರೆ.

 

ತೆರೆಯ ಮೇಲಿನ ಅವರ ಕಲಾ ಅಭಿವ್ಯಕ್ತಿಗೆ ಕಾಲು ಶತಮಾನ ಸಂದಿದ್ದರೆ, ರಂಗದ ಮೇಲಿನ ಅವರ ನಟನೆಗೆ ಅರ್ಧ ಶತಮಾನವೇ ಸಂದಿದೆ. ತಮ್ಮ ಅಸ್ಖಲಿತ ಕಂಠ ಹಾಗೂ ಭಾವಪೂರ್ಣ ನಟನೆಯಿಂದ ಪಾತ್ರಗಳನ್ನು ಸಜೀವಗೊಳಿಸುತ್ತಲೇ ಅವಕ್ಕೆ ಸಹಜತೆಯ ಸ್ಪರ್ಶ ನೀಡುವಲ್ಲಿ ರಾಮಣ್ಣ ಎತ್ತಿದ ಕೈ.`ವೀರಬಾಹು~ ಚಿತ್ರದ ಹಿರಿಯ ನಟ ಎ.ಟಿ.ರಘು ಅವರ ಪಾತ್ರಕ್ಕೆ ಎರಡು ವರ್ಷದ ಹಿಂದೆ ಕಂಠದಾನ ಮಾಡಿದ್ದರು ಮತ್ತು ಅದನ್ನು ಮರೆತೂ ಬಿಟ್ಟಿದ್ದರು. ಯಾಕೆಂದರೆ ಕಂಠದಾನ ಹಾಗೂ ಅಭಿನಯ- ಅದು ಚಿಕ್ಕದೇ ಇರಲಿ, ದೊಡ್ಡದಿರಲಿ- ಅದೊಂದು ನಿತ್ಯದ ಪ್ರಕ್ರಿಯೆ ಅವರಿಗೆ. ಇದಕ್ಕೂ ದೊಡ್ಡ ಪಾತ್ರಗಳಿಗೆ ಕಂಠದಾನ ಮಾಡಿದ್ದ ಅವರಿಗೆ ಈ ಚಿತ್ರದ್ದೂ ಹತ್ತರಲ್ಲಿ ಹನ್ನೊಂದನೆಯದಾಗಿತ್ತು.ಆದರೆ ತಮ್ಮ ದನಿಗೆ ಅತ್ಯುತ್ತಮ ಕಂಠದಾನ ಪ್ರಶಸ್ತಿ ಪ್ರಕಟವಾದಾಗ ಅದನ್ನವರು ನಿರೀಕ್ಷಿರಲಿಲ್ಲ. ಆ ಕ್ಷಣಕ್ಕೆ ಒಂದಿಷ್ಟು ಅಚ್ಚರಿ, ಸಂತೋಷ ಆಯಿತೇ ಹೊರತು ಬಹಳ ದೊಡ್ಡದಾಗಿ ಸಂಭ್ರಮಿಸಲು ಕಾರಣಗಳಿರಲಿಲ್ಲ. ಯಾಕೆಂದರೆ ಅವರ ಕಲಾಯಾತ್ರೆ ಅದಕ್ಕಿಂತ ದೊಡ್ಡದು ಮತ್ತು ಸುದೀರ್ಘವಾದುದು.ಆದರೂ ಅವರಿಗೆ ಸಿಗಬೇಕಾದಷ್ಟು ಪ್ರಚಾರ, ಜನಪ್ರಿಯತೆ ಸಿಕ್ಕಿಲ್ಲ. ಅದರ ಗೊಡವೆಯೂ ಅವರಿಗೆ ಇಲ್ಲ.ಯಾಕೆ ಅಷ್ಟು ಪ್ರಸಿದ್ಧಿ ನಿಮಗೆ ಸಿಗಲಿಲ್ಲ?

ದತ್ತಣ್ಣ ಅಥವಾ ಅಂತಹ ಇನ್ನೂ ಕೆಲವರು ಚಿತ್ರರಂಗವನ್ನು ದೊಡ್ಡದಾಗಿಯೇ ಪ್ರವೇಶಿಸಿದರು. ನಾನು, ಉಮೇಶ, ಶನಿ ಮಹಾದೇವಪ್ಪ, ಸದಾಶಿವ ಬ್ರಹ್ಮಾವರ ಮುಂತಾದವರೆಲ್ಲ ಚಿತ್ರರಂಗದಲ್ಲಿ ಹೆಚ್ಚಿನ ಶ್ರಮ ಹಾಕಿದೆವು.

 

ಚಿಕ್ಕಪುಟ್ಟ ಪಾತ್ರಗಳನ್ನೆಲ್ಲ ಒಪ್ಪಿಕೊಂಡೆವು. ನೂರಾರು ಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ಅಸಂಖ್ಯಾತ ಪಾತ್ರ ಸಿಕ್ಕವು. ಅದರಲ್ಲಿ ದೊಡ್ಡವೂ ಇದ್ದವು, ಚಿಕ್ಕವೂ ಇದ್ದವು. ಚಿತ್ರರಂಗದಲ್ಲಿ ಮೊದಲೇ ದೊಡ್ಡಮಟ್ಟದ ಪ್ರವೇಶ ಆಯಿತೆಂದರೆ ಅದೇ ಹೆಸರು ಉಳಿದುಕೊಂಡುಬಿಡುತ್ತೆ.ಹಾಗಂತ ನನಗೆ ಏನೂ ಕೊರಗಿಲ್ಲ. ಹಪಾಹಪಿ ಇಲ್ಲ. ಇದ್ದುದರಲ್ಲಿ ನಿರುಮ್ಮಳನಾಗಿದ್ದೇನೆ. ಟೀವಿ ಧಾರಾವಾಹಿಗಳಂತೂ ಹೊಟ್ಟೆ ತುಂಬ ಅನ್ನ ಕೊಟ್ಟಿವೆ.

50 ವರ್ಷಗಳಿಗೂ ಮಿಕ್ಕಿದ ಕಲಾಸೇವೆಯಲ್ಲಿ ನಿಮಗೆ ಬೆಂಗಳೂರಿನಲ್ಲಿ ಇರಲು ಒಂದು ನೆಲೆ ಇಲ್ಲವಲ್ಲಾ?

ಬಾಡಿಗೆ ಮನೆಯಲ್ಲೇ ಪತ್ನಿ ಹಾಗೂ ಮಗಳೊಂದಿಗೆ ನೆಮ್ಮದಿಯಾಗಿದ್ದೇನೆ. ನಾಟಕ ಕಂಪೆನಿಗಳಲ್ಲೇ ಉಳಿದಿದ್ದರೆ ಇಷ್ಟರಮಟ್ಟಿನ ಭದ್ರತೆ ಕೂಡ ಕಷ್ಟ ಇತ್ತು. ಒಬ್ಬ ಕಲಾವಿದನಾಗಿ ನಾನು ಅಲ್ಲಿ ಕಲಿತದ್ದು ಬಹಳ.

 

ಹದಿ ಹರೆಯದಲ್ಲೇ ಮಹದೇವಸ್ವಾಮಿ ಅವರ ಕನ್ನಡ ಥಿಯೇಟರ್ಸ್‌ ಕಂಪೆನಿ ಪ್ರವೇಶ ಪಡೆದೆ. ಹಿರಣ್ಣಯ್ಯ ಮಿತ್ರಮಂಡಳಿ, ಸೂಡಿ ಶೆಟ್ಟರ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ, ರಾಯಣ್ಣ ಅರಿಷಿಣಗೋಡಿಯವರ ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಸೇರಿದಂತೆ ಉತ್ತರ ಕರ್ನಾಟಕದ ಅಷ್ಟೂ ನಾಟಕ ಕಂಪೆನಿಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ನಟನಾಗಿ ಬೆಳೆದೆ.

 

ಪಾತ್ರಕ್ಕೆ ಅನುಗುಣವಾದ ಧ್ವನಿ ನೀಡುವ ಶಕ್ತಿ ನಿಮಗೆ ಬಂದದ್ದು ನಾಟಕದಿಂದಲೇ ಇರಬೇಕಲ್ಲವೆ?

ನಾಟಕ ಕಂಪೆನಿಗೆ ಭಾಷೆ ಮತ್ತು ಸಂಗೀತ ಎರಡೂ ಬಹಳ ಮುಖ್ಯ. ಸ್ವರ ವಿಧಾನವನ್ನು ಅಲ್ಲಿನ ಹಿರಿಯ ನಟರು ಹೇಳಿಕೊಡ್ತಿದ್ದರು. ಕಲೆಕ್ಷನ್ ದೃಷ್ಟಿಯಿಂದಲಾದರೂ ನಟರುಗಳೇ ಪಾತ್ರ ಇಂಪ್ರೂ ಮಾಡ್ತಾನೇ ಇರ‌್ತೇವೆ. ಆ ಸ್ವಾತಂತ್ರ್ಯ ನಮಗಲ್ಲಿ ಇರುತ್ತೆ. ಸಿನಿಮಾ ನಿರ್ದೇಶಕರ ಮಾಧ್ಯಮ ಆದುದರಿಂದ ಅಂತಾ ಸ್ವಾತಂತ್ರ್ಯ ಇರಲ್ಲ. ನಾನು ಸಿನಿಮಾಕ್ಕೆ ಬರೋಹೊತ್ತಿಗೆ ಅಂತಾ ಪೂರ್ವಸಿದ್ಧತೆ ನನಗೆ ನಾಟಕದಿಂದ ಆಗಿತ್ತು.

`ಸೀತೆ~ ಧಾರಾವಾಹಿಯಲ್ಲಿ ನೀವು ವಾಲ್ಮೀಕಿ. ನಿಮ್ಮಂತಹ ಕೆಲವು ಹಳೆಯ ಕಲಾವಿದರ ಬಾಯಲ್ಲಿ ಮಾತ್ರ ರಾಮಾಯಣದ ಪಾತ್ರಗಳ ಸಂಭಾಷಣೆ ಸ್ಪಷ್ಟವಾಗಿರುತ್ತೆ.

ಹೌದು. ಈಗಿನ ಅನೇಕ ನಟ ನಟಿಯರ ಭಾಷೆ ಕೇಳೋಕೆ ಬಾಳ ಬೇಸರ ಆಗುತ್ತೆ. `ಜಯಶೀಲ~ನಾಗಿ ಬಾ ಅನ್ನೋದಕ್ಕೆ `ಜಯಾ~ `ಶೀಲ~ನಾಗಿ ಬಾ ಅಂತಾರೆ. ಸೆಟ್ಟಲ್ಲಿ ಕಮ್ ಯಾ... ಗೋ ಯಾ... ಅಂತಿರ‌್ತಾರೆ. ಹಂಗಂತ ಅವರಿಗೆ ಇಂಗ್ಲಿಷ್‌ನ ಬಗ್ಗೆ ಆಳವಾದ ತಿಳಿವಳಿಕೆ ಇದೆ ಅಂತ ಅಲ್ಲ.

 

ಶೇಕ್ಸ್‌ಪಿಯರ್ ಗೊತ್ತಿಲ್ಲ! ನಾನೂ ತಪ್ಪು ಮಾಡಲ್ಲ ಅಂತ ಅಲ್ಲ. ನನ್ನಲ್ಲೂ ಸಣ್ಣಪುಟ್ಟ ತಪ್ಪು ಆಗುತ್ತೆ. ಅದನ್ನ ಗೆಳೆಯರು, ವಿಮರ್ಶಕರು ಗುರುತಿಸಿ ಹೇಳ್ತಾರೆ. ಆಗ ತಿದ್ದಿಕೊಳ್ತೀನಿ. ಕಲಾವಿದನಿಗೆ ವಿನಮ್ರ ಭಾವ ಬೇಕು.

ಉತ್ತರ ಕರ್ನಾಟಕದ ಆಡುಭಾಷೆ ಇರೋ ಧಾರಾವಾಹಿಗಳಲ್ಲೂ ಸಲೀಸಾಗಿ ಮಾತಾಡ್ತೀರಲ್ಲ?

ನಾನು ಹೆಚ್ಚಾಗಿ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳಲ್ಲಿ ಇದ್ದುದರಿಂದ ಅಲ್ಲಿನ ಆಡುಭಾಷೆ ಸಲೀಸಾಗಿಬಿಟ್ಟಿದೆ. ಆಡುಭಾಷೆಯಲ್ಲಿ ಒಮ್ಮಮ್ಮೆ ರೊಟ್ಟಿ ಬದಲಿಗೆ ಬಕರಿ ಅನ್ನಬೇಕು. ಗೊತ್ತಾಗಲ್ಲ- ರೊಟ್ಟಿ ಅಂತಾನೇ ಹೇಳಿಬಿಡ್ತೇನೆ.

ಶೃಂಗೇರಿ ನಿಮ್ಮ ಊರಾ?

ಹೌದು. ಸಿಂಗಪ್ಪಯ್ಯ- ಗಿರಿಜಮ್ಮ ಅಪ್ಪ ಅಮ್ಮ. ಅಪ್ಪನಿಗೆ 28 ಗುಂಟೆ ಜಮೀನಿತ್ತು. ಉಡುಪಿ ಪೂರ್ಣಪ್ರಜ್ಞಾ ಕಾಲೇಜಿಗೆ ಅಂತ ಓದೋಕೋದವನು ನಾಟಕದ ಸೆಳೆತದಿಂದ ಕಂಪೆನಿಗೆ ಸೇರಿಬಿಟ್ಟೆ. ಮುಂದೆ ನನ್ನ ತಮ್ಮ ಶಿವಣ್ಣನೂ ನಾಟಕ ಕಂಪೆನಿ ಸೇರಿದ. -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry