ಚಿತ್ರರೂಪಕ/ ಉತ್ಕಟತೆಯಲಿ ಕಟ್ಟಿದ ಹೂ`ಮಾಲೆ'

7

ಚಿತ್ರರೂಪಕ/ ಉತ್ಕಟತೆಯಲಿ ಕಟ್ಟಿದ ಹೂ`ಮಾಲೆ'

Published:
Updated:

ರುಮಾಲೆ ಚನ್ನಬಸವಯ್ಯನವರ ಕುರಿತಂತೆ ನನಗೆ ಎರಡು ಅಚ್ಚರಿಗಳಿವೆ. ಅದರಲ್ಲಿ ಮೊದಲನೆಯದು ಅವರು ಯಾವುದೇ ಶಾಲೆಯಲ್ಲಿ ಕಲಿಯದೇ ಕಲೆಯನ್ನು ಉಸಿರಾಡಿದ್ದು. ಮತ್ತೊಂದು ಅಭಿವ್ಯಕ್ತಿ ಪಂಥದ ಕಲಾವಿದರ ಪ್ರಭಾವಕ್ಕೊಳಗಾಗಿಯೂ ಅನನ್ಯತೆಯನ್ನು ಉಳಿಸಿಕೊಂಡದ್ದು.ನನಗೆ ತಿಳಿದ ಮಟ್ಟಿಗೆ ಅವರು ಕಲೆಯನ್ನು ಅಕಡೆಮಿಕ್ ಆಗಿ ಅಭ್ಯಾಸ ಮಾಡಲಿಲ್ಲ. ಜೀವನದ ಅರ್ಧ ಆಯುಸ್ಸು ಮುಗಿದ ಬಳಿಕವಷ್ಟೇ ಅವರು ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲಿಯವರೆಗೆ ಅವರೊಳಗೆ ಸುಪ್ತವಾಗಿದ್ದ ಕಲಾವಿದ ನನ್ನ ವಿಸ್ಮಯಕ್ಕೆ ಕಾರಣ. ಇದ್ದಕ್ಕಿದಂತೆ ಆ ಕಲಾವಿದ ಹೊರಹೊಮ್ಮಲು ಸಾಧ್ಯವೇ ಇಲ್ಲ. ರುಮಾಲೆ ಅವರೊಳಗೆ ಕಲೆಯ ಮಥನ ಕಾರ್ಯ ಬಹುಕಾಲದಿಂದ ನಡೆಯುತ್ತ್ದ್ದಿದಿರಬೇಕು. ಅದನ್ನು ಅವರು ಮೂರ್ತ ರೂಪಕ್ಕಿಳಿಸಿದ್ದು ಮಾತ್ರ ಅವರ ಆಯುಸ್ಸಿನ ಉತ್ತರಾರ್ಧದಲ್ಲಿ ಮಾತ್ರ ಅನ್ನಿಸುತ್ತದೆ.ಅವರು ಕಲಾಭಿವ್ಯಕ್ತಿಗೆ ತೊಡಗಿಕೊಂಡಾಗ ದೇಶದಲ್ಲಿ ಅಲಂಕಾರಿಕ ಹಾಗೂ ಸಾಂಪ್ರದಾಯಿಕ ಕಲೆಯ ಛಾಪು ದೊಡ್ಡಮಟ್ಟದಲ್ಲಿತ್ತು. ಒಂದೆಡೆ ಬಂಗಾಳಿ ಕಲಾಪಂಥದ ದೊಡ್ಡ ಝರಿ ಮತ್ತೊಂದೆಡೆ ಮುಂಬೈನ ಜೆ.ಜೆ. ಕಲಾಶಾಲೆಯಿಂದ ಕಲಿತವರ ಹೊಳೆ. ಇವರೆಡರ ಹೊಡೆತಕ್ಕೂ ಸಿಗದೆ ತಮ್ಮದೇ ಆದ ಹೊಸಹಾದಿ ಹಿಡಿದಿದ್ದರು ರುಮಾಲೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ `ಇಸಂ'ಗಳ ಗಾಳಿ. ಆದರೆ ಅದಿನ್ನೂ ದೇಶದ ಕಲಾವಿದರನ್ನು ಅಷ್ಟಾಗಿ ತಟ್ಟಿರಲಿಲ್ಲ. ಅಂಥ ಕಾಲದಲ್ಲಿಯೇ ರುಮಾಲೆ `ಇಂಪ್ರೆಷನಿಸಂ' ಅನ್ನು ಅರಸಿ ಹೊರಟದ್ದು ಕುತೂಹಲದ ಸಂಗತಿ.

ಚಿತ್ರಗಳಲ್ಲಿ ಸ್ವಾತಂತ್ರ್ಯ...ಕಲಾವಿದರಾದ ವಿನ್ಸೆಂಟ್ ವ್ಯಾನ್‌ಗೋ, ಕ್ಲಾಡ್ ಮೊನೆಟ್, ವಲೇರಿ ರಿಬಾಕೊ ಮತ್ತಿತರರು ಅಭಿವ್ಯಕ್ತಿ ಶೈಲಿಯಲ್ಲಿ ಪ್ರಕೃತಿಯನ್ನು ಸೆರೆ ಹಿಡಿದಿದ್ದಾರೆ. ಇವರೆಲ್ಲರ ಒಂದೊಂದು ಅಂಶವೂ ರುಮಾಲೆ ಅವರೊಳಗೆ ಅಡಗಿದ್ದು ಹೇಗೆ ಎಂಬ ವಿಸ್ಮಯ ಕಾಡುತ್ತದೆ. ಕಲಾವಿದರ ಪ್ರಭಾವಕ್ಕೆ ಒಳಗಾಗಿ ಕಲಾಕೃತಿ ರಚಿಸುವುದರಲ್ಲಿ ವಿಶೇಷವೇನಿಲ್ಲ. ಆದರೆ ಬೇರೊಬ್ಬರ ಪ್ರಭಾವಕ್ಕೆ ಒಳಗಾಗಿಯೂ ಕಲಾಕೃತಿಗೆ ಜೀವಂತಿಕೆಯನ್ನು ತಂದುಕೊಂಡುವುದು ದೊಡ್ಡ ಸಂಗತಿ.ಈಗ ಒಂದು ಸಣ್ಣ ಉದಾಹರಣೆಯನ್ನು ಗಮನಿಸೋಣ. ಬುದ್ಧನ ಕುರಿತು ಅನೇಕ ಕಲಾಕೃತಿಗಳು ಹೊರಬಂದಿವೆ. ಅವುಗಳಲ್ಲಿ ಹೆಚ್ಚಿನವಕ್ಕೆ ಕಾಸು ಗಳಿಸುವುದಷ್ಟೇ ಧ್ಯಾನ. ರಚನೆ ವೈಭವೋಪೇತವಾಗಿದ್ದರೂ ಅವುಗಳಲ್ಲಿ ತೀವ್ರತೆ ಕಾಣದು. ಆದರೆ ರುಮಾಲೆ ಇದಕ್ಕೆ ಅಪವಾದ. ಅವರ ಎಲ್ಲಾ ಕೃತಿಗಳ ಜೀವ ತೀವ್ರತೆ.ಅನೇಕರಿಗೆ ಗೊತ್ತಿರುವಂತೆ ರುಮಾಲೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ವಿಮುಕ್ತಿಯ ವಾಂಛೆ ಅವರ ಅನೇಕ ಚಿತ್ರಗಳಲ್ಲಿ ಅಭಿವ್ಯಕ್ತವಾಗಿದೆ. ನನ್ನಂಥ ಕಲಾವಿದ್ಯಾರ್ಥಿಗಳಿಗೆ ಅವರು ಸದಾ ಮೂರು ವಾಕ್ಯಗಳನ್ನು ಹೇಳುತ್ತಿದ್ದರು: ಈ ಮಣ್ಣನ್ನು ಪ್ರೀತಿಸಬೇಕು. ಗಿಡ ಮರಗಳನ್ನು ಉಳಿಸಬೇಕು. ಮತ್ತು ಕಲಾಕೃತಿಗಳಲ್ಲಿ ಅವುಗಳ ಮಹತ್ವವನ್ನು ದಾಖಲಿಸಬೇಕು. ಅವರು ಹೇಳಿದ ಮಣ್ಣು ಇದೇ ಭರತಭೂಮಿ ಅಲ್ಲವೇ ಎಂಬುದು ಗೋಚರವಾಗಿ ಅನೇಕ ಬಾರಿ ನಾನು ಪುಳಕಗೊಂಡದ್ದಿದೆ.ರುಮಾಲೆ ಕೃತಿಗಳಲ್ಲಿ ಎದ್ದು ಕಾಣುವುದು ಸರಳತೆ. ವಸ್ತುವಿನ ವಿವರಕ್ಕಿಂತಲೂ ಅದರ ಆತ್ಮವನ್ನು ಹಿಡಿಯುವತ್ತಲೇ ಅವರ ಧ್ಯಾನ. ಪಿಕಾಸೊ, `ಮಕ್ಕಳಂತೆ ಚಿತ್ರ ಬರೆಯಬೇಕು' ಎಂದು ಸದಾ ಹೇಳುತ್ತಿದ್ದ. ಅಂದರೆ ಮಕ್ಕಳ ಮುಗ್ಧತೆ ಚಿತ್ರದಲ್ಲಿ ಕಾಣಬೇಕು ಎಂಬುದು ಆತನ ಅಭಿಲಾಷೆಯಾಗಿತ್ತು. ಆ ಮುಗ್ಧತೆಯನ್ನೇ ಇಲ್ಲಿ ಆತ್ಮ ಎಂದು ಕರೆದಿರುವುದು.

ಕಲಾತ್ಮಕ ಸಿನಿಮಾದಂತೆ!ಒಬ್ಬ ಸಂಗೀತಗಾರನಿಗೆ ಎಲ್ಲಾ ರಾಗಗಳ ಪರಿಚಯವಿರುತ್ತದೆ. ಆದರೆ ಆತ ಆ ಎಲ್ಲಾ ರಾಗಗಳನ್ನೂ ಬಳಸದೆ ಕೆಲವನ್ನು ಮಾತ್ರ ಅವಲಂಬಿಸಿರುತ್ತಾನೆ. ಅವುಗಳಲ್ಲಿಯೇ ಹೊಸತನ್ನು ನೂಲುತ್ತಾನೆ. ಕಲಾಕಾರ ಕೂಡ ಇದಕ್ಕಿಂತ ಭಿನ್ನವೇನಲ್ಲ. ರುಮಾಲೆ ಅವರನ್ನೇ ಗಮನಿಸಿ. ನೇರಳೆ, ದಟ್ಟ ಹಸಿರು, ಹಳದಿ ಹಾಗೂ ಕೇಸರಿ ಬಣ್ಣಗಳನ್ನು ಅವರು ಹೆಚ್ಚಿ ಬಳಸುತ್ತಿದ್ದರು. ಕಪ್ಪು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಈಗ ನೀವು ನೋಡುತ್ತಿರುವ ಕಲಾಕೃತಿಯಲ್ಲಿಯೂ ಅದೇ ಬಣ್ಣಗಳು ಢಾಳಾಗಿವೆ. ಒಲಿದ ರಾಗಗಳು ಎನ್ನುತ್ತೇವಲ್ಲಾ ಹಾಗೆಯೇ ಇವು ಅವರಿಗೆ ಒಲಿದ ಬಣ್ಣಗಳಾಗಿದ್ದವು. ಅವೆಲ್ಲವೂ ಅವರ ಉತ್ಕಟ ಅಭಿವ್ಯಕ್ತಿಯ ಅಂಗಗಳೆಂದರೆ ಅತಿಶಯೋಕ್ತಿಯಲ್ಲ.ರುಮಾಲೆ ಕೇವಲ ಬಣ್ಣ ಬಳಿಯುತ್ತಿರಲಿಲ್ಲ, ಅವುಗಳ ಮೂಲಕ ಹೊಸ ಆಟವನ್ನೇ ಹೂಡುತ್ತಿದ್ದರು. ಕುಂಚವನ್ನು ತಿರುಗಿಸಿ ತಿರುಗಿಸಿ ಬಣ್ಣವನ್ನು ಮೆತ್ತುತ್ತಿದ್ದ ರೀತಿ ಒಂದು ತಪಸ್ಸಿನಂತೆ ನಡೆಯುತ್ತಿತ್ತು. ದೂರಕ್ಕೆ ಭೂದೃಶ್ಯದ ಸಾದಾ ವರ್ಣನೆಯಂತೆಯೂ, ಹತ್ತಿರದಿಂದ ನೋಡಿದರೆ ಅದ್ಭುತ ಅಮೂರ್ತ ರೂಪದಂತೆಯೂ ಅವರ ಕೃತಿಗಳು ಕಂಗೊಳಿಸುತ್ತವೆ. ಅವರ ಬಹುತೇಕ ಕೃತಿಗಳ ಸ್ಥಾಯಿಭಾವ ಪ್ರಕೃತಿ. ಆದರೆ ಕಾಣ್ಕೆಯಲ್ಲಿ ಮಾತ್ರ ಎಷ್ಟೊಂದು ವೈವಿಧ್ಯ!ಎದುರಿನ ದೃಶ್ಯವನ್ನು ಅಚ್ಚುತೆಗೆಯುವ ಗೋಜಿಗೆ ರುಮಾಲೆ ಹೋಗುತ್ತಿರಲಿಲ್ಲ. ಹಾಗೆ ಮಾಡಿದ್ದರೆ ಅವರು ಕೂಡ ಸಾಂಪ್ರದಾಯಿಕ ಶೈಲಿಯ ಕಲಾಕಾರರ ಸಾಲಿಗೆ ಸೇರುತ್ತಿದ್ದರು. ಬಂಗಾಳಿ ಪಂಥದಿಂದ ಪ್ರಭಾವಿತರಾದ ಕಲಾತಪಸ್ವಿ ಕೆ. ವೆಂಕಟಪ್ಪನವರಂತೆ ಇವರೂ ನಿಸರ್ಗವನ್ನು ಆರಾಧಿಸಿದವರು. ಆದರೆ ಇಬ್ಬರ ಕೃತಿಗಳಿಗೂ ಭಾರಿ ವ್ಯತ್ಯಾಸವಿದೆ. ರುಮಾಲೆ ಕೈಯಲ್ಲಿ ಅರಳುತ್ತಿದ್ದ ಹಸಿರಿನ ಸಿರಿಗೆ ಬೇರೆಯದೇ ಸೊಬಗಿದೆ.ಅವರು ಗಂಟೆಗಟ್ಟಲೆ ಮರ ಗಿಡ ಬಳ್ಳಿಗಳನ್ನು ಧ್ಯಾನಿಸುತ್ತಿದ್ದರು. ಆಗೆಲ್ಲಾ ನಮ್ಮಂಥ ಹುಡುಗುಬುದ್ಧಿಯವರಿಗೆ ಇದು ಕೇವಲ ತೋರುಗಾಣಿಕೆ ಅನಿಸಿದ್ದುಂಟು. ಈಗ ಅವರೆಂಥ ದೊಡ್ಡ ಋಷಿ ಎಂದು ನೆನೆವಾಗ ನಮ್ಮಂತಹವರ ಅಜ್ಞಾನ ಮನದಟ್ಟಾಗುತ್ತದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶವನ್ನೇ ಅವರು ಹೆಚ್ಚಾಗಿ ಬರೆದದ್ದು. ಕಬ್ಬನ್ ಉದ್ಯಾನ, ಪೆಟ್ರೋಲ್ ಬಂಕ್, ವಸ್ತು ಸಂಗ್ರಹಾಲಯ ರಸ್ತೆಗಳು, ಕಟ್ಟಡಗಳು ಹೀಗೆ ಬೆಂಗಳೂರನ್ನು ದಿವ್ಯತ್ವಕ್ಕೇರಿಸಿದ್ದೇ ಅವರ ಕೈಗಳು.ಅವರ ಸಮಕಾಲೀನರಾದ ಸುಬ್ರಮಣ್ಯ ರಾಝು, ಇನಾಂತಿ, ಎಸ್.ಎಸ್. ಕುಕ್ಕೆ ಮುಂತಾದವರು ಕೂಡ ಬಣ್ಣಗಳಲ್ಲಿ ಬರೆದದ್ದು ನಿಸರ್ಗ ಗೀತೆಗಳನ್ನೇ. ಆದರೆ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದರು. ರುಮಾಲೆ ಅವರ ಕೆಲಸವಂತೂ ಅವರೆಲ್ಲರಿಗಿಂತ ಬೇರೆಯದೇ ಸ್ತರದಲ್ಲಿ ನಿಲ್ಲುತ್ತದೆ. ಉಳಿದವರ ಕಲಾಕೃತಿಗಳು ವ್ಯಾಪಾರಿ ಸಿನಿಮಾದಂತೆ ರಂಜಕವಾಗಿ ತೋರಿದರೆ ರುಮಾಲೆ ಮಾತ್ರ ಕಲಾತ್ಮಕ ಸಿನಿಮಾದ ಒರಟು ಅಭಿವ್ಯಕ್ತಿಯಂತೆ ಉಳಿಯುತ್ತಾರೆ. ಅವರ ಕಲಾಕೃತಿಗಳನ್ನು ಇನ್ನಾದರೂ ಬೇರೆ ಬೇರೆ ಆಯಾಮಗಳಲ್ಲಿ ಗಂಭೀರವಾಗಿ ಅಧ್ಯಯನ ಮಾಡುವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry