ಸೋಮವಾರ, ಜೂನ್ 14, 2021
23 °C

ಚಿತ್ರರೂಪಕ: ಉನ್ಮತ್ತ ಗೆರೆಗಳ ಗುಸ್ತಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತೊಂಬತ್ತನೇ ಶತಮಾನ ಕಂಡ ಸಂಕೇತವಾದಿ ಚಿತ್ರಕಲಾವಿದರಲ್ಲಿ ಗುಸ್ತಾವ್ ಕ್ಲಿಮ್ಟ ಹೆಸರು ಅಜರಾಮರ. `ವಿಯೆನ್ನಾ ವಿಯೋಜನಾ (್ಖಜಿಛ್ಞ್ಞಿ ಖಛ್ಚಿಛಿಜಿಟ್ಞ ) ಚಳವಳಿ~ಯ ಸ್ಥಾಪಕರಲ್ಲಿ ಒಬ್ಬನಾದ ಗುಸ್ತಾವ್ ಹೆಣ್ಣನ್ನು ಇನ್ನಿಲ್ಲದಂತೆ ರೇಖೆಗಳಲ್ಲಿ, ಬಣ್ಣಗಳಲ್ಲಿ ಹಿಡಿದಿಟ್ಟನು. ಕಾಮದ ಪರಾಕಾಷ್ಠೆಯಲ್ಲಿ ಬದುಕಿನ ಆಳವನ್ನು ಕಂಡುಕೊಳ್ಳಲು ಯತ್ನಿಸಿದವನು.ಚಿನ್ನದ ತಗಡಿನ ಮೇಲೆ ಕುಸುರಿ ಕೆಲಸ ನಡೆಸುತ್ತಿದ್ದ ಅರ್ನೆಸ್ಟ್ ಕ್ಲಿಮ್ಟನ ಏಳು ಮಕ್ಕಳಲ್ಲಿ ಎರಡನೇ ಮಗನಾಗಿ ಗುಸ್ತಾವ್ 1862ರಲ್ಲಿ ಜನಿಸಿದ. ಬಾಲ್ಯದ ಬೆನ್ನಿಗೆ ಅಂಟಿತ್ತು ಬಡತನ. ವಿಯೆನ್ನಾ ಕರಕುಶಲ ಶಾಲೆಯಲ್ಲಿ ವಿದ್ಯಾಭ್ಯಾಸ. ವಾಸ್ತುಶಿಲ್ಪದತ್ತಲೂ ಒಲವು.ಈತನ ಜತೆಗೂಡಿದ್ದು ಸಹೋದರ, ಅಪ್ಪನ ಹೆಸರನ್ನೇ ಹೊತ್ತಿರುವ ಅರ್ನೆಸ್ಟ್ ಕ್ಲಿಮ್ಟ. ಇಬ್ಬರೂ ಸೇರಿ `ಕಲಾವಿದರ ಕಂಪೆನಿ~ ಎಂಬ ಸಂಘಟನೆ ಹುಟ್ಟು ಹಾಕಿದರು. ಕಲೆ ವೃತ್ತಿಯಾಗತೊಡಗಿತ್ತು. ಬೃಹತ್ ಸಾರ್ವಜನಿಕ ಕಟ್ಟಡಗಳು, ಒಳಾಂಗಣಗಳಲ್ಲಿ ಆತನ ಕೈಚಳಕ ಮೂಡಿತು.

 

1888ರಲ್ಲಿ ಗುಸ್ತಾವ್ ತನ್ನ ಸೃಜನಶೀಲತೆಯ ಮೂಲಕ ಆಸ್ಟ್ರಿಯಾದ ಸಾಮ್ರಾಟ ಮೊದಲನೇ ಫ್ರಾನ್ಸ್ ಜೋಸೆಫ್ ಕಣ್ಣಿಗೆ ಬಿದ್ದ. `ಗೋಲ್ಡನ್ ಆರ್ಡರ್ ಆಫ್ ಮೆರಿಟ್~ ಗೌರವಕ್ಕೆ ಪಾತ್ರನಾದ. ವಿಯೆನ್ನಾ ಹಾಗೂ ಮ್ಯೂನಿಕ್ ವಿಶ್ವವಿದ್ಯಾಲಯಗಳ ಗೌರವ ಸದಸ್ಯನೂ ಆದ. 1892ರಲ್ಲಿ ಅಪ್ಪ ಹಾಗೂ ತನ್ನ ಬೆನ್ನೆಲುಬಾಗಿದ್ದ ಸಹೋದರರು ಗತಿಸಿದರು. ಕುಟುಂಬದ ಹೊಣೆ ಗುಸ್ತಾವ್ ಮೇಲೆ. ಮನೆಯ ದುರಂತ ಆತನ ಕುಂಚಕ್ಕೆ ಮತ್ತಷ್ಟು `ಸಾಣೆ~ ಹಿಡಿಯಿತು. ವ್ಯಕ್ತಿಗತ ಶೈಲಿಯ ಚಿತ್ರ ರಚನೆಗೆ ಕಾರಣವಾಯಿತು.ಗುಸ್ತಾವ್ ಹೆಣ್ಣಿನ ಕಡುಮೋಹಿ. ಎಮಿಲಿ ಫ್ಲೋಜ್ ಎಂಬಾಕೆಯ ಕೈ ಹಿಡಿಯುವ ಮೊದಲೇ ಆತ ಅನೇಕ ಹೆಂಗಳೆಯರ ಸಹವಾಸ ಮಾಡಿದ್ದ. ಹದಿನಾಲ್ಕು ಮಕ್ಕಳ ತಂದೆಯಾಗಿದ್ದ!ಹೆಸರಾಂತ ಕಲಾವಿದರಿಗಷ್ಟೇ ಮನ್ನಣೆ ದೊರೆಯುತ್ತಿದ್ದುದನ್ನು ಪ್ರತಿಭಟಿಸಿ ವಿಯೆನ್ನಾ ವಿಯೋಜನಾ ಚಳವಳಿ ಒಗ್ಗೂಡಿತು. ಈ ಮೊದಲೇ ಹೇಳಿದಂತೆ ಅದರ ರೂವಾರಿ ಗುಸ್ತಾವ್. ಯುವ ಕಲಾವಿದರನ್ನು ಪ್ರೋತ್ಸಾಹಿಸುವುದು, ವಿದೇಶಿ ಕಲಾವಿದರನ್ನು ವಿಯೆನ್ನಾಕ್ಕೆ ಪರಿಚಯಿಸುವುದು, ತನ್ನದೇ ಪತ್ರಿಕೆಯೊಂದನ್ನು ಹೊರತಂದು ಕಲಾವಿದರ, ಶಿಲ್ಪಿಗಳ ಶ್ರಮವನ್ನು ಪ್ರಚುರ ಪಡಿಸುವುದು ಚಳವಳಿಯ ಆಶಯವಾಗಿತ್ತು. `ಯಾವುದೇ ನಿರ್ದಿಷ್ಟ ಶೈಲಿಯನ್ನು ಬಿಂಬಿಸದಿರುವುದು ಹಾಗೂ ಯಾವುದೇ ಪ್ರಣಾಳಿಕೆಗಳನ್ನು ಹೊಂದದೇ ಇರುವುದು ಚಳವಳಿಯ ಧ್ಯೇಯವಾಗಿತ್ತು. ಈ ಎಲ್ಲ ನೆಲೆಗಳಲ್ಲಿಯೂ ಚಳವಳಿ ಯಶಸ್ಸು ಕಂಡಿತು. ಗುಸ್ತಾವ್‌ಗೆ ಪ್ರಾಮುಖ್ಯತೆ ತಂದುಕೊಟ್ಟಿತು.ಅಷ್ಟರಲ್ಲಾಗಲೇ ಆತನೊಳಗೊಬ್ಬ ತೀವ್ರಗಾಮಿ ತುಡಿಯುತ್ತಿದ್ದ. ಎಲ್ಲ ಎಲ್ಲೆಗಳನ್ನೂ ಮೀರುವ ಎದೆಗಾರಿಕೆಯ ಕಲಾವಿದನೊಬ್ಬ ಆತನೊಳಗೆ ಇಣುಕಿದ್ದ. ಪೌರಾಣಿಕ ಹಾಗೂ ಸಾಂಕೇತಿಕ ತಂತ್ರವನ್ನು ಬಳಸಿಕೊಂಡು ನಗ್ನ ಚಿತ್ರಗಳನ್ನು ರಚಿಸತೊಡಗಿದ.

 

ವಿಯೆನ್ನಾ ವಿಶ್ವವಿದ್ಯಾಲಯದ ಛಾವಣಿಗಾಗಿ ರಚಿಸಿದ ಮೂರು ಕಲಾಕೃತಿಗಳು ಅಶ್ಲೀಲತೆಯಿಂದ ಕೂಡಿವೆ ಎಂದು ವಿವಾದವೆದ್ದಿತು. ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ವಿಶ್ವವಿದ್ಯಾಲಯದಿಂದ ಕಲಾಕೃತಿಗಳನ್ನು ಹೊರದಬ್ಬಲಾಯಿತು. ಅಷ್ಟೇ ಅಲ್ಲ ಅವುಗಳನ್ನು ಧ್ವಂಸಗೊಳಿಸಲಾಯಿತು. ಅದೇ ಕೊನೆ. ಮುಂದೆಂದೂ ಇಂತಹ ಕಲಾಕೃತಿಗಳ ಸಾರ್ವಜನಿಕ ಪ್ರದರ್ಶನಕ್ಕೆ ಗುಸ್ತಾವ್ ಮನಸ್ಸು ಮಾಡಲಿಲ್ಲ.ಆತನ ಹೆಸರನ್ನು ಉಜ್ವಲಗೊಳಿಸಿದ್ದು `ಗೋಲ್ಡನ್ ಫೇಸ್~ ಸರಣಿ. ಅಲ್ಲಿ ಆತ ಬಳಸಿದ್ದು ಸ್ವರ್ಣ ವರ್ಣವನ್ನು. ಅಪ್ಪನ ಚಿನ್ನದ ಕುಸುರಿಕಲೆ ಆತನ ಮೇಲೆ ಅದೆಷ್ಟು ಅಚ್ಚೊತ್ತಿತ್ತು ಎನ್ನುವುದಕ್ಕೆ ಈ ಕೃತಿಸರಣಿ ಸಾಕ್ಷಿಯಾಗಿದೆ. `ಅಡೆಲ್ ಬ್ಲೋಚ್ ಬಾವೊರ್‌ಳ ಭಾವಚಿತ್ರ~, `ದಿ ಕಿಸ್~ ಈ ಸರಣಿಯ ಪ್ರಖ್ಯಾತ ಕೃತಿಗಳು. ಖ್ಯಾತಿ ಬಂದರೂ ಗುಸ್ತಾವ್ ಬದಲಾಗಲಿಲ್ಲ.ಅದೇ ಸರಳತೆ. ಅದೇ ಧ್ಯಾನ. ತನ್ನನ್ನು ಕುರಿತು ಆತ ಒಂದು ಕಡೆ ಹೀಗೆ ಹೇಳಿಕೊಂಡಿದ್ದಾನೆ: “ನಾನೆಲ್ಲೂ ನನ್ನ ಸ್ವ-ಭಾವಚಿತ್ರವನ್ನು ಬರೆದುಕೊಂಡವನಲ್ಲ. ನನಗೆ ನಾನೇ ಒಂದು ವಿಷಯವಾಗುವುದು ಒಗ್ಗದ ಸಂಗತಿ. ಇತರರಲ್ಲಿ ನಾನಿದ್ದೇನೆ. ನನ್ನ ಹೆಣ್ಣುಗಳಿಗಿಂತ ಹೆಚ್ಚು ವಿಶೇಷವನ್ನು ನನ್ನಲ್ಲಿ ಕಾಣಲಾಗದು. ನಾನು ಪ್ರತಿನಿತ್ಯ ಬರೆಯುವ, ಹಗಲು ರಾತ್ರಿ ಬರೆಯುವ ಕಲಾವಿದ ಮಾತ್ರ. ನನ್ನ ಬಗ್ಗೆ ತಿಳಿಯಲು ಬಯಸುವವರು ನನ್ನ ಕಲಾಕೃತಿಗಳನ್ನು ಗಮನವಿಟ್ಟು ನೋಡಿ...”1911ರಲ್ಲಿ ರೋಮ್‌ನಲ್ಲಿ ನಡೆದ ಜಾಗತಿಕ ಚಿತ್ರಕಲಾ ಪ್ರದರ್ಶನದಲ್ಲಿ ಸಾವು ಬದುಕನ್ನು ಕುರಿತ ಆತನ ಕಲಾಕೃತಿ ಪ್ರಥಮ ಸ್ಥಾನಗಳಿಸಿತು. 1915ರಲ್ಲಿ ಆತನ ತಾಯಿ ಅನ್ನಾ ತೀರಿಕೊಂಡಳು. ಅದಾದ ಮೂರು ವರ್ಷದ ಬಳಿಕ ಗುಸ್ತಾವ್ ಇಹಲೋಕ ತ್ಯಜಿಸಿದ. ಆತನ ಮರಣಾನಂತರ ಹಲವು ಕಲಾಕೃತಿಗಳು ಲಕ್ಷಾಂತರ ಡಾಲರ್‌ಗಳಿಗೆ ಮಾರಾಟವಾದವು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.