ಚಿತ್ರರೂಪಕ/ ಪ್ರಬುದ್ಧ ಕಲಾವಿದನ ಜೀವಮೇಳ

7

ಚಿತ್ರರೂಪಕ/ ಪ್ರಬುದ್ಧ ಕಲಾವಿದನ ಜೀವಮೇಳ

Published:
Updated:

ರುಮಾಲೆ ಚೆನ್ನಬಸವಯ್ಯ (1910-1988) ಅವರ ಬದುಕು, ವ್ಯಕ್ತಿತ್ವಗಳು ಅವರ ಕಲೆಯ ಹಾಗೆಯೇ ಎಷ್ಟು  ಸರಳವೋ ಅಷ್ಟೇ ಶಿಷ್ಟ. ಇಪ್ಪತ್ತರ ಹರಯದಲ್ಲಿ (1934) ಗಾಂಧೀಜಿಯವರನ್ನು ನಂದೀಗ್ರಾಮದಲ್ಲಿ ಭೇಟಿಮಾಡಿದ ರುಮಾಲೆಯವರಿಗೆ ಕೊನೆಯವರೆಗೂ ಮಹಾತ್ಮರ ಬದುಕು, ಆದರ್ಶ, ನಂಬಿಕೆಗಳೇ ಮಾದರಿಗಳು. ಅವರು ಆಯ್ಕೆ ಮಾಡಿಕೊಂಡ ಸರಳ ಜೀವನಶೈಲಿಯಲ್ಲಿ ತೋರಿಕೆ, ಆತ್ಮವಂಚನೆಗೆ ಅವಕಾಶವಿಲ್ಲ.

ಬದಲಾಗಿ ಬದುಕಿನ ಅಗಾಧ ಆಳ ಹರವಿನಲ್ಲಿ ಯಾವುದು ಅಗತ್ಯ, ಯಾವುದು ಇಲ್ಲ ಎಂಬುದನ್ನು ವೈಯಕ್ತಿಕವಾಗಿ ಗುರುತಿಸಿಕೊಂಡು ಆತ್ಮಸಾಕ್ಷಿಯ ಕಠಿಣ ದಾರಿಯೊಂದನ್ನು ಹಿಡಿಯುವುದು ಮುಖ್ಯ. ಅದು ತೀಕ್ಷ್ಣ ಧ್ಯಾನ, ಮನನಗಳಿಂದ ಕೂಡಿದ ಮಾರ್ಗ. ಶ್ರೀ ಶಿವಬಾಲಯೋಗಿ ಅವರ ನೆರವಿನಲ್ಲಿ (1960-62) ಈ ನಿರ್ದಿಷ್ಟ ಹಾದಿಯಲ್ಲಿ ಹೊರಟ ರುಮಾಲೆಯವರು ಮುಂದೆ ಎರಡು ಬಾರಿ (1969 ಮತ್ತು 1982) `ಕಾಯಕಲ್ಪ'ದಲ್ಲಿ ತೊಡಗಿದರು. ಗಾಂಧೀವಾದಿಯಾಗಿ ಅವರು ಬಹಿರಂಗದ ಸುಧಾರಣೆಗಳಲ್ಲಿ ತೊಡಗಿಕೊಂಡ ಹಾಗೆಯೇ ಅಂತರಂಗ ಶುದ್ಧಿಯಲ್ಲಿಯೂ ವಿಶೇಷವಾಗಿ ತೊಡಗಿದವರು. ಕಾಯಕಲ್ಪವು ಇದರ ಒಂದು ಆಯಾಮ. ರುಮಾಲೆಯವರು ಕೇವಲ ಕಲಾವಿದರಾಗಲಿಲ್ಲ. ಸಮಾಜಸೇವಕ, ಶಾಸಕ, ಪತ್ರಿಕೋದ್ಯಮಿ ಹಾಗೂ ಯುವಪೀಳಿಗೆಗೆ `ಮಾರ್ಗದರ್ಶಿ'ಯೇ ಆದರು. ದೇಶಸೇವೆಯ ಜೊತೆಗೆ ಕನ್ನಡ ಸಂಸ್ಕೃತಿ, ಭಾಷೆ, ಜನರಿಗಾಗಿ ವಿಶೇಷ ಶ್ರದ್ಧೆ, ಪ್ರೀತಿಗಳಿಂದ ಇಳಿವಯಸ್ಸಿನವರೆಗೂ ದುಡಿದರು. ಕಾಂಗ್ರೆಸ್ ಸೇವಾದಳ, ಭಾರತ ಸೇವಾದಳಗಳ ಕಾರ್ಯದರ್ಶಿಯಾಗಿ (1948-55) ಮೈಸೂರು ರಾಜ್ಯ ಶಾಸಕರ ಸಮಿತಿಯ ಸದಸ್ಯನಾಗಿ (1952-60) `ತಾಯಿನಾಡು' ದಿನಪತ್ರಿಕೆಯ ಸಂಪಾದಕತ್ವ ವಹಿಸಿದ (1956-60) ರುಮಾಲೆಯವರದು ಬಹುಮುಖ ವ್ಯಕ್ತಿತ್ವ.ಈ ಶ್ರೀಮಂತ ಅನುಭವ, ಒಳನೋಟಗಳನ್ನು ಹಂಚಿಕೊಳ್ಳಲು ರುಮಾಲೆಯವರಿಗೆ ಕಲೆಯ ಸೃಷ್ಟಿಯು ಒಂದು ನೆಪವಾಯಿತು. ಕಲೆ ಅನ್ನುವುದು ಅವರ ಬದುಕು ನಂಬಿಕೆ, ಜೀವನದೃಷ್ಟಿಗಳಿಗೊಂದು ಚಿಕ್ಕ ಚೊಕ್ಕ ರೂಪಕವೇ ಆಗಿದೆ. ಈ ದಿಕ್ಕಿನಲ್ಲಿ ಅವರು ಹಿಡಿದ ಮಾರ್ಗವೂ ತೀರಾ ವೈಯಕ್ತಿಕವಾದದ್ದು. ಸ್ವಂತ ಕಲಿಕೆಯೇ ಅದರ ಜೀವಾಳ.

ಕಲಾಮಂದಿರದ ಪ್ರತಿಭಾವಂತ ಕಲಾಶಿಕ್ಷಕ, ಕಲಾವಿದ ಎ.ಎನ್. ಸುಬ್ಬರಾಯರು ರುಮಾಲೆಯವರಿಗೆ ಶಿಕ್ಷಣ ನೀಡಿದ ಪ್ರೀತಿಯ ಗುರುಗಳು (1929). ಹಾಗೆಯೇ ಆಗಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟಿನ ಎನ್.ಜಿ. ಪಾವಂಜೆ, ಎಸ್.ಜಿ. ಟಂಕಸಾಲೆಯವರ ಬಳಿಯೂ ರುಮಾಲೆಯವರು (1931) ಶಿಕ್ಷಣ ಪಡೆದರು. ಆದರೆ ಕಲೆಯ ರಚನೆಯಲ್ಲಿ ಸಂಪೂರ್ಣವಾಗಿ ತೊಡಗುವ ವೇಳೆಗೆ (1962) ಐವತ್ತರ ಗಡಿ ದಾಟಿದ್ದರು. ಅಂದರೆ ಆ ವೇಳೆಗೆ ಅವರ ಕಲೆಯ ಶಿಕ್ಷಣವು ಮೂರು ದಶಕಗಳಷ್ಟು ಹಿಂದೆ ಬಿದ್ದಿತ್ತು. ಆ ಅವಧಿಯಲ್ಲಿ ಅವರ ಶರೀರ, ಬುದ್ಧಿ ಮನಸ್ಸುಗಳು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಮೂಲಕ ಹೊಸ ಅನುಭವ, ಒಳನೋಟ, ಕನಸುಗಳಿಗೆ ತೆರೆದುಕೊಂಡಿತ್ತು.ರುಮಾಲೆಯವರ ಕೇಂದ್ರ ಆಸಕ್ತಿಯು ಪ್ರಕೃತಿ ಚಿತ್ರಣ. ಆದರೆ, ಪ್ರಕೃತಿ ಚಿತ್ರಣವೆಂಬ ಪ್ರಕಾರದಲ್ಲಿ ತೊಡಗಿದ ಅವರ ಸಮಕಾಲೀನರಿಗಿಂತ ರುಮಾಲೆಯವರ ಕ್ರಮ, ದೃಷ್ಟಿಕೋನಗಳಲ್ಲಿ ಮಹತ್ವದ ವ್ಯತ್ಯಾಸಗಳಿವೆ. ಪ್ರಕೃತಿಯೆಂಬುದು ರುಮಾಲೆಯವರಿಗೆ ದೂರದ ಬೆಟ್ಟ ಪರ್ವತಗಳಾಗಲೀ, ಹಳ್ಳಿಯ ಬದುಕಾಗಲೀ ಆಗಲಿಲ್ಲ. ಬದಲಾಗಿ ನಗರಕೇಂದ್ರದಲ್ಲಿನ ಮರ ಗಿಡ ಹೂಗಳ ಹಾಗೆಯೇ ಕಟ್ಟಡಗಳೂ ಅವರ `ಪ್ರಕೃತಿ'ಯ ಅರ್ಥವ್ಯಾಪ್ತಿಯಲ್ಲಿ ಸೇರಿಕೊಂಡವು. ಅಂದರೆ, ಅವರ `ಪ್ರಕೃತಿಚಿತ್ರ'ವೆಂಬ ಪರಿಕಲ್ಪನೆಯು ಕಳೆದುಹೋದ ಜೀವನಾನುಭವ, ನೋವು ನಲಿವುಗಳ ಹಳಹಳಿಕೆ ಅಲ್ಲ. ಬದಲಾಗಿ ನಮ್ಮ ಆತ್ಮೀಯ ಪರಿಸರ, ನಮಗೆ ತಿಳಿದ, ದಿನನಿತ್ಯದ ಬದುಕನ್ನು ರೂಪಿಸುತ್ತಾ ಪ್ರೇರೇಪಿಸುತ್ತಾ ಇರುವ ನಿಜಸ್ವರೂಪದ ಅತಿಸಾಮಾನ್ಯ ದೃಶ್ಯಲೋಕವೇ ಆಗಿದೆ.ಹೀಗಾಗಿ ಅವರು ನಮ್ಮ ಮುಂದಿಡುವ ನೋಟ, ಸಂಗತಿ, ವಿಚಾರಗಳಲ್ಲಿ ಮೇಲುನೋಟಕ್ಕಂತೂ ಏನೂ ಹೊಸದಿಲ್ಲ. ಆದರೆ, ಪ್ರತಿಯೊಂದು ಕೃತಿಯು ಪ್ರಕಟಿಸುವ ಮಗುವಿನ ಮುಗ್ಧತೆ, ಅನುಭವಿಯ ಅರಿವು, ಮುಕ್ತ ಮನಸ್ಸಿನ ಪ್ರತಿಭೆಗಳು ಕರ್ನಾಟಕದ ಸಮಕಾಲೀನ ಕಲೆಯ ಸಂದರ್ಭದಲ್ಲಿ ಅಪೂರ್ವವಾದವು: ರುಮಾಲೆಯವರು ಹೆಚ್ಚೆಂದರೆ 450-500ರಷ್ಟು ಕೃತಿಗಳನ್ನು ಅಪಾರ ಪ್ರೀತಿ, ವಿಶೇಷ ಪರಿಶ್ರಮದಿಂದ ರಚಿಸಿದ್ದಾರೆ. ಈ ಸಣ್ಣ ಸಂಖ್ಯೆಯ ಕೃತಿ ಸಮೂಹದ ಮೂಲಕ `ಕಲೆ' ಎಂಬುದರ ಸ್ವರೂಪ, ಅರ್ಥವ್ಯಾಪ್ತಿ, ಗೊತ್ತುಗುರಿಗಳನ್ನೇ ಹಿಡಿದಿಟ್ಟಿರುವ ಅಮೂಲ್ಯವಾದ ಮುತ್ತಿನ ಹಾರವೊಂದನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ.ಯಾವುದೇ ಪೂರ್ವಸಿದ್ಧ ಶೈಲಿ, ಪಂಥ, ತಂತ್ರಗಾರಿಕೆಗಳಿಗೂ ಅವರು ಬೆಲೆಕೊಡಲಿಲ್ಲ. ಬದಲಾಗಿ ಕೆಲವು ವೈದೃಶ್ಯಗಳ ಸಂಗಮವನ್ನೇ ಅವರು ತಮ್ಮ ಜೀವನದೃಷ್ಟಿ, ಕಲೆಗಳ ಪ್ರೇರಕಶಕ್ತಿಗಳಾಗಿ ಶೋಧಿಸಿದರು. ಪ್ರಕೃತಿ-ಬದುಕು, ಸಮಾಜ-ವ್ಯಕ್ತಿ, ಅಂತರಂಗ-ಬಹಿರಂಗ ಹೀಗೆ ಈ ಸಂಕೀರ್ಣ ವೈದೃಶ್ಯಗಳನ್ನು ವಿಶೇಷ ಎಚ್ಚರದಿಂದ ಅರಸಿದ ಆಧ್ಯಾತ್ಮಿಯೊಬ್ಬನ ಆತ್ಮಚರಿತ್ರೆಯೇ ಅವರ ಕಲೆಯಾಗಿದೆ. ಅದು ಪ್ರಬುದ್ಧ ಕಲಾವಿದನೊಬ್ಬನು ಕಂಡ ಜೀವಮೇಳ.

ಬೆಂಗಳೂರು ಮೂಲದ ಲೇಖಕರು ಸದ್ಯ ಸಿಂಗಪುರ ನಿವಾಸಿ. ದೃಶ್ಯಕಲೆಯ ಭಾಷೆಯು ಅವರ ವಿಶೇಷ ಆಸಕ್ತಿ. ಸಿಂಗಪುರದಲ್ಲಿ `ಚೀನಾದ ಮಸಿಚಿತ್ರಣ ಪರಂಪರೆಯನ್ನು ಕುರಿತ ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry