ಚಿತ್ರಸಂತೆ ಮಾದರಿಯಲ್ಲಿ ಚಿತ್ರ ಪರಿಷೆ-ಕೃಷ್ಣಸೆಟ್ಟಿ

7

ಚಿತ್ರಸಂತೆ ಮಾದರಿಯಲ್ಲಿ ಚಿತ್ರ ಪರಿಷೆ-ಕೃಷ್ಣಸೆಟ್ಟಿ

Published:
Updated:

ಶಿವಮೊಗ್ಗ: `ಚಿತ್ರ ಸಂತೆ' ಮಾದರಿಯಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಜನವರಿಯಲ್ಲಿ `ಚಿತ್ರ ಪರಿಷೆ' ನಡೆಸಲು ಸಿದ್ಧತೆಗಳು ಆಗಿವೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ತಿಳಿಸಿದರು.`ಚಿತ್ರ ಪರಿಷೆ'ಯಲ್ಲಿ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಶಾಲೆಗಳ ಕಲಾ ಶಿಕ್ಷಕರಿಗೆ ರಾಷ್ಟ್ರಮಟ್ಟದ ಮೂರು ದಿನಗಳ ವಿಚಾರಗೋಷ್ಠಿಯನ್ನು ಹಂಪಿಯಲ್ಲಿ ಹಮ್ಮಿಕೊಳ್ಳಲು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಕಾರ ಕೇಳಲಾಗಿದೆ. ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯಬೇಕಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾಗ್ಯಾಲರಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತರ ಜತೆ ಮಾತುಕತೆ ನಡೆದಿದೆ. ವಿಶೇಷ ಅನುದಾನಕ್ಕೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.ಕಲಾವಿದರ ಸಮ್ಮೇಳನ:ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಲಾವಿದರ ಬೃಹತ್ ಸಮ್ಮೇಳನವನ್ನು ಮೂರು ದಿನಗಳ ಕಾಲ ನಡೆಸಲು ಯೋಜಿಸಲಾಗಿದೆ. 2014ನೇ ವರ್ಷ ಅಕಾಡೆಮಿಯ ಸುವರ್ಣ ಮಹೋತ್ಸವ ವರ್ಷವಾಗಿದ್ದು, ಈ ನೆನಪಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಲಾವಿದರ ಸಮ್ಮೇಳನ ನಡೆಸಲಾಗುವುದು.ಲಲಿತಕಲಾ ಅಕಾಡೆಮಿ ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಆಯೋಜಿಸಲು ಉದ್ದೇಶಿಸಿರುವ ಚಟುವಟಿಕೆಗಳಿಗೆ ಸರ್ಕಾರ ನೀಡುತ್ತಿರುವ ಅನುದಾನದ ಮೊತ್ತ ರೂ. 50 ಲಕ್ಷ ಸಾಕಾಗುತ್ತಿಲ್ಲ. ಆದ್ದರಿಂದ ಈ ಅನುದಾನವನ್ನು ರೂ. 2ಕೋಟಿಗೆ  ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಬರುವ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ಇಂಡಿಯಾ ಆರ್ಟ್ ಫೇರ್ ಅಂತರರಾಷ್ಟ್ರೀಯ ಪ್ರದರ್ಶನ ನಡೆಯುತ್ತಿದ್ದು, ರಾಜ್ಯದ ಮೂವತ್ತು ಜಿಲ್ಲೆಗಳಿಂದ ಒಟ್ಟು 200 ಕಲಾವಿದರನ್ನು ಕಳುಹಿಸಲಾಗುವುದು. ಭಾಗವಹಿಸುವ ಪ್ರತಿ ಕಲಾವಿದರಿಗೂ ತಲಾ ರೂ. 5ಸಾವಿರ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.ಪ್ರಸ್ತುತ ಕಲಾವಿದರ ಗೌರವ ಪ್ರಶಸ್ತಿಯ ಮೊತ್ತವು ಕೇವಲ ಹತ್ತು ಸಾವಿರ ರೂಪಾಯಿಗಳಿದ್ದು, ಅದನ್ನು ಕನಿಷ್ಠ ಐವತ್ತು ಸಾವಿರಕ್ಕೆ ಹಾಗೂ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನದ ಈಗಿರುವ ಐದು ಸಾವಿರದ ಮೊತ್ತವನ್ನು ಕನಿಷ್ಠ ಇಪ್ಪತ್ತೈದು ಸಾವಿರಕ್ಕೆ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿರುವ ಜನಪದ ಕಲೆಯೂ ಆಗಿರುವ ಹಸೆ ಚಿತ್ತಾರ ಕುರಿತು ತರಬೇತಿ ಶಿಬಿರವನ್ನು  ಜಾನಪದ ಅಕಾಡೆಮಿ ಜತೆ ನಡೆಸಲು ಚಿಂತನೆ ನಡೆದಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry