ಶುಕ್ರವಾರ, ಮಾರ್ಚ್ 5, 2021
29 °C

ಚಿತ್ರಾವತಿ ನಾಡಿನ ನೇತ್ರಾವತಿ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಾವತಿ ನಾಡಿನ ನೇತ್ರಾವತಿ ರಾಜಕಾರಣ

ಚಿಕ್ಕಬಳ್ಳಾಪುರ: ಚಿತ್ರಾವತಿಯಲ್ಲಿ ನೀರು ಚೆನ್ನಾಗಿ ಹರಿ­ಯು­ತ್ತಿದ್ದ ಕಾಲದಲ್ಲಿ  ಬಾಗೆಪಲ್ಲಿಯ ಜನರಿಗೆ ನೇತ್ರಾವತಿ ಎಂದರೆ ನೆನಪಾಗುತ್ತಿದ್ದದ್ದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಕಷ್ಟಕಾಲದಲ್ಲಿ ಮುಡಿ ಕೊಡುವ ಹರಕೆ ಹೊತ್ತು ಧರ್ಮಸ್ಥಳಕ್ಕೆ ಬರುವುದನ್ನು ಬಿಟ್ಟರೆ ಈ ಪ್ರದೇಶಕ್ಕೆ ದಕ್ಷಿಣ ಕನ್ನಡದ ಜೊತೆಗಾಗಲೀ ಮಲೆನಾಡಿನ ಜೊತೆಗಾಗಲೀ ಯಾವುದೇ ಸಂಬಂಧಗಳಿರಲಿಲ್ಲ.

400 ಕಿ. ಮೀ.  ದೂರದಲ್ಲಿರುವ ಈ ಪ್ರದೇಶಗಳ ನಡುವೆ ಮೊದಲು ಸಂಬಂಧ ಕಲ್ಪಿಸಿದವರು ನೀರಾವರಿ ತಜ್ಞ ದಿ. ಜಿ.ಎಸ್. ಪರಮಶಿವಯ್ಯ. ಈ ತಾಂತ್ರಿಕ ಸಂಬಂಧ ರಾಜಕೀಯ ಸಂಬಂಧವಾಗಿ ಗಟ್ಟಿಯಾದದ್ದು 2009ರಲ್ಲಿ ದಕ್ಷಿಣ ಕನ್ನಡ ಮೂಲದ ಎಂ.ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವುದರ ಮೂಲಕ.ಈಗ ಚಿತ್ರಾವತಿಯ ನಾಡಿನ ರಾಜಕಾರಣ ಘಟ್ಟದ ಕೆಳಕ್ಕೆ ಹರಿಯುವ ನೇತ್ರಾವತಿಯ ಪ್ರಸ್ತಾಪವಿಲ್ಲದೆ ಸಂಪೂರ್ಣಗೊಳ್ಳು­ವುದೇ ಇಲ್ಲ. ಆದರೆ ಯಾವ ರಾಜಕೀಯ ಪಕ್ಷದ ನಾಯಕರೂ ನೇತ್ರಾವತಿ ನದಿಯ ಹೆಸರು ಹೇಳುವುದಿಲ್ಲ. ಎಲ್ಲರೂ ಪಶ್ಚಿಮಾಭಿಮುಖವಾಗಿ ಹರಿದು ಕಡಲು ಸೇರಿ ‘ವ್ಯರ್ಥ­ವಾಗುವ’ ನೀರಿನ ಬಗ್ಗೆ ಹೇಳುತ್ತಾರೆ. ಸಿಪಿಎಂನ ರಾಜಕಾರಣಿ­ಗಳು ಮಾತನಾಡುವಾಗ ಇದು ಪರಮಶಿವಯ್ಯ ರೂಪಿಸಿದ ಯೋಜನೆಯಾಗಿ ಕಾಣಿಸಿ­ಕೊಳ್ಳುತ್ತದೆ. ಜೆಡಿಎಸ್‌ನವರದ್ದೂ ಹೆಚ್ಚು ಕಡಿಮೆ ಇದೇ ಭಾಷೆಯೇ. ಕಾಂಗ್ರೆಸ್ ಮತ್ತು ಬಿಜೆಪಿಯವರು ‘ಎತ್ತಿನ ಹೊಳೆ’ ಎಂಬ ಪರಿಭಾಷೆಯನ್ನು ಬಳಸುತ್ತಾರೆ.ಬಾಗೇಪಲ್ಲಿ ಪಟ್ಟಣದ ಕಿರುಓಣಿಗಳಲ್ಲಿ, ಚಿಕ್ಕಬಳ್ಳಾಪುರ ನಗರದ ಬೀದಿಗಳಲ್ಲಿ, ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದ ವಿಶಾಲ ರಸ್ತೆಗಳಲ್ಲಿ ದಿನದ ಎಲ್ಲಾ ಹೊತ್ತಿನಲ್ಲಿಯೂ ಕಾಣಿಸಿಕೊಳ್ಳುವ ‘ಶುದ್ಧ ಕುಡಿಯುವ ನೀರು’ ಸರಬರಾಜು ಟ್ಯಾಂಕರ್‌ಗಳ ಎದುರು  ನಿಂತಿರುವ ಶ್ರೀಸಾಮಾನ್ಯರನ್ನು ಮಾತನಾಡಿಸಿದರೆ ‘ನೇತ್ರಾವತಿ ನೀರು ಬಂದುಬಿಟ್ಟರೆ ಸಾಕು’ ಎನ್ನುತ್ತಾರೆ. ರೈತ ಸಂಘದ ಮುಖಂಡರು ‘ಎಲ್ಲಿಂದಲಾದರೂ ನೀರು ತರಲಿ ನಮ್ಮ ಕೆರೆ ತುಂಬಿಸಲಿ’ ಎಂದು ಪಟ್ಟು ಹಿಡಿಯುತ್ತಾರೆ.

ಇದೇ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರ್ಕೇಶ್, ಇದೊಂದು ಮೂಗಿಗೆ ಬೆಣ್ಣೆಹಚ್ಚುವ ಯೋಜನೆ ಎಂದು ವಿವರಿಸಲು ತೊಡಗುತ್ತಾರೆ. ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಯಾರನ್ನು ಕೇಳಿದರೂ ‘ನೇತ್ರಾವತಿ ಒಮ್ಮೆ ಪೂರ್ವಕ್ಕೆ ಹರಿದುಬಿಡಲಿ’ ಎಂದು ಹಾರೈಸುತ್ತಾರೆ. ಜಾತಿ ಆಧಾರಿತ ಬಡಾವಣೆಗಳಿಂದ ಆರಂಭಿಸಿ ‘ಗೇಟೆಡ್ ಕಮ್ಯುನಿಟಿ’ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳ ಆಸೆಯೂ ನೇತ್ರಾವತಿ ಇತ್ತ ಮುಖ ಮಾಡಿಬಿಡಲಿ ಎಂಬುದೇ.ತೊಂಬತ್ತರ ದಶಕದ ಅಂತ್ಯದ ತನಕವೂ ನೀರಿನ ಕೊರತೆ ಎಂಬುದು ಎಲ್ಲೆಡೆಯಂತೆ ಇಲ್ಲಿಯೂ ಬೇಸಿಗೆಯ ತಿಂಗಳುಗಳ ಮಾಮೂಲು ತೊಂದರೆಗಳಲ್ಲಿ ಒಂದಷ್ಟೇ ಆಗಿತ್ತು. ಆದರೆ ಈಗ ನೀರನ್ನು ಕೊಡಕ್ಕೆ ಎರಡರಿಂದ ಮೂರು ರೂಪಾಯಿ­ಗಳನ್ನು ಕೊಟ್ಟು ಖರೀದಿಸದೇ ಇರುವ ಸಾಮಾನ್ಯ ಕುಟುಂಬ­ಗಳೇ ಇಲ್ಲ.ತೋಟಗಾರಿಕಾ ಬೆಳೆಗಳಿಗೆ ಬೇಕಿರುವ ವಿಶಿಷ್ಟ ಮಣ್ಣಿನಿಂದಾಗಿ ವಿಜ್ಞಾನಿಗಳ ಗಮನ ಸೆಳೆಯುತ್ತಿದ್ದ ಈ ನೆಲ ಈಗ ‘ಸಂಭವ­ನೀಯ ಮರುಭೂಮಿ’ ಎಂಬ ಕಾರಣಕ್ಕೆ ಗಮನಸೆಳೆಯುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ ಆರಂಭಿಸಿ ಮರುಭೂಮೀಕರಣದ ಅಧ್ಯಯನ ನಡೆಸುತ್ತಿರುವ ವಿಶ್ವ­ಸಂಸ್ಥೆಯ ಹವಾಮಾನ ಬದಲಾವಣೆಯ ಸಮ್ಮೇಳನದ (ಯಎನ್ಎಫ್‌ಸಿಸಿ) ತಜ್ಞರ ಗುಂಪುಗಳ ಚರ್ಚೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರದೇಶ ಪದೇ ಪದೇ ಪ್ರಸ್ತಾಪವಾಗುತ್ತಿರುತ್ತದೆ.ಪರಮಶಿವಯ್ಯನವರು ಪಶ್ಚಿಮಾಭಿಮುಖವಾಗಿ ಹರಿದು ಹೋಗುವ ನೀರನ್ನು ಪೂರ್ವಕ್ಕೆ ತಂದು ಬರ ನಿವಾರಣೆ ಮಾಡುವ ಯೋಜನೆ ರೂಪಿಸಿದ್ದು ನಿಜ. ಅದರಿಂದ ಇಲ್ಲಿನ ನೀರಿನ ಸಮಸ್ಯೆ ಪರಿಹಾರವಾಗುತ್ತದೆಂಬ ಕನಸನ್ನು ಜನರಲ್ಲಿ ತುಂಬಿದ್ದು ಸಿಪಿಎಂ ಪಕ್ಷ. 2001ರಲ್ಲಿ ಪರಮಶಿವಯ್ಯನವರು ಸಲ್ಲಿಸಿದ್ದ ಆರಂಭಿಕ ವರದಿಯಿಂದ ಆರಂಭಿಸಿ ಮುಂದೆ 2004ರಲ್ಲಿ ನೀಡಿದ ಯೋಜನಾ ನಿರೂಪಣೆಗಳೆಲ್ಲವನ್ನೂ ಸರ್ಕಾರಿ ಕಡತಗಳಿಂದ ಹೊರಗೆಳೆದು ಜನರ ಮುಂದಿಟ್ಟದ್ದು ಮಾಜಿ ಶಾಸಕ ಹಾಗೂ ಸಿಪಿಎಂ ನಾಯಕ ಜಿ.ವಿ. ಶ್ರೀರಾಮ­ರೆಡ್ಡಿಯವರ ಸಾಧನೆ. ಆ ಹೊತ್ತಿಗೆ ಇದನ್ನು ಕಾರ್ಯಸಾಧು­ವಲ್ಲ ಎಂದಿದ್ದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗಳು ಇದನ್ನು ತಮ್ಮ ಸಾಧನೆಯ ಪಟ್ಟಿಗೆ ಸೇರಿಸಿಕೊಳ್ಳಲು ಈಗ ಮೇಲಾಟ ನಡೆಸುತ್ತಿವೆ.2004ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಈ ಯೋಜನೆಯ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ ಬಜೆಟ್‌ನಲ್ಲಿ ಐದು ಕೋಟಿ ರೂಪಾಯಿಗಳನ್ನು ತೆಗೆದಿಟ್ಟಿದ್ದು, ಧರ್ಮಸಿಂಗ್ ಸರ್ಕಾರ ಇಸ್ರೋ ಸಂಸ್ಥೆಗೆ ಸಮೀಕ್ಷೆಯನ್ನು ಒಪ್ಪಿಸಿದ್ದು ಈಗ ಕಾಂಗ್ರೆಸ್‌ಗೆ ನೆನಪಾಗುತ್ತಿದೆ. ಈ ಯೋಜನೆಯನ್ನು ಅವೈಜ್ಞಾನಿಕ ಎಂದು ಎಚ್.ಡಿ.ಕುಮಾರ­ಸ್ವಾಮಿಯವರ ಜೆಡಿಎಸ್ ಪಕ್ಷದ ನಾಯಕರೇ ತುಂಬಿ­ರುವ ‘ಶಾಶ್ವತ ನೀರಾವರಿ ಹೊರಾಟ ಸಮಿತಿ’ಯೊಂದು ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.

ಈಗ ಕುಮಾರಸ್ವಾಮಿ ಕೂಡಾ ಎತ್ತಿನಹೊಳೆ ಯೋಜನೆಯಲ್ಲ, ಪರಮಶಿವಯ್ಯ ವರದಿಯೇ ಸರಿ ಎನ್ನುತ್ತಿದ್ದಾರೆ. ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖ್ಯ ನಾಯಕಲ್ಲಿ ಒಬ್ಬರಾದ ಸೊನ್ನೇಗೌಡ ಎತ್ತಿನ­ಹೊಳೆ ಯೋಜನೆಯ ಅಡಿಗಲ್ಲು ಹಾಕುವ ದಿನವೇ ಪ್ರತಿಭಟನೆಯನ್ನೂ ನಡೆಸಿ ತಮ್ಮ ಬದ್ಧತೆ ಪರಮಶಿವಯ್ಯ ವರದಿಗೆ ಎನ್ನುತ್ತಿದ್ದಾರೆ.ಕಾಂಗ್ರೆಸ್ ಮತ್ತು ಬಿಜೆಪಿಗೆ ‘ಎತ್ತಿನ ಹೊಳೆ’ ಪರಿಭಾಷೆ ಇಷ್ಟ. ಎರಡೂ ಪಕ್ಷಗಳಿಗೆ ದಕ್ಷಿಣ ಕನ್ನಡದಲ್ಲಿ ಇರುವ ಪ್ರಬಲ ನೆಲೆ ಇದಕ್ಕೆ ಕಾರಣ ಎನಿಸುತ್ತದೆ. ಎತ್ತಿನ ಹೊಳೆ ಇರುವುದು ಜೆಡಿಎಸ್ ಕೋಟೆ ಹಾಸನ ಜಿಲ್ಲೆಯಲ್ಲಿ. ಹಾಗಾಗಿ ಈ ಎರಡೂ ಪಕ್ಷಗಳಿಗೆ ಈ ಹೆಸರು ಸೂಕ್ತ ಎನಿಸುತ್ತಿರುವಂತಿದೆ.ಜಿ.ವಿ.ಶ್ರೀರಾಮರೆಡ್ಡಿ ತೀವ್ರಗತಿಯಲ್ಲಿ ಮರುಭೂಮೀಕರಣಕ್ಕೆ ಒಳಗಾ­ಗುತ್ತಿ­ರುವ ಈ ಪ್ರದೇಶದ ಕುರಿತು ಅಂಕಿ ಅಂಶಗಳ ಜೊತೆಗೆ ಮಾತನಾಡುತ್ತಾರೆ. ಕೆರೆಗಳ ರಾಜ ಕಾಲುವೆಗಳು ಇಲ್ಲವಾ­ದದ್ದು, ಕೆರೆಯ ಅಂಗಳವೇ ಒತ್ತುವರಿ­ಯಾದದ್ದು, ಅಂಕೆಯಿಲ್ಲದೆ ಕೊಳವೆ ಬಾವಿಗಳನ್ನು ಕೊರೆದದ್ದು ಇದಕ್ಕೆ ಕಾರಣವೆಂಬುದು ಅವರಿಗೆ ಗೊತ್ತು. ಆದರೆ ಅವರ ದೃಷ್ಟಿ­ಯಲ್ಲಿ ಸದ್ಯಕ್ಕೆ ಈ ಸಮಸ್ಯೆಯ ಪರಿಹಾರಕ್ಕೆ ಸ್ಥಳೀಯ ತಂತ್ರ­ಗಳಿಲ್ಲ. ಮಳೆಯ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ­ಯಾಗಿರುವುದರಿಂದ ಕೆರೆಗಳ ಪುನಶ್ಚೇತನಗೊಳಿಸಿದರೂ ಅವು ಮಳೆ ನೀರಿನಿಂದಷ್ಟೇ ತುಂಬುವುದಿಲ್ಲ. ಇದಕ್ಕಾಗಿ ಹೊರಗಿನ ನೀರು ಬೇಕೇ ಬೇಕು. ಕೃಷಿಯ ಮರುಹುಟ್ಟಿಗೂ ಇದು ಅಗತ್ಯ ಎಂಬುದು ಅವರ ವಾದ.ಇದರ ನಡುವೆಯೂ ಕೆಲವು ಮಧ್ಯಮ ಮಾರ್ಗಿಗಳಿದ್ದಾರೆ. ಇವರಾರೂ ಇಲ್ಲಿನ ರಾಜಕೀಯ ಚರ್ಚೆಗಳನ್ನು ರೂಪಿಸುತ್ತಿಲ್ಲ ಎಂಬುದುದು ವಿಷಾದದ ಸಂಗತಿ. ರೈತಸಂಘದ ಮುಖಂಡ ಡಾ.ಸಿ.ಎಸ್.ಶ್ರೀನಿವಾಸ್ ಅವರು ಹೇಳುವಂತೆ ‘ರೈತರು ನೀರು ಕೇಳುತ್ತಿರುವುದು ತಮಗಾಗಿ ಮಾತ್ರ ಅಲ್ಲ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಅವರು ನೆಲವನ್ನು ಬಸಿದು ತರಕಾರಿ, ಹಣ್ಣು ಮತ್ತು ಹೂವುಗಳನ್ನು ಬೆಳೆದದ್ದು ನಗರಗಳಿಗಾಗಿ. ಇಲ್ಲಿನ ನೀರಿನ ಬೇಡಿಕೆ ಕಡಿಮೆ ಮಾಡುವುದಕ್ಕೆ ನಗರಗಳ ಕೊಳ್ಳುಬಾಕತನವನ್ನೂ ಕಡಿಮೆ ಮಾಡಬೇಕು’.‘ಈಗಲೂ ಈ ಪ್ರದೇಶದಲ್ಲಿ ಸುರಿಯುವ ಮಳೆಯ ಪ್ರಮಾಣ ಸರಾಸರಿ 600 ಮಿಲಿಮೀಟರುಗಳಷ್ಟಿದೆ. ಅದನ್ನು ಸರಿಯಾಗಿ ಸಂಗ್ರಹಿಸಿ ಬಳಸಲು ಅಗತ್ಯವಿರುವ ಮೂಲ­ಸೌಕರ್ಯವನ್ನು ಪುನರುಜ್ಜೀವನಗೊಳಿಸಲು ಮೊದಲು ಕೆಲಸ ಮಾಡಬೇಕು. ಪಶ್ಚಿಮಘಟ್ಟದ ನೀರು ಇಲ್ಲಿಗೆ ಹರಿಸುವ ಯೋಜನೆ ಪೂರ್ಣಗೊಳ್ಳುವ ತನಕ ರೈತರು ಬದುಕಿ ಉಳಿಯಬೇಡವೇ?’ ಎಂದು ಶ್ರೀನಿವಾಸ್ ಪ್ರಶ್ನಿಸುತ್ತಾರೆ.ಶ್ರೀರಾಮರೆಡ್ಡಿ ಕೂಡಾ ಈ ಮಾತನ್ನು ಒಪ್ಪುತ್ತಲೇ ‘ನಮ್ಮ ಮಟ್ಟಿಗೆ ಶಾಶ್ವತ ನೀರಾವರಿಯೊಂದೇ ಸರಿಯಾದ ಪರಿಹಾರ. ಅದಲ್ಲದೆ ಬೇರೆ ಪರ್ಯಾಯಗಳಿದ್ದರೆ ಅದಕ್ಕೂ ನಾವು ಮುಕ್ತವಾಗಿದ್ದೇವೆ. ಪರಮಶಿವಯ್ಯನವರಂತೆ ಅದನ್ನು ವೈಜ್ಞಾನಿಕವಾಗಿ ಮಂಡಿಸಲಿ’ ಎಂದು ಆಗ್ರಹಿಸುತ್ತಾರೆ.ಆದರೆ ಈ ಬಗೆಯ ಮಾತುಗಳಿಗೆ ಉಳಿದ ಪಕ್ಷಗಳಲ್ಲಿ ಅವಕಾಶವೂ ಇಲ್ಲ. ಕಾಂಗ್ರೆಸ್‌ಗೆ ಸೀಟು ಉಳಿಸಿಕೊಳ್ಳಲು ಎತ್ತಿನ ಹೊಳೆ ಬೇಕು. ಮೋದಿಯ ಅಲೆಯನ್ನೂ ಒಣಗಿಸುವಷ್ಟು ಪ್ರಬಲವಾಗಿರುವ ಇಲ್ಲಿನ ನೀರಿನ ಸಮಸ್ಯೆಗೆ ಏನಾದರೊಂದು ಹೇಳಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಜೆಡಿಎಸ್‌ಗೆ ಕುಮಾರ­ಸ್ವಾಮಿಯವರನ್ನು ಕಣಕ್ಕಿಳಿಸುವ ತವಕದಲ್ಲಿ ಆದಷ್ಟು ದೊಡ್ಡ ಯೋಜನೆಯೇ ಬೇಕು. ನೀರು ಬರುವುದಿಲ್ಲಿ ಕೇವಲ ಆನುಷಂಗಿಕ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.