ಚಿತ್ರೋತ್ಸವ ಹಿಟ್; ಥಾಲಿಗೆ ಪೆಟ್ಟು

7

ಚಿತ್ರೋತ್ಸವ ಹಿಟ್; ಥಾಲಿಗೆ ಪೆಟ್ಟು

Published:
Updated:

ಮೈಸೂರು: ನಗರದ ಜನತೆ ದಸರಾದ ಗುಂಗಿನಲ್ಲಿ ಮುಳುಗಿದ್ದಾರೆ. ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಜನರು ಮುಗಿಬೀಳುತ್ತಿದ್ದರೆ,  ಪ್ರವಾಸಿಗರು ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ ರೂಪಿಸಿರುವ `ದಸರಾ ಥಾಲಿ~ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಇನ್ನೂ ಚಲನಚಿತ್ರೋತ್ಸವಕ್ಕೆ ಕಳೆದ  ವರ್ಷಕ್ಕಿಂತ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ನಗರದ ಹೊರವಲಯದಲ್ಲಿ  ನಡೆಯುತ್ತಿರುವ ಕಲಾ ಮೇಳದಲ್ಲೂ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ.ದಸರಾ ಉತ್ಸವದ ಆರನೇ ದಿನವಾದ ಸೋಮವಾರವೂ ದಸರಾ ವಸ್ತುಪ್ರದರ್ಶನ, ದಸರಾ ಕುಸ್ತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವ ದಸರಾ, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನಜಂಗುಳಿ ಇತ್ತು. ಆದರೆ ದಸರಾ ಥಾಲಿ, ಕಲಾಮೇಳಕ್ಕೆ ಜನರ ಕೊರತೆ ಇದೆ. ಉಳಿದಂತೆ ರೈತ, ಮಹಿಳಾ,  ಮಕ್ಕಳ ದಸರಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಉತ್ತಮ ಊಟ ಕೊಡುವ `ದಸರಾ ಥಾಲಿ~ಗೆ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಹೋಟೆಲ್ ಮಾಲೀಕರಿಗೆ ಭಾರಿ ಹೊಡೆತ ಬಿದ್ದಿದೆ. ಸುಮಾರು 60 ಹೋಟೆಲ್‌ಗಳಲ್ಲಿ 30 ರೂಪಾಯಿಗೆ ಥಾಲಿ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ನೆಪದಲ್ಲಿ ಪೊಲೀಸರು ಬಸ್‌ಗಳನ್ನು ನಗರದ ಹೊರಗಡೆ ತಡೆಯುತ್ತಿದ್ದಾರೆ. ವ್ಯಾಪಾರ ಸರಿಯಾಗಿ ನಡೆಯದಿರಲು ಇದು ಒಂದು ಕಾರಣ ಎನ್ನಲಾಗುತ್ತಿದೆ.ಹಲವು ಹೋಟೆಲ್‌ಗಳ ಮಾಲೀಕರನ್ನು ವಿಚಾರಿಸಿದಾಗ, `ದಸರಾ ಥಾಲಿ ಹೋಟೆಲ್‌ಗಳಲ್ಲಿ ದೊರೆಯಲಿದೆ ಎಂಬುದು ಎಷ್ಟೋ ಮಂದಿಗೆ ಗೊತ್ತಿಲ್ಲ. ಬಸ್‌ಗಳನ್ನು ಹೊರ ವಲಯಗಳಲ್ಲಿಯೇ ತಡೆಯಲಾಗುತ್ತಿದೆ. ಪ್ರವಾಸಿಗರಿಗೆ ನಗರದ ಯಾವ ಹೋಟೆಲ್‌ಗಳಲ್ಲಿ ಥಾಲಿ ದೊರೆಯಲಿದೆ ಎಂದು ಗೊತ್ತಾಗುವುದಾದರೂ ಹೇಗೆ? ಇದರಿಂದಾಗಿ ಥಾಲಿಯನ್ನು ರದ್ದು ಮಾಡಲಾಗಿದೆ~ ಎಂದು ಹೇಳಿದರು.`ದಸರಾ ಉತ್ಸವ ಆರಂಭದ 4-5 ದಿನ ಪ್ರವಾಸಿಗರು ಇರುವುದಿಲ್ಲ. ಬಸ್‌ಗಳನ್ನು ಹೊರವಲಯದಲ್ಲಿ ತಡೆಯುತ್ತಿರುವುದರಿಂದ ನಗರಕ್ಕೆ ಜನರು ಬರುತ್ತಿಲ್ಲ. ಇದರಿಂದಾಗಿ ಪ್ರವಾಸಿಗರಿಗೆ ಅನಾನುಕೂಲವಾಗಿದೆ.ಹೋಟೆಲ್‌ಗಳಲ್ಲಿ ವ್ಯಾಪಾರವೂ ಕಡಿಮೆಯಾಗಿದೆ. ಕೊನೆಯ ಎರಡು ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ದಸರಾ ಥಾಲಿಗೆ ಬೇಡಿಕೆ ಬರುವ ಸಾಧ್ಯತೆ ಇದೆ~ ಎಂದು  ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ  ವಿಶ್ವಾಸ ವ್ಯಕ್ತಪಡಿಸಿದರು.ನಗರದ ಗೋಕುಲ್ ಚಿತ್ರಮಂದಿರ ಹೊರತುಪಡಿಸಿ ಲಿಡೋ, ಲಕ್ಷ್ಮೀ, ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಚಲನಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಟ್ ಚಿತ್ರಗಳಾದ ಜಾಕಿ, ಓಂ, ಆಪ್ತರಕ್ಷಕ ಚಿತ್ರಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಕಪ್ಪು ಬಿಳುಪು ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಹೇಳಿಕೊಳ್ಳುವಂತೆ ಇರಲಿಲ್ಲ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಚಿತ್ರಗಳನ್ನು ಜನರು ಆಸಕ್ತಿಯಿಂದ ನೋಡಲು ಬರುತ್ತಿದ್ದಾರೆ.  ಗೋಕುಲ್ ಚಿತ್ರಮಂದಿರದಲ್ಲಿ ಒಂದೆರೆಡು ಅತ್ಯುತ್ತಮ ಚಿತ್ರಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು.`ಕಳೆದ ವರ್ಷಕ್ಕಿಂತ ಈ ವರ್ಷ ನೋಡಗರ ಸಂಖ್ಯೆ ಶೇ. 20 ಹೆಚ್ಚಾಗಿದೆ. `ಮನೆ ಬಾಗಿಲಿಗೆ ಸಿನಿಮಾ~ ಕೂಡ ಯಶಸ್ವಿಯಾಗಿದ್ದು, ನಗರದ 18 ಕೇಂದ್ರಗಳಲ್ಲಿ  ಪ್ರೊಜೆಕ್ಟರ್ ಮೂಲಕ ಚಿತ್ರ ಪ್ರದರ್ಶಿಸಲಾಗಿದೆ.ಕ್ಯಾತಮಾರನಹಳ್ಳಿ, ಅಗ್ರಹಾರ, ಚಾಮುಂಡಿಪುರಂ, ಜೆ.ಪಿ.ನಗರ, ಟಿ.ಕೆ.ಬಡಾವಣೆಗಳಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಅ. 5 ರ ವರೆಗೆ ಈ ಪ್ರದರ್ಶನ ಮುಂದುವರಿಯಲಿದೆ. ಮುಂದಿನ ಪ್ರದರ್ಶನ ಎನ್.ಆರ್.ಮೊಹಲ್ಲಾ, ಕೆ.ಜಿ.ಕೊಪ್ಪಲು, ವಿವೇಕಾನಂದ ವೃತ್ತ,  ತ್ರೀವೆಣಿ ವೃತ್ತ ಮತ್ತು ಬೃಂದಾವನಗಳಲ್ಲಿ ಏರ್ಪಡಿಸಲಾಗಿದೆ~ ಎಂದು ಚಲನಚಿತ್ರೋತ್ಸವ ಉಪ ಸಮಿತಿ ಉಪಾಧ್ಯಕ್ಷ ಶ್ರೀ ಪ್ರಸಾದ್ ತಿಳಿಸಿದರು.ಇನ್ನೂ ನಗರದ ಹೊರ ವಲಯದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ನಡೆಯುತ್ತಿರುವ ಕಲಾಮೇಳ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಇದೆ. ಪ್ರದರ್ಶನದ ಎರಡನೇ ದಿನ ಮೇಳಕ್ಕೆ ಚಿತ್ರನಟಿ ನಿಧಿ ಸುಬ್ಬಯ್ಯ ಆಗಮಿಸಿದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಬೆರಳಣಿಕೆಯಷ್ಟು ಮಾತ್ರ  ಜನರಿದ್ದರು.ನಗರದ ಹೊರ ವಲಯದಲ್ಲಿ ಕಲಾಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬು ಮಾತು ಸಹ ಕೇಳಿ ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry