ಚಿತ್ರ: ಕ್ಯಾಮೆರಾಮನ್ ಗಂಗತೋ ರಾಂಬಾಬು (ತೆಲುಗು)

7

ಚಿತ್ರ: ಕ್ಯಾಮೆರಾಮನ್ ಗಂಗತೋ ರಾಂಬಾಬು (ತೆಲುಗು)

Published:
Updated:

 ಅತಿಯೇ ಮಿತಿನಿರ್ಮಾಪಕ: ಮಣಿ ಶರ್ಮಾ

ನಿರ್ದೇಶಕ: ಪೂರಿ ಜಗನ್ನಾಥ್

ತಾರಾಗಣ: ಪವನ್ ಕಲ್ಯಾಣ್, ತಮನ್ನಾ, ಗೇಬ್ರಿಯಲ್ ಬರ್ಟಂಟ್, ಪ್ರಕಾಶ್ ರೈ, ಕೋಟ ಶ್ರೀನಿವಾಸರಾವ್, ನಾಸೆರ್, ಬ್ರಹ್ಮಾನಂದಂ, ತನಿಕೆಳ್ಳ ಭರಣಿ, ಅಲಿ, ಧರ್ಮವರಪು ಸುಬ್ರ್ಮೆಣ್ಯಂ ಮತ್ತಿತರರು.ಸಿನಿಮಾ ಪಾಕಕ್ಕೆ ರಾಜಕೀಯ ಬೆರೆಸಿ ರುಚಿ ಹೆಚ್ಚಿಸಿಕೊಳ್ಳುವ ತೆಲುಗು ಚಿತ್ರಗಳಿಗಿಂತ `...ರಾಂಬಾಬು~ ಭಿನ್ನವೇನಲ್ಲ.  ರಾಜಕಾರಣವನ್ನು ತಟಸ್ಥ ನೆಲೆಯಲ್ಲಿ ವಿಮರ್ಶಿಸುವ ಸೂಚನೆಗಳು ಇಲ್ಲಿಲ್ಲ. ಹೀಗಾಗಿ ಚಿತ್ರದುದ್ದಕ್ಕೂ ರಂಜನೆಗಿಂತ ಹೆಚ್ಚಾಗಿ ರಾಜಕೀಯ ಮೇಲಾಟ. ಯಾರನ್ನೋ ಮೆಚ್ಚುವ, ಇನ್ನಾರನ್ನೋ ಟೀಕಿಸುವ ಚಿತ್ರದ ಪಕ್ಷಪಾತಿ ನಾಯಕನಿಗೂ, ನಿರ್ದೇಶಕರಿಗೂ ಯಾವುದೇ ವ್ಯತ್ಯಾಸವಿಲ್ಲ.ಅಲ್ಲದೆ ಅತಿರೇಕಗಳ ಅಲೆಯಲ್ಲಿ ಚಿತ್ರ ಕೊಚ್ಚಿ ಹೋಗಿದೆ. ಅದರ ಕೆಲವು ಮಾದರಿಗಳು ಹೀಗಿವೆ: ಮೈಕನ್ನು ದಂಡವೆಂದು ಪರಿಭಾವಿಸುತ್ತಾನೆ ಟೀವಿ ವರದಿಗಾರ ರಾಂಬಾಬು! ದಂಡಂ ದಶಗುಣಂ ಆತನ ಗುಣ. ಈ ಹೋರಾಟಗಾರನಿಗೆ ಕುರ್ಚಿ ಹಿಡಿದವರಿಗಿಂತಲೂ ಅಧಿಕಾರಹೀನರ ಮೇಲೆ ಕಣ್ಣು. ಜತೆಗೆ `ತೆಲುಗು ತಲ್ಲಿ~ಯ ಹೆಸರಿನಲ್ಲಿ ರಾಜಕಾರಣ ಮಾಡಬಾರದೆಂಬ ಬೋಧನೆ. ರಾಜಕಾರಣಿಗಳ ಭಾಷಣಕ್ಕೂ, ಈ ಬೋಧನೆಗೂ ಹೆಚ್ಚೇನೂ ಅಂತರವಿಲ್ಲ. ಭಾಷೆಯ ಹೆಸರಿನಲ್ಲಿ ರಾಜಕಾರಣ ಬೇಡ ಎಂಬ ನಿಲುವು ಸರಿ. ಆದರೆ ಅದನ್ನು ಬೋಧನೆಯಾಗಿಸುವ ಅಗತ್ಯವಿರಲಿಲ್ಲ. ಕತೆ ಹಳಿ ತಪ್ಪಿರುವುದು ಅಲ್ಲಿಯೇ.ಸಿನಿಮಾಗಾಗಿ ಪವನ್ ಕಲ್ಯಾಣ್ ದುಡಿದಿರುವರೋ ಅಥವಾ ಅವರಿಗಾಗಿ ಸಿನಿಮಾ ದುಡಿದಿದೆಯೋ ಎಂಬ ಅನುಮಾನ ಕಾಡದೇ ಇರದು. ಪವನ್ ಅವರನ್ನು ರಾಜಕೀಯವಾಗಿ ಮೇಲೆತ್ತುವ ಎಲ್ಲ ಅಂಶಗಳು ಇಲ್ಲಿವೆ. ಅದನ್ನು ಹೊರತುಪಡಿಸಿದರೆ ಚಿತ್ರವನ್ನು ತುಂಬಿರುವುದು ಭರಪೂರ ಮಸಾಲೆ. ಇದರ ಕುರುಹೆಂಬಂತೆ ಮೊದಲ ಗೀತೆಯಲ್ಲಿಯೇ ಐಟಂ ಆಟಾಟೋಪ. ನಾಯಕಿಯನ್ನೂ ಮೂಲೆಗುಂಪಾಗಿಸುವ ಮಾದಕ ಲಲನೆಯ ಪ್ರಲಾಪ.ಹಾಡು, ಹಾಸ್ಯ, ಹೊಡೆದಾಟ ಎಲ್ಲವೂ ಒಂದರ ಪಕ್ಕ ಒಂದು ಪೇರಿಸಿದಂತೆ ಕ್ರಮಬದ್ಧ. ಈ ಕ್ರಮಬದ್ಧತೆ ಕತೆಯಲ್ಲೂ ಇಣುಕಿದರೆ ಗತಿಯೇನು? ಹೀಗಾಗಿ ಪ್ರೇಕ್ಷಕರ ಲೆಕ್ಕಾಚಾರ ಮೀರುವುದು ಕತೆಗೆ ಸಾಧ್ಯವಾಗಿಲ್ಲ. ಪರಾಕಾಷ್ಠೆಯ ದೃಶ್ಯದಲ್ಲಿ ಮಾತ್ರ ನಿರ್ದೇಶಕರದು ಭಿನ್ನ ಹಾದಿ. ಕ್ಲೈಮ್ಯಾಕ್ಸ್‌ಗಾಗಿಯೇ ಅವರು ಕತೆ ಕಟ್ಟಿರುವಂತಿದೆ. ಅಲ್ಲಿಯವರೆಗೂ ಏಕಮೇವಾದ್ವಿತೀಯನಾಗಿ ಮಿಂಚುವ ನಾಯಕ ಒಮ್ಮೆಲೇ ಸಮೂಹದೊಳಗೆ ಕರಗುತ್ತಾನೆ. ದುಷ್ಟ ಸಂಹಾರವನ್ನು ಜನತೆಗೆ ಒಪ್ಪಿಸುತ್ತಾನೆ. ಜತೆಗೆ ಮಾಧ್ಯಮಗಳನ್ನು ಅಳೆದು ಸುರಿದಿರುವ ರೀತಿಗೆ ಪೂರ್ಣ ಅಂಕಗಳು ಸಲ್ಲುತ್ತವೆ.ಪವನ್‌ರ ಇತ್ತೀಚಿನ ಚಿತ್ರ `ಗಬ್ಬರ್ ಸಿಂಗ್~ನಂತೆ ಇಲ್ಲಿಯೂ ಮಾತಿನ ಮಳಿಗೆ ಉಂಟು. ತಮ್ಮನ್ನು ವಿಮರ್ಶಿಸಿಕೊಳ್ಳುವ ಪವನ್ ಮಾತುಗಳು ಪ್ರೇಕ್ಷಕರಿಗೆ ಕಚಗುಳಿಯಿಡಬಲ್ಲವು. ಆದರೆ ಪೂರಿ ನಡೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಅವರ `ದೇವರು ಚೇಸಿನ ಮನುಷುಲು~ ಚಿತ್ರದ ಮತ್ತೊಂದು ತುದಿಯಂತೆ ಇದು ಭಾಸ. ಕತೆ ಹೇಳುವ ಉತ್ಸಾಹದಲ್ಲಿ ನಿರ್ದೇಶನದ ಕೆಲ ತಾಂತ್ರಿಕ ಅಂಶಗಳು ಮರೆತು ಹೋಗಿವೆ. ಕೆಲವು ದೃಶ್ಯಗಳಲ್ಲಿ ಆ ಮರೆವು ಎದ್ದು ತೋರುವುದುಂಟು.ಪವನ್ ನಡೆ ನುಡಿಯಲ್ಲಿ ತುಸು ಹೆಚ್ಚೇ `ಚಿರಂಜೀವಿ~ತನ. ಗಂಡುಬೀರಿ ಪಟ್ಟ ನಟಿ ತಮನ್ನಾಗೆ ಒಗ್ಗಿಲ್ಲ. ಎರಡು ಐಟಂ ಗೀತೆಗಳಲ್ಲಿ ಗೇಬ್ರಿಯಲ್ ಬರ್ಟಂಟ್‌ರದು ಭರ್ತಿ ತೊನೆದಾಟ. ಜತೆಗೆ ಕೊನೆಯಲ್ಲಿ ಖಳತ್ವದ ಆಟ. ಇವರಿಗೆ ಸ್ಪರ್ಧೆಯೊಡ್ಡಿ ಸೋಲುವಂತೆ ತಮನ್ನಾ ಗೀತೆಗಳಿವೆ. ರಾಜಕಾರಣಿಯಾಗಿ ಕೋಟ ಶ್ರೀನಿವಾಸರಾವ್, ಅವರ ಮಗನಾಗಿ ಪ್ರಕಾಶ್ ರೈ ಸಂಘರ್ಷದ ಕಿಡಿ ಹಚ್ಚಿದ್ದಾರೆ. ಸಜ್ಜನ ಮುಖ್ಯಮಂತ್ರಿಯಾಗಿ ನಾಸೆರ್ ಬಿಂಬಿತ. ಹಾಸ್ಯದ ಮುದ್ರೆಯೊತ್ತಿದವರು ಬ್ರಹ್ಮಾನಂದಂ, ಅಲಿ, ಧರ್ಮವರಪು ಸುಬ್ರಹ್ಮಣ್ಯಂ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry